ನವದೆಹಲಿ, ಫೆ. 23: ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಕೆಲವೊಂದು ತಪ್ಪುಗಳು ಸಾಮಾನ್ಯ. ಉದಾಹರಣೆಗೆ ಉಪ್ಪು ಜಾಸ್ತಿಯಾಗುವುದು, ಹುಳಿ ಹೆಚ್ಚು ಹೀಗೆ ರುಚಿಯಲ್ಲಿ ಬದಲಾವಣೆ ಆಗಬಹುದು. ಆದರೆ ಇಲ್ಲೊಂದು ಅಡುಗೆ ಕೆಲಸದ ಮಹಿಳೆ ಚಿಕನ್ ಸಾಂಬಾರ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಫ್ರಿಡ್ಜ್‌ನಲ್ಲಿದ್ದ ಚಿಕನ್ ಪ್ಯಾಕೆಟ್ ಅನ್ನೇ ನೇರವಾಗಿ ಸಾಂಬಾರ್‌ಗೆ ಹಾಕಿದ್ದಾಳೆ. ಚಿಕನ್ ಮೇಲೆ ಹಾಕಿದ್ದ ಪ್ಲಾಸ್ಟಿಕ್ ತೆಗೆಯದೇ ನೇರವಾಗಿ ಬೇಯಿಸಿದ್ದಾಳೆ. ಸದ್ಯ ಈ ಘಟನೆಯ ವಿಡಿಯೊಗೆ (Viral Video) ನೆಟ್ಟಿಗರ ಗಮನ ಸೆಳೆದಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಅಂಗಡಿಯಲ್ಲಿ ಖರೀದಿಸಿದ ಪ್ಲಾಸ್ಟಿಕ್ ಕವರ್‌ನೊಂದಿಗೆ ಚಿಕನ್ ತುಂಡು ಗ್ರೇವಿಯಲ್ಲಿ ಕುದಿಯುತ್ತಿರುವುದನ್ನು ಕಾಣಬಹುದು. ಈ ದೃಶ್ಯವನ್ನು ಸೌರವ್ ದೇವ್ರಾನಿ ಶೇರ್ ಮಾಡಿಕೊಂಡಿದ್ದು, ಕೆಲಸದಾಕೆಯ ಎಡವಟ್ಟು. ನಾನು ಅವರನ್ನು ಕೆಲಸದಿಂದ ತೆಗೆದುಹಾಕಬೇಕೇ? ಎಂದು ತಮಾಷೆ ಮಾಡಿದ್ದಾರೆ.
ವಿಡಿಯೊ ನೋಡಿ:
ಚಿಕನ್ ಬೇಯಿಸುವ ಮೊದಲು ಪ್ಲಾಸ್ಟಿಕ್ ಹೊದಿಕೆಯನ್ನು ತೆಗೆದುಹಾಕಲು ಅಡುಗೆ ಮಾಡುವ ಮಹಿಳೆ ಮರೆತಿದ್ದಾಳೆ. ʼʼನಮ್ಮ ಮನೆಯ ಕೆಲಸದಾಕೆ ನಾನು ಫ್ರಿಡ್ಜ್‌ನಲ್ಲಿಟ್ಟ ಹೆಪ್ಪುಗಟ್ಟಿದ ಚಿಕನ್ ಬಳಸಿ ಸಾಂಬಾರ್ ಸಿದ್ಧಪಡಿಸಿದ್ದಾಳೆ. ಆದರೆ ಅಡುಗೆ ಮಾಡುವ ಮೊದಲು ಅದನ್ನು ಪ್ಯಾಕೇಟ್ನಿಂದ ಹೊರತೆಗೆಯಲು ಯಾರೂ ಹೇಳಿಕೊಟ್ಟಿಲ್ಲ. ಈಗ ನನಗೆ ಪ್ರಾಮಾಣಿಕವಾಗಿ ಅವಳಿಗೆ ಏನು ಹೇಳಬೇಕೆಂದು ಗೊತ್ತಿಲ್ಲʼʼ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾಧ್ಯಮ ಬಳಕೆದಾರರು ತಮಾಷೆ ಮಾಡಿದ್ದಾರೆ. ಈ ಹಿಂದೆ ಹಿಂದಿ ಧಾರಾವಾಹಿಯೊಂದರಲ್ಲಿ ಗೋಪಿ ಬಹು ಎಂಬ ಪಾತ್ರ ಲ್ಯಾಪ್‌ಟಾಪ್ ಅನ್ನು ಸೋಪ್ ನೀರಿನಲ್ಲಿ ಹಾಕಿ ತೊಳೆಯುತ್ತಿರುವುದನ್ನು ತೋರಿಸಲಾಗಿತ್ತು.ಈಗ ಈ ಮಹಿಳೆಯ ಚಿಕನ್ ಸಾಂಬಾರ್ ನೋಡಿ ನೆಟ್ಟಿಗರು ಆ ದೃಶ್ಯದೊಂದಿಗೆ ಹೋಲಿಕೆ ಮಾಡಿದ್ದಾರೆ.
ನೆಟ್ಟಿಗರೊಬ್ಬರು, ʼʼಚಿಕನ್ ಸಾಂಬಾರ್ ಅನ್ನು ವಿಭಿನ್ನವಾಗಿ ಮಾಡಲಾಗಿದೆʼʼ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ʼʼಬಹುಶಃ ಆಕೆ ಕೆಲಸ ಬಿಡುತ್ತಿದ್ದಾರೆ. ಹಾಗಾಗಿ ಸ್ಪೆಷಲ್ ಸಾಂಬಾರ್ ಮಾಡಿದ್ದಾರೆʼʼ ಎಂದಿದ್ದಾರೆ. ಇನ್ನೊಬ್ಬರು ʼʼಈ ಬಾರಿ ಪ್ಲಾಸ್ಟಿಕ್ ಜತೆ ತಿನ್ನಿ. ಮುಂದಿನ ಬಾರಿ ಚಿಕನ್ ಬೇಯಿಸಲು ಹೇಳಿʼʼ ಎಂದು ಕಾಲೆಳೆದಿದ್ದಾರೆ.