ಸೂರಜ್‌ಪುರ: ಛತ್ತೀಸ್‌ಗಢದಲ್ಲಿ (Chattisghar) ಆಶ್ಚರ್ಯಕರ ಘಟನೆಯೊಂದು ನಡೆದಿದೆ..ಮಗ ಸತ್ತಿದ್ದಾನೆಂದು ಭಾವಿಸಿ ಕುಟುಂಬವು ದುಃಖದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸುತ್ತಿದ್ದರು. ಆದರೆ ಅಂತ್ಯಕ್ರಿಯೆಯ ಸಮಯದಲ್ಲಿ ಮಗನೇ ಜೀವಂತವಾಗಿ ಮನೆಗೆ ಮರಳುವ ಮೂಲಕ ತನ್ನ ಕುಟುಂಬ ಮತ್ತು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದ್ದಾನೆ. ಈ ಪವಾಡ ದೃಶ್ಯವು ಕುಟುಂಬಕ್ಕೆ ಅಪಾರ ಸಂತೋಷವನ್ನು ತಂದು ಕೊಟ್ಟರೆ ಪೊಲೀಸರಿಗೆ ಈ ವಿಚಾರ ಶಾಕಿಂಗ್ ನೀಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಸೂರಜ್‌ಪುರ ಜಿಲ್ಲೆಯ ಮನ್‌ಪುರ ಪ್ರದೇಶದಲ್ಲಿ ಕಳೆದ ವಾರ ಗುರುತು ಸಿಗದ ವ್ಯಕ್ತಿಯ ಮೃತ ದೇಹವೊಂದು ಬಾವಿಯಲ್ಲಿ ಪತ್ತೆಯಾಗಿತ್ತು. ಅಧಿಕಾರಿಗಳು ಮೃತರ ಗುರುತು ಪತ್ತೆ ಮಾಡಲು ನೆರೆಹೊರೆಯ ಪ್ರದೇಶಗಳಿಗೆ ಮಾಹಿತಿ ರವಾನಿಸಿದ್ದರು. ಇದೇ ಸಂದರ್ಭದಲ್ಲಿ ಚಂದರಪುರದ ನಿವಾಸಿ ಪುರುಷೋತ್ತಮ ಎಂಬ ಯುವಕ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಆತನ ಹುಡುಕಾಟದಲ್ಲಿದ್ದ ಕುಟುಂಬದವರು ತಕ್ಷಣ ಪೊಲೀಸರ ಬಳಿಗೆ ಧಾವಿಸಿ, ಆ ಶವ ತಮ್ಮ ಮಗ ಪುರುಷೋತ್ತಮನದೇ ಎಂದು ಪತ್ತೆ ಮಾಡಿದ್ದರು.
ಇದನ್ನು ಓದಿ:Viral Video: ರಸ್ತೆಯಲ್ಲೇ ಮಹಿಳೆಯ ದುಪಟ್ಟಾ ಎಳೆದು ಕಿಡಿಗೇಡಿಯ ಅಟ್ಟಹಾಸ- ವಿಡಿಯೊ ವೈರಲ್
ಈ ಸಂದರ್ಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ಅಧಿಕಾರಿಗಳ ಸಮ್ಮುಖದಲ್ಲಿಯೇ ಪುರುಷೋತ್ತಮನ ಹೆಸರಿನಲ್ಲಿ ಆ ಶವವನ್ನು ಸಮಾಧಿ ಮಾಡಲಾಯಿತು. ಆದರೆ ಕುಟುಂಬವು ದುಃಖದಲ್ಲಿ ಅಂತಿಮ ವಿಧಿಗಳನ್ನು ನೆರವೇರಿ ಸುತ್ತಿದ್ದಾಗ ಮಗ ಮನೆಯಲ್ಲೆ ಪ್ರತ್ಯಕ್ಷ ಆದ ದೃಶ್ಯ ಕಂಡು ಬಂದಿದೆ. ಪುರುಷೋತ್ತಮ್ ನಿಜವಾಗಿಯೂ ಜೀವಂತವಾಗಿದ್ದು ಆತ ಮನೆಯಲ್ಲಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಸಂಬಂಧಿಕರೊಬ್ಬರು ತಿಳಿಸುತ್ತಾರೆ. ಈ ವಿಚಾರ ಅವರ ಕುಟುಂಬದವರಿಗೆ ಆಶ್ಚರ್ಯ ಕಾದಿತ್ತು.
ಸದ್ಯ ಪೊಲೀಸರು ಮೃತದೇಹದ ಬಟ್ಟೆ ಮತ್ತು ಇತರ ವಸ್ತುಗಳನ್ನು ಸಂರಕ್ಷಿಸಿದ್ದಾರೆ. ಈ ಬಗ್ಗೆ ಕುಟುಂಬವು ದೂರು ದಾಖಲಿಸಿದರೆ, ಹೆಚ್ಚಿನ ತನಿಖೆಗಾಗಿ ಸಮಾಧಿ ಮಾಡಿದ ದೇಹವನ್ನು ಹೊರ ತೆಗೆಯಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸರು ಈಗ ಪ್ರಕರಣವನ್ನು ಪುನರ್ ಪರಿಶೀಲಿಸಲು ಮುಂದಾಗಿದ್ದಾರೆ.