ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ (Pakistan Prime Minister) ಶೆಹಬಾಜ್ ಷರೀಫ್ (Shehbaz Sharif) ಪ್ರಶಸ್ತಿ ಪ್ರಧಾನ ಸಮಾರಂಭವೊಂದರಲ್ಲಿ ನಟಿ ಮೌರಾ ಹೊಕೇನ್ (actress Mawra Hocane) ಅವರನ್ನೇ ನೋಡುತ್ತಿರುವ ವಿಡಿಯೊವೊಂದು (Viral Video) ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇದಕ್ಕೆ ಶೆಹಬಾಜ್ ಷರೀಫ್ ನಟಿಯನ್ನು 'ಡೀಪ್-ಸ್ಕ್ಯಾನಿಂಗ್' ಮಾಡಿದ್ದಾರೆ ಎನ್ನುವ ರೀತಿಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದು 2023ರ ಪ್ರಶಸ್ತಿ ಪ್ರದಾನ ಸಮಾರಂಭದ ವಿಡಿಯೊ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮತ್ತೆ ನೆಟ್ಟಿಗರ ಗಮನ ಸೆಳೆದಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಂಜಾಬ್‌ನ ಗವರ್ನರ್ ಹೌಸ್‌ನಲ್ಲಿ 2023ರಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿತ್ತು. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ನಟಿ ಮೌರಾ ಹೊಕೇನ್ ಅವರಿಗೆ ಪ್ರಶಸ್ತಿ ನೀಡಿದ ಬಳಿಕವೂ ಅವರನ್ನೇ ನೋಡುತ್ತಾ ನಿಂತಿದ್ದರು. ಇದರ ವಿಡಿಯೊ ಕ್ಲಿಪ್ ಆಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ವಿಡಿಯೊ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಅನಂತರವು ಪಾಕಿಸ್ತಾನ ಪ್ರಧಾನಿ ನಟಿಯನ್ನು ಹೇಗೆ ನೋಡಿದರು ನೋಡಿ ಎನ್ನುವ ಶೀರ್ಷಿಕೆಯೊಂದಿಗೆ ಇದು ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ.
ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧ ಘೋಷಣೆಯಾಗುವ ಸಾಧ್ಯತೆಯೂ ಇತ್ತು. ಈ ನಡುವೆಯೇ ಕದನ ವಿರಾಮ ಘೋಷಣೆಯಾದ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಬಂಧಿತ ವಿಷಯಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿ ಹೆಚ್ಚಾಗಿದೆ. ಇದರ ನಡುವೆಯೇ ಈ ವಿಡಿಯೊ ವೈರಲ್ ಆಗಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಅನೇಕರು ಪಾಕಿಸ್ತಾನದ ಪ್ರಧಾನಿಯ ನಡವಳಿಕೆಯನ್ನು ಗೇಲಿ ಮಾಡಿದ್ದಾರೆ. ಅಲ್ಲದೇ ಈ ವಿಡಿಯೊ ಪುರುಷರ ನೋಟದ ಬಗ್ಗೆ ಚರ್ಚೆಯನ್ನು ಉಂಟು ಮಾಡಿತ್ತು.
ಪುರುಷರು ಅನುಚಿತ ನೋಟಗಳ ಮೂಲಕ ಮಹಿಳೆಯರನ್ನು ಹೇಗೆ ವಸ್ತುನಿಷ್ಠವಾಗಿ ನೋಡುತ್ತಾರೆ ಎಂಬುದನ್ನು ಅನೇಕರು ಕಾಮೆಂಟ್ ವಿಭಾಗದಲ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ಔಪಚಾರಿಕ ಕಾರ್ಯಕ್ರಮಗಳಲ್ಲಿ ಇಂತಹ ನಡವಳಿಕೆಯ ಹಲವು ಬಾರಿ ಚರ್ಚೆಗೆ ಗ್ರಾಸವಾಗುವುದೂ ಇದೆ.
ಮೌರಾ ಹೊಕೇನ್ 2016ರಲ್ಲಿ ʼಸನಮ್ ತೇರಿ ಕಸಮ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ನಡುವೆ ಭಾರತದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಬಗ್ಗೆ ಮಾತನಾಡಿ ಸಾರ್ವಜನಿಕವಾಗಿ ಟೀಕೆಗೆ ಗುರಿಯಾದರು. ಬಳಿಕ ಅವರನ್ನು ಚಿತ್ರದ ಮುಂದಿನ ಭಾಗದಿಂದ ತೆಗೆದು ಹಾಕಿರುವುದಾಗಿ ಸಹನಟ ಹರ್ಷವರ್ಧನ್ ರಾಣೆ ಘೋಷಿಸಿದರು. ಇದಕ್ಕೆ ಹೊಕೇನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ದೇಶಭಕ್ತಿಯನ್ನು ಒತ್ತಿ ಹೇಳುತ್ತಾ, ತನ್ನ ದೇಶದ ಘನತೆಯ ಮೇಲಿನ ಯಾವುದೇ ದಾಳಿಯನ್ನು ತಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಈ ವಿವಾದ ಮತ್ತಷ್ಟು ಹೆಚ್ಚಾಯಿತು. ಬಳಿಕ ಅವರನ್ನು ಚಿತ್ರದ ಪ್ರಚಾರದಿಂದ ಚಿತ್ರತಂಡ ತೆಗೆದು ಹಾಕಿದೆ.