ಶಾರದಾ ಕೌದಿ, ಧಾರವಾಡ
ಅಕ್ಟೋಬರ 26ರಂದು ಶೀಗಿ ಹುಣ್ಣಿಮೆ. ತೆನೆ ತುಂಬಿರುವ ಬೆಳೆಯಿಂದ ಕಂಗೊಳಿಸುವ, ಹಸುರಿನ ಸುಂದರಿಯಾಗಿರುವ ಭೂಮಿ ತಾಯಿಗೆ, ಇದು ಬಯಕೆ ಊಟ ಮಾಡಿಸುವ ದಿನ.
ಧಾರವಾಡ ಅಲ್ಲಲ್ಲಿ ಮಳೆಯಾಗಿದೆ; ಸಣ್ಣಗೆ ಚಳಿಯೂ ಸುಳಿದಾಡುತ್ತಿದೆ. ಇದೇ ಸಮಯದಲ್ಲಿ ಬರುವ ಅಶ್ವಿಜ ಶುಕ್ಲಪಕ್ಷದ ಹುಣ್ಣಿಮೆಯು, ಗ್ರಾಮೀಣ ಜನರಲ್ಲಿ, ಕೃಷಿಕರಲ್ಲಿ ಖುಷಿ ತಂದಿದೆ! ಏಕೆಂದರೆ, ಇದೇ ಶೀಗಿ ಹುಣ್ಣಿಮೆ! ಈ ಹುಣ್ಣಿಮೆಯ ದಿನದಂದು, ಪಂಚಭೂತಗಳನ್ನು ಪೂಜಿಸಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯ ನಮ್ಮ ಗ್ರಾಮೀಣ ಸಂಸ್ಕೃತಿಯ ದ್ಯೋತಕ. ಭೂತಾಯಿಯ ಋಣವನ್ನು ನೆನೆಯಲು ಕೃಷಿಕರು ಅವಳನ್ನು ಭಕ್ತಿಯಿಂದ ಪೂಜಿಸುವ ದಿನವೇ ಶೀಗಿ ಹುಣ್ಣಿಮೆ.
ಬಹುಪಾಲು ಉತ್ತರಕರ್ನಾಟಕದ ರೈತರ ಸಂಭ್ರಮ ಸಡಗರದ ಹಬ್ಬ ಇದಾಗಿದೆ. ಬಿತ್ತಿದ ಬೀಜ ಕುಡಿಯೊಡೆದು ತೆನೆತುಂಬಿ ಹೊಲವೆಲ್ಲ ಹಚ್ಚುಹಸುರಾಗಿ, ವರ್ಷದ ಫಸಲನ್ನು ಮಡಿಲಲ್ಲಿ ತುಂಬಿ ಕೊಂಡು ಬಸುರಿಯಂತೆ ಕಂಗೊಳಿಸುವ ಭೂತಾಯಿಗೆ ಬಯಕೆ ಊಟ ಮಾಡಿಸುವ ಸುದಿನ. ಕಡಬು, ಹೋಳಿಗೆ, ಕರ್ಚಿಕಾಯಿ, ಹುರಕ್ಕಿ ಹೋಳಿಗೆ, ಜೋಳದ ವಡಿ, ಕುಂಬಳಕಾಯಿ ಗಾರಗಿ, ಉಂಡಗಡಬ, ಪುಂಡಿಪಲ್ಲೆ, ಬದನಿಕಾಯಿ ಎಣಗಾಯಿ, ಕೋಸಂಬರಿ, ಗುರೆಳ್ಳ, ಅಗಸಿ, ಶೇಂಗಾ ಚಟ್ನಿ, ಚಿತ್ರನ್ನಾ, ಬುತ್ತಿ .. ಹೀಗೆ ತರಾವರಿ ಅಡುಗೆ ಮಾಡುವರು ಮನೆಯಲ್ಲಿ ಮಹಿಳೆಯರು. ಇವೆಲ್ಲಾ ಶೀಗಿ ಹುಣ್ಣಿಮಿ ವಿಶೇಷ.
ಬಿಸಿ ಬಿಸಿ ಅಡುಗೆಯನ್ನು, ಹೊಲಕ್ಕೆ ಕೊಂಡೊಯ್ಯುವುದೇ ಇನ್ನೊಂದು ಸಂಭ್ರಮ. ಬಿದರಿನ ಬುಟ್ಟಿಗೆ ಸುಣ್ಣ, ಕೆಂಬಣ್ಣದ ಚಿತ್ರ ಬರೆದು, ಸಿಂಗರಿಸಿ, ಅದರಲ್ಲಿ ಅಡುಗೆ ತುಂಬಿಡುವರು. ಟೋಪ ಶರಗ ಸೀರೆ ಉಟ್ಟು, ನತ್ತು, ಝಮಕಿ, ಬೋರಮಳ, ಅವಲಕ್ಕಿ ಸರ ಸೊಂಟದ ಪಟ್ಟಿ ಹಾಕ್ಕೊಂಡ ತುರುಬ ಕಟ್ಟಿಕೊಂಡ ಸೇವಂತಿ ಹೂವಿನ ಮಾಲಿ ಸುತಗೊಂಡ ಹೆಂಗಸರು ತಯಾರಾದರ, ಚಿಕ್ಕಮಕ್ಕಳು ಜರದ ಲಂಗಾ ಧಾವಣಿ ಹಕ್ಕೊಂಡ ಉದ್ದ ಜಡೆಯನ್ನು ಸೇವಂತಿಗೆ ಊವಿಂದ ಹೆಣೆದುಕೊಳ್ಳುವರು.
ಇದನ್ನೂ ಓದಿ: Sharada Kaudi Column: ಏಳು ಬಣ್ಣಗಳ ಸರದಾರ ರಥವೇರುವ ಬೆಳಕಿನ ಧೀರ !
ಇತ್ತ ಗಂಡಸರು ಧಡಿಧೋತ್ರ ಉಟಗೊಂಡ ರುಮಾಲ ಸುತಗೊಂಡ ತಯಾರಾಗುವರು. ಚಕ್ಕಡಿನ ಮಾವಿನ ತೊಳಲ, ಜೋಳದ ದಂಟಿನಿಂದ ಶೃಂಗಾರ ಮಾಡಿ, ಎತ್ತುಗಳನ್ನೂ ಶೃಂಗಾರ ಮಾಡಿ ಎಲ್ಲರೂ ಹೊಲದತ್ತ ಮುಖಮಾಡುವರು. ತಲೆಮೇಲೆ ಬುಟ್ಟಿ ಹೊತಗೊಂಡ ಹೊಲಕ್ಕ ಹೋಗುವ ಹೆಣ್ಣುಮಕ್ಕಳ ಸಂಭ್ರಮ ಹೇಳತೀರದು. ಮನೆಮಂದಿ ನೆರೆ ಹೊರೆಯವರು ಎಲ್ಲ ಸೇರಿ ಹೋಗುವರು. ಜೋಳದ ಹೊಲದಾಗ ಬನ್ನಿಗಿಡದ ಕೆಳಗ ಐದು ಕಲ್ಲುಗಳನಿಟ್ಟು ಪೂಜಿಸುವದು ವಾಡಿಕೆ.
ಅರಿಷಿಣ ಕುಂಕುಮ ಹಚ್ಚಿ ಸೀರೆ ಕುಬುಸ ಏರಿಸಿ ಭಕ್ತಿಯಿಂದ ಪೂಜಿಸಿ ಎಲೆತುಂಬ ತಂದ ಅಡುಗೆ ಬಡಿಸಿ ಭೂತಾಯಿಗೆ ಬಯಕೆ ಅಡುಗೆಯ ನೈವೇದ್ಯ ಮಾಡುವರು. ಕಾಲಕಾಲಕ್ಕೆ ಮಳೆ ಸರಿಯಾಗಿ ಬಂದು, ಬೆಳೆ ಹುಲುಸಾಗಿ ಬೆಳೆದು ಪಟ್ಟ ಶ್ರಮಕ್ಕೆ ಉದಾರ -ಲ ನೀಡುವಂತೆ ಭೂಮಾತೆಯನ್ನು ಭಕ್ತಿಯಿಂದ ಕೇಳಿಕೊಳ್ಳುವರು. ನಂತರ ಚರಗ ಚೆಲ್ಲುವದು ಸೀಗೆ ಹುಣ್ಣಿಮೆಯ ವಿಶೇಷತೆ. ಭೂತಾಯಿಯ ಎಡೆಯನ್ನು ‘ಹುಲ್ ಹುಲ್ ಗೊ’ ಅಂತ ಹೇಳುತ್ತಾ ಹೊಲದ ಎಲ್ಲ ದಿಕ್ಕುಗಳಿಗೆ ಹಾಕುವರು.
ಫಸಲನ್ನು ತುಂಬಿಕೊಂಡಿರುವ ಭೂಮಿ ತಾಯಿಗೆ, ಇದು ಬಯಕೆಯ ಊಟ! ಭೂಮಿ ತಾಯಿಯು ಮನಪೂರ್ತಿಯಾಗಿ, ಹೀಗೆ ಚೆಲ್ಲಿದ ತಿನಿಸುಗಳನ್ನು ಸೇವಿಸಿ, ಸಂತಸಪಡಲಿ ಎಂದು ಎಲ್ಲರ ಹಾರೈಕೆ. ನಂತರ ಬಂದವರೆಲ್ಲ ಹರಟುತ್ತ ನಗುತ್ತಾ ಕೂಡಿ, ಊಟ ಮಾಡುವರು. ಇವೆಲ್ಲ ಮನಸ್ಸಿಗೆ ಖುಷಿ ನೀಡುವ ಸಂಗತಿಗಳು. ನಂತರ ಹಾಡು ಹೇಳುತ್ತ ತಮಾಷೆ ಮಾಡುತ್ತ ಸಂಜೆಯವರೆಗೂ ಹೊಲದಲ್ಲೇ ಕಾಲ ಕಳೆಯುವರು. ಹಾಡಿನ ನಡುವೆ ಜನಪದ ಆಟಗಳನ್ನೂ ಆಡುವುದುಂಟು. ಮಕ್ಕಳಿಗಂತೂ ನಾನಾ ರೀತಿಯ ಆಟವಾಡುವ ಸಂಭ್ರಮ. ಈ ನಡುವೆ ಆಗೊಮ್ಮೆ ಈಗೊಮ್ಮೆ ತುಂತು ಮಳೆ ಬಂದರೆ, ಇನ್ನಷ್ಟು ಖುಷಿ! ಈ ರೀತಿ, ಸೀಗೆ ಹುಣ್ಣಿಮೆ ರೈತರ ಬಹು ದೊಡ್ಡ ಸಂಭ್ರಮಾಚರಣೆ ಯಾಗಿದೆ.
ಹಳ್ಳಿಯನ್ನು ತೊರೆದ ಪಟ್ಟಣಗಳತ್ತ ಮುಖ ಮಾಡಿರುವ ಕುಟುಂಬಗಳಿಗೆ ಇಂದು ಶೀಗೆ ಹುಣ್ಣಿಮೆ ಆಚರಿಸಲು ಸಣ್ಣಪುಟ್ಟ ತೊಡಕುಗಳಿಲವೆ. ಪಟ್ಟಣಗಳ ಸುತ್ತಮುತ್ತ ಹೊಲಗಳು ಕಡಿಮೆಯಾಗಿರು ವದರಿಂದ, ಓಣಿಯ ಜನರು, ಗೆಳತಿಯರು ಗುಂಪು ಮಾಡಿಕೊಂಡು ಅಡುಗೆ ಕಟ್ಟಿಕೊಂಡು, ಸನಿಹದ ಪಾರ್ಕಗಳಿಗೆ ಹೋಗಿ ಊಟ ಮಾಡುವದಿದೆ. ಇಂದಿನ ದಿನಗಳಲ್ಲಿ ಹಳ್ಳಿಯನ್ನು ತೊರೆದ ಪಟ್ಟಣದ ಬಳಿ ಮನೆ ಮಾಡುವುದು ಒಂದು ಅನಿವಾರ್ಯ ಎನಿಸಿದೆ; ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಮಳೆ ಕಡಿಮೆಯಾಗಿರುವುದು ಈ ರೀತಿ ಹಲವು ಕಾರಣಳಿಂದ ಜನರು ಹೊಲಗಳಿಂದ ದೂರವಾಗು ತ್ತಿರುವರು. ಆದರೂ, ಶೀಗಿ ಹುಣ್ಣಿಮೆಯನ್ನು ಮರೆಯಲಾದೀತೇ? ಆದ್ದರಿಂದ, ಮನೆಯಲ್ಲಿ ನಾನಾ ರೀತಿಯ ಅಡುಗೆ, ತಿಂಡಿ ತಿನಿಸು ತಯಾರಿಸಿ, ಪಟ್ಟಣದಲ್ಲೇ ಇರುವ ಅಥವಾ ಸುತ್ತಮುತ್ತಲಿನ ಪಾರ್ಕಗಳಿಗೆ, ತೋಟಗಳಿಗೆ ಹೋಗಿ, ಅಲ್ಲೇ ಭೂಮಿಗೆ ತಿನಿಸನ್ನು ಅರ್ಪಿಸಿ, ತಾವೂ ಸಂತಸದಿಂದ ಸೇವಿಸುವುದು.
ಇಂದಿನ ದಿನಗಳಲ್ಲಿ, ಈ ಸಂಭ್ರಮವು ಹೊಲಕ್ಕೆ ಹೋಗುವ ಸಂಭ್ರಮದಷ್ಟೆ ಖುಷಿಕೊಡುವದು. ಈ ಮೂಲಕ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುವ ಪದ್ಧತಿ, ಸಕಾರಾತ್ಮಕ.