ಡೆಹ್ರಾಡೂನ್, ಮೇ 3: ಪ್ರಸಿದ್ಧ ದೇವಾಲಯ, ಅದ್ದೂರಿ ಎಸಿ ಹಾಲ್, ರೆಸಾರ್ಟ್ ಇಂತಹ ಸ್ಥಳಗಳಲ್ಲಿ ಮದುವೆ ಆಯೋಜಿಸಿರುವುದನ್ನು ಕೇಳಿರಬಹುದು, ನೋಡಿರಬಹುದು. ಆದರೆ ಸ್ಮಶಾನದಲ್ಲಿ ಮದುವೆ ಇಟ್ಟುಕೊಂಡಿರುವುದನ್ನು ನೀವೆಲ್ಲಾದರೂ ಕೇಳಿದ್ದೀರಾ? ನಿಜಕ್ಕೂ ಇದೆಂಥ ವಿಚಿತ್ರ ಮದುವೆ ಎಂದು ನಿಮಗೂ ಅನಿಸಿರಬಹುದು. ಹೌದು, ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹತ್ತಿರ ಇರುವ ಸ್ಮಶಾನದಲ್ಲಿ ನಡೆದ ವಿವಾಹದ ಸುದ್ದಿಯೊಂದು ಭಾರಿ ವೈರಲ್ (Viral News) ಆಗಿದೆ. ಸದ್ಯ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಹುತೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದುವೆ ಸಮಾರಂಭವೊಂದನ್ನು ಮಾರ್ಚುಲಾದ ರಾಮಗಂಗಾ ಮತ್ತು ಬದನ್ ಗಢ ನದಿಯ ಸಂಗಮದಲ್ಲಿರುವ ಸ್ಮಶಾನ ಘಾಟ್‌ನಲ್ಲಿ ಆಯೋಜಿಸಲಾಗಿದೆ. ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆಗೆ ಮೀಸಲಾಗಿರುವ ಈ ಸ್ಥಳವನ್ನು ಅಲಂಕರಿಸಿ ಸಂಪೂರ್ಣವಾಗಿ ವಿವಾಹ ಸ್ಥಳವಾಗಿ ಪರಿವರ್ತಿಸಲಾಯಿತು. ಮದುವೆಯಲ್ಲಿ ಸುಮಾರು 50 ಅತಿಥಿಗಳು ಸಮಾರಂಭದಲ್ಲಿ ಭಾಗವಹಿಸಿದರು.
ವಿಡಿಯೊ ನೋಡಿ:
ಗಂಭೀರ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಸ್ಥಳವೆಂದು ಪರಿಗಣಿಸಲಾದ ಸ್ಥಳದಲ್ಲಿ ಡಿಜೆ ಆಯೋಜಿಸಲಾಗಿತ್ತು. ಸ್ಮಶಾನದಲ್ಲಿ ದಂಪತಿ ಹೂಮಾಲೆ ಬದಲಾಯಿಸಿಕೊಳ್ಳುವ ದೃಶ್ಯಗಳಿಗೆ ಅನೇಕರು ಕಿಡಿಕಾರಿದ್ದಾರೆ. ವಿಶೇಷವಾಗಿ ಸ್ಥಳೀಯ ನಿವಾಸಿಗಳು ಈ ಕೃತ್ಯವನ್ನು ಅಗೌರವ ಮತ್ತು ಅನುಚಿತ ಎಂದು ಕರೆದಿದ್ದಾರೆ.
ಪ್ರಿಯಕರನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಯುವತಿ
ಸ್ಮಶಾನವು ಧಾರ್ಮಿಕ ಮತ್ತು ಭಾವನಾತ್ಮಕ ಮಹತ್ವವನ್ನು ಹೊಂದಿದೆ. ಇಂತಹ ಸ್ಥಳವನ್ನು ಮದುವೆಯಂತಹ ಶುಭ ಕಾರ್ಯಗಳ ಆಚರಣೆಗೆ ಬಳಸಬಾರದು ಎಂದು ಕೆಲವರು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಮದುವೆಯ ವಿಡಿಯೊ ವೈರಲ್ ಆದ್ದಂತೆ ನೆಟ್ಟಿಗರು ಇದನ್ನು 'ಫೈನಲ್ ಡೆಸ್ಟಿನೇಷನ್' ಇರಬೇಕು ಎಂದು ಟೀಕೆ ಮಾಡಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ತಹಶೀಲ್ದಾರ್, ʼʼಆಯೋಜಕರು ಮದುವೆ ಕಾರ್ಯಕ್ರಮ ಆಯೋಜಿಸಲು ಅನುಮತಿಯನ್ನೇ ಪಡೆದಿಲ್ಲʼʼ ಎಂದು ಹೇಳಿದ್ದಾರೆ.
ಅಧಿಕಾರಿಗಳು ದಂಪತಿಗೆ ನೊಟೀಸ್ ನೀಡಿ ತನಿಖೆ ಪ್ರಾರಂಭಿಸಿದ್ದಾರೆ. ದಂಪತಿಗೆ ಆ ಜಾಗದ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ ಅವರು ಅಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದರು ಎನ್ನಲಾಗಿದೆ. ಕೆಲವರು ಈ ಕ್ರಮವನ್ನು ಪ್ರಚಾರದ ಸ್ಟಂಟ್ ಎಂದು ಟೀಕಿಸಿದ್ದಾರೆ, ಮತ್ತೊಬ್ಬರು ಹುಚ್ಚರಿಗೆ ಇಂತಹ ಯೋಚನೆಗಳು ಏಲ್ಲಿಂದ ಬರುತ್ತವೆ? ಎಂದು ಕಿಡಿಕಾರಿದ್ದಾರೆ.