ಮುಂಬೈ: ಸೆಕ್ಯೂರಿಟಿ ಗಾರ್ಡ್‌ವೊಬ್ಬ ಮರಾಠಿ ಭಾಷೆಗೆ ಅಗೌರವ ತೋರಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಪೊವಾಯಿಯ ಎಲ್ ಅಂಡ್ ಟಿಯಲ್ಲಿ ಕೆಲಸ ಮಾಡುತ್ತಿದ್ದ ಗಾರ್ಡ್, ಮರಾಠಿ ಭಾಷೆಯ ಬಗ್ಗೆ ನಿಂದನೆ ಮಾಡಿದ್ದು ವಿಡಿಯೊದಲ್ಲಿ ರೆಕಾರ್ಡ್ ಆಗಿದ್ದು, ಇದು ಮಹಾರಾಷ್ಟ್ರ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ, ಮರಾಠಿ ಭಾಷೆಗೆ ಮಾಡಿದ ಅವಮಾನದಿಂದ ಕೋಪಗೊಂಡ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಕಾರ್ಯಕರ್ತರು ಸ್ಥಳಕ್ಕೆ ಬಂದು ಸೆಕ್ಯೂರಿಟಿ ಗಾರ್ಡ್ ಜೊತೆ ಗಲಾಟೆ ಮಾಡಿ ಅವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ವಿಡಿಯೊದಲ್ಲಿ ವಾಗ್ವಾದದ ಸಮಯದಲ್ಲಿ ಭದ್ರತಾ ಸಿಬ್ಬಂದಿ ಮರಾಠಿಯಲ್ಲಿ ಮಾತನಾಡಲು ನಿರಾಕರಿಸಿದ್ದಾನೆ. ಮತ್ತು ಮರಾಠಿ ಭಾಷೆಯನ್ನು ಅವಮಾನಿಸಿದ್ದಾನೆ . ಇದು ಗಲಾಟೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ನಂತರ ಎಂಎನ್ಎಸ್ ಕಾರ್ಯಕರ್ತರ ಗುಂಪು ಆತನನ್ನು ಸುತ್ತುವರಿದಾಗ ಹೆದರಿದ ಆತ ಕೈಗಳನ್ನು ಜೋಡಿಸಿ ಕ್ಷಮೆಯಾಚಿಸಿದ್ದಾನೆ. ಪಕ್ಷದ ಕಾರ್ಯಕರ್ತರು ಅವನಿಗೆ ತನ್ನ ಅಹಂಕಾರವನ್ನು ಕಡಿಮೆ ಮಾಡಿಕೊಂಡು ಮರಾಠಿ ಭಾಷೆಯನ್ನು ಕಲಿಯುವಂತೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ಯಾವುದೇ ಪೊಲೀಸ್ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.
ಸೆಕ್ಯೂರಿಟಿ ಗಾರ್ಡ್ ಕ್ಷಮೆಯಾಚಿಸಿದ ವಿಡಿಯೊ ಇಲ್ಲಿದೆ ನೋಡಿ...
ಮರಾಠಿ ಮಾತನಾಡಲು ಒಪ್ಪದ ಡಿ-ಮಾರ್ಟ್ ಉದ್ಯೋಗಿ
ಇತ್ತೀಚೆಗೆ ಇದೇ ರೀತಿಯ ಘಟನೆ ಅಂಧೇರಿ ಪಶ್ಚಿಮದ ವರ್ಸೋವಾದಲ್ಲಿ ವರದಿಯಾಗಿದೆ. ಮರಾಠಿಯಲ್ಲಿ ಮಾತನಾಡಲು ನಿರಾಕರಿಸಿದ ಡಿ-ಮಾರ್ಟ್ ಉದ್ಯೋಗಿಯ ಮೇಲೆ ಎಂಎನ್ಎಸ್ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾರ್ಚ್ 25 ರಂದು ನಡೆದ ಈ ಘಟನೆಯು ಮಹಾರಾಷ್ಟ್ರದ ಭಾಷಾ ರಾಜಕೀಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತ್ತು. ವರದಿಗಳ ಪ್ರಕಾರ, ಗ್ರಾಹಕರು ಉದ್ಯೋಗಿಯ ಬಳಿ ಮರಾಠಿಯಲ್ಲಿ ಮಾತನಾಡಲು ವಿನಂತಿಸಿದ್ದು, ಇದಕ್ಕೆ ಆತ ನಿರಾಕರಿಸಿದ ದೃಶ್ಯವನ್ನು ತೋರಿಸುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಈ ವಿವಾದ ಶುರುವಾಗಿದೆ ಎನ್ನಲಾಗಿದೆ. ವಿಡಿಯೊದಲ್ಲಿ ಅವನ ಹೇಳಿಕೆಗಳುನ್ನು ಕೇಳಿದ ಕಾರ್ಯಕರ್ತರು ರೊಚ್ಚಿಗೆದ್ದು ಶಾಪ್‌ಗೆ ಭೇಟಿ ನೀಡಿ ಗಲಾಟೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಮೆಟ್ರೋದಲ್ಲಿ ಸೀಟಿಗಾಗಿ ಮಹಿಳೆಯರೊಂದಿಗೆ ಜಗಳಕ್ಕಿಳಿದ ವ್ಯಕ್ತಿ; ಬಿದ್ದು ಬಿದ್ದು ನಕ್ಕ ಪ್ರಯಾಣಿಕರು- ಫನ್ನಿ ವಿಡಿಯೊ ಫುಲ್ ವೈರಲ್
ಗಲಾಟೆಯ ಸಮಯದಲ್ಲಿ, ಉದ್ಯೋಗಿಗೆ ಎಂಎನ್ಎಸ್ ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೊದಲ್ಲಿ ಉದ್ಯೋಗಿಗೆ ಮರಾಠಿ ಕಲಿಯುವಂತೆ ಕಾರ್ಯಕರ್ತರು ಒತ್ತಡ ಹಾಕಿದ್ದಾರೆ ಮತ್ತು ಅವನ ಹೇಳಿಕೆಗೆ ಕ್ಷಮೆಯಾಚಿಸುವಂತೆ ಮಾಡಿದ್ದಾರೆ.