Viral Video: ಹುಮಾಯೂನ್ ಸಮಾಧಿಯ ಗೋಡೆಗಳ ಮೇಲೆ ಹೆಸರು ಗೀಚಿದ ಪ್ರವಾಸಿಗರು; ನೆಟ್ಟಿಗರ ಆಕ್ರೋಶ
Visitors Caught Scratching: ಮೊಘಲ್ ದೊರೆ ಹುಮಾಯೂನ್ ಸಮಾಧಿಯ ಗೋಡೆಗಳ ಮೇಲೆ ಪ್ರವಾಸಿಗರು ತಮ್ಮ ಹೆಸರುಗಳನ್ನು ಗೀಚುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಐತಿಹಾಸಿಕ ಸ್ಮಾರಕಗಳ ಬಗ್ಗೆ ಅಗೌರವ ಮತ್ತು ಸ್ಮಾರಕವನ್ನು ವಿರೂಪಗೊಳಿಸುತ್ತಿರುವ ಕೃತ್ಯವು ಅಕ್ಷಮ್ಯ ಅಪರಾಧ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

-

ದೆಹಲಿ: ಪ್ರವಾಸಿ ಸ್ಥಳಕ್ಕೆ ಹೋಗುವ ಜನರು ಆ ಸ್ಥಳವನ್ನು ಹಾಳು ಮಾಡುತ್ತಾರೆ. ಇದೀಗ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ದೆಹಲಿಯಲ್ಲಿರುವ ಹುಮಾಯೂನ್ ಸಮಾಧಿಯ (Humayun’s Tomb) ಗೋಡೆಗಳ ಮೇಲೆ ಪ್ರವಾಸಿಗರು ತಮ್ಮ ಹೆಸರನ್ನು ಗೀಚುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ಬೇಜವಾಬ್ದಾರಿ ಕೃತ್ಯವು ಸಾರ್ವಜನಿಕ ವಿಧ್ವಂಸಕತೆ ಮತ್ತು ಐತಿಹಾಸಿಕ ಸ್ಮಾರಕಗಳ ಬಗ್ಗೆ ಅಗೌರವದ ವಿರುದ್ಧ ಆಕ್ರೋಶಕ್ಕೆ ಕಾರಣವಾಯಿತು. ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವು ಹಲವು ಜನರು ಐತಿಹಾಸಿಕ ತಾಣವನ್ನು ಕಪ್ಪು ಹಲಗೆಯಂತೆ ಪರಿಗಣಿಸುವುದನ್ನು ತೋರಿಸಿದೆ. ಕೆಲವರು ಸ್ಮಾರಕವನ್ನು ವಿರೂಪಗೊಳಿಸಲು ಪರಸ್ಪರರ ಹೆಗಲ ಮೇಲೆ ಹತ್ತಿ ಬರೆಯುತ್ತಿರುವುದನ್ನು ತೋರಿಸಿದೆ.
ಶೂನ್ಯ ನಾಗರಿಕ ಪ್ರಜ್ಞೆ! ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹುಮಾಯೂನ್ ಸಮಾಧಿಯ ಗೋಡೆಗಳ ಮೇಲೆ ತಮ್ಮ ಹೆಸರನ್ನು ಕೆತ್ತಲು ಪ್ರವಾಸಿಗರು ಪರಸ್ಪರ ಹೆಗಲು ಕೊಟ್ಟಿದ್ದಾರೆ ಎಂದು ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಪ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ. ಅನೇಕರು ಈ ಘಟನೆಯನ್ನು ನಾಗರಿಕ ವೈಫಲ್ಯ ಎಂದು ಕರೆದಿದ್ದಾರೆ. ಅಪಾರ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಕ್ಕೆ ತೋರಿದ ಅಗೌರವವನ್ನು ಈ ಜನರು ಎತ್ತಿ ತೋರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಡಿಯೊ ವೀಕ್ಷಿಸಿ:
Zero Civic Sense!
— Gems (@gemsofbabus_) September 20, 2025
Visitors climbing on each other just to scratch their worthless names on walls of Humayun’s Tomb – a UNESCO World Heritage Site. 🤡🤦♂️pic.twitter.com/bu060ylBxw
ಜನರು ಯಾವಾಗಲೂ ಮೂಲಭೂತ ಹಕ್ಕುಗಳ ಬಗ್ಗೆ ಕೂಗುತ್ತಾರೆ. ಆದರೆ ಅವರಿಗೆ ಮೂಲಭೂತ ಕರ್ತವ್ಯಗಳು ನೆನಪಿರುವುದಿಲ್ಲ. ನಮ್ಮ ಸಂಯೋಜಿತ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಗೌರವಿಸುವುದು ಮತ್ತು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಒಬ್ಬ ಬಳಕೆದಾರರೊಬ್ಬರು ಬರೆದಿದ್ದಾರೆ. ನಾಚಿಕೆಗೇಡು! ನಮ್ಮ ಪರಂಪರೆಯನ್ನು ಗೌರವಿಸಲು ನಿಮಗೆ ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅದನ್ನು ನಾಶ ಮಾಡಬೇಡಿ. ಸ್ಮಾರಕಗಳನ್ನು ಸಂರಕ್ಷಣೆ ಮಾಡಬೇಕಿದೆ, ಅದು ಗೀಚು ಬರಹಗಳಿಗೆ ಸೀಮಿತವಲ್ಲ ಎಂದು ಮತ್ತೊಬ್ಬ ಬಳಕೆದಾರರು ಕಿಡಿಕಾರಿದ್ದಾರೆ.
ಜನರು ಸ್ವತಃ ಅನೈತಿಕರು ಮತ್ತು ನಾಗರಿಕ ಪ್ರಜ್ಞೆಯ ಕೊರತೆಯನ್ನು ಹೊಂದಿರುತ್ತಾರೆ. ಆದರೆ ಲೂಟಿ ಮತ್ತು ಭ್ರಷ್ಟಾಚಾರಕ್ಕೆ ರಾಜಕಾರಣಿಗಳನ್ನು ದೂಷಿಸುತ್ತಾರೆ. ಜನರು ಎಂದಾದರೂ ತಮ್ಮನ್ನು ತಾವು ಪರಿಶೀಲಿಸಿಕೊಂಡಿದ್ದಾರೆಯೇ? ಸಮಾಜಕ್ಕಾಗಿ ಅಥವಾ ರಾಷ್ಟ್ರಕ್ಕಾಗಿ ಕೆಲಸ ಮಾಡುವುದು ರಾಜಕಾರಣಿಗಳ ಕೆಲಸವೇ? ಎಂದು ಮಗದೊಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಕಾನೂನಿನ ಪ್ರಕಾರ, ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಹಾನಿ ಮಾಡಿದರೆ ನಿಮಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.
ದೆಹಲಿಯಲ್ಲಿರುವ ಹುಮಾಯೂನ್ ಸಮಾಧಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಮೊಘಲ್ ಚಕ್ರವರ್ತಿ ಹುಮಾಯೂನ್ ಅವರ ವಿಶ್ರಾಂತಿ ಸ್ಥಳವಾಗಿದೆ. 1565 ಮತ್ತು 1572ರ ನಡುವೆ ಅವರ ವಿಧವೆ ಪತ್ನಿ ಸಾಮ್ರಾಜ್ಞಿ ಬೇಗಾ ಬೇಗಂ ನಿರ್ಮಿಸಿರುವ ಇದನ್ನು ಭಾರತದ ಮೊದಲ ಉದ್ಯಾನ ಸಮಾಧಿ ಮತ್ತು ಮೊಘಲ್ ವಾಸ್ತುಶಿಲ್ಪದ ಮೇರುಕೃತಿ ಎಂದು ಪರಿಗಣಿಸಲಾಗಿದೆ. ಈ ಸಮಾಧಿಯು ಪರ್ಷಿಯನ್ ಮತ್ತು ಭಾರತೀಯ ಶೈಲಿಗಳ ಅದ್ಭುತ ಕಲಾಕೃತಿಗಳ ಮಿಶ್ರಣವನ್ನು ಹೊಂದಿದ್ದು, ಕೆಂಪು ಮರಳುಗಲ್ಲು ಮತ್ತು ಬಿಳಿ ಅಮೃತಶಿಲೆಯನ್ನು ಬಳಸಲಾಗಿದೆ. ಈ ಸ್ಮಾರಕವು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: Viral Video: ಕ್ಯಾಬ್ ಚಾಲಕ- ಮಹಿಳೆ ನಡುವೆ ಡೆಡ್ಲಿ ಫೈಟ್! ವಿಡಿಯೊ ವೈರಲ್