ಕಾನ್ಬೆರ: ಇತ್ತೀಚೆಗೆ ಸಲಾಡ್‌ನಲ್ಲಿ ಹುಳವೊಂದು ಕಂಡುಬಂದ ವಿಡಿಯೊ ವೈರಲ್ ಆಗಿತ್ತು. ಹಾಗೇ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಮರಿ ಸಿಕ್ಕಿದ ವಿಡಿಯೊ ಕೂಡ ಸಖತ್ ಸದ್ದು ಮಾಡಿತ್ತು. ಇದೀಗ ಆಸ್ಟ್ರೇಲಿಯಾದ ಹಾಟ್‌ಪಾಟ್ ರೆಸ್ಟೋರೆಂಟ್ ಕೂಡ ಇದೇ ವಿಷಯಕ್ಕೆ ಸುದ್ದಿಯಲ್ಲಿದೆ. ಅಡಿಲೇಡ್‌ನಲ್ಲಿ ವಾಸಿಸುವ ಶ್ರದ್ಧಾ ಎಂಬ ಭಾರತೀಯ ಮಹಿಳೆಯೊಬ್ಬರು ಈ ರೆಸ್ಟೋರೆಂಟ್‌ನಲ್ಲಿ ನೂಡಲ್ ಸೂಪ್ ಆರ್ಡರ್ ಮಾಡಿದ್ದಾರೆ. ಆರ್ಡರ್ ಬಾಕ್ಸ್ ಮನೆಗೆ ತೆಗೆದುಕೊಂಡು ಹೋಗಿ ತೆರೆದಾಗ ಅದರೊಳಗಿದ್ದ ವಸ್ತುವನ್ನು ನೋಡಿ ಶಾಕ್ ಆಗಿದ್ದಾರೆ. ಹೌದು ಫುಡ್ ಬಾಕ್ಸ್‌ನ ಕೆಳಗಡೆ ಮೊಬೈಲ್ ಫೋನ್ ಇತ್ತು (Viral Video). ಇದನ್ನು ನೋಡಿ ಅವರು ಸಿಟ್ಟಾಗದೇ ವಾಪಾಸ್ ರೆಸ್ಟೋರೆಂಟ್‌ನವರಿಗೆ ನೀಡಿದ್ದಾರೆ.
ಬಾಕ್ಸ್‌ನಲ್ಲಿ ಮೊಬೈಲ್ ಫೋನ್ ಕಂಡ ಕೂಡಲೇ ಅವರು ರೆಸ್ಟೋರೆಂಟ್‍ಗೆ ಕರೆ ಮಾಡಿ ಫುಡ್ ಆರ್ಡರ್ ಡಬ್ಬದಲ್ಲಿ ಫೋನ್ ಇರುವುದಾಗಿ ತಿಳಿಸಿದ್ದಾರೆ. ಅದಕ್ಕೆ ರೆಸ್ಟೋರೆಂಟ್‌ನವರು ಕ್ಷಮೆಯಾಚಿಸಿ, “ಅದು ನಮ್ಮ ಅಡುಗೆಯವರೊಬ್ಬರ ಫೋನ್. ಅದು ಕಾಣೆಯಾಗಿತ್ತುʼʼ ಎಂದು ಹೇಳಿದ್ದಾರೆ. "ಎಲ್ಲರೂ ತಪ್ಪುಗಳನ್ನು ಮಾಡುವುದು ಸಹಜ” ಎಂದು ಹೇಳಿ ಮಹಿಳೆ ಶಾಂತವಾಗಿ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದಾರೆ.
ಅಡುಗೆಯವರು ಫೋನ್ ಅನ್ನು ಟೇಕ್‌ಅವೇ ಕಂಟೇನರ್ ಒಳಗೆ ಗೊತ್ತಾಗದೇ ಇಟ್ಟಿದ್ದಾರೆ ಎಂದು ಶ್ರದ್ಧಾ ಹೇಳಿದ್ದಾರೆ. ಅದು ಕಪ್ಪು ಬಣ್ಣದ್ದಾಗಿದ್ದರಿಂದ, ಆಹಾರವನ್ನು ಪ್ಯಾಕ್ ಮಾಡಿದ ವ್ಯಕ್ತಿ ಅದನ್ನು ಸರಿಯಾಗಿ ನೋಡಿರಲಿಲ್ಲ. "ನಾನು ಮೊದಲು ಹಾಟ್‌ಪಾಟ್‌ಗೆ $35 ಪಾವತಿಸಿದ್ದೆ. ಮತ್ತು ಅವರು ನನಗೆ $50 ಹಿಂತಿರುಗಿಸಿದ್ದಾರೆ. ಮತ್ತು ಅಲ್ಲಿನ ಸಿಬ್ಬಂದಿ ಮುಂದಿನ ಬಾರಿ ಇಲ್ಲಿಗೆ ಉಚಿತ ಹಾಟ್‌ಪಾಟ್ ನೀಡುತ್ತೇನೆ' ಎಂದು ಹೇಳಿದ್ದಾನೆ" ಎಂಬುದಾಗಿ ಮಹಿಳೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕ್ಲಾಸ್ ರೂಂನಲ್ಲಿ ಗಡದ್ದಾಗಿ ನಿದ್ದೆ ಮಾಡಿದ ಮೇಷ್ಟ್ರು; ಕಿಡಿಕಾರಿದ ನೆಟ್ಟಿಗರು
ಈ ವಿಡಿಯೊ ವೈರಲ್ ಆಗಿದ್ದು, ಕೆಲವು ನೆಟ್ಟಿಗರು ಮಹಿಳೆ ತುಂಬಾ ಶಾಂತವಾಗಿ ಪ್ರತಿಕ್ರಿಯಿಸಿದ್ದನ್ನು ನೋಡಿ ಶಾಕ್ ಆಗಿದ್ದಾರೆ. ಹಾಗೇ ಈ ವಿಡಿಯೊಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.