Viral News: ವಿವಾಹಿತ ಪುರುಷನೊಂದಿಗೆ ಪ್ರೇಮ; ಪತ್ನಿಯ ಜೀವನಾಂಶಕ್ಕೆ 3.7 ಕೋಟಿ ರೂ. ನೀಡಿದ ಮಹಿಳೆ, ಆಮೇಲಾಗಿದ್ದೇ ರೋಚಕ
Woman Pays money for Lover’s Divorce: ಈಗಾಗಲೇ ಮದುವೆಯಾಗಿದ್ದ ವ್ಯಕ್ತಿಯೊಂದಿಗೆ ಯುವತಿಯೊಬ್ಬಳಿಗೆ ಪ್ರೇಮಾಂಕರುವಾಗಿದೆ. ಹೀಗಾಗಿ ಆತನ ಪ್ರೀತಿ ಪಡೆಯಲು ಪತ್ನಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾಳೆ. ಅಷ್ಟೇ ಅಲ್ಲ, ಪತ್ನಿಗೆ ನೀಡಬೇಕಾದ ಜೀವಾನಂಶದ ಹಣವನ್ನೂ ಆಕೆಯೇ ನೀಡಿದ್ದಾಳೆ. ಆದರೆ, ಒಂದು ವರ್ಷದ ಬಳಿಕ ಉಲ್ಟಾ ಹೊಡೆದಿದ್ದಾಳೆ.

-

ಬೀಜಿಂಗ್: ಪ್ರೀತಿಯು ಯಾವಾಗ, ಯಾರಲ್ಲಿ ಮೂಡುತ್ತೆ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ಮದುವೆಯಾದ ವ್ಯಕ್ತಿಯಲ್ಲಿ ಪ್ರೀತಿ ಮೊಳಕೆಯೊಡೆದಿರುವ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಇಂಥದ್ದೆ ವಿಚಿತ್ರ ಕಥೆಯೊಂದು ಚೀನಾದಲ್ಲಿ (China) ನಡೆದಿದೆ. ಈಗಾಗಲೇ ಮದುವೆಯಾಗಿದ್ದ ವ್ಯಕ್ತಿಯೊಂದಿಗೆ ಹಿ ಎಂಬಾಕೆಗೆ ಪ್ರೀತಿ ಮೂಡಿದೆ. ಆತನನ್ನು ಮದುವೆಯಾಗಬೇಕಾದರೆ ಅವನ ಪತ್ನಿಗೆ ಡಿವೋರ್ಸ್ ನೀಡಬೇಕು. ಈ ವೇಳೆ ಕಾನೂನು ಪ್ರಕಾರ ಜೀವನಾಂಶವನ್ನೂ ನೀಡಬೇಕಾಗುತ್ತದೆ. ಹೀಗಾಗಿ ಸ್ವತಃ ಮಹಿಳೆಯೇ ಮೂರು ಮಿಲಿಯನ್ ಯುವಾನ್ (ಸುಮಾರು 3.7 ಕೋಟಿ ರೂ.) ನೀಡಿ ಡಿವೋರ್ಸ್ ಪಡೆಯುವಂತೆ ತಿಳಿಸಿದ್ದಾಳೆ.
ನೈಋತ್ಯ ಚೀನಾದ ಚಾಂಗ್‌ಕಿಂಗ್‌ನಲ್ಲಿ ತನ್ನ ಕಂಪನಿಯನ್ನು ನಡೆಸುತ್ತಿದ್ದ ಝು ಎಂಬ ಹೆಸರಿನ ಉದ್ಯಮಿಯೊಂದಿಗೆ ಹಿ ಎಂಬ ಮಹಿಳೆಗೆ ಪ್ರೇಮಾಂಕುರಗೊಂಡಿದೆ. ಹೀಗಾಗಿ ಝು ತನ್ನ ಸಂಗಾತಿಗೆ ವಿಚ್ಛೇದನ ನೀಡಿ ಹಿ ಜತೆ ತಮ್ಮ ಜೀವನವನ್ನು ಪ್ರಾರಂಭಿಸಲು ನಿರ್ಧರಿಸಿದ. ಇದಕ್ಕಾಗಿ ಝು ಪರವಾಗಿ ಆತನ ಪತ್ನಿ ಚೆನ್‌ಗೆ ಮೂರು ಮಿಲಿಯನ್ ಯುವಾನ್‌ಗಳನ್ನು ಹಿ ವರ್ಗಾಯಿಸಿದಳು. ಚೆನ್ ಅವರ ಮಗುವಿನ ಪಾಲನೆಗಾಗಿ ಅವರ ಬ್ಯಾಂಕ್ ಖಾತೆಗೆ ಬೃಹತ್ ಮೊತ್ತವನ್ನು ಜಮಾ ಮಾಡಲಾಯಿತು.
ಇದನ್ನೂ ಓದಿ: Viral Video: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಲ್ಯಾಂಬೋರ್ಘಿನಿ ಕಾರು; ವಿಡಿಯೊ ವೈರಲ್
ಪ್ರೇಮ ಪ್ರಕರಣದಲ್ಲಿ ಆಘಾತಕಾರಿ ತಿರುವು
ಝು ತನ್ನ ಸಂಗಾತಿಯನ್ನು ತೊರೆದು ಹಿ ಜೊತೆ ಸಂಸಾರ ಮಾಡಲು ಮುಂದಾದ. ಇಬ್ಬರೂ ತಮ್ಮ ಇಚ್ಛೆಯಂತೆ ಸಂತೋಷದಿಂದ ಜೀವನ ಮಾಡಲು ಮುಂದಾದರು. ಆದರೆ ಒಂದು ವರ್ಷದ ನಂತರ ತನ್ನ ಪ್ರೇಮಿಯನ್ನು ಹಿ ತೊರೆದಿದ್ದಾಳೆ. ತಮಗಿಬ್ಬರಿಗೂ ಹೊಂದಿಕೆಯಾಗುವುದಿಲ್ಲ ಎಂದು ಅರಿತ ಆಕೆ ಅವನನ್ನು ತೊರೆದಿದ್ದಾಳೆ. ಅಲ್ಲದೆ ಝುನ ಮಾಜಿ ಪತ್ನಿಗೆ ತಾನು ನೀಡಿದ್ದ ಜೀವನಾಂಶದ ಹಣವನ್ನು ಮರಳಿಸುವಂತೆ ಒತ್ತಾಯಿಸಿದ್ದಾಳೆ.
ಈ ಪ್ರಕರಣವು ಕೋರ್ಟ್ ಮೆಟ್ಟಿಲೇರಿತು. ಮೊದಲಿಗೆ ಅದು ಜೀವನಾಂಶ ನೀಡಿದ ಹಣ ಎಂದು ಹೇಳಿದರೂ, ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯವು, ಹಿಗೆ ಹಣ ಮರುಪಾವತಿ ಮಾಡುವಂತೆ ಚೆನ್ ಮತ್ತು ಝುಗೆ ಆದೇಶಿಸಿತು. ಆದರೆ ಇದಕ್ಕೊಪ್ಪದ ಚೆನ್ ಮತ್ತು ಝು ಇದರ ವಿರುದ್ಧ ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಈ ವೇಳೆ ನ್ಯಾಯಾಧೀಶರು, ಹಿಯು ಝು ದಂಪತಿಗೆ ಮೂರು ಮಿಲಿಯನ್ ಯುವಾನ್ ನೀಡಿದ್ದಾಳೆಂದು ಸಾಬೀತುಪಡಿಸಲು ಯಾವುದೇ ಪುರಾವೆಗಳನ್ನು ಹಸ್ತಾಂತರಿಸಿಲ್ಲ ಎಂದು ಹೇಳಿದರು. ಈ ಹಣವನ್ನು ವಿಚ್ಛೇದನ ಪರಿಹಾರ ಮತ್ತು ಮಕ್ಕಳ ಆರೈಕೆಗಾಗಿ ಚೆನ್‌ಗೆ ಆ ವ್ಯಕ್ತಿ ನೀಡಿದ ವೈಯಕ್ತಿಕ ಪಾವತಿ ಎಂದು ವರ್ಗೀಕರಿಸಲಾಗಿದೆ ಎಂದು ಆದೇಶ ನೀಡಿದರು.
ಈ ಪ್ರಕರಣವು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆಯುತ್ತಿದ್ದಂತೆ, ಅನೇಕ ಬಳಕೆದಾರರು ದಂಪತಿಯ ವೈವಾಹಿಕ ಜೀವನವನ್ನು ಹಿ ಹಾಳುಮಾಡಿದ್ದಾಳೆ ಎಂದು ಟೀಕಿಸಿದರು. ಈಗಾಗಲೇ ಮದುವೆಯಾಗಿರುವ ವ್ಯಕ್ತಿಯನ್ನು ಪುಸಲಾಯಿಸಿ ಮದುವೆಯಾಗಿದ್ದಲ್ಲದೆ, ವಿಚ್ಛೇದನದ ನಂತರ ಹಣವನ್ನು ಹಿಂತಿರುಗಿಸಲು ಒತ್ತಾಯಿಸುವುದು ಸಮಂಜಸವಲ್ಲ ಎಂದು ಬಳಕೆದಾರರೊಬ್ಬರು ಹೇಳಿದರು.