ಶಿಮ್ಲಾ: ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ರೀಲ್ಸ್ ಜನರು ಏನೇನೋ ಸರ್ಕಸ್ ಮಾಡುತ್ತಾರೆ. ಅದೇರೀತಿ ಹಿಮಾಚಲ ಪ್ರದೇಶದ ಮನಾಲಿಯ ಅಟಲ್ ಸುರಂಗದೊಳಗೆ ಇಬ್ಬರು ಬೈಕ್ ಸವಾರರು ರೀಲ್ಸ್ ತಯಾರಿಸಲು ತುರ್ತು ಅಗ್ನಿಶಾಮಕವನ್ನು(Emergency Fire Extinguisher)ದುರುಪಯೋಗಪಡಿಸಿಕೊಂಡಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಲೈಟ್‍ಗಳಿಂದ ಅಲಂಕರಿಸಿದ ಬೈಕುಗಳ ಮೇಲೆ ಬೆಂಕಿ ಶಮನಕ್ಕೆ ಬಳಸುವ ಸ್ಪ್ರೇ ಮಾಡುತ್ತಿರುವುದು ಮತ್ತು ಇನ್ನೊಬ್ಬ ಅವನ ಹಿಂದೆ ನಿಂತು ಅವನನ್ನು ಬೆಂಬಲಿಸುತ್ತಾ ಈ ಕೃತ್ಯವನ್ನು ಆನಂದಿಸಿದ್ದಾನೆ. ಅವರ ಈ ಕೆಲಸದಿಂದ ಸುರಂಗದೊಳಗೆ ದಟ್ಟವಾದ ಹೊಗೆ ತುಂಬಿಕೊಂಡಿತ್ತು.
ಯುವಕರು ಮಾಡಿದ ಕೃತ್ಯದ ವಿಡಿಯೊ ಇಲ್ಲಿದೆ ನೋಡಿ...
ಈ ಘಟನೆಯನ್ನು ಸೋಶಿಯಲ್ ಮಿಡಿಯಾದಲ್ಲಿ ವರದಿ ಮಾಡಿ ವಿಡಿಯೊವನ್ನು ಅಪ್ಲೋಡ್ ಮಾಡಿದ ಪತ್ರಕರ್ತ ನಿಖಿಲ್ ಚೌಧರಿ, ಮಂಡಿ ಪೊಲೀಸ್ ಠಾಣೆಯಲ್ಲಿ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದಾನೆ. ಸುರಂಗದೊಳಗೆ ಇಬ್ಬರು ಬೈಕ್ ಸವಾರರು ಮಾಡಿದ ಕೃತ್ಯದ ಬಗ್ಗೆ ಮಾಹಿತಿ ಪಡೆದ ಹಿಮಾಚಲ ಪ್ರದೇಶ ಪೊಲೀಸರು ಜೀವಕ್ಕೆ ಅಪಾಯವನ್ನುಂಟುಮಾಡುವ, ವಾಹನ ಸಂಚಾರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಮತ್ತು ಸುರಂಗ ಕಾರ್ಯಾಚರಣೆಗೆ ಅಡ್ಡಿಪಡಿಸುವ ಅಜಾಗರೂಕ ಕ್ರಮಗಳಿಗಾಗಿ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ರೀಲ್ಸ್‌ಗಾಗಿ ಗ್ಯಾಸ್ ಸ್ಟೌವ್ ಮೇಲೆ ಪರ್ಫ್ಯೂಮ್ ಸ್ಪ್ರೇ ಮಾಡಿದ ಯುವಕರು -ಶಾಕಿಂಗ್ ವಿಡಿಯೊ ವೈರಲ್
ಮನಾಲಿಯ ಅಟಲ್ ಸುರಂಗದ ಬಳಿ ಜನರು ಸ್ಟಂಟ್ ಮಾಡಿದ ಘಟನೆ ಈ ಹಿಂದೆ ನಡೆದಿತ್ತು. ಇತ್ತೀಚೆಗಷ್ಟೇ ಮನಾಲಿಯಿಂದ ಅಟಲ್ ಸುರಂಗಕ್ಕೆ ಹೋಗುವ ರಸ್ತೆಯಲ್ಲಿ ವಾಹನಗಳು ಸಾಲು ಸಾಲಾಗಿ ನಿಂತ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಸಂಚಾರ ಅವ್ಯವಸ್ಥೆಯ ಮಧ್ಯೆ, ಕೆಲವರು ಅಪಾಯಕಾರಿ ಕಾರು ಸ್ಟಂಟ್‍ಗಳನ್ನು ಸಹ ಮಾಡುವುದು ಕಂಡುಬಂದಿತ್ತು. ಇದು ಇತರ ಪ್ರವಾಸಿಗರ ಮತ್ತು ನೆಟ್ಟಿಗರ ಕೋಪಕ್ಕೆ ಕಾರಣವಾಗಿತ್ತು. ವೈರಲ್ ಆದ ವಿಡಿಯೊವೊಂದರಲ್ಲಿ, ಒಬ್ಬ ವ್ಯಕ್ತಿಯು ತನ್ನ ಕಾರಿನ ಬಾಗಿಲುಗಳನ್ನು ತೆರೆದಿಟ್ಟುಕೊಂಡು ಚಾಲನೆ ಮಾಡುವುದು ಮತ್ತು ಇನ್ನೊಬ್ಬ ವ್ಯಕ್ತಿ ಇನ್ನೊಂದು ಬಾಗಿಲಿನಲ್ಲಿ ನೇತಾಡುವುದು ಸೆರೆಯಾಗಿತ್ತು. ಅದೃಷ್ಟವಶಾತ್, ಕಾರಿನ ಬಾಗಿಲುಗಳಿಂದ ಇತರ ವಾಹನಗಳ ನಡುವೆ ಯಾವುದೇ ಘರ್ಷಣೆ ಸಂಭವಿಸಿಲ್ಲ. ಈ ವಿಡಿಯೊವನ್ನು ಹಂಚಿಕೊಂಡ ನೆಟ್ಟಿಗರು ಸ್ಟಂಟ್ ಮಾಡಿದ ಚಾಲಕನನ್ನು ಟೀಕಿಸಿದ್ದರು. ಕೆಲವರು ವಾಹನದ ಸಂಖ್ಯೆಯನ್ನು ದಾಖಲಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಟ್ಯಾಗ್ ಮಾಡಿದ್ದರು.