ಲಖನೌ: ಮಹಾ ಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವುದಲ್ಲದೆ, ಸಾಧುಗಳ ಆಶೀರ್ವಾದ ಪಡೆಯಲು ವಿವಿಧ ದೇಶ, ವಿದೇಶಗಳಿಂದ ಭೇಟಿ ನೀಡುತ್ತಾರೆ. ಈ ಸಾಧುಗಳು ಧ್ಯಾನ ಮಾಡುತ್ತಾ ಮಂತ್ರ ಪಠಿಸುತ್ತಾ ಅಥವಾ ಭಕ್ತರನ್ನು ಆಶೀರ್ವದಿಸುವಂತಹ ಅನೇಕ ವಿಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಕಂಡುಬಂದಿವೆ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದ ವಿಡಿಯೊಂದರಲ್ಲಿ ಮಹಾ ಕುಂಭ ಮೇಳದ ಸಾಧುಗಳು ಕ್ರಿಕೆಟ್ ಪಂದ್ಯವನ್ನು ಆಡುವುದು ಸೆರೆಯಾಗಿದೆ. ಇದು ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ಸಾಧುಗಳು ಸ್ಥಳೀಯರೊಂದಿಗೆ ಸೇರಿ ಕ್ರಿಕೆಟ್ ಆಡುವ ದೃಶ್ಯ ಸೆರೆಯಾಗಿತ್ತು. ಈ ವಿಡಿಯೊದಲ್ಲಿದ್ದ ಸಾಧುಗಳು ಬೇರೆ ಯಾರೂ ಅಲ್ಲ, ಮಹಾ ಕುಂಭ ಮೇಳಕ್ಕೆ ಬಂದವರು ಎನ್ನಲಾಗಿದೆ.
ಜಿತೇಂದ್ರ ಪ್ರತಾಪ್ ಸಿಂಗ್ ಎಂಬ ಎಕ್ಸ್ ಬಳಕೆದಾರರು ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು, "ಮಹಾ ಕುಂಭ ಸಮಯದಲ್ಲಿ ಸಾಧುಗಳು ತಮ್ಮ ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ" ಎಂದು ಈ ವಿಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಇದು ಅನೇಕ ಜನರ ಗಮನ ಸೆಳೆದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಜನರ ಜೊತೆ ಕೇಸರಿ ಧೋತಿ ಧರಿಸಿದ ಬಾಬಾ ಬಾಟಿಂಗ್ ಮಾಡುವುದು ಸೆರೆಯಾಗಿದೆ. ಜನ ಕೂಡ ಫುಲ್ ಜೋಶ್‌ನಲ್ಲಿ ಸಾಧುವನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೊಗೆ 3,000 ಹೆಚ್ಚು ಲೈಕ್ಸ್ ಸಿಕ್ಕಿದೆ ಮತ್ತು ಅನೇಕರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನಿಡಿದ್ದಾರೆ. ಕೆಲವು ನೆಟ್ಟಿಗರು ಕ್ಲಿಪ್ ಅನ್ನು ಶ್ಲಾಘಿಸಿದರು ಮತ್ತು ಇದು ಇಂದು ನೋಡಿದ ಅತ್ಯಂತ ಸುಂದರವಾದ ರೀಲ್‍ಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಜನರು ಈ ಪಂದ್ಯಕ್ಕೆ ತಮ್ಮ ಪದಗಳಲ್ಲಿ ಶೀರ್ಷಿಕೆ ನೀಡಿದ್ದಾರೆ. ಒಬ್ಬರು ಇದನ್ನು "ಬಾಬಾ ಇಲೆವೆನ್ ವರ್ಸಸ್ ಪ್ರಯಾಗ್‌ರಾಜ್" ಎಂದು ಕರೆದರೆ, ಇನ್ನೊಬ್ಬರು "ಇದು ಮಹಾಕುಂಭ ನಾಗಾ ಲೀಗ್" ಎಂದು ಬರೆದಿದ್ದಾರೆ.
ಮಹಾಕುಂಭ ಮೇಳ 2025
ವರದಿಗಳ ಪ್ರಕಾರ, ವಸಂತ್ ಪಂಚಮಿಯಂದು ಕೊನೆಯ ಅಮೃತ ಸ್ನಾನದ ಮುಕ್ತಾಯವಾದ ನಂತರ ನಾಗಾ ಸಾಧುಗಳು ಔಪಚಾರಿಕ ವಿದಾಯ ಹೇಳಿದ್ದಾರೆ. ಅವರು ಮಹಾಕುಂಭವನ್ನು ಬಿಟ್ಟು ಕಾಶಿಗೆ ಪ್ರಯಾಣಿಸಲು ಸಜ್ಜಾಗಿದ್ದಾರೆ. ಈ ಭವ್ಯ ಮೇಳ ಜನವರಿ 13 ರಂದು ಶುರುವಾಗಿದ್ದು, ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯವಾಗಲಿದೆ.
ಈ ಸುದ್ದಿಯನ್ನೂ ಓದಿ: Viral Video: ಮಹಾ ಕುಂಭಮೇಳದಲ್ಲಿ ಕಿಡಿಗೇಡಿಗೆ ಕಪಾಳಮೋಕ್ಷ ಮಾಡಿದ ಸಾಧು; ಕಾರಣ ಏನು?
ಕೆಲವು ದಿನಗಳ ಹಿಂದೆಯಷ್ಟೇ ತನ್ನ ಒಂದು ಕೈಯನ್ನು ಮೇಲೆತ್ತಿಕೊಂಡು ಹೋಗುತ್ತಿದ್ದ ಸಾಧುವನ್ನು ಪಕ್ಕದಲ್ಲಿದ್ದ ಯುವಕನೊಬ್ಬ ನಕಲು ಮಾಡಿದ್ದಾನೆ. ಇದರಿಂದ ಕೋಪಗೊಂಡ ಸಾಧು ಆ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.