ಬೀಜಿಂಗ್: ಬಾಲ್ಯದಲ್ಲಿ ಕೇಳಿದ ನೀತಿ ಕಥೆಗಳಲ್ಲಿ ಆಮೆ ಮತ್ತು ಮೊಲದ ಓಟದ ಕಥೆ ಕೂಡ ಒಂದು. ಇದರಲ್ಲಿ ಆಮೆ ಮತ್ತು ಮೊಲದ ನಡುವೆ ಓಟದ ಸ್ಪರ್ಧೆ ನಡೆಯಿತು. ಇದರಲ್ಲಿ ನಿಧಾನವಾಗಿ ಚಲಿಸುವ ಆಮೆ ಜಯ ಸಾಧಿಸಿತ್ತು. ಕೊನೆಗೆ ಸೋಮಾರಿ ಮೊಲ ಸೋತಿತ್ತು. ಇದೀಗ ಚೀನಾದಲ್ಲಿ ಆಮೆ ಮತ್ತು ಮೊಲದ ನಡುವೆ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಕೂಡ ಆಮೆಯೇ ಜಯ ಸಾಧಿಸಿದೆ. ಮೊಲ ಮತ್ತು ಆಮೆಯ ನಡುವಿನ ನಿಜವಾದ ಓಟವನ್ನು ಸೆರೆಹಿಡಿಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ ಓಟದ ಶುರುವಿನಲ್ಲಿ ಇಬ್ಬರು ಸ್ವಯಂಸೇವಕರು ಈ ಪ್ರಾಣಿಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿದ್ದಾರೆ. ಸ್ಪರ್ಧೆ ಪ್ರಾರಂಭವಾದಾಗ ಇಬ್ಬರು ಪ್ರಾಣಿಗಳನ್ನು ಟ್ರ್ಯಾಕ್‍ನಲ್ಲಿ ಬಿಟ್ಟಿದ್ದಾರೆ. ಮೊಲವು ವೇಗವಾಗಿ ಓಡುತ್ತಾ ತನ್ನ ಟ್ರ್ಯಾಕ್‍ನಲ್ಲಿ ಮುಂದೆ ಸಾಗಿದರೆ, ಆಮೆ ಸಣ್ಣ ಹೆಜ್ಜೆಗಳನ್ನು ಇಡುತ್ತಾ ಮುಂದೆ ನಡೆದಿದೆ. ಈ ಬಾರಿ ಯಾರು ಗೆಲ್ಲಬಹುದು ಎಂಬ ಕುತೂಹಲ ಅಲ್ಲಿದ್ದ ವೀಕ್ಷಕರಲ್ಲಿ ಮನೆ ಮಾಡಿತ್ತು. ಆದರೆ ಮೊಲದ ಸ್ವಲ್ಪ ದೂರ ಓಡಿ ಅಲ್ಲೆ ಕುಳಿತುಕೊಂಡಿದೆ. ಆದರೆ ಆಮೆ ಎಲ್ಲೂ ನಿಲ್ಲದೇ ನಿಧಾನವಾಗಿ ಚಲಿಸಿ ಗುರಿ ಮುಟ್ಟಿ ಗೆಲುವು ಸಾಧಿಸಿದೆ. ಈ ರೇಸ್‍ನಲ್ಲಿಯೂ ಆಮೆಯೇ ಜಯ ಸಾಧಿಸಿದೆ. ಆ ಮೂಲಕ ಇತಿಹಾಸ ಮರುಕಳಿಸಿದೆ.
'ಸ್ಕೂಲ್ ಮೆಮೊರಿಸ್' ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಹಳೆಯ ನೀತಿ ಕಥೆಯನ್ನು ಸುಳ್ಳು ಎಂದು ಸಾಬೀತುಪಡಿಸಲು ಮೊಲಕ್ಕೆ ಮತ್ತೊಂದು ಅವಕಾಶ ಸಿಕ್ಕರೂ ಅದು ಅದನ್ನು ಬಳಸಿಕೊಂಡಿಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ.
ಈ ಹಿಂದೆ ಕೂಡ 2 ಮೊಲಗಳು ಮತ್ತು ಆಮೆಯ ನಡುವಿನ ಓಟವನ್ನು ಪ್ರದರ್ಶಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಂ ಬಳಕೆದಾರ @mizdazzle ಪೋಸ್ಟ್ ಮಾಡಿದ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ 39.6 ಮಿಲಿಯನ್ ವ್ಯೂವ್ಸ್ ಮತ್ತು 7,00,000 ಕ್ಕೂ ಹೆಚ್ಚು ಲೈಕ್‍ಗಳನ್ನು ಗಳಿಸಿತ್ತು. ಇದರಲ್ಲಿ ಮಕ್ಕಳಿಬ್ಬರು ಇಟ್ಟಿಗೆಗಳನ್ನು ಬಳಸಿ ರೇಸ್ ಟ್ರ್ಯಾಕ್ ತಯಾರಿಸಿ ಅದರಲ್ಲಿ ಒಂದು ಕಪ್ಪು ಮೊಲ, ಒಂದು ಬಿಳಿ ಮೊಲ, ಮತ್ತು ಒಂದು ಆಮೆಯ ನಡುವೆ ಸ್ಪರ್ಧೆ ನಡೆಸಿದ್ದರು. ಇದರಲ್ಲಿ ಕೂಡ ಎರಡು ಮೊಲಗಳನ್ನು ಹಿಂದಿಕ್ಕಿ ಆಮೆ ಜಯ ಸಾಧಿಸಿತ್ತು.
ಈ ಸುದ್ದಿಯನ್ನೂ ಓದಿ:Viral Video: ಆಮೆಯನ್ನು ಬೇಟೆಯಾಡಿದ ವ್ಯಾಘ್ರ! ಅದ್ಭುತ ದೃಶ್ಯಕ್ಕೆ ಮನಸೋತ ಪ್ರವಾಸಿಗರು
ಕೆಲವು ದಿನಗಳ ಹಿಂದೆ ರಿದ್ಧಿ ಎಂಬ ಹುಲಿಯು ಆಮೆಯನ್ನು ಬೇಟೆಯಾಡವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿ ಸಾಕಷ್ಟು ಗಮನ ಸೆಳೆದಿದೆ. ರಿದ್ಧಿಯು ಆಮೆಯ ಮೇಲೆ ದಾಳಿ ಮಾಡಿ ಅದನ್ನು ಬಾಯಿಯಲ್ಲಿ ಕಚ್ಚಿಕೊಂಡು ಓಡಿದೆ. ಈ ದೃಶ್ಯವು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಆಮೆ ಅಪಾಯ ಬಂದಾಗ ಅದರ ಚಿಪ್ಪಿನೊಳಗೆ ಅವಿತು ಕುಳಿತುಕೊಳ್ಳುತ್ತದೆ. ಆದರೆ ಹುಲಿ ಆಮೆಯ ಹಿಂದಿನ ಕಾಲನ್ನು ಕಚ್ಚಿ ಹಿಡಿದಿದ್ದರಿಂದ ಅದಕ್ಕೆ ಚಿಪ್ಪಿನೊಳಗೆ ಅಡಗಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಹುಲಿಯ ಬಾಯಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು.