ನವದೆಹಲಿ, ಆ. 22: ವಿವಾಹದ ನಂತರ ಹೆಚ್ಚಿನ ಮನೆಗಳಲ್ಲಿ ಅತ್ತೆ- ಸೊಸೆಯ ಜಗಳ ಸಾಮಾನ್ಯ. ಇಲ್ಲೊಬ್ಬ ಯುವತಿ ಮದುವೆಯ ಬಳಿಕ ಯುವಕನ ವೃದ್ಧ ತಾಯಿ ತಮ್ಮೊಂದಿಗೆ ವಾಸ ಮಾಡುತ್ತಾರೆ ಎನ್ನುವ ಕಾರಣಕ್ಕೆ ಮದುವೆ ಪ್ರಸ್ತಾಪವನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ. ತನಗೆ ಮದುವೆಯ ನಂತರ ಈ ಜವಾಬ್ದಾರಿ ತೆಗೆದುಕೊಳ್ಳಲು ಸಾದ್ಯವಿಲ್ಲ ಎಂದು ಯುವಕನ ಮುಂದೆಯೇ ಕಟುವಾಗಿ ಹೇಳಿದ್ದಾಳೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ (Viral News) ಆಗುತ್ತಿದ್ದಂತೆ ಕೆಲವರು ಯುವತಿಯ ನಿರ್ಧಾರ ಸರಿಯಾಗಿದೆ ಎಂದರೆ ಇನ್ನು ಕೆಲವರು ಟೀಕಿಸಿದ್ದಾರೆ.
ಇಂದು ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದರಿಂದ ಮನೆಯ ಜವಾಬ್ದಾರಿ ಹೊರಲು ಸಾಧ್ಯವಾಗುವುದಿಲ್ಲ. ಅದರಲ್ಲೂ ವೃದ್ಧ ತಂದೆ-ತಾಯಿ ಜವಾಬ್ದಾರಿ ವಿಚಾರವಾಗಿ ಡಿವೋರ್ಸ್ ಆದ ಘಟನೆಗಳು ಕೂಡ ನಡೆದಿವೆ. ಆದರೆ ಇಲ್ಲಿ ಯುವತಿ ಮದುವೆಯ ಮೊದಲೇ ದಾಂಪತ್ಯ ಜೀವನ ಆರಂಭವಾದ ಬಳಿಕ ಪತಿಯ ವೃದ್ಧ ತಾಯಿ ತಮ್ಮೊಂದಿಗೆ ವಾಸಿಸಲಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಾಳೆ.
'ಮಿಯಾ' ಎನ್ನುವವರು ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಮದುವೆಯಾಗಲಿರುವ ಯುವಕನು "ತನ್ನ ತಾಯಿಗೆ ವಯಸ್ಸು ಆಗಿದೆ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನದೆ. ಇದಕ್ಕೆ ಬೇರೆ ದಾರಿಯಿಲ್ಲ" ಎಂದು ಯುವತಿಯ ಬಳಿ ಹೇಳಿಕೊಂಡಿದ್ದಾನೆ. ಇದಕ್ಕೆ ಉತ್ತರ ನೀಡಿದ ಯುವತಿ, ʼʼನಿಮ್ಮ ತಾಯಿಯ ಜವಾಬ್ದಾರಿ ನೀವು ತೆಗೆದುಕೊಳ್ಳುವುದಕ್ಕೆ ತೊಂದರೆ ಇಲ್ಲ. ಆದರೆ ನಾನು ತೆಗೆದುಕೊಳ್ಳದ ಜವಾಬ್ದಾರಿಯನ್ನು ನನ್ನ ತಲೆಗೆ ಹಾಕಬೇಡಿʼʼ ಎಂದು ಸ್ಪಷ್ಟವಾಗಿ ತಿಳಿಸಿದ್ದಾಳೆ.
ತಾಯಿ ಹಾಲು ಮಕ್ಕಳಿಗೆ ಅಮೃತವೇಕೆ? ವಿಜ್ಞಾನ ಹೇಳುವುದೇನು?
ಈ ಮಾತು ಕೇಳಿಕ ಯುವಕ ಆಕೆಯನ್ನು 'ಸ್ವಾರ್ಥಿ' ಎಂದು ಕರೆದಿದ್ದಾನೆ. ಇದಕ್ಕೆ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತ, ಪ್ರತಿ ಒಳ್ಳೆಯ ಮಗನೂ ಸೂಕ್ತ ಗಂಡನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಸದ್ಯು ಈ ಪೋಸ್ಟ್ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ಒಬ್ಬರು ಈ ನಿರ್ಧಾರವನ್ನು ಟೀಕಿಸುತ್ತಾ, ʼʼನೀವು ಜವಾಬ್ದಾರಿಯುತ ವ್ಯಕ್ತಿಯನ್ನು ತಿರಸ್ಕಾರ ಮಾಡಿದ್ದೀರಿʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ಆ ಯುವಕ ನಿಜಕ್ಕೂ ಅದೃಷ್ಟವಂತ. ಮದುವೆಯಾಗುವ ಮೊದಲೇ ಪಾರಾಗಿದ್ದಾನೆ" ಎಂದಿದ್ದಾರೆ. ಇನ್ನೊಬ್ಬರು, ʼʼತಾಯಿಯನ್ನು ನೋಡಿಕೊಳ್ಳುವುದು ಎಲ್ಲ ಮಕ್ಕಳ ಜವಾಬ್ದಾರಿʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.