ಶಿಮ್ಲಾ, ಡಿ.30: ಇಡೀ ದೇಶದ ಗಮನವನ್ನೇ ಸೆಳೆದಿದ್ದ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜಿ (Indira Gandhi Medical College)ನ (IGMC) ವೈದ್ಯ ಮತ್ತು ರೋಗಿಯ ನಡುವಿನ ಘರ್ಷಣೆ ಇದೀಗ ಸುಖಾಂತ್ಯ ಕಂಡಿದೆ. ವಿವಾದದ ಕೇಂದ್ರಬಿಂದುವಾಗಿದ್ದ ವೈದ್ಯ ರಾಘವ್ ನರುಲಾ (Raghav Narula) ಮತ್ತು ರೋಗಿ ಅರ್ಜುನ್ (Arjun Panwar) ಪನ್ವಾರ್ ಪರಸ್ಪರ ಕ್ಷಮೆಯಾಚನೆ ಮಾಡಿಕೊಂಡಿದ್ದು, ಈ ಮೂಲಕ ವಿವಾದ ಶಾಂತಿಯುತವಾಗಿ ಅಂತ್ಯಗೊಂಡಿದೆ.
ಸಂಧಾನದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ. ರಾಘವ್ ನರುಲಾ, ಆ ಸಂದರ್ಭದಲ್ಲಿ ಎರಡೂ ಪಕ್ಷಗಳಿಂದಲೂ ತಪ್ಪುಗಳಾಗಿವೆ. ಈಗ ನಾವು ಮಾಡಿದ ತಪ್ಪುಗಳನ್ನು ಪರಸ್ಪರ ಅರ್ಥಮಾಡಿಕೊಂಡಿದ್ದೇವೆ ಹಾಗೂ ನಾವು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕ್ಷಮೆ ಕೂಡ ಕೇಳಿದ್ದೇವೆ. ಈಗ ಎಲ್ಲವೂ ಸರಿಯಾಗಿದೆ,” ಎಂದು ಹೇಳಿದ್ದಾರೆ.
ರೋಗಿ ಅರ್ಜುನ್ ಪನ್ವಾರ್ ಕೂಡ ವಿವಾದವು ಇತ್ಯರ್ಥಗೊಂಡಿರುವುದನ್ನು ದೃಢಪಡಿಸಿದ್ದಾರೆ. "ವೈದ್ಯರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ ನಂತರ ನಾನು ಈ ವಿಷಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದ್ದೇನೆ. ಆಗ ನಿಖರವಾಗಿ ಏನಾಯಿತು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಬಯಸುವುದಿಲ್ಲ. ಕ್ಷಮೆಯಾಚನೆ ಮಾಡಿದ ಬಳಿಕ ಆ ವಿಷಯ ಅಷ್ಟರಲ್ಲೇ ಅಂತ್ಯಗೊಳ್ಳಬೇಕು,” ಎಂದು ಪನ್ವಾರ್ ಹೇಳಿದರು. ಅಷ್ಟೇ ಅಲ್ಲದೇ “ಶೀಘ್ರದಲ್ಲೇ ಡಾಕ್ಟರ್ ಸಾಹಬ್ ಅವರ ಮದುವೆಯಲ್ಲಿ ನನ್ನನ್ನೂ ನೋಡಬಹುದು,” ಎಂದು ಅವರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ವೈದ್ಯ ರಾಘವ್ ನರುಲಾ ಹಾಗೂ ರೋಗಿ ಅರ್ಜುನ್ ಪನ್ವಾರ್ ನಡುವೆ ನಡೆದ ಹೊಡೆದಾಟ ನಡೆದಿತ್ತು. ಅಲ್ಲದೇ ಅದರ ವಿಡಿಯೋ ಹಾಗೂ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆ ಆಸ್ಪತ್ರೆಯ ಭದ್ರತಾ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಪ್ರಶ್ನೆ ಕೇಳತೊಡಗಿದ್ದರು.
ಡಾ. ರಾಘವ್ ನರುಲಾ ವಿರುದ್ಧ ಕ್ರಮ
ಹಿಮಾಚಲ ಪ್ರದೇಶ ಸರ್ಕಾರವು ಡಿಸೆಂಬರ್ 24ರಂದು ಈ ದೈಹಿಕ ಹಲ್ಲೆ ಪ್ರಕರಣದ ಹಿನ್ನೆಲೆ ಹಿರಿಯ ರೆಸಿಡೆಂಟ್ ವೈದ್ಯರಾದ ಡಾ. ರಾಘವ್ ನರುಲಾರನ್ನು ವಜಾಗೊಳಿಸಿತು. ಡಾ. ರಾಘವ್ ಸಾರ್ವಜನಿಕರೊಂದಿಗೆ ದುರ್ವರ್ತನೆ ದುಷ್ಕೃತ್ಯ, ಹಲ್ಲೆ ಮಾಡಿದ್ದಾರೆ ಎಂದು ಪರಿಗಣಿಸಿ ಅಧಿಕಾರಿಗಳು ಅವರ ವಿರುದ್ಧ ಈ ಕ್ರಮ ಕೈಗೊಂಡಿದ್ದರು. ಈ ಘಟನೆಯ ತನಿಖೆಗಾಗಿ ರಚಿಸಲಾದ ಸಮಿತಿಯು, ಶಿಮ್ಲಾದ ಖಾಸಗಿ ಅಕಾಡೆಮಿಯಲ್ಲಿ ಬೋಧಕರಾಗಿರುವ ರೋಗಿ ಅರ್ಜುನ್ ಸಿಂಗ್ ಹಾಗೂ ವೈದ್ಯ ರಾಘವ್ ನರುಲಾ ಇಬ್ಬರೂ ಈ ಘಟನೆಗೆ ಕಾರಣರಾಗಿದ್ದು, ಇಬ್ಬರದ್ದೂ ತಪ್ಪಿದೆ ಎಂದು ತೀರ್ಮಾನಿಸಿತು. ಘಟನೆಯ ನಂತರ ರೆಸಿಡೆಂಟ್ ವೈದ್ಯರು ಮತ್ತು ರೋಗಿಯ ಸಂಬಂಧಿಕರ ನಡುವೆ ಉದ್ವಿಗ್ನತೆ ಹೆಚ್ಚಾಗಿ, ಐಜಿಎಂಸಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈಗ ಎರಡೂ ಪಕ್ಸಗಳು ಸಂಧಾನ ಏರ್ಪಟಿದ್ದು, ಆಸ್ಪತ್ರೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿದೆ.