ಚಂಡೀಗಢ, ಜ. 6: ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಪಕ್ಕಕ್ಕೆ ಜಾರಿ ಭೀಕರ ಅಪಘಾತ ಸಂಭವಿಸಿರುವ ಘಟನೆ ಹರಿಯಾಣ (Haryana)ದ ನುಹ್ (Nuh) ಸಮೀಪದ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇ (Delhi-Mumbai Expressway)ಯಲ್ಲಿ ಸೋಮವಾರ (ಜನವರಿ 5) ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಗಿದ್ದು, ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ವೈರಲ್ ಆಗಿದೆ.
ಅತ್ಯಂತ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಪಕ್ಕಕ್ಕೆ ಜಾರಿದ್ದು, ಇದರಿಂದಾಗಿ ಆ ಜಾಗದಲ್ಲಿ ದೊಡ್ಡ ಪ್ರಮಾಣದ ಧೂಳು ಎದ್ದಿರುವುದು ವಿಡಿಯೊದಲ್ಲಿ ಕಾಣಿಸಿದೆ. ರಸ್ತೆ ಬಿಟ್ಟು ಜಾರಿದ ನಂತರ ಕಾರು ಹೆದ್ದಾರಿಯ ಬದಿಯಲ್ಲಿರುವ ಖಾಲಿ ಜಾಗದಲ್ಲಿ ನಿಂತಿದೆ. ಅಪಘಾತ ಸಂಭವಿಸುತ್ತಿದ್ದಂತೆ ಗಾಯಾಳುಗಳ ಸಹಾಯಕ್ಕಾಗಿ ಸ್ಥಳೀಯರು ಕಾರಿನತ್ತ ಓಡುತ್ತಿರುವುದು ವ್ಯಕ್ತಿಯೊಬ್ಬನ ಮೊಬೈಲ್ ಕ್ಯಾಮೆರಾದಲ್ಲಿ ಕಂಡುಬಂದಿದೆ.
ಭೀಕರ ಅಪಘಾತದ ದೃಶ್ಯ:
ಚಾಲಕನ ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಯು ಬಾಗಿಲು ತೆರದು ತಕ್ಷಣವೇ ಹಿಂಬದಿ ಸೀಟಿನಲ್ಲಿ ಕುಳಿತಿದ್ದವರ ಬಗ್ಗೆ ವಿಚಾರಿಸಲು ಧಾವಿಸುವುದು ದೃಶ್ಯದಲ್ಲಿದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವೃದ್ಧೆಯೊಬ್ಬರಿಗೆ ಗಾಯಗಳಾಗಿರುವುದು ಕಂಡುಬಂದಿದ್ದು, ಅವರು ಆ ಮಹಿಳೆಯ ತಾಯಿ ಅಥವಾ ಅತ್ತೆಯಾಗಿರಬಹುದು ಎನ್ನಲಾಗಿದೆ. ಇದೇ ವೇಳೆ ಪುಟ್ಟ ಹುಡುಗಿಯೊಂದು ಅಳುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಇನ್ನೂ ಈ ಅಪಘಾತಕ್ಕೆ ನಿಖರ ಕಾರಣ ಏನು ಎಂಬುವುದು ಇನ್ನೂ ತಿಳಿದುಬಂದಿಲ್ಲ. ಆದರೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯು, ಕಾರು ಚಲಾಯಿಸುತ್ತಿದ್ದ ವ್ಯಕ್ತಿಗೆ “ನಿಮಗೆ ನಿದ್ರೆ ಬಂದಿತ್ತೇ?ʼʼ ಎಂದು ಕೇಳುತ್ತಿರುವುದು ವಿಡಿಯೊದಲ್ಲಿ ಕೇಳಿಸಿದೆ.
ಕಳೆದ ತಿಂಗಳು ಹರಿಯಾಣದ ನುಹ್ ಜಿಲ್ಲೆಯ ದೆಹಲಿ–ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರಿಗೆ ಗಂಭೀರ ಗಾಯಗಳಾಗಿದ್ದವು. ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೇ ಇರುವುದು ಆ ಅಪಘಾತಕ್ಕೆ ಕಾರಣವಾಗಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.