ನವದೆಹಲಿ, ಆ. 15: ಆರ್ಥಿಕ ಸಂಕಷ್ಟ ಎದುರಿಸಿ ಪರಿಶ್ರಮದಿಂದ ಯಶಸ್ಸು ಗಳಿಸಿದವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಯುವಕನೋರ್ವ ಬಡತನದಿಂದ ಶಿಕ್ಷಣ ಪಡೆದು ಇಂದು ಫೋನ್‌ಪೇಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಸ್ಲಂನಲ್ಲಿ ಬೆಳೆದು, ಅನೇಕ ಕಷ್ಟಗಳ ನಡುವೆ ಶಿಕ್ಷಣ ಪೂರ್ತಿ ಗೊಳಿಸಿದ ಅವರು ಇಂದು 33 ಲಕ್ಷ ರುಪಾಯಿಯ ಪ್ಯಾಕೇಜ್ ಪಡೆದಿದ್ದಾರೆ. ಸದ್ಯ ಈ ಯುವಕನ ಸ್ಪೂರ್ತಿದಾಯಕ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.
ಬಡತನ, ಆರ್ಥಿಕ ಸಮಸ್ಯೆಯ ನಡುವೆಯೂ ಯುವಕ ಪರಿಶ್ರಮದಿಂದ ಮೇಲೆ ಬಂದಿದ್ದಾರೆ. ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದಾಗ ಶಿಕ್ಷಣವು ಸುಲಭವಾಗಿರಲಿಲ್ಲ. ಹೆತ್ತವರ ಶ್ರಮದಾಯಕ ಕೆಲಸ, ಸಂಬಂಧಿಕರ ಸಹಾಯ ಹಾಗೂ ಶೈಕ್ಷಣಿಕ ಸಾಲದ ನೆರವಿನಿಂದ ರಾಜ್ಯಮಟ್ಟದ ಎಂಜಿನಿಯರಿಂಗ್ ಕಾಲೇಜಿಗೆ ಸೇರ್ಪಡೆಯಾಗಿದ್ದಾಗಿ ಹೇಳಿದ್ದಾರೆ.
ವೈರಲ್ ಪೋಸ್ಟ್:
ಬಳಿಕ ಜೆಇಇ (JEE) ಪರೀಕ್ಷೆಯಲ್ಲಿ ಶೇ. 96ರಷ್ಟು ಅಂಕ ಗಳಿಸಿದ್ದರೂ ಫೀಸ್ ಕಟ್ಟಲು ಕಷ್ಟವಾಗಿ ಸಾಧಾರಣ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕಾಯಿತು. ಅವರ ಗೆಳೆಯರು ಆರ್ಥಿಕವಾಗಿ ಪ್ರಬಲವಾಗಿದ್ದರು. ಆದರೆ ಈ ವ್ಯತ್ಯಾಸವು ಅವರನ್ನು ವಿಚಲಿತಗೊಳಿಸಲಿಲ್ಲ. ಬದಲಾಗಿ ಹೆಚ್ಚು ಶ್ರಮವಹಿಸಿ ಓದಲು ಪ್ರೇರೇಪಿಸಿತು. ಅದು ಸದ್ದಿಲ್ಲದೆ ಬೆಳೆಯಲು ಪ್ರೇರಣೆ ನೀಡಿತು ಎಂದು ಅವರು ಬರೆದುಕೊಂಡಿದ್ದಾರೆ.
ಇಂಗ್ಲೆಂಡ್‌ನ ದುಬಾರಿ ಶಸ್ತ್ರಚಿಕಿತ್ಸೆಯಿಂದ ಬೇಸತ್ತು ಭಾರತಕ್ಕೆ ಬಂದ ವ್ಯಕ್ತಿ
ಯುವಕ ಶಿಕ್ಷಣದತ್ತ ಗಮನ ಕೇಂದ್ರೀಕರಿಸಿದ್ದು ತನ್ನ ಮೊದಲ ವರ್ಷದಿಂದ ಪದವಿಯವರೆಗೆ 9.63 CGPA ಅನ್ನು ಕಾಯ್ದುಕೊಂಡಿದ್ದರು. ಆರಂಭದಲ್ಲಿ ಪ್ರಾಯೋಗಿಕ ಕೋಡಿಂಗ್ ಹಾಗೂ ಡೆವಲಪ್‌ಮೆಂಟ್ ಸ್ಕೀಲ್ ಕೊರತೆ ಇತ್ತು. ಇದನ್ನು ಮೆಟ್ಟಿನಿಲ್ಲಲು ತನಗಿಂತ ಹೆಚ್ಚು ಅನುಭವವಿದ್ದವರೊಂದಿಗೆ ಸೇರಿ ಕೌಶಲ ವೃದ್ಧಿಸಿಕೊಂಡರು. ಅವರ ತಂಡವು ನಾಲ್ಕು ಪ್ರಮುಖ ಹ್ಯಾಕಥಾನ್‌ಗಳಲ್ಲಿ ಜಯಗಳಿಸಿದೆ.
ಪ್ರಸಿದ್ಧ 'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್'ನಲ್ಲಿ ಭಾಗವಹಿಸಿದ ಅನುಭವ ಹಾಗೂ ಆ ಸಮಯದಲ್ಲಿ ಮೊದಲು ವಿಮಾನ ಪ್ರಯಾಣ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎಂದು ನೆನಪಿಸಿಕೊಂಡಿದ್ದಾರೆ. ಅನೇಕ ಕಷ್ಟಗಳ ನಡುವೆ ಶಿಕ್ಷಣ ಪೂರೈಸಿದ ಅವರು ಇಂದು ಪ್ರಸಿದ್ಧ ಫಿನ್‌ಟೆಕ್ ಸಂಸ್ಥೆ ಫೋನ್‌ಪೇ ಕಂಪನಿಯಲ್ಲಿ ವಾರ್ಷಿಕ 33 ಲಕ್ಷ (LPA) ರುಪಾಯಿ ಪ್ಯಾಕೇಜ್‌ನ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ʼʼಇದು ಕೇವಲ ಕೆಲಸವಲ್ಲ, ನನ್ನ ಕುಟುಂಬದ ಬಡತನದ ಮುರಿದ ಕ್ಷಣ" ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ಕಷ್ಟದ ಹಂತದಲ್ಲಿರುವ ಯಾರಿಗಾದರೂ ತನ್ನ ಕಥೆ ಭರವಸೆ ನೀಡಲಿ ಎಂಬ ಉದ್ದೇಶದಿಂದ ಈ ಪೋಸ್ಟ್ ಹಂಚಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಯುವಕನ ಈ ಸಾಹಸಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕರು ಕಠಿಣ ಪರಿಶ್ರಮದಿಂದ ಬಡತನವನ್ನು ತಪ್ಪಿಸಿಕೊಳ್ಳಬಹುದು ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆ ಎಂದಿದ್ದಾರೆ.