ಲಖನೌ: "ಸಾವಿರ ಸುಳ್ಳು ಹೇಳಿ ಒಂದು ಮದುವೆ" ಎಂಬ ಮಾತಿದೆ.. ಆದರೆ ಇತ್ತೀಚೆಗೆ ಈ ಮಾತು ನಿಜ ಅನ್ನುವ ಹಾಗಿದೆ. ಕೆಲವೊಬ್ಬರು ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆಯದೇ ಮರುವಿವಾಹ ಆಗಲು ಮುಂದಾಗುವುದು ಇದೆ. ಇಂತಹ ಮದುವೆಯ ಸಂಗತಿಗಳು ಮದುವೆ ಮಂಟಪದ ತನಕ ಹೋಗಿ ಬಳಿಕ ಕ್ಯಾನ್ಸಲ್ ಆಗಿದ್ದು ಇದೆ.. ಅಂತೆಯೇ ವ್ಯಕ್ತಿಯೊಬ್ಬ ಮೊದಲ ಮದುವೆ ವಿಚಾರ ಮುಚ್ಚಿಟ್ಟು ಎರಡನೇ ಮದುವೆ ಯಾಗಲು ಹೋಗಿ ತನ್ನ ಪತ್ನಿ ಕೈಗೆ ಸಿಕ್ಕಿ ಬಿದ್ದ ಘಟನೆ ಉತ್ತರ ಪ್ರದೇಶದ ಪಿರೈಲಾ ಗ್ರಾಮದಲ್ಲಿ ನಡೆದಿದೆ. ವರನ ಮೊದಲ ಪತ್ನಿಯು ತನ್ನ ಗಂಡನ ಮದುವೆಯನ್ನು ನಿಲ್ಲಿಸಲು ಮುಂದಾಗಿದ್ದು ಮದುವೆ ಮಂಟಪ ದಲ್ಲಿ ದೊಡ್ಡ ಹೈ ಡ್ರಾಮವೇ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ.
ಗಣೇಶಪುರದ ವಾಲ್ಟರ್‌ಗಂಜ್‌ನ ವಿನಯ್ ಅಂಗದ್ ಶರ್ಮಾ ಅವರಿಗೆ ಪಿರೈಲಾ ಮೂಲದ ಹುಡುಗಿಯ ಜೊತೆ ಮದುವೆ ನಿಶ್ಚಯವಾಗಿತ್ತು. ನವೆಂಬರ್ 17ರ ರಾತ್ರಿ ವಿವಾಹದ ಅನೇಕ ಕಾರ್ಯಕ್ರಮ ನೆರವೇರಿತ್ತು. ಮದುವೆ ಕಾರ್ಯಕ್ರಮದ ಪ್ರಸಿದ್ಧ ಆಚರಣೆಯಾದ ಜೈಮಾಲಾ ಕಾರ್ಯಕ್ರಮ ನಡೆಯುತ್ತಿತ್ತು. ಆಗ ಅದೇ ಸಮಯಕ್ಕೆ ಸರಿಯಾಗಿ ವರನ ಮೊದಲ ಪತ್ನಿ ರೇಷ್ಮಾ ಶರ್ಮಾ ಪೊಲೀಸರೊಂದಿಗೆ ಮದುವೆ ಮಂಟಪಕ್ಕೆ ಬಂದಿದ್ದು ಈ ದೃಶ್ಯ ವೈರಲ್ ಆಗುತ್ತಿದೆ.
ವಿಡಿಯೊ ವೀಕ್ಷಿಸಿ:
ವರದಿಯೊಂದರ ಪ್ರಕಾರ, ರೇಷ್ಮಾ ರಾತ್ರಿ 11:30 ರ ಸುಮಾರಿಗೆ ಮದುವೆ ಮನೆಗೆ ಬಂದಿದ್ದಾಳೆ.. ಬಳಿಕ ತನ್ನ ಪತಿ ವಿನಯ್ ಮರು ಮದುವೆಯಾಗಿ ತನಗೆ ಮೋಸ ಮಾಡುತ್ತಿದ್ದಾನೆ ಎಂದು ದೂರಿದ್ದಾಳೆ. ವಿನಯ್ ಜೊತೆ ತನ್ನ ಮದುವೆ ಈಗಾಗಲೇ ನಡೆದಿದೆ ಎಂದು ಆರೋಪಿಸಿ, ಅವರ ಮದುವೆಯ ಫೋಟೋಗಳನ್ನು ಮತ್ತು ಮದುವೆ ನೋಂದಣಿ ಪ್ರಮಾಣಪತ್ರವನ್ನು ಸಹ ಪುರಾವೆಯಾಗಿ ನೀಡಿದ್ದಾರೆ. ರೇಷ್ಮಾ ಪದೇ ಪದೇ ವಿನಯ್ ತನ್ನ ಪತಿ ಎಂದು ಹೇಳಿಕೊಂಡರು ಕೂಡ ವಿನಯ್ ಮಾತ್ರ ಅವಳು ಯಾರೆಂದು ತಿಳಿದಿಲ್ಲವೆಂಬಂತೆ ವರ್ತಿಸಿದ್ದಾನೆ. ತನಗೆ ಮದುವೆಯಾಗಿಲ್ಲ ಎಂದೇ ವಾದಿಸಿದ್ದಾನೆ.
ವೈರಲ್ ಆದ ವಿಡಿಯೋದಲ್ಲಿ ರೇಷ್ಮಾ ತಮ್ಮ ಮದುವೆಯ ಫೋಟೋಗಳನ್ನು ಹಿಡಿದು ತನ್ನ ಸುತ್ತಲಿನ ಜನರಿಗೆ ತೋರಿ ಸುತ್ತಿರುವುದು ಕಾಣಬಹುದು. ವಿನಯ್ ಸುಳ್ಳು ಹೇಳುತ್ತಿದ್ದಾರೆ. ನನ್ನ ಬಳಿ ಕಾನೂನು ಪುರಾವೆ ಇದೆ. 9ವರ್ಷದಿಂದ ಒಟ್ಟಿಗೆ ದಾಂಪತ್ಯ ಜೀವನ ಕಳೆದಿದ್ದೇವೆ. ಇವನು ನನ್ನನ್ನು ಮದುವೆ ಯಾಗಿದ್ದಾರೆ. ಇದಕ್ಕೆ ಆತನ ಕುಟುಂಬದವರು ಸಹಕರಿಸಿದ್ದಾರೆ. ಈಗ ಎಲ್ಲರೂ ಒಟ್ಟಿಗೆ ಸೇರಿಸಿ ಏನು ಗೊತ್ತಿಲ್ಲದಂತೆ ನಾಟಕಮಾಡಿ ಇನ್ನೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
Viral Video: ಚಲಿಸುತ್ತಿದ್ದ ಕಾರಿನ ಟಾಪ್ ಮೇಲೆ ಕುಳಿತು ಜೋಡಿಯ ರೊಮ್ಯಾನ್ಸ್! ವಿಡಿಯೋ ವೈರಲ್
ವೈರಲ್ ಆದ ವಿಡಿಯೊದಲ್ಲಿ ರೇಷ್ಮಾ ತನ್ನ ಪತಿ ವಿನಯ್ ಕಡೆಗೆ ತಿರುಗಿ, ನೀವು ಯಾಕೆ ಮದುವೆ ಯಾದಿರಿ? ನೀವು ಹೇಗೆ ಮದುವೆಯಾಗುತ್ತೀರಿ? ನಾವು ವಿಚ್ಛೇದನ ಪಡೆದಿದ್ದೇವೆಯೇ? ಅದನ್ನು ಎಲ್ಲರ ಮುಂದೆ ಹೇಳಿ ಎಂದು ಕೇಳುವುದನ್ನು ಕಾಣಬಹುದು. ವಧುವಿನ ಮನೆಯವರು ರೇಷ್ಮಾಳನ್ನು ಸಮಾಧಾನಪಡಿಸಲು ಪ್ರಯತ್ನಿಸಿರುವುದನ್ನು ಕೂಡ ವಿಡಿಯೋದಲ್ಲಿದೆ. ಪೊಲೀಸರು ಮಧ್ಯಪ್ರವೇಶಿಸಿ ಜಗಳ ತಡೆಯುವ ಪ್ರಯತ್ನ ಮಾಡಿದರು. ವಿನಯ್ ಮತ್ತು ರೇಷ್ಮಾ ಇಬ್ಬರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು ಪೈಕೌಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೇಷ್ಮಾ ಮತ್ತು ವಿನಯ್ ಒಂದೇ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದರು. ಬಳಿಕ ಅನೇಕ ವರ್ಷ ಪ್ರೀತಿಸಿ ಜೊತೆಗಿದ್ದು ಮಾರ್ಚ್ 30, 2022 ರಂದು ನ್ಯಾಯಾಲಯದಲ್ಲಿ ವಿವಾಹವಾದರು. ಡಿಸೆಂಬರ್ 8, 2022 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿಯೂ ಅದ್ಧೂರಿ ವಿವಾಹವಾಗಿದ್ದಾರೆ. ನಂತರ ಅವರ ಸಂಬಂಧದಲ್ಲಿ ಬಿರುಕು ಮೂಡಿದೆ. ವಿನಯ್ ಆಭರಣಗಳೊಂದಿಗೆ ತನ್ನ ಪತ್ನಿ ಓಡಿ ಹೋಗಿರುವುದಾಗಿ ಆರೋಪಿಸಿ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾನೆ. ಆದರೆ ರೇಷ್ಮಾ ಹೇಳುವ ಪ್ರಕಾರ ವಿನಯ್ ತನ್ನ ಮನೆಯಲ್ಲಿದ್ದ ಹಣ , ಚಿನ್ನ ಎಲ್ಲ ತೆಗೆದುಕೊಂಡು ಹೋಗಿ ಪರಾರಿ ಯಾಗಿದ್ದಾನೆ ಎಂದು ದೂರಿದ್ದಾರೆ. ಈ ದಂಪತಿಗೆ ಇನ್ನು ವಿಚ್ಛೇದನ ಆಗಿಲ್ಲ. ಪ್ರಕರಣ ಇನ್ನು ತನಿಖೆ ಮಾಡಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.