ನವದೆಹಲಿ: ಮದುವೆಯು ಜೀವನದಲ್ಲಿ ಒಂದು ಸುಂದರವಾದ ಅಧ್ಯಾಯ. ಪ್ರತಿಯೊಬ್ಬರ ಜೀವನದ ಹೊಸ ಅಧ್ಯಾಯವು ಮದುವೆಯಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಇದು ಪ್ರೀತಿ, ಒಡನಾಟ ಮತ್ತು ಪರಸ್ಪರ ಗೌರವದಿಂದ ತುಂಬಿದ ಹೊಸ ಆರಂಭವನ್ನು ಗುರುತಿಸುತ್ತದೆ. ಆದರೆ ಕೆಲವರಿಗೆ ಮದುವೆ (marriage) ನಂತರದ ಜೀವನವು ಕರಾಳ ಅನುಭವ, ನೋವು ಅಥವಾ ಭಯ ಕಾಡುವಂತಾಗಬಹುದು. ಇದೇ ರೀತಿಯ ಅನುಭವವನ್ನು ಹಂಚಿಕೊಳ್ಳುತ್ತಾ, ಇತ್ತೀಚೆಗೆ ಒಬ್ಬ ಮಹಿಳೆ ರೆಡ್ಡಿಟ್‌ನಲ್ಲಿ (Reddit) ತನ್ನ ದಾಂಪತ್ಯದ ಭಯಾನಕ ಅನುಭವವನ್ನು ಹಂಚಿಕೊಂಡರು. ಅದು ಅವಳನ್ನು ನಡುಗುವಂತೆ ಮಾಡಿದೆ. ಹಬ್ಬದ ಸಮಯದಲ್ಲಿ ತನ್ನ ಪತಿಯೊಂದಿಗಿನ ಭಿನ್ನಾಭಿಪ್ರಾಯವು ಹೇಗೆ ನಿಯಂತ್ರಣ ತಪ್ಪಿತು ಎಂಬುದನ್ನು ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಈ ಪೋಸ್ಟ್ ವೈರಲ್ (Viral News) ಆಗಿದೆ.
ಹಬ್ಬದ ಸಿದ್ಧತೆಯಲ್ಲಿದ ತಾನು ಸಂಪೂರ್ಣ ಅದರಲ್ಲೇ ಮುಳುಗಿದ್ದೆ. ಈ ವೇಳೆ ಇಬ್ಬರ ನಡುವೆ ಸಣ್ಣ ಮನಸ್ತಾಪ ಶುರುವಾಯ್ತು. ಅದು ಅಲ್ಲಿಗೆ ಶಾಂತವಾಯಿತು ಅಂತಾ ಅಂದುಕೊಂಡರೆ, ಮರುದಿನ ಮತ್ತೊಂದು ಕರಾಳ ತಿರುವು ಪಡೆದುಕೊಂಡಿತು. ಆಕೆಯ ಪತಿಯು ತನ್ನ ಮಾತಿನಿಂದಲೇ ನಿಂದಿಸಿದನೆಂದು ಮಹಿಳೆ ಆರೋಪಿಸಿದರು. ಆರಂಭದಲ್ಲಿ, ನನ್ನ ನ್ಯೂನತೆಗಳನ್ನು ಅರ್ಥಮಾಡಿಕೊಂಡೆ ಹಾಗೂ ಒಪ್ಪಿಕೊಂಡೆ ಕೂಡ. ಆದರೆ, ಅವನ ಅಸಹ್ಯಕರ ಮಾತು ಅಲ್ಲಿಗೆ ನಿಲ್ಲಲಿಲ್ಲ. ಹೀಗಾಗಿ ತಡೆಯಲಾರದೆ ತಾನು ಎದುರುತ್ತರ ಕೊಟ್ಟೆ. ಒಬ್ಬ ವ್ಯಕ್ತಿಯು ಎಷ್ಟು ತಡೆದುಕೊಳ್ಳಲು ಸಾಧ್ಯ ಎಂದು ಆಕೆ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.
ಆದರೆ, ಅದು ಅಲ್ಲಿಗೆ ಕೊನೆಗಂಡಂತೆ ಕಾಣಲಿಲ್ಲ. ಪತಿ ಚುಚ್ಚು ಮಾತನಾಡುವ ಮೂಲಕ ಆಕೆಯನ್ನು ಮಲಗುವುದಕ್ಕೆ ಬಿಡಲೇ ಇಲ್ಲ. ನಂತರ ದೈಹಿಕವಾಗಿ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ. ತನ್ನನ್ನು ತಳ್ಳಿದ ಆತ, ಗೋಡೆಗೆ ಹಿಡಿದು ಬಡಿದಿದ್ದಾನೆ. ತನ್ನ ಮೇಲೆ ವಸ್ತುಗಳನ್ನು ಎಸೆದು ಕೋಪ ತೋರಿಸಿದ್ದಾನೆ. ಇಷ್ಟೆಲ್ಲಾ ಮಾಡಿದ ನಂತರ ಅವನು ಇಡಿ ದಿನ ಕ್ಷಮೆಯಾಚಿಸಿದನು. ನಾನು ಅವನನ್ನು ಕ್ಷಮಿಸಿದೆ ಎಂದು ಅವಳು ಹೇಳಿದಳು.
ಇದನ್ನೂ ಓದಿ: Viral News: ಗೆಸ್ಟ್ ಹೌಸ್‌ಗಳಲ್ಲಿ ತಂಗುವ ಮುನ್ನ ಎಚ್ಚರ... ಎಚ್ಚರ! ವಾಶ್‌ರೂಂನಲ್ಲಿತ್ತು ಹಿಡನ್ ಕ್ಯಾಮರಾ
ಅವನು ಕ್ಷಮೆಯಾಚಿಸಿದರೂ, ತಾನು ಇನ್ನೂ ತೀವ್ರವಾಗಿ ಆಘಾತಕ್ಕೊಳಗಾಗಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ. ಅವನು ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಆಡಿದ ಮಾತು ಮತ್ತು ಅವನು ಮಾಡಿದ ಭಯಾನಕ ಕೃತ್ಯಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಇದರ ಬಗ್ಗೆ ಯಾರೊಂದಿಗೆ ಚರ್ಚಿಸಬೇಕೆಂದು ನನಗೆ ತಿಳಿದಿಲ್ಲ. ದಂಪತಿಗಳು ಜಗಳವಾಡುವುದು ಸಾಮಾನ್ಯ. ಆದರೆ ಆ ರಾತ್ರಿ ಭಯಾನಕವಾಗಿತ್ತು ಎಂದು ಕನಸಿನಲ್ಲಿಯೂ ಬೆಚ್ಚಿಬೀಳುವುದಾಗಿ ಹೇಳಿದ್ದಾಳೆ.
ಆ ಮಹಿಳೆಯ ಪೋಸ್ಟ್ ವೈರಲ್ ಆಗಿದ್ದು, ನೂರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ಮತ್ತು ಸಲಹೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಅನೇಕ ರೆಡ್ಡಿಟರ್‌ಗಳು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಆಕೆಯ ಪತಿಯ ನಡವಳಿಕೆಯು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ನಿಂದನೀಯವಾಗಿದೆ ಎಂದು ಹೇಳಿದ್ದಾರೆ.
ಅವನು ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ನೀವು ಯಾರೊಂದಿಗಾದರೂ ಇದರ ಬಗ್ಗೆ ಚರ್ಚಿಸಲು ಹೆದರುತ್ತಿರಬಹುದು. ಆದರೆ, ಕನಿಷ್ಠ ನಿಮ್ಮ ವಿಶ್ವಾಸಾರ್ಹ ವ್ಯಕ್ತಿಗೆ ತಿಳಿಸುವುದು ಒಳ್ಳೆಯದು. ನಿಮ್ಮಲ್ಲಿ ಯಾವುದೇ ಏಟಿನ ಗುರುತುಗಳಿದ್ದರೆ, ದಯವಿಟ್ಟು ಅವುಗಳ ಫೋಟೋ ತೆಗೆದು, ನೀವು ನಂಬಿದ ಸ್ನೇಹಿತರಿಗೆ ಕಳುಹಿಸಿ. ಹಾಗೆಯೇ ನಿಂದನೀಯ ಮಾತುಗಳನ್ನು ರೆಕಾರ್ಡ್ ಮಾಡುವಂತೆ ಮತ್ತೊಬ್ಬ ಬಳಕೆದಾರರು ಸಲಹೆ ನೀಡಿದ್ದಾರೆ.
ಅವನು ನಿನ್ನನ್ನು ಗೋಡೆಗೆ ತಳ್ಳಿಹಾಕಿದ ರೀತಿ ಆಕ್ರಮಣಕಾರಿಯಾಗಿ ತೋರುತ್ತದೆ. ಈ ನಡವಳಿಕೆಯನ್ನು ಸರಿಪಡಿಸದಿದ್ದರೆ, ದೌರ್ಜನ್ಯ ಮತ್ತೆ ಪುನರಾವರ್ತಿಸಬಹುದು. ಇಂತಹ ಜನರು ಬದಲಾಗುವುದು ಬಹಳ ವಿರಳ. ಒಮ್ಮೆ ಕ್ಷಮೆ ಕೇಳಿ ಮತ್ತದೇ ಕೆಲಸ ಮಾಡುತ್ತಾರೆ. ಇದು ಆರೋಗ್ಯಕರ ಸಂಬಂಧವಲ್ಲ ಎಂದು ಮಗದೊಬ್ಬ ಬಳಕೆದಾರರು ತಿಳಿಸಿದ್ದಾರೆ.