ನವದೆಹಲಿ, ಮೇ 30: ಭಾರತದಲ್ಲಿ ಕಳಪೆ ಗುಣಮಟ್ಟದ ಆಹಾರ, ಅಶುಚಿತ್ವ ಪರಿಸರದಲ್ಲಿ ಆಹಾರ ತಯಾರಿ ಇತ್ಯಾದಿ ವಿಚಾರಗಳು ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಆಹಾರ ಸುರಕ್ಷತೆಯನ್ನು ಪಾಲಿಸದೆ ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುತ್ತವೆ. ಇದೀಗ ವ್ಯಾಪಾರಿಯೊಬ್ಬ ಚರಂಡಿ ನೀರಿನಲ್ಲಿ ಹಣ್ಣುಗಳನ್ನು ತೊಳೆಯುತ್ತಿರುವ (Vendor Washes Fruits in Drain Water) ದೃಶ್ಯದ ಆಘಾತಕಾರಿ ವಿಡಿಯೊವೊಂದು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ (viral video) ಆಗಿದೆ. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತಕ್ಕೊಳಗಾಗಿದ್ದಾರೆ, ಅಸಹ್ಯಗೊಂಡಿದ್ದಾರೆ. ಆಹಾರ ನೈರ್ಮಲ್ಯ ಪದ್ಧತಿ ಬಗ್ಗೆ ಗಂಭೀರವಾಗಿ ಪ್ರಶ್ನಿಸಿದ್ದಾರೆ.
ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಆ ವ್ಯಕ್ತಿ ಹಣ್ಣುಗಳನ್ನು ಜೋಡಿಸುವ ಮೊದಲು ಚರಂಡಿ ನೀರಿನಲ್ಲಿ ತೊಳೆಯುತ್ತಿರುವುನ್ನು ಕಾಣಬಹುದು. ಹಣ್ಣನ್ನು ತೊಳೆಯುತ್ತಿರುವ ನೀರು ಕೆಸರಿನಿಂದ ಕೂಡಿದ್ದು, ಕಲುಷಿತವಾಗಿದೆ. ಆತ ಹಣ್ಣುಗಳನ್ನು ಸರಿಯಾಗಿ ಪದೇ ಪದೆ ಅದರಲ್ಲಿ ಮುಳುಗಿಸಿ ಹೊರ ತೆಗೆದಿದ್ದಾನೆ.
ವಿಡಿಯೊ ಇಲ್ಲಿದೆ:
ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಕ್ಷಣ ಶೀಘ್ರದಲ್ಲೇ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂದು ತಿಳಿದುಬಂದಿಲ್ಲ. ಈ ವಿಡಿಯೊ ರಸ್ತೆಬದಿಯ ಹಣ್ಣು ಮಾರಾಟಗಾರರ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿದೆ ಎಂದು ಅನೇಕರು ಹೇಳಿದ್ದಾರೆ.
ನಮ್ಮದೇ ಅತ್ಯಂತ ಕೊಳಕು ದೇಶ: ಶ್ರೀಲಂಕಾದ ಶುಚಿತ್ವದೊಂದಿಗೆ ಭಾರತದ ಸ್ಥಿತಿ ಹೋಲಿಸಿದ ಪ್ರವಾಸಿ ವ್ಲಾಗರ್
ಈ ವಿಡಿಯೊಗೆ ತರಹೇವಾರಿ ಪ್ರತಿಕ್ರಿಯೆ ಬಂದಿದೆ. ಆ ವ್ಯಕ್ತಿ ಹಣ್ಣುಗಳನ್ನು ಮಾರಾಟ ಮಾಡುವ ಮೊದಲು ಸ್ವಚ್ಛಗೊಳಿಸುತ್ತಿದ್ದೇನೆ ಎಂದುಕೊಂಡಿದ್ದಿರಬಹುದು ಎಂದು ಅನೇಕರು ಹೇಳಿದ್ದಾರೆ. ಇದರಿಂದಾಗಬಹುದಾದ ಆರೋಗ್ಯ ಸಮಸ್ಯೆ ಬಗ್ಗೆ ಬಹುತೇಕರು ಆತಂಕ ವ್ಯಕ್ತಪಡಿಸಿದ್ದಾರೆ.
ʼʼನಾನು ಮತ್ತೆಂದೂ ರಸ್ತೆಬದಿಯಲ್ಲಿನ ಹಣ್ಣುಗಳನ್ನು ತಿನ್ನುವುದಿಲ್ಲʼʼ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ʼʼಪ್ರತಿ ಕಿಲೋ ತೂಕದೊಂದಿಗೆ ಉಚಿತ ರೋಗ ವರ್ಧಕ ಪ್ಯಾಕೇಜ್ ಸೇರಿಸಿದ್ದಾನೆʼʼ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ʼʼಇಂತಹ ಕಾರಣಗಳಿಂದ ಜನರು ಅನಾರೋಗ್ಯಕ್ಕೆ ಒಳಗಾಗಬಹುದು. ಇದು ತಮಾಷೆಯಲ್ಲʼʼ ಎಂದು ಇನ್ನೊಬ್ಬರು ಬರೆದಿದ್ದಾರೆ.
ಹಣ್ಣುಗಳಿಗೆ ಇಲಿ ಪಾಷಾಣ ಸವರಿದ ಬೀದಿಬದಿ ವ್ಯಾಪಾರಿ
ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಮುಂಬೈಯಲ್ಲಿ ಬೀದಿಬದಿ ವ್ಯಾಪಾರಿಯೊಬ್ಬ ಇಲಿ ಪಾಷಾಣವನ್ನು ಹಣ್ಣುಗಳಿಗೆ ಸವರುತ್ತಿರುವುದು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆತನ ಕೃತ್ಯ ಗಂಭೀರ ಚರ್ಚೆ ಹುಟ್ಟುಹಾಕಿತ್ತು. ಮಾರಾಟಕ್ಕಿಟ್ಟಿರುವ ಹಣ್ಣುಗಳಿಗೆ ವ್ಯಾಪಾರಿ ವಿಷ ಸವರಿದ ಈ ಆಘಾತಕಾರಿ ಘಟನೆ ಮುಂಬೈಯ ಮಲಾಡ್ ವೆಸ್ಟ್‌ನಲ್ಲಿ ನಡೆದಿತ್ತು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಇಬ್ಬರು ವ್ಯಾಪಾರಿಗಳನ್ನು ಬಂಧಿಸಲಾಗಿತ್ತು.