Rhea Chakraborty: ಸುಶಾಂತ್ ಸಿಂಗ್ ರಜಪೂತ್ ಪ್ರಕರಣ: ಜಾಮೀನು ಪಡೆದ ಮೇಲೆ ಜೈಲಿನಲ್ಲಿ ನಾಗಿನ್ ನೃತ್ಯ ಮಾಡಿದ್ದ ರಿಯಾ ಚಕ್ರವರ್ತಿ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಆತನ ಗೆಳತಿ, ನಟಿ ರಿಯಾ ಚಕ್ರವರ್ತಿ ಜೈಲಿನಲ್ಲಿ ನಾಗಿನ್ ನೃತ್ಯ ಮಾಡಿದ್ದರು. ಈ ಕುರಿತು ಅವರು ಸಂದರ್ಶನವೊಂದರಲ್ಲಿ ಮಾತನಾಡಿ ಜೈಲಿನಲ್ಲಿ ಕಳೆದ ದಿನಗಳ ಬಗ್ಗೆ ನೆನಪಿಸಿಕೊಂಡರು.

-

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput case) ಸಾವಿನ ಅನಂತರ ಜೈಲಿನಲ್ಲಿದ್ದ ನಟಿ ರಿಯಾ ಚಕ್ರವರ್ತಿ (Actor Rhea Chakraborty) ಜಾಮೀನು ಪಡೆದ ಮೇಲೆ ನಾಗಿನ್ ನೃತ್ಯ (Naagin Dance) ಮಾಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅದು ತಮ್ಮ ಜೀವನದ ಅತ್ಯಂತ ಕಷ್ಟದ ದಿನಗಳು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ದೀರ್ಘ ಹೋರಾಟ ಮಾಡಬೇಕಾಯಿತು. ಜೈಲಿನಲ್ಲಿದ್ದ ದಿನಗಳು, ಕುಟುಂಬದ ನೋವು ಮತ್ತು ಕ್ಲೀನ್ ಚಿಟ್ ಪಡೆದ ಅನಂತರದ ಪರಿಣಾಮಗಳ ಕುರಿತು ಅವರು ವಿಸ್ತೃತವಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಜೈಲಿನಲ್ಲಿ 28 ದಿನಗಳನ್ನೂ ಕಳೆದ ನಾನು ಸಹ ಕೈದಿಗಳಿಂದ ಸಾಂತ್ವನ ಪಡೆದೆ. ತನ್ನ ಜಾಮೀನಿನ ಸುದ್ದಿ ಕೇಳಿದಾಗ ಅವರಿಗಾಗಿ ನಾನು ನಾಗಿನ್ ನೃತ್ಯ ಮಾಡಿದೆ ಎಂದು ತಿಳಿಸಿದ್ದಾರೆ.
ಜಾಮೀನು ದೊರೆತ ದಿನದಂದು ನಾನು ನಾಗಿನ್ ನೃತ್ಯ ಮಾಡಿದೆ. ಮುಂದೆ ನಾನು ಅವರನ್ನು ಯಾವಾಗ ಭೇಟಿಯಾಗುತ್ತೇನೆಂದು ತಿಳಿದಿಲ್ಲ. ಹಾಗಾಗಿ ಅವರಿಗೆ ಜೈಲಿನಲ್ಲಿ ಒಂದು ಸಂತೋಷದ ಕ್ಷಣವನ್ನು ನೀಡಲು ಬಯಸಿದೆ. ಹೆಚ್ಚಿನ ಮಹಿಳೆಯರು ಇಲ್ಲಿ ವಿಚಾರಣಾಧೀನರಾಗಿದ್ದು, ಮುಗ್ಧರು ಮತ್ತು ಹತಾಶರಾಗಿದ್ದಾರೆ ಎಂದು ರಿಯಾ ತಿಳಿಸಿದ್ದಾರೆ.
ಈ ಪ್ರಕರಣವು ನನ್ನ ಸಂಪೂರ್ಣ ಕುಟುಂಬದ ಮೇಲೆ ಪ್ರಭಾವ ಬೀರಿತ್ತು. ಕೇಂದ್ರ ತನಿಖಾ ದಳ (ಸಿಬಿಐ) ನನ್ನನ್ನು ಎಲ್ಲ ಆರೋಪಗಳಿಂದ ಮುಕ್ತಗೊಳಿಸಿದರೂ ನಾನು ಸಂಭ್ರಮಿಸಲಾಗಲಿಲ್ಲ ಎಂದು ಅವರು ಹೇಳಿದರು.
ನಾನು ಏನನ್ನೂ ಮಾಡಿಲ್ಲ ಎಂದು ನನಗೆ ಯಾವಾಗಲೂ ತಿಳಿದಿತ್ತು. ಆದರೆ ಕ್ಲೀನ್ ಚಿಟ್ ಬಂದಾಗಲೂ ನನಗೆ ಸಂತೋಷವಾಗಲಿಲ್ಲ. ನನ್ನ ಹೆತ್ತವರಿಗಾಗಿ ಮಾತ್ರ ನಾನು ಸಂತೋಷಪಟ್ಟೆ. ಇದು ನಮ್ಮ ಇಡೀ ಜೀವನವನ್ನೇ ಬದಲಾಯಿಸಿತು ಎಂದರು.
ರಿಯಾ ತಮ್ಮ ದುಃಖದ ಬಗ್ಗೆ ಮಾತನಾಡಿ, ನನಗೆ ದುಃಖಿಸಲು ಕೂಡ ಈ ಸಂದರ್ಭದಲ್ಲಿ ಅವಕಾಶ ಸಿಗಲಿಲ್ಲ ಎಂದ ಅವರು, ಈಗ ಎಲ್ಲವೂ ಕೊನೆಯಾಗಿದೆ ಎಂದರು.
ಇದನ್ನೂ ಓದಿ: ಹೆರಿಟೇಜ್ ಫುಡ್ಸ್ ನಿಂದ ಗ್ರಾಹಕರಿಗೆ ಜಿಎಸ್‌ಟಿ ಲಾಭಗಳ ಸಂಪೂರ್ಣ ವರ್ಗಾವಣೆ; ಬೆಲೆ ಇಳಿಕೆ ಮೂಲಕ ಜಿಎಸ್‌ಟಿ ಹರ್ಷದ ಘೋಷಣೆ
ಏನಿದು ಪ್ರಕರಣ?
ಸುಶಾಂತ್ ಸಿಂಗ್ ರಜಪೂತ್ (34) 2020ರ ಜೂನ್ 14ರಂದು ತಮ್ಮ ಮುಂಬೈ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ದೇಶಾದ್ಯಂತ ಅವರ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿತ್ತು. ನಟನೊಂದಿಗೆ ಸಂಬಂಧ ಹೊಂದಿದ್ದ ರಿಯಾ ಇದರಿಂದ ವಿಚಾರಣೆಗಳನ್ನು ಎದುರಿಸಬೇಕಾಯಿತು.