ಛತ್ತರ್‌ಪುರ, ಮೇ 29: ದಾಂಪತ್ಯ ಜೀವನವು ಇಂದು ಸಣ್ಣ ಪುಟ್ಟ ವಿಚಾರಗಳಲ್ಲಿಯೇ ಕೊನೆಯಾಗುತ್ತಿದೆ. ಹೊಂದಾಣಿಕೆ ವಿಚಾರ, ಆರ್ಥಿಕ ವಿಚಾರ ಹೀಗೆ ನಾನಾ ಕಾರಣಗಳಿಗೆ ಜಗಳ ಉಂಟಾಗಿ ದೂರ ಆದವರು ಬಹಳಷ್ಟು ಮಂದಿ ಇದ್ದಾರೆ. ಇದೀಗ ದಂಪತಿಗಳ ನಡುವಿನ ಖಾಸಗಿ ವಿಚಾರದ ಜಗಳವೊಂದು ಬೀದಿಗೆ ಬಂದ ಘಟನೆಯೊಂದು ನಡೆದಿದೆ. ಪತ್ನಿಯೂ ಸಾರ್ವಜನಿಕರ ಮುಂದೆಯೇ ಪತಿಗೆ ಮನ ಬಂದಂತೆ ಥಳಿಸಿ ಕಪಾಳ ಮೋಕ್ಷ ಮಾಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶವನ್ನು ಹೊರಹಾಕಿದ್ದಾರೆ.
ಮಧ್ಯಪ್ರದೇಶದ ಛತ್ತರ್‌ಪುರದ ಮಹೋಬಾ ರಸ್ತೆಯಲ್ಲಿರುವ ಆರ್‌ಟಿಒ ಕಚೇರಿಯ ಮುಂದೆ ಈ ಘಟನೆ ನಡೆದಿದೆ. ಮಹಿಳೆ ತನ್ನ ಗಂಡನ ಎರಡೂ ಕೈಗಳನ್ನು ಹಿಡಿದು, ರಸ್ತೆಯ ಮಧ್ಯದಲ್ಲಿಯೇ ಆತನಿಗೆ ಹೊಡೆದು, ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಈ ಘಟನೆ ನೋಡಿದ ಅನೇಕರು ಮಹಿಳೆಯರಿಗೆ ಸ್ವಾತಂತ್ರ್ಯ ಹೆಚ್ಚಾಗಿದೆ..ಏನೇ ಜಗಳ ಇದ್ದರೂ ಮನೆಯಲ್ಲಿ ಸರಿಪಡಿಸ ಬಹುದು. ಬೀದಿಯಲ್ಲಿ ಹೊಡೆದಾಡಿಕೊಳ್ಳುವಂತ ಸಂದರ್ಭ ಬೇಕೇ? ಎಂದು ಪ್ರಶ್ನೆ ಮಾಡಿದ್ದಾರೆ.
ವಿಡಿಯೋ ನೋಡಿ:
ಮಾಹಿತಿಯ ಪ್ರಕಾರ, ಪತಿಯನ್ನು ದೇವ್ ಚೌರಾಸಿಯಾ ಮತ್ತು ಪತ್ನಿಯನ್ನು ಸುಮನ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ದಂಪತಿಗಳು ಕೆಲಸದ ನಿಮಿತ್ತ ಆಗ್ರಾದಿಂದ ಛತ್ತರ್‌ಪುರಕ್ಕೆ ಬಂದಿದ್ದರು. ಯಾವುದೋ ವೈಯಕ್ತಿಕ ವಿಚಾರಕ್ಕೆ ಜಗಳ ಆರಂಭವಾಗಿದ್ದು ವಾಗ್ವಾದ ಮಿತಿ ಮೀರಿ ಹೋಗಿದೆ. ಇದು ರಸ್ತೆಯಲ್ಲೇ ಹೊಡೆದಾಡಿ ಕೊಳ್ಳುವ ಹಂತಕ್ಕೆ ತಲುಪಿದೆ.
ಪತ್ನಿಯು ಪತಿಯ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು, ಸತತವಾಗಿ ಕಪಾಳಮೋಕ್ಷ ಮಾಡುತ್ತಾಳೆ. ಜನರು ಇಡೀ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿ ಶೇರ್ ಮಾಡಿದ್ದಾರೆ. ಪತ್ನಿ ಸತತವಾಗಿ ಹಲ್ಲೆ ನಡೆಸುತ್ತಿದ್ದರೂ ಪತಿ ಕೇವಲ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಹೊರತು ಹಿಂದಕ್ಕೆ ಹೊಡೆಯುವುದಿಲ್ಲ.. ಈ ವೇಳೆ ಅಲ್ಲಿದ್ದ ಜನರ ಬಳಿ ಕಣ್ಣೀರಿಡುತ್ತಾ ಪತಿ ಬೇಸರ ಹೊರ ಹಾಕಿದ್ದಾನೆ."ಒಂದು ವೇಳೆ ನಾನು ತಿರುಗಿ ಪ್ರತಿಕ್ರಿಯಿಸಿದ್ದರೆ, ಇಲ್ಲಿದ್ದವರೆಲ್ಲರೂ ನನ್ನನ್ನೇ ದೂಷಿಸುತ್ತಿದ್ದರು ಮತ್ತು ನನ್ನನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದರು ಎಂದಿದ್ದಾನೆ.
ರಸ್ತೆಯಲ್ಲಿ ಸ್ವಲ್ಪ ಸಮಯದವರೆಗೆ ನಾಟಕ ಮುಂದುವರಿದಿದ್ದು ಇದರಿಂದಾಗಿ ಆ ಪ್ರದೇಶದಲ್ಲಿ ಅವ್ಯವಸ್ಥೆ ಉಂಟಾಯಿತು. ಮಾಹಿತಿ ಪಡೆದ ನಂತರ, ಸಂಚಾರ ಪೊಲೀಸರು ಸ್ಥಳಕ್ಕೆ ತಲುಪಿ ದಂಪತಿಗಳಿಗೆ ಬುದ್ದಿ ಮಾತು ಹೇಳಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ದಂಪತಿಗಳಿಬ್ಬರೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರನ್ನು ದಾಖಲಿಸಿಲ್ಲ.