ರಾಯಗಢ: ಛತ್ತೀಸ್‌ಗಢ (Chhattisgarh)ದ ರಾಯಗಢ (Raigarh) ಜಿಲ್ಲೆಯಲ್ಲಿ ಗಣಿಗಾರಿಕೆ ವಿರೋಧಿ ಪ್ರತಿಭಟನೆಯು ಹಿಂಸಾತ್ಮಕ ಸ್ವರೂಪಕ್ಕೆ ಪಡೆದುಕೊಂಡಿದ್ದು, ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದಾಗಿ ವರದಿಗಳು ತಿಳಿಸಿವೆ.
ಡಿಸೆಂಬರ್ 27ರಂದೇ ಈ ಹಿಂಸಾಚಾರ ನಡೆದಿದ್ದು, ಮಹಿಳಾ ಕಾನ್‌ಸ್ಟೇಬಲ್ ಮೇಲಿನ ದೌರ್ಜನ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್(Viral Video) ಆಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಗಢದ ತಮ್ನಾರ್ (Tamnar) ಪ್ರದೇಶದಲ್ಲಿ ಪ್ರಸ್ತಾಪಿತ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದರು. ಡಿಸೆಂಬರ್ 27ರಂದು ಈ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ್ದು, ಕಲ್ಲು ತೂರಾಟ ನಡೆಸಲಾಗಿದೆ. ಇದೇ ವೇಳೆ ಪ್ರತಿಭಟನಾಕಾರರು ಸರಕಾರಿ ಹಾಗೂ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿ, ಆಸ್ತಿ ನಾಶಪಡಿಸಿದ್ದು, ಘಟನೆಯಲ್ಲಿ ಹಲವಾರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರ ಮುಂದೆ, ಅಲ್ಪ ಸಂಖ್ಯೆಯಲ್ಲಿದ್ದ ಪೊಲೀಸರು ಹಿಂದೆ ಸರಿಯಬೇಕಾದ ಪರಿಸ್ಥಿತಿ ಉಂಟಾಯಿತು. ವೈರಲ್ ಆದ ವೀಡಿಯೋದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಒಬ್ಬರೇ ಹೊಲದ ಮಧ್ಯೆ ಉಳಿದುಕೊಂಡು, ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ಆ ಮಹಿಳಾ ಕಾನ್‌ಸ್ಟೇಬಲ್ ನೆಲಕ್ಕೆ ಬಿದ್ದಿದ್ದು, ಇಬ್ಬರು ವ್ಯಕ್ತಿಗಳು ಆಕೆಯ ಬಟ್ಟೆಯನ್ನು ಕೀಳಲು ಯತ್ನಿಸುತ್ತಿದ್ದ, ಅವರ ಮುಂದೆ ಸಂತ್ರಸ್ತೆ ಕೈ ಜೋಡಿಸಿ ಬೇಡಿಕೊಳ್ಳುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿ ಕಾಣಿಸಿದೆ. ಆಕೆಯತ್ತ ಕೂಗುತ್ತಾ “ನೀನು ಇಲ್ಲಿ ಏಕೆ ಬಂದೆ?” ಎಂದು ಪ್ರಶ್ನಿಸುತ್ತಿರುವ ಬೆದರಿಕೆಯ ಮಾತುಗಳೂ ವಿಡಿಯೋದಲ್ಲಿ ಕೇಳಬಹುದಾಗಿದೆ.
Viral Video: ವಾಕಿಂಗ್ ಹೋಗಿದ್ದವರ ಬೆನ್ನಟ್ಟಿದ ಕರಡಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಮಹಿಳಾ ಕಾನ್‌ಸ್ಟೇಬಲ್ ಕಣ್ಣೀರಿಡುತ್ತಾ, “ಅಣ್ಣಾ, ದಯವಿಟ್ಟು ಬಿಟ್ಟು ಬಿಡಿ. ನಾನು ಏನೂ ಮಾಡಿಲ್ಲ...ಯಾರನ್ನೂ ಹೊಡೆದಿಲ್ಲ...ಕರ್ತವ್ಯಕ್ಕೆ ನಿಯೋಜನೆಗೊಂಡು ಬಂದಿದ್ದೇನೆ” ಎಂದು ಮನವಿ ಮಾಡಿದ್ದಾರೆ. ಬಳಿಕ ಆಕೆಯನ್ನು ಅಲ್ಲಿಂದ ಹೋಗಲು ಬಿಟ್ಟು ಮತ್ತೆ ಬಾರದಂತೆ ಆರೋಪಿಗಳು ಎಚ್ಚರಿಸಿದ್ದಾರೆ.
ವ್ಯಕ್ತಿಯೊಬ್ಬ ಒಂದು ಕೈಯಲ್ಲಿ ವೀಡಿಯೋ ರೆಕಾರ್ಡ್ ಮಾಡುತ್ತಾ, ಇನ್ನೊಂದು ಕೈಯಿಂದ ಆಕೆಯ ಬಟ್ಟೆ ಎಳೆಯುತ್ತಿರುವುದು, ಬಳಿಕ ಚಪ್ಪಲಿ ತೋರಿಸಿ ಹೊಡೆಯುವ ಬೆದರಿಕೆ ಹಾಕುತ್ತಿರುವ ದೃಶ್ಯಗಳೂ ವಿಡಿಯೋದಲ್ಲಿ ಕಾಣಿಸಿದೆ.
ಬ್ಲರ್ ಮಾಡಿದ ಈ ವೀಡಿಯೋವನ್ನು ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, “ಛತ್ತೀಸ್‌ಗಢದ ರಾಯಗಢದಲ್ಲಿ ಮಹಿಳಾ ಕಾನ್ಸ್ಟೇಬಲ್ ಮೇಲೆ ನಡೆದ ಈ ಅಮಾನವೀಯ ವರ್ತನೆ ಭಯಾನಕವಾಗಿದೆ. ಮಹಿಳಾ ಪೊಲೀಸರೇ ಸುರಕ್ಷಿತವಾಗಿಲ್ಲದಿದ್ದರೆ, ಸಾಮಾನ್ಯ ಮಹಿಳೆಯರ ಸ್ಥಿತಿ ಏನು? ಮಹಿಳಾ ಸುರಕ್ಷತೆ ವಿಷಯದಲ್ಲಿ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ” ಎಂದು ಬರೆದುಕೊಂಡಿದೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆಕಾಶ್ ಮಾರ್ಕಮ್ (Akash Markam) ತಿಳಿಸಿದ್ದಾರೆ.