ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುಗಾದಿಯ ದಿನ ನಿಷ್ಕರ್ಷೆ

ಭೂಮಿಯಲ್ಲಿ ನಿಂತು ನಾವು ನೋಡುವುದರಿಂದ ಭಾರತೀಯ ಪಂಚಾಂಗಕ್ಕೆ ಸೂರ್ಯನ ಚಲನೆ (ಇದು ವಾಸ್ತವದಲ್ಲಿ ಭೂಮಿಯ ಚಲನೆ ) ಮತ್ತು ಚಂದ್ರನ ಚಲನೆ ಎರಡೂ ಕೂಡ ಆಧಾರ ಬಿಂದುಗಳು. ಸೌರ ವರ್ಷದಲ್ಲಿ 365.26 ದಿನಗಳಿದ್ದರೆ ಚಾಂದ್ರ ವರ್ಷದಲ್ಲಿ 354.10 ದಿನಗಳಿವೆ. ಈ ವ್ಯತ್ಯಾಸ ಹಬ್ಬಗಳ ವ್ಯತ್ಯಾಸಕ್ಕೆ ಕೂಡ ಕಾರಣವಾಗುತ್ತದೆ.

ಯುಗಾದಿಯ ದಿನ ನಿಷ್ಕರ್ಷೆ

Profile Ashok Nayak Mar 31, 2025 12:09 PM

ಭಾರತೀಯ ಹಬ್ಬಗಳು ಏಕೆ ಗ್ರಿಗೋರಿಯನ್ ಕ್ಯಾಲೆಂಡರ್ ಪ್ರಕಾರ, ನಿರ್ದಿಷ್ಟ ದಿನಗಳಂದೇ ಬರು ವುದಿಲ್ಲ ಎನ್ನುವುದು ಕುತೂಹಲಕರ ಪ್ರಶ್ನೆ. ಇದಕ್ಕೆ ಉತ್ತರ ಸಿಕ್ಕಲು ನಮ್ಮ ಹಬ್ಬಗಳ ಲೆಕ್ಕಾಚಾರದ ಕ್ರಮವನ್ನು ಅರಿಯಬೇಕು. ಭಾರತೀಯ ಹಬ್ಬಗಳ ಲೆಕ್ಕಾಚಾರಕ್ಕೆ ನಾಲ್ಕು ಬಿಂದುಗಳು ಮುಖ್ಯವಾದವು. ಮಾರ್ಚಿ 21ರ ವಸಂತ ವಿಷವ, ಜೂನ್ ದಕ್ಷಿಣ ವಿಷವ, ಸೆಪ್ಟಂಬರ್ 22ರ ಶರದ್ ವಿಷವ ಮತ್ತು ಡಿಸಂಬರ್ 22 ಉತ್ತರ ವಿಷವ ಇವು ಸೂರ್ಯನ ಚಲನೆಯ ಕೇಂದ್ರ ಬಿಂದುಗಳು. ಇದಕ್ಕೆ ಪೂರಕವಾಗಿ ಚಂದ್ರನ ಚಲನೆ ಎಲ್ಲಿದೆ ಎನ್ನುವುದನ್ನು ಗುರುತಿಸಿ ಭಾರತೀಯ ಹಬ್ಬಗಳನ್ನು ಲೆಕ್ಕ ಹಾಕಲಾಗುತ್ತದೆ.

ಚಾಂದ್ರಮಾನ ಹಬ್ಬಗಳು ಸೂರ್ಯನ ಚಲನೆಯನ್ನೇ ಮುಖ್ಯವಾಗಿರಿಸಿದ ಗ್ರಿಗೋರಿಯನ್ ಕ್ಯಾಲೆಂ ಡರ್ ನೊಂದಿಗೆ ತುಲನೆ ಮಾಡಿದಾಗ ವ್ಯತ್ಯಾಸ ಹೊಂದಲು ಭೌತಿಕ ಕಾರಣ ಮುಖ್ಯವಾಗಿದೆ. ಚಂದ್ರ ಭೂಮಿಯನ್ನು ಸುತ್ತುತ್ತಾನೆ, ಭೂಮಿ ಸೂರ್ಯನನ್ನು ಸುತ್ತುತ್ತದೆ ಅಷ್ಟೇ ಅಲ್ಲ ಭೂಮಿಯೂ ಕೂಡ ತನ್ನನ್ನು ತಾನೇ ಸುತ್ತಿಕೊಳ್ಳುತ್ತದೆ. ಇದು ಒಂದು ರೀತಿಯ ಸಂಕೀರ್ಣ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Sandhya Hegde Column: ಪಾದುಕಾ ಪುರಾಣ !

ಭೂಮಿಯಲ್ಲಿ ನಿಂತು ನಾವು ನೋಡುವುದರಿಂದ ಭಾರತೀಯ ಪಂಚಾಂಗಕ್ಕೆ ಸೂರ್ಯನ ಚಲನೆ (ಇದು ವಾಸ್ತವದಲ್ಲಿ ಭೂಮಿಯ ಚಲನೆ ) ಮತ್ತು ಚಂದ್ರನ ಚಲನೆ ಎರಡೂ ಕೂಡ ಆಧಾರ ಬಿಂದು ಗಳು. ಸೌರವರ್ಷದಲ್ಲಿ 365.26 ದಿನಗಳಿದ್ದರೆ ಚಾಂದ್ರ ವರ್ಷದಲ್ಲಿ 354.10 ದಿನಗಳಿವೆ. ಈ ವ್ಯತ್ಯಾಸ ಹಬ್ಬಗಳ ವ್ಯತ್ಯಾಸಕ್ಕೆ ಕೂಡ ಕಾರಣವಾಗುತ್ತದೆ.

ಭಾರತೀಯ ಪಂಚಾಗ ಗಣಿತ ಪದ್ಧತಿಯು, ವೈಜ್ಞಾನಿಕವಾಗಿ ಈ ವ್ಯತ್ಯಾಸವನ್ನು ಸರಿದೂಗಿಸುತ್ತಾ ಬಂದಿದೆ. ಒಂದು ಚಾಂದ್ರ ಮಾಸ ಎಂದು ಕರೆಯಲು ಒಂದು ಹುಣ್ಣಿಮೆ ಮತ್ತು ಒಂದು ಅಮಾವಾ ಸ್ಯೆಯ ಜೊತೆಗೆ ಒಂದು ಸಂಕ್ರಮಣ ಕೂಡ ಬರಬೇಕು. ಯಾವ ಮಾಸದಲ್ಲಿ ಸಂಕ್ರಮಣ ಬರುವು ದಿಲ್ಲವೋ ಅದನ್ನು ಅಧಿಕ ಮಾಸ ಎಂದು ಕರೆಯಲಾಗುತ್ತದೆ. ಅಂದರೆ ಚಂದ್ರನ ಗಣನೆ ಸೂರ್ಯನ ಗಣನೆಗಿಂತ ಮುಂದೆ ಹೋಗಿದೆ ಎಂದು ಅರ್ಥ. ಕೂಡಲೇ ಒಂದು ತಿಂಗಳು ಸೇರಿಸುವ ಮೂಲಕ ಅದನ್ನು ಸರಿದೂಗಿಸಲಾಗುತ್ತದೆ.

ಕ್ಷಯ ಮಾಸ

ಆಕಸ್ಮಾತ್ ಒಂದೇ ಚಾಂದ್ರಮಾಸದಲ್ಲಿ ಎರಡು ಸಂಕ್ರಮಣ ಬಂದು ಬಿಟ್ಟರೆ ಅದನ್ನು ಕ್ಷಯ ಮಾಸ ಎಂದು ಕರೆದು ಲೆಕ್ಕಾಚಾರದಿಂದ ಹೊರಗಿಡಲಾಗುತ್ತದೆ. ಇದರಿಂದ ಪ್ರತಿ ಹಬ್ಬಕ್ಕೂ ಒಂದು ಮಾಪನ ಕೂಡ ರೂಪುಗೊಂಡಿದೆ. ಯುಗಾದಿಯು ಯಾವಾಗಲೂ ಮಾರ್ಚಿ 19ರಿಂದ ಏಪ್ರಿಲ್ 19ರೊಳಗೆ ಬರುತ್ತದೆ. ಸೂರ್ಯನ ಚಲನೆ ಮಾತ್ರ ಲೆಕ್ಕ ಹಾಗುವ ಸೌರಮಾನದಲ್ಲಿ ಹಬ್ಬಗಳು ನಿರ್ದಿಷ್ಟ ದಿನಗಳಂದೇ ಬರುತ್ತದೆ.

ಸೌರ ಯುಗಾದಿ ಏಪ್ರಿಲ್ 14ರಂದೇ ಎಲ್ಲಾ ವರ್ಷವೂ ಬರುತ್ತದೆ. ಸೌರಮಾನದಲ್ಲಿ ಕೂಡ ಅಧಿಕ ವಿದೆ. ಆದರೆ ಫೆಬ್ರವರಿಗೆ ಒಂದು ದಿನ ಸೇರಿಸುವಂತೆ ನಾಲ್ಕು ವರ್ಷಗಳಿಗೆ ಒಮ್ಮೆ ಸೂರ್ಯನ ಚಲನೆ ಅನುಸರಿಸಿ ಒಂದು ದಿನ ಸೇರಿಸಿ ಅದನ್ನು ಸರಿದೂಗಿಸಲಾಗುತ್ತದೆ. ಆ ಸೌರ ಮಾಸ ಅಧಿಕವಾಗುತ್ತದೆ. ಈ ಲೆಕ್ಕಾಚಾರ ಬದಲಾವಣೆ ಮಾಡುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಲೇ ಬಂದಿವೆ.

ನಮ್ಮಲ್ಲಿ ಈಗ ಆರ್ಯಭಟೀಯ, ವಾಕ್ಯ, ದೃಗ್ಗಣಿತ, ನವೀನ ದೃಗ್ಗಣಿತ ಹೀಗೆ ನಾಲ್ಕು ಪ್ರಮುಖ ಪಂಚಾಂಗದ ಲೆಕ್ಕಾಚಾರಗಳಿವೆ. ಇವೆಲ್ಲವೂ ಒಂದಲ್ಲ ಒಂದು ರೀತಿ ಸುಧಾರಣೆಯ ಪ್ರಯತ್ನಗಳೇ.

ಸರಕಾರದ ಸಮಿತಿ

1977ರಲ್ಲಿ ಭಾರತ ಸರ್ಕಾರವು ಪಂಚಾಗದ ಸುಧಾರಣೆಗೆ ಒಂದು ತಜ್ಞರ ಸಮಿತಿ ರೂಪಿಸಿತು. ಅದರ ವರದಿಯಂತೆ 1979ರಲ್ಲಿ ರಾಷ್ಟ್ರೀಯ ಪಂಚಾಗವು ಜಾರಿಗೆ ಬಂದಿತು. ಇದು ಎಲ್ಲಾ ಪಂಚಾಗದ ಸೂಕ್ಷ್ಮಗಳನ್ನು ಗಣನೆಗೆ ತೆಗೆದುಕೊಂಡ ಲೆಕ್ಕಾಚಾರ. ಇದರ ಪ್ರಕಾರ ಯುಗಾದಿ ಯಾವಾಗಲೂ ಮಾರ್ಚಿ 21ರಂದೇ ಬರುತ್ತದೆ. ಆದರೆ ಯಾರೂ ಇದನ್ನು ಅನುಸರಿಸುತ್ತಿಲ್ಲ. ಇದಲ್ಲದೆ ನಮ್ಮ ಪಂಚಾಂಗವನ್ನು ಗಮನಿಸಿದರೆ ನಿಮಗೆ ಕಲಿ ಯುಗಾದಿ, ದ್ವಾಪರ ಯುಗಾದಿ ಮತ್ತು ತ್ರೇತಾ ಯುಗಾದಿಗಳೂ ಸಿಕ್ಕುತ್ತವೆ. ಇವೆಲ್ಲವೂ ಒಂದಾನೊಂದು ಕಾಲದಲ್ಲಿ ಯುಗಾದಿಯ ಪಟ್ಟ ಅಲಂಕರಿ ಸಿದವೇ. ಸೂರ್ಯ, ಚಂದ್ರರ ಚಲನೆಯಲ್ಲಿನ ಬದಲಾವಣೆ ಯಿಂದ ಅವು ಈಗ ಪದಚ್ಯುತವಾಗಿವೆ. ಈಗ ಇದರ ಸಾಂಸ್ಕೃತಿಕ ಮಹತ್ವ ಇಲ್ಲದಿದ್ದರೂ ಪಂಚಾಂಗ ರಚನೆಯ ಇತಿಹಾಸ ತಿಳಿಯಲು ಅವುಗಳು ಬಹಳ ಮಹತ್ವದ ಬಿಂದುಗಳು.

ವಸಂತನ ಆಗಮನ

ಇಲ್ಲೊಂದು ಮುಖ್ಯವಾದ ಪ್ರಶ್ನೆ ಇದೆ. ಯುಗಾದಿ ಎಂದರೆ ವಸಂತನ ಆಗಮನವಲ್ಲವೆ? ಅದೊಂದು ಪ್ರಾಕೃತಿಕ ವಿದ್ಯಮಾನ. ಇಷ್ಟೊಂದು ಯುಗಾದಿಗಳ ನಡುವೆ ಪ್ರಕೃತಿಗೆ ಈ ವ್ಯತ್ಯಾಸ ಹೇಗೆ ತಿಳಿಯು ತ್ತದೆ. ಇದಕ್ಕೆ ಉತ್ತರ ಕೂಡ ಸರಳವಾಗಿದೆ. ನಮ್ಮ ಎಲ್ಲಾ ಯುಗಾದಿಗಳೂ ಆಗಲೇ ಹೇಳಿದ ಹಾಗೆ ಮಾರ್ಚಿ 19ರಿಂದ ಏಪ್ರಿಲ್ 19ರ ನಡುವೆ ಬರುತ್ತವೆ. ವಸಂತನ ಆಗಮನ ಎಂದರೇನು? ಹೊಸ ಚಿಗುರೊಡೆಯುವ ಸಂಭ್ರಮದ ಕಾಲ.

ಬೋಳಾಗಿದ್ದ ಮರಗಳೆಲ್ಲಾ ಹೊಸ ಚಿಗುರೆಲೆಯ ಉಡುಗೆ ತೊಟ್ಟು ನಲಿಯುವ ಕಾಲ. ಇದು ಒಂದು ರಾತ್ರಿಯಲ್ಲಿ ನಡೆಯುವ ಜಾದೂ ಅಲ್ಲ. ಕನಿಷ್ಟ ತಿಂಗಳ ಅವಧಿಯಲ್ಲಿ ನಡೆಯುವ ಪ್ರಕ್ರಿಯೆ. ಈ ಬದಲಾವಣೆಗೆ ಕಾರಣ ಭೂಮಿ ಹಗಲು-ರಾತ್ರಿ ಸಮನಾದ ವಸಂತ ವಿಷವತ್ತುವನ್ನು ದಾಟುವುದು. ಇದನ್ನು ಅನುಸರಿಸಿ ಒಂದು ತಿಂಗಳ ಯುಗಾದಿ ಅವಧಿಯನ್ನು ರೂಪಿಸಲಾಗಿದೆ. ಈ ತಿಂಗಳಲ್ಲಿ ಯಾವಾಗ ಯುಗಾದಿ ಎಂದು ನೀವು ಕರೆದರೂ ಪ್ರಕೃತಿಯ ಈ ಸಂಭ್ರಮ ಇದ್ದೇ ಇರುತ್ತದೆ. ವಿಷ ವತ್ತು ಎಂದರೆ ವಾರೆಯಾಗಿ ತಿರುಗುವ ಭೂಮಿಯ ಅಕ್ಷದ ವಿಸ್ತರಣೆ. ಯುಗಾದಿ, ವಸಂತನ ಆಗಮನ ಎಲ್ಲವೂ ಇದನ್ನು ಅನುಸರಿಸಿಯೇ ಸಾಗುತ್ತದೆ.

ಆದರೆ ಇದೂ ಏನು ಶಾಶ್ವತವಲ್ಲ. ಪ್ರತಿ 72 ವರ್ಷಕ್ಕೊಮ್ಮೆ ಭೂಮಿಯ ಅಕ್ಷ ಒಂದು ಡಿಗ್ರಿಯಷ್ಟು ಚಲಿಸುತ್ತದೆ. ಹೀಗೆ ಚಲಿಸಿ 2088ನೆಯ ವರ್ಷಕ್ಕೆ ವಸಂತನ ಆಗಮನ ವ್ಯತ್ಯಾಸವಾಗುತ್ತದೆ. ಆಗ ಯುಗಾದಿಯ ಲೆಕ್ಕಾಚಾರ ಕೂಡ ಬದಲಾಗುತ್ತದೆ. ನಮ್ಮ ಜೀವಿತಾವಧಿಯಲ್ಲಿ ಇಂತಹ ಬದಲಾವಣೆ ನಡೆಯಲು ಸಾಧ್ಯವಿಲ್ಲವಾದ್ದರಿಂದ ನಮ್ಮ ಮಟ್ಟಿಗೆ ಯುಗಾದಿಯ ಈಗಿನ ಲೆಕ್ಕಾಚಾರ ಸುರಕ್ಷಿತವೇ!