ಕಾರ್ತಿಕ್ ಕೃಷ್ಣ
ಸತತ 428 ವಾರಗಳ ಕಾಲ ವಿಶ್ವದ ನಂ.1 ಟೆನಿಸ್ ಆಟಗಾರನ ಪಟ್ಟವನ್ನು ಉಳಿಸಿಕೊಂಡಿದ್ದ ಈ ಆಟಗಾರನ ವಿಶ್ವದಾಖಲೆಯನ್ನು ಇನ್ನೂ ಯಾರೂ ಮುರಿದಿಲ್ಲ. ಈಗಲೂ ಆತ ಟೆನಿಸ್ ಆಟವನ್ನು ಮುಂದುವರಿಸಿದ್ದು, ಈಗ ವಿಶ್ವದ ನಂ.7ನೆಯ ಆಟಗಾರನಾಗಿದ್ದಾನೆ. ಈ ಸಂದರ್ಶನ ಸ್ವರೂಪದ ಮಾತುಕತೆಯಲ್ಲಿ ನೋವಾಕ್ ಜೊಕೊವಿಚ್ ಒಬ್ಬ ಶ್ರೇಷ್ಠ ಕ್ರೀಡಾ ಪಟುವಾಗಿ ಮಾತ್ರ ಕಾಣಿಸದೆ, ತಮ್ಮ ಮಿತಿಗಳನ್ನು ಮೀರಿ ಬೆಳೆದ, ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಒಬ್ಬ ಅಧ್ಯಾತ್ಮ ಜೀವಿಯಾಗಿ ಕಾಣುತ್ತಾರೆ. ಗೆಲುವು ಅನ್ನೋದು ಕೇವಲ ಮೈದಾನದಲ್ಲಿ ಸಿಗುವಂಥದ್ದಲ್ಲ, ಅದು ಮೊದಲು ನಮ್ಮ ಮನಸ್ಸಿನೊಳಗೆ ಶುರುವಾಗಬೇಕು ಎಂಬುದೇ ಈ ಕ್ರೀಡಾಪಟು ನೀಡುವ ಸಂದೇಶ. ಸದಾ ಗೆಲ್ಲುವ ಕ್ರೀಡಾಪಟು!
ಟೆನಿಸ್ ಕೋರ್ಟ್‌ನಲ್ಲಿ ನೋವಾಕ್ ಜೊಕೊ ವಿಚ್ ಅವರನ್ನು ನೋಡಿದಾಗ, ಇವರೊಬ್ಬ ಸೋಲಿ ಲ್ಲದ ಸರದಾರ, ಇವರ ಲೈಫ್ ಎಷ್ಟೊಂದು ಪರ್ಫೆಕ್ಟ್ ! ಅಬ್ಬಾ ಅದೆಂತಾ ಅಗ್ರೆಶನ್ ಅಂತ ಅನಿಸುತ್ತದೆ. ಮೂವತ್ತೊಂಬತ್ತರ ವಯಸ್ಸಿನಲ್ಲೂ ಅವರು ಇಡೀ ಕೋರ್ಟನ್ನು ಆವರಿಸುವ ರೀತಿ ಕಣ್ಣಿಗೆ ಹಬ್ಬದಂತಿ ರುತ್ತದೆ. ಟೆನ್ನಿಸ್ ಲೋಕವನ್ನು ನಡಾಲ್ ಹಾಗೂ ಫೆಡೆರರ್ ಆಳುತ್ತಿದ್ದ ಕಾಲದಲ್ಲಿ ಕಾಲಿಟ್ಟು, ಇಬ್ಬರಿಗೂ ಸಿಂಹ ಸ್ವಪ್ನವಾಗಿದ್ದ ನೊವಾಕ್ ಈಗ ಮುಂದಿನ ತಲೆಮಾರಿನ ಸಿನ್ನರ್ ಹಾಗೂ ಅಲ್ಕರಾಜ್ ಅವರನ್ನೂ ಕಾಡುತ್ತಿದ್ದಾರೆ. ಇಪ್ಪತ್ನಾಲ್ಕು ಗ್ರಾಂಡ್ ಸ್ಲಾಮ್ ಗಳನ್ನು ಜೋಳಿಗೆಯಲ್ಲಿ ತುಂಬಿ ಕೊಂಡು ಮತ್ತಷ್ಟು ಯಶಸ್ಸಿಗೆ ಹಾತೊರೆಯುವ ಅವರ ಮನಸ್ಥಿತಿ ಯಿದೆಯಲ್ಲಾ, ಅದೊಂಥರಾ ಇನ್ಸ್ಪಿ ರೇಷನಲ್!
ಇತ್ತೀಚೆಗೆ ಜೇ ಶೆಟ್ಟಿ ಅವರ ಪಾಡ್‌ಕ್ಯಾಸ್ಟ್ ನಲ್ಲಿ ನೋವಾಕ್ ನೀಡಿದ ಸಂದರ್ಶನ ನೋಡಿದ ಮೇಲೆ, ಅವರ ಮೇಲಿದ್ದ ಗೌರವ ಇನ್ನಷ್ಟು ಹೆಚ್ಚಾಗಿದೆ ಈ ಸಂದರ್ಶನದಲ್ಲಿ ಅವರು ಹಂಚಿಕೊಂಡ ವಿಚಾರ ಗಳು ಟೆನಿಸ್ ಆಟಗಾರರಿಗೆ ಮಾತ್ರವಲ್ಲದೆ, ನಮ್ಮ- ನಿಮ್ಮಂಥ ಸಾಮಾನ್ಯರ ದೈನಂದಿನ ಜೀವನಕ್ಕೂ ತುಂಬ ಹತ್ತಿರವಾಗು ವಂತಿವೆ. ಆ ಅದ್ಭುತ ಸಂದರ್ಶನದ ಮುಖ್ಯಾಂಶ ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
1 ನಾನು ಯಾವುದಕ್ಕೂ ಸಾಲದು ಎಂಬ ಕೀಳರಿಮೆ: ನಿಮಗೆ ಆಶ್ಚರ್ಯವಾಗಬಹುದು, 24 ಗ್ರ್ಯಾಂಡ್ ಸ್ಲ್ಯಾಮ್ ಗೆದ್ದಿರುವ ಈ ಮನುಷ್ಯನಿಗೆ ನಾನು ಎಷ್ಟೇ ಸಾಧಿಸಿದರೂ ಸಾಲದು, ನಾನು ಇನ್ನು ಸಾಧಿಸಬೇಕು ಎಂಬ ಕೀಳರಿಮೆ ಕಾಡುತ್ತಿತ್ತಂತೆ! ಆ ಮನಃಸ್ಥಿತಿಗೆ ಅವರ ಬಾಲ್ಯದ ದಿನಗಳೂ ಕಾರಣ ವಾಗಿರಬಹುದು. ಸರ್ಬಿಯಾದಲ್ಲಿ ಯುದ್ಧದ ವಾತಾವರಣ, ತೀವ್ರ ಬಡತನ..ಇಂತಹ ಸಮಯದಲ್ಲಿ ಒಮ್ಮೆ ಅವರ ತಂದೆ 10 ಡಾಲರ್ (ಅಂದಿನ 10 ಡಾಯ್ಚ್ ಮಾರ್ಕ್) ಹಿಡಿದುಕೊಂಡು ನಮ್ಮ ಐದು ಜನರ ಕುಟುಂಬಕ್ಕೆ ಇನ್ನು ಉಳಿದಿರೋದು ಇಷ್ಟೇ ಎಂದಿದ್ದರಂತೆ. ಇಂಥ ಕಷ್ಟದ ದಿನಗಳಲ್ಲಿ, ಮಗನಿಗೆ ಟೆನಿಸ್ ಆಡಿಸಲು ತಂದೆ ಕ್ರಿಮಿನಲ್ಸ್ ಬಳಿ 25% ಬಡ್ಡಿಗೆ ಸಾಲ ಮಾಡಿ ಪಟ್ಟ ಪಾಡು ನೋವಾಕ್ ಮನಸ್ಸಿನಲ್ಲಿ ಆಳವಾಗಿ ಉಳಿದು ಬಿಟ್ಟಿತ್ತು. ನಾನು ಗೆಲ್ಲಲೇಬೇಕು, ಸೋಲಿಗೆ ಇಲ್ಲಿ ಜಾಗವೇ ಇಲ್ಲ ಎಂಬ ಛಲ ಹುಟ್ಟಿದ್ದು ಅಲ್ಲಿಂದಲೇ. ಆ ವಿಪರೀತ ಒತ್ತಡ ಅವರನ್ನು ಒಳಗೊಳಗೇ ಕಬಳಿಸುತ್ತಿ ದ್ದರೂ, ಆ ಕೀಳರಿಮೆಯನ್ನೇ ಅವರು ತಮ್ಮ ಯಶಸ್ಸಿನ ಇಂಧನವನ್ನಾಗಿ ಬಳಸಿಕೊಂಡರು.
ಇದನ್ನೂ ಓದಿ: Womens Singles Tennis: ಅಂಕಿತಾ ರೈನಾ, ವೈಷ್ಣವಿ ಅಡ್ಕರ್ ಕ್ವಾ.ಫೈನಲಿಗೆ
2 ಮೈಂಡ್ ಗೇಮ್ ಮತ್ತು ಮೆಡಿಟೇಶನ್: ನೋವಾಕ್ ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ವಾಗಿಯೂ ಸಿಕ್ಕಾಪಟ್ಟೆ ಸ್ಟ್ರಾಂಗ್. ಇದಕ್ಕೆ ಕಾರಣ ಅವರ ಬಾಲ್ಯದ ತರಬೇತಿ. ಅವರಿಗೆ 9-10 ವರ್ಷ ಇದ್ದಾಗಲೇ, ಅವರ ಮೊದಲ ಕೋಚ್ (ಅವರನ್ನು ನೋವಾಕ್ ಪ್ರೀತಿಯಿಂದ ‘ಟೆನಿಸ್ ಮಥರ್’ ಎಂದು ಕರೆಯುತ್ತಾರೆ) ಅವರಿಗೆ ಟೆನಿಸ್ ಜೊತೆಗೆ ಪ್ರತಿದಿನ ಶಾಸ್ತ್ರೀಯ ಸಂಗೀತ ಕೇಳುವುದನ್ನು, ಕವನ ಓದುವು ದನ್ನು, ಮತ್ತು ಕಣ್ಮುಚ್ಚಿ ವಿಜು ಲೈಸೇಶನ್ ಮಾಡುವುದನ್ನು ಕಲಿಸಿದ್ದರು.
ಟೆನಿಸ್ ಎಂದರೆ ಚೆಂಡನ್ನು ಹೊಡೆಯುವುದಷ್ಟೇ ಅಲ್ಲ, ಅದು ನಮ್ಮನ್ನು ನಾವು ಅರಿಯುವ ಮತ್ತು ಬೆಳೆ ಸುವ ಒಂದು ವೇದಿಕೆ ಎಂಬುದನ್ನು ಅವರು ಚಿಕ್ಕ ವಯಸ್ಸಿನಲ್ಲೇ ಅರಿತು ಕೊಂಡಿದ್ದರು. ಇಂದಿಗೂ ಅವರು ಧ್ಯಾನ, ಪ್ರಾಣಾಯಾಮ ಮತ್ತು ಪ್ರಕೃತಿಯ ಒಡನಾಟವನ್ನು ತಪ್ಪದೆ ಪಾಲಿಸುತ್ತಾರೆ.
3 ವಿರೋಧಿಗಳ ಕೂಗನ್ನೇ ಶಕ್ತಿಯಾಗಿಸಿದ ಪರಿಯೇ ಅದ್ಭುತ! ನನಗೆ ಈ ಸಂದರ್ಶನದಲ್ಲಿ ಅತಿ ಹೆಚ್ಚು ಇಷ್ಟವಾದ ಹಾಗೂ ಗೂಸ್‌ಬಂಪ್ಸ್ ತರಿಸಿದ ಭಾಗವೆಂದರೆ, ಪ್ರೇಕ್ಷಕರ ವಿರೋಧವನ್ನು ಅವರು ಎದುರಿಸುವ ರೀತಿ. ವಿಂಬಲ್ಡನ್‌ನಂಥ ದೊಡ್ಡ ಟೂರ್ನಿಯ ಫೈನಲ್‌ನಲ್ಲಿ ರೋಜರ್ ಫೆಡರರ್ ಎದುರು ಆಡುವಾಗ, ಇಡೀ ಸ್ಟೇಡಿಯಂ ‘ರೋಜರ್, ರೋಜರ್’ ಅಂತ ಕೂಗುತ್ತಿರುತ್ತಿತ್ತಂತೆ. ಎಂಥವರಿಗಾದರೂ ಇದು ಮಾನಸಿಕವಾಗಿ ಕುಗ್ಗಿಸುತ್ತದೆ. ಆದರೆ ನೋವಾಕ್ ಏನು ಮಾಡುತ್ತಿದ್ದರು ಗೊತ್ತಾ? ಅವರು ತಮ್ಮ ಸಬ್-ಕಾನ್ಶಿಯಸ್ ಮೈಂಡ್ ಅನ್ನು ಹೇಗೆ ಪ್ರೋಗ್ರಾಮ್ ಮಾಡಿಕೊಂಡಿದ್ದರು ಅಂದರೆ, ಪ್ರೇಕ್ಷಕರು ‘ರೋಜರ್’ ಅಂದಾಗಲೆಲ್ಲ ಇವರ ಕಿವಿಗೆ ನೋವಾಕ್, ನೋವಾಕ್ ಅಂತ ಕೇಳಿಸುತ್ತಿ ತ್ತಂತೆ! ನಕಾರಾತ್ಮಕತೆಯನ್ನು ತಮಗೆ ಬೇಕಾದ ಹಾಗೆ ಬದಲಾಯಿಸಿಕೊಳ್ಳುವ ಈ ‘ಮೈಂಡ್ ಹ್ಯಾಕ್’ ನಿಜಕ್ಕೂ ಅದ್ಭುತ ಅಲ್ವಾ?
4 ಸೋತಾಗ ಒಂಟಿತನ ಮತ್ತು ಬೋರ್ ಆಗಿರುವುದರ ಮಹತ್ವ ಇಷ್ಟೆಲ್ಲಾ ಸಾಧಿಸಿದರೂ, ಪಂದ್ಯ ಸೋತಾಗ ಎಂಥವ ರಿಗಾದರೂ ಬೇಸರವಾಗುತ್ತದೆ. ಆ ಸೋಲನ್ನು ಅರಗಿಸಿ ಕೊಳ್ಳಲು, ಅವರು ತಕ್ಷಣ ಯಾರೊಂದಿಗೂ (ಕುಟುಂಬದವರನ್ನು ಹೊರತುಪಡಿಸಿ) ಮಾತನಾಡದೆ, ಒಂಟಿಯಾಗಿ ಪ್ರಕೃತಿಯ ನಡುವೆ ಸಮಯ ಕಳೆಯುತ್ತಾರಂತೆ.
5 ಇನ್ನೊಂದು ಮುಖ್ಯವಾದ ವಿಚಾರವನ್ನು ಅವರು ತಮ್ಮ ಮಕ್ಕಳ ಉದಾಹರಣೆ ನೀಡಿ ಹೇಳುತ್ತಾರೆ: ಬೋರ್ ಆಗುವುದು ಕೂಡ ಒಳ್ಳೆಯದೇ! ಅಂತ. ಬೋರ್ ಆದ ಕೂಡಲೇ ಹೆಚ್ಚಿನವರು ಏನು ಮಾಡು ತ್ತಾರೆ? ಫೋನ್ ಹಿಡಿದುಕೊಂಡು ಸ್ಕ್ರೀನ್ ನೋಡುತ್ತಾ ಬ್ಯುಸಿ ಆಗುತ್ತಾರೆ ಅಲ್ವಾ. ಆದರೆ ವಿಜ್ಞಾನದ ಪ್ರಕಾರ, ಫೋನ್ ಇಲ್ಲದೆ ಬೋರ್ ಆದಾಗ ಮಾತ್ರ ನಮ್ಮ ಮೈಂಡ್ ಹೆಚ್ಚು ಕ್ರಿಯೇಟಿವ್ ಆಗಿ ಯೋಚಿಸಲು ಶುರುಮಾಡುತ್ತದೆಯಂತೆ. ಹಾಗಾಗಿ ಫೋನ್ ಬದಿಗಿಟ್ಟು ಒಂಟಿಯಾಗಿ ಪ್ರಕೃತಿ ಯೊಡನೆ ಸಮಯ ಕಳೆಯುವುದು ಬಹಳ ಮುಖ್ಯ ಅಂತಾರೆ ನೋವಾಕ್. 10 ಮತ್ತು 7 ವರ್ಷದ ತಮ್ಮ ಮಕ್ಕಳಿಗೆ ಅವರು ಇನ್ನೂ ಫೋನ್ ನೀಡಿಲ್ಲ ಎನ್ನುವುದು ಗಮನಾರ್ಹ.
6 ಆಹಾರ ಪದ್ಧತಿಯಲ್ಲಿ ಬದಲಾವಣೆ: ನೋವಾಕ್ ವೃತ್ತಿಜೀವನದಲ್ಲಿ ಒಂದು ದೊಡ್ಡ ತಿರುವು ಎಂದರೆ ಅವರ ಆಹಾರ ಪದ್ಧತಿಯ ಬದಲಾವಣೆ. 2010ರ ಸುಮಾರಿಗೆ, ಅವರಿಗೆ ಗ್ಲುಟನ್ ಮತ್ತು ಡೈರಿ ಉತ್ಪನ್ನಗಳ ಅಲರ್ಜಿ ಇದೆ ಎಂದು ವೈದ್ಯರು ಪತ್ತೆ ಹಚ್ಚಿದ್ದರು. ತಕ್ಷಣವೇ ಗ್ಲುಟನ್, ಹಾಲಿನ ಉತ್ಪನ್ನ ಗಳನ್ನು ಮತ್ತು ಸಕ್ಕರೆಯನ್ನು ತ್ಯಜಿಸಿದ ನೊವಾಕ್‌ಗೆ, ಮಾನಸಿಕ ಸ್ಪಷ್ಟತೆ, ದೈಹಿಕ ಚೇತರಿಕೆ ಮತ್ತು ಕೋರ್ಟ್ ನಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸಾಕಷ್ಟು ಸುಧಾರಿಸಿತಂತೆ. ಈ ಬದಲಾವಣೆಯ ನಂತರವೇ ಅವರು ಸತತ 40+ ಪಂದ್ಯಗಳನ್ನು ಗೆದ್ದು ವಿಶ್ವದ ನಂಬರ್ 1 ಆಟಗಾರರಾದರು.
7 ನಡಾಲ್ ಮತ್ತು ಫೆಡರರ್ ಜೊತೆಗಿನ ಪೈಪೋಟಿ ಹೊಸಬರಾಗಿ ಟೆನಿಸ್ ಜಗತ್ತಿಗೆ ಕಾಲಿಟ್ಟಾಗ, ರೋಜರ್ -ಡರರ್ ಮತ್ತು ರಾಫೆಲ್ ನಡಾಲ್ ಅವರಂತಹ ದಿಗ್ಗಜರ ವಿರುದ್ಧ ಆಡುವುದು ಒಂದು ಅದ್ಭುತ ಅನುಭವವಾಗಿತ್ತು ಎಂದು ನೋವಾಕ್ ನೆನಪಿಸಿಕೊಳ್ಳುತ್ತಾರೆ. ಸೋತ ಪಂದ್ಯಗಳನ್ನು ನೋಡುವುದು ಅವರಿಗೆ ಇಷ್ಟವಿಲ್ಲದಿದ್ದರೂ, ಕೋಬ್ ಬ್ರ್ಯಾಂಟ್ ಅವರ ಸಲಹೆಯಂತೆ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವರು ಸೋತ ಪಂದ್ಯಗಳ ವಿಮರ್ಶೆ ಮಾಡುತ್ತಾರಂತೆ. ಆದರೆ, ಎದುರಾಳಿ ಗೆದ್ದು ಸಂಭ್ರಮಿಸುವ ಕೊನೆಯ ಪಾಯಿಂಟ್ ಅನ್ನು ಮಾತ್ರ ನಾನು ಎಂದಿಗೂ ನೋಡುವುದಿಲ್ಲ! ಎನ್ನುತ್ತಾರೆ ನಗುತ್ತಾ.
8 ಅತ್ಯಂತ ಕಠಿಣ ಎದುರಾಳಿ ಯಾರು? ‘ಮಾನಸಿಕವಾಗಿ ನನಗೆ ನಾನೇ ಅತ್ಯಂತ ಕಠಿಣ ಎದು ರಾಳಿ. ಆದರೆ ದೈಹಿಕವಾಗಿ ರಾಫೆಲ್ ನಡಾಲ್!’ ಎಂದು ನೋವಾಕ್ ಹೇಳುತ್ತಾರೆ. 2012ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನಡಾಲ್ ವಿರುದ್ಧ ಸುಮಾರು 6 ಗಂಟೆಗಳ ಕಾಲ ನಡೆದ ಸುದೀರ್ಘ ಪಂದ್ಯ ವನ್ನು ಅವರು ನೆನಪಿಸಿಕೊಳ್ಳುತ್ತಾರೆ. ಪಂದ್ಯದ ನಂತರ ಅವರಿಬ್ಬರಿಗೂ ನಿಲ್ಲಲೂ ಆಗದೆ ಕುರ್ಚಿ ತರಿಸಿಕೊಳ್ಳ ಬೇಕಾಯಿತಂತೆ. ನೋವಾಕ್ ಅವರ ಸಾಕ್ಸ್ ಪೂರ್ತಿ ರಕ್ತದಿಂದ ಒದ್ದೆಯಾಗಿದ್ದರೂ, ಆಡುವ ಭರದಲ್ಲಿ ಅವರಿಗೆ ಅದು ಗೊತ್ತೇ ಆಗಿರಲಿಲ್ಲವಂತೆ!
9 ಮುಂದಿನ ಗುರಿ: ‘ Sila ’ ಮತ್ತು "Regenesis Pod’ ಟೆನಿಸ್ ಆಚೆಗೂ ಅವರಿಗೆ ಆರೋಗ್ಯ ಮತ್ತು ವೆಲ್ನೆಸ್ ಬಗ್ಗೆ ಅಪಾರ ಆಸಕ್ತಿಯಿದೆ. ಈಗ ಅವರು ತಮ್ಮ ಸ್ನೇಹಿತ ಮಾರ್ಕ್ ಜೊತೆ ಸೇರಿ Sila ಎಂಬ ವೆಲ್ನೆಸ್ ಬ್ರ್ಯಾಂಡ್ ಶುರು ಮಾಡಿದ್ದಾರೆ. ಇದರ ಜೊತೆಗೆ, ವಿಮಾನ ನಿಲ್ದಾಣಗಳು ಮತ್ತು ಕಾರ್ಪೊ ರೇಟ್ ಕಚೇರಿಗಳಿಗಾಗಿ ‘ Regenesis Pod’ ಎಂಬ ವಿಶೇಷ ಕ್ಯಾಪ್ಸುಲ್ ಅನ್ನು ಅಭಿವೃದ್ಧಿಪಡಿಸುತ್ತಿ ದ್ದಾರೆ. ಇದರಲ್ಲಿ 15-20 ನಿಮಿಷ ಮಲಗಿದರೆ, ದೇಹ ಮತ್ತು ಮನಸ್ಸು ಸಂಪೂರ್ಣ ರೀಚಾರ್ಜ್ ಆಗುತ್ತದಂತೆ!
10 ಬೆಸ್ಟ್ ಮತ್ತು ವರ್ಸ್ಟ್ ಅತ್ಯುತ್ತಮ ಕ್ಷಣ 37ನೇ ವಯಸ್ಸಿನಲ್ಲಿ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶಕ್ಕಾಗಿ ಚಿನ್ನದ ಪದಕ ಗೆದ್ದದ್ದು. ಇದು ಅವರಿಗೆ ವಿಂಬಲ್ಡನ್ ಗೆದ್ದಿದ್ದ ಕ್ಕಿಂತಲೂ ಹೆಚ್ಚಿನ ಖುಷಿ ಕೊಟ್ಟಿತಂತೆ.
ಅತ್ಯಂತ ಕೆಟ್ಟ ಕ್ಷಣ: 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಡೆಲ್ ಪೊಟ್ರೊ ವಿರುದ್ಧ ಸೋತದ್ದು. ಆಗ ಇಡೀ ಭೂಮಿಯೇ ಕುಸಿದು ಹೋದಂತೆ ಅನ್ನಿಸಿತ್ತಂತೆ. ನೀವೂ ಬಿಡುವು ಮಾಡಿಕೊಂಡು ಈ ಸಂದರ್ಶನ ಒಮ್ಮೆ ನೋಡಿ, ಖಂಡಿತ ನಿಮ್ಮ ಆಲೋಚನಾ ಲಹರಿ ಬದಲಾಗು ತ್ತದೆ!
ಸೊಕೊವಿಚ್ ಅವರ ಕೆಲವು ಹೇಳಿಕೆಗಳು
ಅತ್ಯುತ್ತಮ ಸಲಹೆ: ನಿನ್ನೆಯಿಂದ ಕಲಿ, ವರ್ತಮಾನದಲ್ಲಿ ಜೀವಿಸು, ಭವಿಷ್ಯಕ್ಕಾಗಿ ಕೆಲಸ ಮಾಡು.
ಅತ್ಯಂತ ಕೆಟ್ಟ ಸಲಹೆ: ಯಾರಾದರೂ ನಿಮಗೆ ಒಳ್ಳೆಯದು ಮಾಡಿದರೆ 10 ಪಟ್ಟು ಹೆಚ್ಚು ಒಳ್ಳೆಯದು ಮಾಡಿ, ಕೆಟ್ಟದ್ದು ಮಾಡಿದರೆ 10 ಪಟ್ಟು ಹೆಚ್ಚು ಕೆಟ್ಟದ್ದು ಮಾಡಿ. (ಇದರ ಮೊದಲಾರ್ಧ ಒಳ್ಳೆಯದು, ಆದರೆ ದ್ವಿತೀಯಾರ್ಧ ನನಗೆ ಇಷ್ಟವಿಲ್ಲ ಎಂದರು).
ಪತ್ನಿಯ ಬಗ್ಗೆ: 18ನೇ ವಯಸ್ಸಿನಿಂದ ಒಟ್ಟಿಗಿರುವ ಪತ್ನಿ ಜೆಲೆನಾ ನೊವಾಕ್ ಅವರ ಬೆನ್ನೆಲುಬಿ ನಂತೆ! ಕಷ್ಟ-ಸುಖ ಎರಡರಲ್ಲೂ ಜೊತೆಯಾಗಿದ್ದು, ತಮ್ಮನ್ನು ಸವಾಲುಗಳಿಗೆ ಒಡ್ಡಿ, ಬೆಳೆಸುತ್ತಾ ಬಂದಿರುವ ಶಕ್ತಿ.
ಪ್ರಪಂಚಕ್ಕೆ ಒಂದು ನಿಯಮ ತರುವುದಾದರೆ: ಪ್ರಕೃತಿಯನ್ನು ನಾಶ ಮಾಡುವವರಿಗೆ, ಕಸ ಎಸೆಯು ವವರಿಗೆ ಕಠಿಣ ಶಿಕ್ಷೆ. ಹಾಗೂ, ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬರಿಗೂ ನಗುತ್ತಾ ‘ಹಲೋ’ ಹೇಳುವುದನ್ನು ಕಡ್ಡಾಯ ಮಾಡುವುದು. ಇದರಿಂದ ಮನುಷ್ಯರ ನಡುವೆ ಪ್ರೀತಿ, ಸಹಾನುಭೂತಿ ಹೆಚ್ಚುತ್ತದೆ.