ದೆಹಲಿ, ಜೂ. 15: ಇಂದು ಗಂಡ- ಹೆಂಡತಿಯ ವೈವಾಹಿಕ ವಿಚಾರದ ಜಗಳಗಳು ಬೀದಿಯವರೆಗೆ ಬರುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಸಣ್ಣ-ಪುಟ್ಟ ವಿಚಾರಗಳಿಗೆ ಡಿವೋರ್ಸ್, ಜಗಳ ಎಂದು ದಾಂಪತ್ಯ ಜೀವನವನ್ನೇ ಕೊನೆಗೊಳಿಸಿದವರು ಅನೇಕರು ಇದ್ದಾರೆ. ಇದೀಗ ನವವಿವಾಹಿತ ಮಹಿಳೆಯೊಬ್ಬಳು ಪತಿಯ ಕಚೇರಿಗೆ ನುಗ್ಗಿ ರಂಪಾಟ ಮಾಡಿರುವ ಘಟನೆ ವರದಿಯಾಗಿದೆ. ಮಹಿಳೆ ತನ್ನ ಪತಿಯ ಆಫೀಸ್ ಒಳಹೊಕ್ಕು ಆತನ ಬಾಸ್ ವಿರುದ್ಧವೇ ಜಗಳ ತೆಗೆದಿದ್ದಾಳೆ. ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.
ಪತ್ನಿಯ ಪ್ರಕಾರ, ಪತಿ ಕಚೇರಿಯಲ್ಲಿ ಕೆಲಸ ಮಾಡುವುದಲ್ಲದೆ ಮಧ್ಯರಾತ್ರಿಯಲ್ಲೂ ಆಫೀಸ್ ಮೀಟಿಂಗ್ ಇದೆ ಎಂದು ಹೇಳಿ ಮನೆಯಿಂದ ಹೊರಡುತ್ತಿದ್ದ. ಇದರಿಂದ ಬೇಸರಗೊಂಡ ಪತ್ನಿ ಬಾಸ್ ಮುಂದೆಯೇ ಪ್ರಶ್ನೆ ಮಾಡಿದ್ದಾಳೆ. ಪತಿಯ ಮಾಲಕನ ಮುಂದೆ ನಿಂತು "ನನ್ನ ಗಂಡ ಎಲ್ಲಿದ್ದಾನೆ? ಆತನನ್ನು ಈಗಲೇ ಕರಿಸಿʼʼ ಎಂದು ಜಗಳ ತೆಗೆದಿದ್ದಾಳೆ.
ವಿಡಿಯೊ ನೋಡಿ:
ಆಕೆಯ ವರ್ತನೆ ಅಲ್ಲಿದ್ದವರನ್ನು ಅಚ್ಚರಿಗೆ ದೂಡಿದೆ. ʼʼಪತಿ ಇಡೀ ದಿನ ಕಚೇರಿಯಲ್ಲಿ ಕಳೆದು ತಡರಾತ್ರಿಯೂ ಕೆಲಸ ಎನ್ನುತ್ತಾರೆ. ಅವರ ಕೆಲಸದ ಬದ್ಧತೆ ಮನೆಯಿಂದ ದೂರವಿಡುತ್ತಿದೆʼʼ ಎಂದು ದೂರಿದ್ದಾಳೆ. ಆದರೆ ಮಹಿಳೆಯ ದೂರನ್ನು ಕೇಳಿದ ಬಾಸ್ ಅಚ್ಚರಿಗೊಳಗಾಗಿದ್ದು, ʼʼಕಚೇರಿಯಲ್ಲಿ ರಾತ್ರಿ ಯಾವುದೇ ಮೀಟಿಂಗ್ ನಡೆಯುತ್ತಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ಹೇಳಿದ್ದೇನು?
ಈ ಬಗ್ಗೆ ಸಷ್ಟತೆ ನೀಡಿದ ಬಾಸ್, ʼʼತಡರಾತ್ರಿ ಯಾವುದೇ ಕೆಲಸದ ಮೀಟಿಂಗ್ ಇರುವುದಿಲ್ಲ. ನಿಮ್ಮ ಪತಿ ಮಧ್ಯರಾತ್ರಿ ಮಹಿಳಾ ಮ್ಯಾನೇಜರ್ ನಿವಾಸಕ್ಕೆ ಭೇಟಿ ನೀಡುತ್ತಿದ್ದರುʼʼ ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಮಹಿಳೆ, ಕಚೇರಿಯಲ್ಲೇ ಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.
ಜಗಳ ತಾರಕಕ್ಕೆ ಹೋಗುತ್ತಿದ್ದಂತೆ ಬಾಸ್ ಸಹೋದ್ಯೋಗಿಗಳಿಗೆ ಆಕೆಯನ್ನು ಮನೆಗೆ ತಲುಪಿಸಲು ತಿಳಿಸಿದ್ದಾರೆ. ಆಕೆ ಕಣ್ಣೀರು ಹಾಕುತ್ತಾ "ನನ್ನ ಜೀವನ ಹಾಳುಮಾಡಿಬಿಟ್ಟಿರಿ" ಎಂದು ಅಲ್ಲಿಂದ ಹೊರಟಿದ್ದಾಳೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು, ʼʼಅರೇಂಜ್ಡ್ ಮ್ಯಾರೇಜ್‌ಗಳನ್ನು ನಿಲ್ಲಿಸಿ. ಅವುಗಳಲ್ಲಿ ಹೆಚ್ಚಿನವು ಪೋಷಕರ ಒತ್ತಡದಲ್ಲಿ ನಡೆಯುತ್ತವೆ. ನಿಮ್ಮ ಹೆತ್ತವರನ್ನು ಖುಷಿಯಾಗಿಡಲು ನಿಮ್ಮ ಜೀವನವನ್ನು ಹಾಳು ಮಾಡುವುದನ್ನು ನಿಲ್ಲಿಸಿʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, ʼʼಇದು ಪತ್ನಿಗೆ ಮಾಡುವ ನಂಬಿಕೆ ದ್ರೋಹʼʼ ಎಂದಿದ್ದಾರೆ.