ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಎಸ್‌ʼಎಸ್‌ ನೂರು, ಹಣತೆಗಳ ತೇರು

ಸೃಷ್ಟಿಯ ರಚನೆಯೇ ಪ್ರೀತಿಯ ಅಸ್ತಿವಾರದ ಮೇಲೆ ನಿಂತಿದೆ. ಮಾನವೀಯ ಪ್ರೇಮದ ಆದರ್ಶ ವನ್ನು ಎತ್ತಿ ಹಿಡಿದು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯಕ್ಕೆ ಜಿಎಸ್‌ಎಸ್ ಯೋಗದಾನ, ಅವರ ಸಾಹಿತ್ಯದ ಸ್ವರೂಪ, ಕೊಡುಗೆಯ ಸಶಕ್ತ ಅನಾವರಣ, ಅವರ ಸಾಹಿತ್ಯದ ಸಮಗ್ರ ಮುಖಗಳ ಅವಲೋಕನ, ಸೂಕ್ಷ್ಮ ತಲ್ಲಣ, ವೈರುಧ್ಯಗಳ ವಿಶ್ಲೇಷಣೆ ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ ಅವರ ‘ಹಣತೆಯ ಹಾಡು’ಕೃತಿಯಲ್ಲಿ ನೆಲೆಪಡೆದಿದೆ.

ಪ್ರೊ.ಜಿ.ಎನ್.ಉಪಾಧ್ಯ, ಮುಂಬೈ.

ಕನ್ನಡದ ಶ್ರೇಷ್ಠ ಕವಿ, ವಿಮರ್ಶಕರಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪ ಅವರೂ ಒಬ್ಬರು. ಹೊಸಗನ್ನಡ ಸಾಹಿತ್ಯದಲ್ಲಿ ಅವರದು ವಿಶಿಷ್ಟ ವ್ಯಕ್ತಿತ್ವ. ನಾಡಿನೆಲ್ಲೆಡೆ ಅವರ ಜನ್ಮ ಶತಮಾನೋತ್ಸವ ಸಂಭ್ರಮದ ಕಾರ್ಯಕ್ರಮಗಳು ನಡೆಯುತ್ತಿವೆ. ಆ ನಿಮಿತ್ತ ಅವರ ಕುರಿತು ಬಂದ ಒಂದು ಮಹತ್ವದ ಕೃತಿಯ ಕುರಿತ ಲೇಖನ, ಅವಲೋಕನ ಇಲ್ಲಿದೆ.

‘ಹಾಡು ಹಳೆಯದಾದರೇನು ಭಾವ ನವನವೀನ ಎದೆಯ ಭಾವ ಹೊಮ್ಮುವುದಕ್ಕೆ ಭಾಷೆ ಒಂದು ಸಾಧನ ’ಎಂದು ನಂಬಿ ನೆಚ್ಚಿ ವಿಪುಲವಾಗಿ ಕಾವ್ಯ ಕೃಷಿಗೈದು ಜೀವನದ ಚೆಲು ವನ್ನು ಹೆಚ್ಚಿಸಲು ಸಂತತವಾಗಿ ಶ್ರಮಿಸಿದವರು ಜಿ.ಎಸ್.ಶಿವರುದ್ರಪ್ಪನವರು. (ಜಿಎಸ್‌ಎಸ್) ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?’ ‘ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ, ಭಯ ಸಂಶಯದೊಳು ಕಂದಿದ ಕಣ್ಣೊಳು ನಾಳಿನ ಕನಸನು ಬೆಳೆಯೋಣ’ ‘ಮತಗಳೆಲ್ಲವು ಪಥಗಳು ಎನ್ನುವ ಹೊಸ ಎಚ್ಚರದೊಳು ಬದುಕೋಣ’ ’ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು’ ಹೀಗೆ ಅರ್ಥಪೂರ್ಣವಾದ ಹಾಡುಗಳ ಮುಖಾಂತರ ನಾಡನ್ನು ಕಟ್ಟಿದವರಲ್ಲಿ ಜನಮನವನ್ನು ತಟ್ಟಿದವರಲ್ಲಿ ಜಿಎಸ್‌ಸ್ ಅವರದು ಎದ್ದು ಕಾಣುವ ಹೆಸರು.

ಅವರು ಸಾಹಿತ್ಯ ರಚನೆಯು ಜೀವನ ಪ್ರೀತಿಯ ಅಭಿವ್ಯಕ್ತಿ ಎಂದು ನಂಬಿ ಬರೆದ ಧೀಮಂತ ಕವಿ, ಚಿಂತಕ. ಪ್ರೀತಿ ಅವರ ಬದುಕನ್ನು ರೂಪಿಸಿರುವ ಜೀವನ ಶ್ರದ್ಧೆಯೂ ಹೌದು, ಅವರ ಕಾವ್ಯದ ತಾತ್ವಿಕ ನೆಲೆಗಟ್ಟೂ ಹೌದು.

ಸೃಷ್ಟಿಯ ರಚನೆಯೇ ಪ್ರೀತಿಯ ಅಸ್ತಿವಾರದ ಮೇಲೆ ನಿಂತಿದೆ. ಮಾನವೀಯ ಪ್ರೇಮದ ಆದರ್ಶವನ್ನು ಎತ್ತಿ ಹಿಡಿದು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗಳ ಬಣ್ಣ ಬನಿಯನ್ನು ಗಾಢಗೊಳಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯಕ್ಕೆ ಜಿಎಸ್‌ಎಸ್ ಯೋಗ ದಾನ, ಅವರ ಸಾಹಿತ್ಯದ ಸ್ವರೂಪ, ಕೊಡುಗೆಯ ಸಶಕ್ತ ಅನಾವರಣ, ಅವರ ಸಾಹಿತ್ಯದ ಸಮಗ್ರ ಮುಖಗಳ ಅವಲೋಕನ, ಸೂಕ್ಷ್ಮ ತಲ್ಲಣ, ವೈರುಧ್ಯಗಳ ವಿಶ್ಲೇಷಣೆ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ‘ಹಣತೆಯ ಹಾಡು’ಕೃತಿಯಲ್ಲಿ ನೆಲೆಪಡೆದಿದೆ.

ಶಿವರುದ್ರಪ್ಪ ಅವರ ಸಾಹಿತ್ಯದ ಮೂಲಸ್ರೋತವನ್ನು ಇಡಿಯಾಗಿ ಆರೈದು ಕೊಟ್ಟಿರುವುದು ಈ ಕೃತಿಯ ಹೆಚ್ಚುಗಾರಿಕೆ. ಇದು ಜಿ.ಎಸ್.ಶಿವರುದ್ರಪ್ಪ ಅವರ ಸಮಗ್ರ ಸಾಹಿತ್ಯವನ್ನು ಅಧ್ಯಯನಕ್ಕೆ ಒಳಗು ಮಾಡಿರುವ ಮಹತ್ವದ ಉಪಕ್ರಮ.

ಇಲ್ಲಿ ನರಹಳ್ಳಿ ಅವರು ಇಡಿಯಾಗಿ ಸಮಗ್ರವಾಗಿ ಶಿವರುದ್ರಪ್ಪ ಅವರ ಸಾಹಿತ್ಯಕ್ಕೆ ಮುಖಾ ಮುಖಿಯಾಗಿದ್ದಾರೆ. ಶಿವರುದ್ರಪ್ಪ ಅವರು ಕವಿಯಾಗಿ, ವಿಮರ್ಶಕರಾಗಿ, ಮೀಮಾಂಸಕ ರಾಗಿ ಮಾತ್ರವಲ್ಲ ಸಂಘಟನೆಯ ಮೂಲಕವೂ ನಮ್ಮ ಸಾಂಸ್ಕೃತಿಕ ಪರಿಸರವನ್ನು ಚಲನಶೀಲವಾಗಿಡಲು, ಜೀವಂತವಾಗಿಡಲು ವಹಿಸಿದ ಪಾತ್ರ ಅತ್ಯಂತ ಮಹತ್ವದ್ದು. ಅವರ ಕನ್ನಡ ಕಟ್ಟುವ ಸುದೀರ್ಘ ಕಾಯಕ ಇಂದಿಗೂ ಮುಖ್ಯವಾಗುತ್ತದೆ ಎಂಬುದನ್ನು ವಿಭಿನ್ನ ನೆಲೆಗಳಲ್ಲಿ ಡಾ.ನರಹಳ್ಳಿ ಅವರು ಗುರುತಿಸಿ ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: Sanjay Gubbi Column: ಚಿರತೆಯ ಅಪರೂಪದ ಬೇಟೆ

ಕಾವ್ಯ ಜೀವನವು ಶಿವರುದ್ರಪ್ಪ ಅವರ ಸಾಹಿತ್ಯಕ ವ್ಯಕ್ತಿತ್ವದ ಪ್ರಮುಖ ವೈಶಿಷ್ಟ್ಯ. 1951ರಲ್ಲಿ ಶಿವರುದ್ರಪ್ಪನವರ ಪ್ರಿಯ ಗುರುಗಳಾದ ತ.ಸು. ಶಾಮರಾಯರು ಆಗ ತಾನೇ ತಾವು ಆರಂಭಿಸಿದ್ದ ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ಯಲ್ಲಿ ಅವರ ಮೊದಲ ಕವನ ಸಂಕಲನ ‘ಸಾಮಗಾನ’ ಪ್ರಕಟಿಸಿದರು. ಈ ಸಂಕಲನಕ್ಕೆ ಕುವೆಂಪು ಅವರು ಮುನ್ನುಡಿ ಬರೆದಿದ್ದಾರೆ. ಅನಂತರ ಆರು ದಶಕಗಳ ಸುದೀರ್ಘ ಸಾಹಿತ್ಯ ಪಯಣದಲ್ಲಿ ಜಿಎಸ್‌ಎಸ್ ಒಟ್ಟು ಹದಿನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅಷ್ಟೇ ಸಂಖ್ಯೆಯ ವಿಮರ್ಶಾ ಕೃತಿಗಳನ್ನೂ ಪ್ರಕಟಿಸಿದ್ದಾರೆ.

ಶಿವರುದ್ರಪ್ಪನವರು ಶ್ರೇಷ್ಠ ಕವಿಯೂ ಹೌದು; ಶ್ರೇಷ್ಠ ವಿಮರ್ಶಕರೂ ಹೌದು. ನಾಲ್ಕು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಇತರ ಬರಹಗಳೂ ಸಾಕಷ್ಟಿವೆ. ಅವರ ಎಲ್ಲ ಬರಹ ಗಳೂ ‘ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಮಾಲೆ’ಯಲ್ಲಿ ಪ್ರಕಟವಾಗಿವೆ. ಅವರ ‘ಸಮಗ್ರ ಕಾವ್ಯ’ವೂ ಸೇರಿದಂತೆ ಶಿವರುದ್ರಪ್ಪನವರ ಹಲವು ಕೃತಿಗಳು ಅನೇಕ ಸಲ ಮರುಮುದ್ರಣ ಗಳನ್ನು ಕಂಡು ಸಹೃದಯರ ಅಪಾರ ಪ್ರೀತಿ-ಗೌರವಕ್ಕೆ ಪಾತ್ರವಾಗಿವೆ.

ಸ್ವಾತಂತ್ರ್ಯೋತರ ಕನ್ನಡ ಸಾಹಿತ್ಯವನ್ನು ರೂಪಿಸಿದ ಪ್ರಮುಖ ಲೇಖಕರಲ್ಲಿ ಶಿವರುದ್ರಪ್ಪ ಅವರೂ ಒಬ್ಬರು. ‘ಸಮಗ್ರ ಓದು’ ನನ್ನ ಪ್ರಮುಖ ಆಸಕ್ತಿ. ಒಬ್ಬ ಲೇಖಕನನ್ನು ಇಡಿಯಾಗಿ ಅಧ್ಯಯನ ಮಾಡಿದಾಗ ಹೊಸ ಬಗೆಯ ಗ್ರಹಿಕೆ ಸಾಧ್ಯ ಎಂಬ ನಂಬುಗೆಯ ಹಿನ್ನೆಲೆಯಲ್ಲಿ ಜಿ.ಎಸ್.ಶಿವರುದ್ರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡಿದ್ದರ ಫಲ ಈ ಕೃತಿ.

ಆರು ದಶಕಗಳ ಕಾಲ ಸಾಹಿತ್ಯಕೃಷಿ ಮಾಡಿರುವ ನಮ್ಮ ಪ್ರಮುಖ ಲೇಖಕರಲ್ಲಿ ಒಬ್ಬರಾಗಿ ರುವ ಜಿ.ಎಸ್.ಶಿವರುದ್ರಪ್ಪನವರ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಿರುವ ಪ್ರಯತ್ನ ಇದೇ ಮೊದಲನೆಯದೆಂದು ನನ್ನ ತಿಳುವಳಿಕೆ. ಅವರಿಗೆ ಅರ್ಪಿಸಿರುವ ಗೌರವ ಗ್ರಂಥಗಳಲ್ಲಿ ಬಿಡಿಬಿಡಿಯಾಗಿ ಈ ಪ್ರಯತ್ನವಿದೆ ಅಷ್ಟೆ. ಇದು ಜಿಎಸ್‌ಎಸ್ ಅವರ ಶತಮಾನೋತ್ಸವ ವರ್ಷ. ಹೀಗಾಗಿ ಕನ್ನಡ ಸಹೃದಯರಿಗೆ ಶತಮಾನೋತ್ಸವದ ಹೊತ್ತಿಗೆ ಜಿಎಸ್‌ಎಸ್ ಅವರ ಸಾಹಿತ್ಯ ಸಾಧನೆಯ ಪುನರಾವಲೋಕನ ಮಾಡಲು ಈ ಕೃತಿ ಕೈದೀವಿಗೆಯಂತಿದೆ.

ಸಾಹಿತ್ಯ : ಜೀವನ ಪ್ರೀತಿಯ ವಿಸ್ತರಣೆ

‘ಸಾಹಿತ್ಯವೆನ್ನುವುದು ಮೂಲಭೂತವಾಗಿ ಬದುಕನ್ನು ಅಂದಂದಿನ ಲೇಖಕರು ಗ್ರಹಿಸುವ ಹಾಗೂ ವ್ಯಾಖ್ಯಾನಿಸುವುದರ ಮೂಲಕ ಸಾಧಿಸಿದ ಜೀವನಪ್ರೀತಿಯ ವಿಸ್ತರಣೆ ಎಂದು ನಾನು ಭಾವಿಸಿದ್ದೇನೆ. ನಾನಾ ವಿಚ್ಛಿದ್ರಕಾರಕವಾದ ಶಕ್ತಿಗಳ ನಡುವೆ ಸಾಹಿತ್ಯ ನಮ್ಮನ್ನು ಕೂಡಿಸದೆ ಹೋದರೆ ಮತ್ತೆ ಇನ್ನಾವುದು ತಾನೇ ನಮ್ಮನ್ನ ಕೂಡಿಸೀತು? ಸಾಹಿತ್ಯ ಜೀವನ ಪ್ರೀತಿಯ ವಿಸ್ತರಣೆ ಮಾತ್ರವಲ್ಲ; ಮಾನವೀಯ ಸಂಬಂಧಗಳ ವಿಸ್ತರಣೆ ಕೂಡಾ’ - ಇದು ಜಿ. ಎಸ್.ಶಿವರುದ್ರಪ್ಪ ಅವರ ದೃಢವಾದ ನಂಬಿಕೆ.

Screenshot_10

ಹಣತೆ ಕಿರಿದಾದರೇನು? ಬೆಳಕ ಬೀರುವ ಶಕ್ತಿ ಹಿರಿದಲ್ಲವೇನು? ಇದು ಅವರ ಕಾವ್ಯದ ಮೂಲದ್ರವ್ಯ. ‘ಅವರ ಕಾವ್ಯವೆಲ್ಲ ಹಣತೆಯ ಹಾಡು’ ಎಂಬ ಹೊಸ ಒಳನೋಟ ಈ ಕೃತಿಯಲ್ಲಿ ಚೆನ್ನಾಗಿ ಮೈಪಡಿದಿದೆ. ‘ಹಣತೆ’ ಶಿವರುದ್ರಪ್ಪನವರ ಕಾವ್ಯದ ಪ್ರಧಾನ ರೂಪಕ ಗಳಲ್ಲಿ ಒಂದು. ಹೀಗಾಗಿ ಇದನ್ನು ‘ಹಣತೆಯ ಹಾಡು’ ಎಂದು ಕರೆದಿದ್ದೇನೆ. ಇದೇ ಹೆಸರಿನ ಪು.ತಿ.ನ. ಅವರ ಕವನ ಸಂಕಲನವೊಂದು ಇರುವುದು ನನ್ನ ಗಮನದಲ್ಲಿದೆ ಯಾದರೂ ಶಿವರುದ್ರಪ್ಪನವರ ಸಾಹಿತ್ಯಾಧ್ಯಯನಕ್ಕೆ ’ಹಣತೆಯ ಹಾಡು’ ಒಪ್ಪುತ್ತದೆ ಯೆನ್ನಿಸಿದ್ದರಿಂದ ಹಾಗೇ ಕರೆದಿರುವೆ ಎಂಬುದಾಗಿ ತಮ್ಮ ಮುಮ್ಮಾತಿನಲ್ಲಿ ನರಹಳ್ಳಿ ಅವರು ಹೇಳಿಕೊಂಡಿ ದ್ದಾರೆ.

‘ಹಣತೆ’- ಶಿವರುದ್ರಪ್ಪನವರಿಗೆ ಜಡ ಸಮಾಜದಲ್ಲಿ ಚಲನಶೀಲತೆಯನ್ನು ತರುವ ಸೃಜನ ಶೀಲ ಶಕ್ತಿಯ ಪ್ರತೀಕ. ವರ್ತಮಾನದ ತಲ್ಲಣಗಳನ್ನು ಎದುರಿಸಲು ಶಕ್ತಿಯಿಂದ, ದಟ್ಟ ಜೀವನ ಪ್ರೀತಿಯಿಂದ. ಹೀಗಾಗಿಯೇ ಇಲ್ಲಿ ‘ಬೆಳಕು’ ಜೀವನಪ್ರೀತಿ ನೀಡುವ ಅಂತಃಸತ್ವ. ಇದು ಸಾಧ್ಯವಾಗುವುದು ಬದುಕಿನ ಬಗೆಗಿನ ಗಾಢ ಶ್ರದ್ಧೆಯಾಗಿ ರೂಪಾಂತರವಾಗುತ್ತದೆ.

ಸುತ್ತಲೂ ಕವಿಯುವ ಕತ್ತಲೆಯೊಳಗೆ/ ಪ್ರೀತಿಯ ಹಣತೆಯ ಹಚ್ಚೋಣ / ಬಿರುಗಾಳಿಗೆ ಹೊಯ್ದಾಡುವ ಹಡಗನು /ಎಚ್ಚರದಲ್ಲಿ ಮುನ್ನಡೆಸೋಣ’ ಶಿವರುದ್ರಪ್ಪನವರು ಸಾಹಿತ್ಯ ರಚನೆ ಜೀವನಪ್ರೀತಿಯ ಅಭಿವ್ಯಕ್ತಿ ಎಂದು ನಂಬಿ ಬರೆಯುವ ಕವಿ. ‘ಪ್ರೀತಿ’ ಅವರ ಬದುಕನ್ನು ರೂಪಿಸಿರುವ ಜೀವನಶ್ರದ್ಧೆಯೂ ಹೌದು. ಅದು ಅವರ ಕಾವ್ಯದ ತಾತ್ವಿಕ ನೆಲೆಗಟ್ಟೂ ಹೌದು.

ಪ್ರೀತಿ ಸೃಜನಶೀಲಶಕ್ತಿ!

‘ಪ್ರೀತಿ ಇಲ್ಲದ ಮೇಲೆ-ಹೂವು ಅರಳೀತು ಹೇಗೆ? ಮೋಡ ಕಟ್ಟಿತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ?’ ಪ್ರೀತಿ ಸೃಜನಶೀಲ ಶಕ್ತಿಯೆಂಬ ನಂಬಿಕೆಯ ನೆಲೆಯಲ್ಲಿ ಈ ಕವಿತೆ ಆರಂಭವಾಗುತ್ತದೆ. ನೆಲ-ಮುಗಿಲಿನ ಮಿಲನ, ಪ್ರಕೃತಿ-ಪುರುಷರ ಸಮಾಗಮ ಪ್ರೀತಿಯ ಬೆಚ್ಚನೆಯ ಕಾವಿನಲ್ಲಿ ಹೊಸ ಹುಟ್ಟಿಗೆ ಕಾರಣವಾಗುತ್ತದೆ. ಸೃಷ್ಟಿಯ ಈ ಪ್ರೀತಿಯೇ ಸಾಹಿತ್ಯ ಸೃಷ್ಟಿಗೂ ಕಾರಣ. ಹೀಗೆ ಶಿವರುದ್ರಪ್ಪ ಅವರ ಕಾವ್ಯದ ಗಟ್ಟಿತನ ವನ್ನು ಇಲ್ಲಿ ವರೆಗೆ ಹಚ್ಚಲಾಗಿದೆ.

ಸೃಷ್ಟಿಯ ತಾತ್ವಿಕ ಮೀಮಾಂಸೆ ಇಲ್ಲಿ ಕಾವ್ಯಮೀಮಾಂಸೆಯಾಗಿ ರೂಪಾಂತರಗೊಳ್ಳುತ್ತದೆ. ಮಾತಿಗೆ ಮಾತು ಕೂಡುವುದು, ಅರ್ಥ ಹುಟ್ಟುವುದು-ಸೃಷ್ಟಿಯ ರಹಸ್ಯವನ್ನು ಸೂಚಿಸು ವಂಥವು. ಜೊತೆಗಿದ್ದ ಮಾತ್ರಕ್ಕೆ ಜೀವ ಸೃಷ್ಟಿಯಾಗುವುದಿಲ್ಲ. ಜೀವಸೃಷ್ಟಿಗೆ ಪ್ರೀತಿಯ ಮಿಲನದ ಅಗತ್ಯವಿದೆ.

ಶಿವರುದ್ರಪ್ಪನವರ ಜೀವನಪ್ರೀತಿಯ ಮೀಮಾಂಸೆ ಸಿದ್ಧಸೂತ್ರವಲ್ಲ, ಮಥಿಸಿ ಬಂದ ಜೀವನ ತತ್ವ. ಅವರ ನಿಲುವಿನ ಹಿಂದೆ ಮಾನವ ಚರಿತ್ರೆಯ ಅರಿವಿದೆ, ವರ್ತಮಾನದ ಸಮಸ್ಯೆಗಳ ಸಂಕಟವಿದೆ. ಬದುಕಿನ ಈ ಎಲ್ಲ ದಾರುಣತೆಯ ನಡುವೆಯೂ ನಮ್ಮ ಮನಸ್ಸು ಮರು ಭೂಮಿಯಾಗದ ಹಾಗೆ ಆರ್ದ್ರವಾಗಿಡುವ ಶಿವರುದ್ರಪ್ಪನವರ ಕಾವ್ಯ ನಮ್ಮ ಕಾಲದ ‘ಬಾಳಗೀತೆ’ಎಂಬಲ್ಲಿ ಕವಿ ಪ್ರತಿಭೆಯೂ ವಿಮರ್ಶನ ಪ್ರಜ್ಞೆಯೂ ಮಿಂಚಿದೆ.

ಸಾಹಿತ್ಯ ಪರ್ಯಾಯ ಸಾಧ್ಯತೆ ಜಿಎಸ್‌ಎಸ್ ಅವರದು ಜನಕಾವ್ಯ ದೃಷ್ಟಿ. ಮನುಷ್ಯ ಕೇಂದ್ರಿತ ಚಿಂತನೆ ಅಲ್ಲಿ ಎದ್ದು ಕಾಣುವ ಸಂಗತಿ. ಈಗ ಮೂಲ ಜಲ ಬಗ್ಗಡವಾಗಿ ಕೆಸರು/ ಒಳಗೂ ಹೊರಗು; ಕೊಳೆತು ನಾರಿವೆ ತೀರ್ಥ/ದೇವಾಲಯದ ಮೂರ್ತಿಗಳು ಭಗ್ನ; ತಕ್ಕಡಿ ಯೆಲ್ಲ ತಲೆ ಕೆಳಗು/ತಿನ್ನುವನ್ನದ ತುಂಬ ಕಲ್ಲು; ಎಲ್ಲೆಂದರಲ್ಲಿ ಬೆಳೆದು ದಂಡ ಕಾರಣ್ಯ/ ಹದ್ದು-ನರಿ-ತೋಳ ರಾಕ್ಷಸ ರಾಜ್ಯ(ಹೊಸ ಹುಟ್ಟು)- ಸ್ವಾತಂತ್ರೋತ್ತರ ಭಾರತದ ದಾರುಣ ಪರಿಸ್ಥಿತಿಯನ್ನು ಕವಿ ಇಲ್ಲಿ ಅತ್ಯಂತ ಧ್ವನಿಪೂರ್ಣವಾಗಿ ಹೇಳುತ್ತಿದ್ದಾರೆ. ನಿರ್ಮಲವಾಗಿದ್ದ ಮೂಲ ಜಲ ಈಗ ಬಗ್ಗಡವಾಗಿ ಒಳಗೂ ಹೊರಗೂ ಕೆಸರು ತುಂಬಿದೆ. ಗಾಂಧೀಜಿಯ ಕನಸಿಗೂ ಈಗಿನ ವಾಸ್ತವಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಸ್ವಾತಂತ್ರ್ಯ ಪೂರ್ವದ ಆದರ್ಶ, ಕನಸುಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡು ಅರ್ಥಹೀನ ವಾಗಿ ಈಗ ವಿಕಾರ ರೂಪ ಪಡೆದಿವೆ, ಅಸಹ್ಯ ಹುಟ್ಟಿಸುತ್ತಿವೆ.

ನಮ್ಮ ಧಾರ್ಮಿಕ ಕೇಂದ್ರಗಳೂ ಹಳಿ ತಪ್ಪಿವೆ. ಪವಿತ್ರವಾದ ತೀರ್ಥ ಈಗ ಕೊಳೆತು ನಾರು ತ್ತಿದೆ. ಎಲ್ಲ ಕ್ಷೇತ್ರಗಳು ಮಲಿನಗೊಂಡವು. ಜನಸಾಮಾನ್ಯರ ಬದುಕು ನರಕವಾಯಿತು. ರಾಮರಾಜ್ಯದ ಕನಸು ಹದ್ದು ನರಿ ತೋಳಗಳ ರಾಕ್ಷಸ ರಾಜ್ಯವಾಗಿ ರೂಪಾಂತರವಾಗಿ ಬಿಟ್ಟಿವೆ. ಇದಕ್ಕೆ ಪರಿಹಾರ ದಾರಿ ಒಂದೇ. ಇರುವುದೆಲ್ಲವನ್ನೂ ಕೊಚ್ಚಿ ಮತ್ತೆ ಕಟ್ಟಬೇಕಾ ಗಿದೆ ಹೊಸ ಜಗತ್ತು.

ಧರ್ಮ ಮತ್ತು ರಾಜಕೀಯ ಇವೆರಡು ಭ್ರಷ್ಟವಾಗಿರುವ ಈ ಸಂದರ್ಭದಲ್ಲಿ ಪರ್ಯಾಯ ಸಾಧ್ಯತೆ ಇರುವುದು ಸಾಹಿತ್ಯ ಸಂಸ್ಕೃತಿಗೆ ಮಾತ್ರ. ಶಿವರುದ್ರಪ್ಪನವರು ಇಲ್ಲಿ ನಮಗೆ ಅದರ ಪ್ರತಿನಿಽಯ ರೀತಿ ಕಾಣಿಸುತ್ತಿದ್ದಾರೆ. ಜನಸಾಮಾನ್ಯರ ಬದುಕಿಗೆ ಸ್ಪಂದಿಸುವ ಅವರ ಬದುಕನ್ನು ಹಸನುಗೊಳಿಸುವ ಹೊಣೆಗಾರಿಕೆ ಸಾಂಸ್ಕೃತಿಕ ಲೋಕಕ್ಕಿದೆ- ಹೀಗೆ ಜಿಎಸ್‌ಎಸ್ ಅವರ ಕಾವ್ಯತತ್ವ ಚಿಂತನೆಯ ಹೊಸ ಹೊಸ ಮುಖಗಳನ್ನು ಇಲ್ಲಿ ಸ್ವಾರಸ್ಯಪೂರ್ಣವಾಗಿ ಅನಾವರಣಗೊಳಿಸಲಾಗಿದೆ.

ಜಿಎಸ್‌ಎಸ್ ಅವರ ಕಾವ್ಯದಲ್ಲಿ ಮುಖ್ಯವಾಗಿ ಎದ್ದು ಕಾಣುವುದು ಪ್ರಸಾದ ಗುಣ. ಅವರದು ಮೂಲತಃ ಭಾವಗೀತಾತ್ಮಕ ಪ್ರತಿಭೆ. ಇಂಥ ಪ್ರತಿಭೆಯ ಮೂಲಸ್ವರೂಪದಲ್ಲಿಯೇ ಮಾಧು ರ್ಯದ ಗುಣವಿರುತ್ತದೆ; ಸಹಿಷ್ಣುತೆಯ ಫಲವಾಗಿ ಮೂಡಿದ ಪ್ರಸನ್ನ ಭಾವವಿರುತ್ತದೆ.

ಜಿಎಸ್‌ಎಸ್ ಅವರ ಕಾವ್ಯದಲ್ಲಿ ಈ ಗುಣಗಳು ಸಹಜವಾಗಿಯೇ ಬೆರೆತು ಹೋಗಿವೆ. ಆದರೆ ಸ್ವಾತಂತ್ರ್ಯೋತ್ತರ ಭಾರತದ ‘ದುಃಸ್ವಪ್ನ’ಗಳನ್ನು ಅವರ ಕಾವ್ಯ ಮಾನವ ಚರಿತ್ರೆಯ ಹಿನ್ನೆಲೆಯಲ್ಲಿ ಹಿಡಿದಿಡಲು ನಡೆಸುವ ಪ್ರಯತ್ನ ಭಾವ ಸಂವಹನದ ನೆಲೆಯಲ್ಲಿ ಮುಖ್ಯ ವಾಗುವಂತೆಯೇ, ಅನೇಕ ಬಗೆಯ ಸಂಘರ್ಷಗಳನ್ನೊಳಗೊಂಡು ನಮ್ಮನ್ನು ತಲ್ಲಣ ಗೊಳಿಸುವ ಶಕ್ತಿಯನ್ನೂ ಪಡೆದಿದೆ. ಜಿಎಸ್‌ಎಸ್ ಅವರ ಕಾವ್ಯದಲ್ಲಿ ಕಾಣಿಸಿಕೊಳ್ಳುವ ಈ ತಲ್ಲಣಗಳ ಬಹುಮುಖೀ ಸ್ವರೂಪವೇ ಅವರನ್ನು ನಮ್ಮ ಕಾಲದ ಮುಖ್ಯ ಕವಿಯನ್ನಾ ಗಿಸಿದೆ.

ತಲ್ಲಣಗಳನ್ನು ಚಿತ್ರಿಸುತ್ತಲೇ ಚರಿತ್ರೆಯಲ್ಲಿ ಚಲನೆಯುಂಟು ಮಾಡುವುದರ ಮೂಲಕ ಹೊಸ ಜಗತ್ತನ್ನು ಕಟ್ಟುವ ಭರವಸೆ ಮೂಡಿಸುವ ಅವರ ಕಾವ್ಯ ವರ್ತಮಾನದ ಎಲ್ಲ ದಾರುಣತೆಗಳ ನಡುವೆಯೂ ನಮ್ಮ ಮನಸ್ಸು ಮರುಭೂಮಿಯಾಗದ ಹಾಗೆ ಆರ್ದ್ರ ವಾಗಿಡುತ್ತದೆ.

ಅನೇಕ ಪ್ರಖರ ಪ್ರತಿಭೆಗಳ ನಡುವೆಯೂ ತಮ್ಮ ವಿಶಿಷ್ಟ ಧ್ವನಿಯನ್ನು ಜತನವಾಗಿ ಕಾಯ್ದು ಕೊಂಡ ಶಿವರುದ್ರಪ್ಪನವರ ಕಾವ್ಯ ತನ್ನ ವಿಶಿಷ್ಟತೆಯಿಂದಲೇ ಕನ್ನಡ ಕಾವ್ಯ ಚರಿತ್ರೆಯಲ್ಲಿ ಮುಖ್ಯವಾಗುತ್ತದೆ ಎಂಬ ಮಹತ್ವದ ಸಂಗತಿಯನ್ನು ನರಹಳ್ಳಿ ಅವರು ಖಚಿತವಾಗಿ ಇಲ್ಲಿ ವಿವರಿಸಿದ್ದಾರೆ.

ನಾಗವರ್ಮನ ಹೆಂಡತಿಯ ಕಷ್ಟ!!: ಕನ್ನಡ ವಿಮರ್ಶಾ ಸಾಹಿತ್ಯದ ನಿರ್ಮಾಣದಲ್ಲೂ ಶಿವರುದ್ರಪ್ಪನವರು ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ. ನವ್ಯೋತ್ತರ ಕನ್ನಡ ಸಾಹಿತ್ಯಕ್ಕೆ ಬೇಕಾದ ಸಾಹಿತ್ಯತತ್ವ, ಪ್ರಾಚೀನ ನವೀನ ಕವಿ ಕೃತಿಗಳ ವಿಮರ್ಶೆಯ ಮೂಲಕ ಅವರು ಕನ್ನಡ ಸಾಹಿತ್ಯದ ಸತ್ವ ಶ್ರೀಮಂತಿಕೆಯನ್ನು ಹೆಚ್ಚಿಸಲು ಕಾರಣರಾಗಿದ್ದಾರೆ.

ಶಿವರುದ್ರಪ್ಪನವರು ಗುರುತಿಸಿರುವ ಮತ್ತೊಂದು ಮುಖ್ಯ ಅಂಶ ಕವಿಗಳು ತಮ್ಮ ಕಾವ್ಯ ರಚನಾ ಸ್ವರೂಪದಲ್ಲಿಯೇ ಸೃಷ್ಟಿಸಿರುವ ಓದುಗವರ್ಗದ ಮೂರು ಪ್ರಮುಖ ಮಾದರಿಗಳು. ಈ ಮೂರು ಮಾದರಿಗಳೆಂದರೆ ಜನಮೇಜಯ, ನಾಗವರ್ಮನ ಹೆಂಡತಿ ಹಾಗೂ ಮುದ್ದಣನ ಮನೋರಮೆ.

ಜನಮೇಜಯ ಪುಣ್ಯಸಂಪಾದನಾರ್ಥಿಯಾದ ಓದುಗವರ್ಗದ ಪ್ರತಿನಿಧಿ ಎನ್ನಬಹುದು. ಕಥೆ ಕೇಳುವುದು ಆತನಿಗೆ ಒಂದು ಧಾರ್ಮಿಕ ವಿಧಿ, ಶ್ರದ್ಧೆ. ಮರುಮಾತಿಲ್ಲದೆ, ಪ್ರಶ್ನಿಸದೆ ಕೇಳು ವುದೇ ಆತನ ಕೆಲಸ. ನಾಗವರ್ಮನ ಹೆಂಡತಿ, ಆಕೆಯ ಹೆಸರಿನ ಪ್ರಸ್ತಾಪವಿಲ್ಲ, ಶಾಸ್ತ್ರಕ್ಕೆ ಶೋತೃವಾದವಳು.

ಜನಮೇಜಯನಿಗಾದರೂ ರಸವತ್ತಾದ ಕಾವ್ಯವನ್ನು ಕೇಳುವ ಅವಕಾಶ. ಆದರೆ ಈ ನಾಗ ವರ್ಮನ ಹೆಂಡತಿಗೆ ಶುಷ್ಕವಾದ ಶಾಸ್ತ್ರವನ್ನು ಕೇಳಬೇಕಾದ ಅನಿವಾರ್ಯತೆ. (ನಾಗವರ್ಮ ನ ಛಂದೋಂಬುಧಿಯನ್ನು ಪೂರ್ತಿ ಕೇಳಿದ ಮೇಲೆ ನಾಗವರ್ಮನ ದಾಂಪತ್ಯ ಜೀವನ ಹೇಗಾಗಿದ್ದಿರಬಹುದು ಎಂಬ ಕುತೂಹಲವನ್ನು ಜಿಎಸ್‌ಎಸ್ ವ್ಯಕ್ತಪಡಿಸುತ್ತಾರೆ) ಆಧುನಿಕ ಸಂದರ್ಭದಲ್ಲಿ ಮಾಹಿತಿಗಾಗಿ ಓದುವವರು ಈ ಗುಂಪಿಗೆ ಸೇರುತ್ತಾರೆ.

ಸಂವಾದವೆನ್ನುವಂತೆ ಮಾಡಿದವಳು. ವಾಸ್ತವವಾಗಿ ಮನೋರಮೆಯ ಪಾತ್ರ ಕವಿಗಿರ ಬೇಕಾದ ಸ್ವವಿಮರ್ಶೆಯ ಎಚ್ಚರದ ಪ್ರತೀಕವೆಂಬಂತೆ ಸೃಷ್ಟಿಯಾಗಿದೆ. ಜಿಎಸ್‌ಎಸ್ ಅವರ ಸಾಹಿತ್ಯ ಚಿಂತನೆಯ ಅನನ್ಯತೆಯನ್ನು ನರಹಳ್ಳಿ ಅವರು ಸ್ವಾರಸ್ಯಪೂರ್ಣವಾಗಿ ಇಲ್ಲಿ ಸೆರೆಹಿಡಿದಿದ್ದಾರೆ.

ಶಿವರುದ್ರಪ್ಪ ಅವರು ಬಹುಶ್ರುತ ಲೇಖಕರು. “ನಮ್ಮ ಇಂದಿನ ಕನ್ನಡ ಲೇಖಕರಿಗೆ ತಮ್ಮ ಪರಂಪರಾಗತವಾದ ಸಾಹಿತ್ಯದ ಸಂಪರ್ಕ ತಮಗೆ ಅಗತ್ಯವೆಂದಾಗಲೀ ಅನಿವಾರ್ಯ ವೆಂದಾಗಲೀ ಅನ್ನಿಸುತ್ತಿಲ್ಲ. ಅದರ ಬದಲು ತಮಗೆ ತಮ್ಮ ಹಿಂದಿನ ಸಾಹಿತ್ಯ ಪರಂಪರೆಯ ಅರಿವಿಲ್ಲದಿರುವುದು ಆಷ್ಟೇನೂ ಮಹತ್ವದ ಸಂಗತಿಯಲ್ಲವೆಂದು ಕಡೆಗಣಿ ಸುವ ಮತ್ತು ಕನ್ನಡದ ಸಾಹಿತ್ಯ ಪರಂಪರೆಯಿಂದ ಕಾವ್ಯ ಕಲಿಯಬೇಕಾದುದೇನೂ ಇಲ್ಲವೆಂದು ಘೋಷಿಸುವ ಧೋರಣೆಯೊಂದು ಬೆಳೆದಿದೆ. ಆದರೆ ಕನ್ನಡ ಸಾಹಿತ್ಯ ಪರಂಪರೆಯ ಪ್ರಜ್ಞೆ ಯಿಲ್ಲದವರ ಸಾಹಿತ್ಯನಿರ್ಮಿತಿ ಅಸಮರ್ಪಕ" ಎಂದು ಜಿಎಸ್ ಎಸ್ ಅಭಿಪ್ರಾಯ ಪಡುತ್ತಾರೆ.

ವಸಾಹತೋತ್ತರ ಸಂದರ್ಭದಲ್ಲಿ ಎದುರಿಸುತ್ತಿರುವ ಬಹುಮುಖ್ಯ ಪ್ರಶ್ನೆ ಇದು. ಪರಂಪರೆ ಮತ್ತು ಸೃಜನಶೀಲತೆಯ ಸಂಬಂಧದ ಈ ಪ್ರಶ್ನೆ ಇಂದು ಅನೇಕ ನೆಲೆಗಳಲ್ಲಿ ಚರ್ಚೆ ಗೊಳಗಾಗಿದೆ. ಹೀಗೆ ಶಿವರುದ್ರಪ್ಪವರ ವಿಮರ್ಶೆಯಲ್ಲಿ ನಮ್ಮನ್ನು ಚರ್ಚೆಗೆ ಆಹ್ವಾನಿಸುವ, ವಾಗ್ವಾದವನ್ನು ಬೆಳೆಸುವಂಥ ಅನೇಕ ವಿಚಾರಗಳಿವೆ"ಸಾಹಿತ್ಯ-ಸೃಜನಶೀಲತೆ-ಧರ್ಮ- ನೈತಿಕತೆ-ಪರಂಪರೆ ಇವುಗಳ ಸಂಬಂಧದ ಸಂಕೀರ್ಣ ಸ್ವರೂಪದ ಬಗ್ಗೆ ಜಿಎಸ್‌ಎಸ್ ತಾತ್ವಿಕವಾಗಿ ಗಂಭೀರ ಪ್ರಶ್ನೆಗಳನ್ನೆತ್ತುತ್ತಾರೆ; ಆ ಬಗ್ಗೆ ಮರುಚಿಂತನೆ ಮಾಡಲು ನಮ್ಮನ್ನು ಒತ್ತಾಯಿಸುತ್ತಾರೆ.

ವೈಚಾರಿಕತೆ ತನ್ನನ್ನು ತುಳಿಯುತ್ತಿರುವ, ಅವಮಾನಕ್ಕೀಡುಮಾಡಿರುವ ಎಲ್ಲ ಅಧಿಕಾರ ಗಳನ್ನೂ ಉಗ್ರವಾಗಿ ಪ್ರತಿಭಟಿಸುತ್ತದೆ. ವ್ಯಂಗ್ಯವಾಗಿ ಅದಕ್ಕೆ ಛೀಮಾರಿ ಹಾಕುತ್ತದೆ. ವಿಷಾದ ದಿಂದ ನಿಟ್ಟುಸಿರಿಡುತ್ತದೆ (ನೋಡಿ : ಪು. 150-151, ಸಾಹಿತ್ಯ ಕಥನ, ಅಕ್ಷರ ಪ್ರಕಾಶನ, ಸಾಗರ) ವಿಮರ್ಶೆಯಲ್ಲಿ ಮಾದರಿಗಳು ಬೆಳೆಯುವುದೇ ಹೀಗೆ.

ಶಿವರುದ್ರಪ್ಪ ನವರ ‘ಹೊನ್ನಮ್ಮ’ ಇಲ್ಲಿ ಕಾತ್ಯಾಯಿನಿಯಾಗಿದ್ದಾಳೆ. ಅವರ ‘ಅಕ್ಕ’ ಇಲ್ಲಿ ಗಾರ್ಗಿಯಾಗಿದ್ದಾಳೆ. ಮಾದರಿಗಳು ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಾ ಹೋಗುತ್ತವೆ, ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತವೆ. ನರಹಳ್ಳಿಯವರ ಶೋಧಗುಣ, ತೌಲನಿಕ ಚಿಂತನೆ ಇಲ್ಲಿ ಬಹಳ ಸೊಗಸಾಗಿ ಪಡಿಮೂಡಿದೆ.

ಹಿನ್ನೆಲೆಯಲ್ಲಿ ಶಿವರುದ್ರಪ್ಪನವರು ಭಾರತೀಯ ಹಾಗೂ ಪಾಶ್ಚಾತ್ಯ ಕಾವ್ಯಮೀಮಾಂಸೆಯ ಕೆಲವು ಪರಿಕಲ್ಪನೆಗಳನ್ನು ತೌಲನಿಕವಾಗಿ ಅಧ್ಯಯನ ಮಾಡುವುದರ ಮೂಲಕ ಸಮ ಕಾಲೀನ ಸಾಹಿತ್ಯ ವಿಮರ್ಶೆಗೆ ತಕ್ಕ ಹಿನ್ನೆಲೆ ಯನ್ನು, ಒಂದು ಸ್ಪಷ್ಟ ರೂಪವನ್ನು ನೀಡುವ ಪ್ರಯತ್ನವನ್ನು ತಮ್ಮ ‘ಕಾವ್ಯಾರ್ಥ ಚಿಂತನ’ ಕೃತಿಯಲ್ಲಿ ಮಾಡಿದ್ದಾರೆ.

ಜೊತೆಗೆ ಎಂಬತ್ತರ ದಶಕ ದಲ್ಲಿ ರಚಿತವಾದ ಈ ಕೃತಿ ಕನ್ನಡ ವಿಮರ್ಶೆ ಪಾಶ್ಚಾತ್ಯ ಪ್ರಭಾವ ದಿಂದ ರೂಪುಗೊಂಡ ಸಂದರ್ಭದಲ್ಲಿ ಅದರ ಋಣ ಗುಣಗಳು ಎಷ್ಟು, ನೆಲೆ ಬೆಲೆಗಳೇನು ಎಂಬುದನ್ನು ವಿಶ್ಲೇಷಿಸುವ ಆಶಯವನ್ನೂ ಹೊಂದಿದೆ(ಪುಟ 134) ಸಾಂಸ್ಕೃತಿಕ ಪರಿಸರ ನಿರ್ಮಾಣ: ಎಪ್ಪತ್ತರ ದಶಕ ಭಾರತೀಯ ಬದುಕಿನಲ್ಲಿ ಅನೇಕ ಪಲ್ಲಟಗಳ ಕಾಲ, ಸಂಘರ್ಷ ಗಳ ಸನ್ನಿವೇಶ.

ಸರ್ವಾಧಿಕಾರಿ ಶಕ್ತಿ ತನ್ನ ಕಬಂಧ ಬಾಹುಗಳನ್ನು ಚಾಚಿ ದಮನಕಾರಿಯ ಉತ್ತುಂಗ ಸ್ಥಿತಿ ಯಲ್ಲಿದ್ದಾಗ, ಜನಶಕ್ತಿ ಜಾಗೃತವಾಗಿ ಜಿಎಸ್‌ಎಸ್ ಅವರೊಂದಿಗೆ ಮಿತ್ರರು, ಒಂದು ಹಳೆಯ ಚಿತ್ರ. ಇನ್ನು ಮುದ್ದಣನ ಮನೋರಮೆ ವಿವೇಚನಾಶೀಲ ಓದುಗನ ಪ್ರತಿನಿಧಿ. ಕಥೆಯನ್ನು ಪುಣ್ಯ ಸಂಪಾದನೆ ಗಲ್ಲ, ಬೇಸರದ ಪರಿಹಾರಕ್ಕೆ ಹೇಳು ಎಂದು ಕೇಳಿದವಳು ಈಕೆ. ಜನಮೇಜಯನಂತೆ ಪುಣ್ಯಸಂಪಾದನಾರ್ಥಿಯಾದ ಧರ್ಮಶ್ರದ್ಧೆಯ ಶ್ರಾವಕರ ಪ್ರತಿನಿಧಿ ಯಾಗಿಯಾಗಲೀ, ಶಾಸಶ್ರವಣಕ್ಕೆ ಕೂತ ನಾಗವರ್ಮನ ಹೆಂಡತಿಯಂತಾಗಲೀ ಅಲ್ಲದೆ ಈಕೆ ಕಥೆಯ ವಸ್ತು, ಭಾಷೆ ಇತ್ಯಾದಿಗಳಿಗೆ ಲವಲವಿಕೆಯಿಂದ ಪ್ರತಿಕ್ರಿಯಿಸಿದವಳು.

ಕತೆಯ ಉದ್ದಕ್ಕೂ ಪ್ರಶ್ನೆ, ಪ್ರತಿಪ್ರಶ್ನೆ, ಟೀಕೆ ಇತ್ಯಾದಿಗಳ ಸಮೇತ ಸಾಹಿತ್ಯದ ಆಸ್ವಾದನೆ ಒಂದು ಸೃಜನಶೀಲ ಮನಸ್ಸಿನ ಅಕ್ಕನ ಮಾದರಿ ಇಂದಿನ ಜರೂರು: ಹೊಸ ತಲೆಮಾರನ್ನು ರೂಪಿಸುವಲ್ಲಿ ಜಿಎಸ್‌ಎಸ್ ಅವರು ಪ್ರಧಾನವಾದ ಪಾತ್ರವನ್ನು ವಹಿಸಿದವರು. ಕಿರಿಯ ತಲೆಮಾರಿನವರ ಬಗ್ಗೆ ಶಿವರುದ್ರಪ್ಪನವರು ಪ್ರಕಟಿಸಿರುವ ಆಸಕ್ತಿ ಬಹುಮಟ್ಟಿಗೆ ಅವರ ‘ಕಾವ್ಯ ಸಂವಾದ’ ಎಂಬ ಮುನ್ನುಡಿರೂಪದ ಬರಹಗಳಲ್ಲಿ ವ್ಯಕ್ತವಾಗುತ್ತದೆ.

ಶಿವರುದ್ರಪ್ಪನವರು ಕನ್ನಡ ಪರಂಪರೆಯ ಹಿನ್ನೆಲೆಯಲ್ಲಿಯೇ ಹೊಸ ಪ್ರತಿಭೆಗಳನ್ನಿಟ್ಟು ನೋಡುತ್ತಾರೆ. ಸ. ಉಷಾ ಅವರ ‘ಈ ನೆಲದ ಹಾಡು’ ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಜಿಎಸ್‌ಎಸ್ ಕನ್ನಡ ಪರಂಪರೆಯಲ್ಲಿರುವ ಮಹಿಳಾ ಸಾಹಿತ್ಯದ ಎರಡು ಮಾದರಿಗಳನ್ನು ವಿವರಿಸುತ್ತಾರೆ. ಒಂದು ಅಕ್ಕನ ಮಾದರಿ, ಮತ್ತೊಂದು ಸಂಚಿ ಹೊನ್ನಮ್ಮನ ಮಾದರಿ.

‘ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು ಕಣ್ಣುಕಾಣದ ಗಾವಿಲರು’ ಎಂಬ ಒಂದೇ ಒಂದು ದಿಟ್ಟತನದ ಆಕ್ಷೇಪಣೆಯ ದನಿಯಿಂದ ಸಾಹಿತ್ಯದ ನೆನಪಿನಲ್ಲಿ ಉಳಿದಿರುವ ಹೊನ್ನಮ್ಮನ ಹದಿಬದೆಯ ಧರ್ಮ, ಮೂಲಭೂತವಾಗಿ ಭಾರತೀಯ ಸಾಂಪ್ರದಾಯಿಕ ಸಾಂಸಾರಿಕ ಚೌಕಟ್ಟಿನಲ್ಲಿ ಯಾವುದೇ ಬದಲಾವಣೆಯನ್ನು ಆಶಿಸದ, ಗೃಹಸ್ಥ ಧರ್ಮವನ್ನು ಪ್ರತಿಪಾದಿ ಸುವ ಕೃತಿಯಾಗಿದೆ. ನಮ್ಮ ನವೋದಯ ಕಾಲದ ಬಹುಸಂಖ್ಯಾತ ಮಹಿಳಾ ಕಾದಂಬರಿ ಕಾರ್ತಿಯರ ನಿಲುವು (ತ್ರಿವೇಣಿ, ಇಂದಿರಾ ಇವರಂಥ ಒಬ್ಬಿಬ್ಬರನ್ನು ಬಿಟ್ಟು) ಬಹುಮಟ್ಟಿಗೆ ಸಂಚಿಹೊನ್ನಮ್ಮನ ಮಾದರಿಯನ್ನೇ ಮುಂದುವರಿಸುವ ಸ್ವರೂಪದ್ದಾಗಿದೆ. ಇದಕ್ಕೆ ‘ಪ್ರತಿ’ಯಾಗಿ ಎಂಬಂತೆ ಇತ್ತೀಚಿನ ಮಹಿಳೆಯರ ಬರಹಗಳು ತಮ್ಮ ಮನೋಧರ್ಮದಲ್ಲಿ ಅಕ್ಕನ ಮಾದರಿಯನ್ನು ಮುಂದುವರಿಸುವಂತಿದೆ.

ಅದಮ್ಯವಾದ ಪ್ರೀತಿಯನ್ನು ತುಂಬಿಕೊಂಡ ಹೆಣ್ಣಿನ ವ್ಯಕ್ತಿತ್ವಕ್ಕೆ ಮಹಿಳೆಯರ ಬರಹಗಳು ತಮ್ಮ ಮನೋಧರ್ಮದಲ್ಲಿ ‘ಅಕ್ಕ’ನ ಮಾದರಿಯನ್ನು ಘನತೆಯನ್ನೂ, ಗೌರವವನ್ನೂ, ಅಪೂರ್ವವಾದ ಆತ್ಮಪ್ರತ್ಯಯವನ್ನೂ ತಂದುಕೊಟ್ಟ ಅಕ್ಕನ ಬದುಕು ನಮ್ಮ ಕವಯಿತ್ರಿ ಯರನೇಕರಿಗೆ ತಕ್ಕ ‘ವಸ್ತುಪ್ರತಿರೂಪ’ವಾಗಿದೆ (ಪು. 256, ಸಮಗ್ರ ಗದ್ಯ -5, ಕನ್ನಡ ಮತ್ತು ಸಂಸ್ಕೃತಿ ಇಲಾಖೆ)

ಶಿವರುದ್ರಪ್ಪನವರು ಹೀಗೆ ಗುರ್ತಿಸಿದ ಮಹಿಳಾ ಸಾಹಿತ್ಯದ ಎರಡು ಮಾದರಿಗಳೇ ಮುಂದೆ ಡಿ.ಆರ್. ನಾಗರಾಜ್ ಅವರಲ್ಲಿ ಕಾತ್ಯಾಯಿನಿ ಮಾದರಿ, ಗಾರ್ಗಿಯ ಮಾದರಿ ಎಂಬ ರೂಪ ಪಡೆದಿವೆ. ಉಪನಿಷತ್ತಿನಲ್ಲಿ ಬರುವ ಎರಡು ಸ್ತ್ರೀ ಪಾತ್ರಗಳನ್ನು ಆಧರಿಸಿ ನಾಗರಾಜ್ ಈ ತಾತ್ವಿಕಾ ಕೃತಿ ರೂಪಿಸಿದ್ದಾರೆ.

ಕಾತ್ಯಾಯಿನಿ ಮಾದರಿ ಎಂದರೆ ಗೃಹವಾದಿನಿ ಮಾದರಿ. ಈಕೆ ತಾಯಿ, ಅಕ್ಕ, ತಂಗಿ, ಸಖಿ, ಯಜಮಾನಿ ಹೀಗೆ ಏನೇ ಆಗಿದ್ದರೂ ತನ್ನ ಪಾತ್ರವನ್ನು ತನ್ಮಯತೆಯಿಂದ ನಿರ್ವಹಿಸು ವಂಥವಳು. ಈಕೆಗೆ ವ್ಯವಸ್ಥೆಯ ಮೇಲೆ ಸಿಟ್ಟು ಸಾಧ್ಯವಿಲ್ಲ. ‘ಗೃಹದೇವತೆ’ ಸಿದ್ಧಾಂತದ ಸಾಕಾರ ರೂಪ ಈಕೆ. ಪ್ರಗತಿಪರ ಸ್ತ್ರೀವಾದಿಗಳು ಈಕೆಯನ್ನು ಕಂಡರೆ ಕೆಂಡಾಮಂಡಲ ವಾಗುತ್ತಾರೆ. ಆದರೆ ಗಾರ್ಗಿಯ ಮಾದರಿ ಇದಕ್ಕಿಂತ ಭಿನ್ನವಾದದ್ದು. ಅದರ ಪ್ರಖರ ಸ್ಪಷ್ಟ ನಿಲುವು: ವಿಮರ್ಶೆಯ ಕುರಿತು ಜಿಎಸ್‌ಎಸ್ ಅವರ ನಿಲುವು ನೇರ, ಸ್ಪಷ್ಟ ಅಷ್ಟೇ ಖಾರ.

“ಸಮಕಾಲೀನ ಸಾಹಿತ್ಯ ವಿಮರ್ಶೆ ಇನ್ನೂ ಒಂದು ನಿಶ್ಚಿತವಾದ ರೂಪವನ್ನು ತಾಳದೆ ಭಾಷೆ, ಪರಿಭಾಷೆ ಹಾಗೂ ಪರಿಕಲ್ಪನೆಗಳ ವಿಚಾರದಲ್ಲಿ ಗೊಂದಲದಿಂದ ಕೂಡಿರುವುದಕ್ಕೆ ಮುಖ್ಯ ಕಾರಣ, ಸಾಹಿತ್ಯ ವಿಮರ್ಶೆಗೆ ಬೇರು-ಬುಡದಂತೆ ಇರುವ ಕಾವ್ಯಮೀಮಾಂಸೆಯ ಗಾಢವಾದ ತಿಳಿವಳಿಕೆ ಇಲ್ಲದಿರುವುದೇ ಆಗಿದೆ. ಈ ದೃಷ್ಟಿಯಿಂದ ಭಾರತೀಯ ಕಾವ್ಯ ಮೀಮಾಂಸೆಯ ತಿಳಿವಿನ ಜೊತೆಗೆ ನಮ್ಮ ಇಂದಿನ ವಿಮರ್ಶೆಯ ನಿಲುವುಗಳನ್ನು ರೂಪಿಸಿ ರುವ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆಯ ಒಂದು ಮುಖ್ಯ ಭಾಗವಾಗಿರುವ ಪಾಶ್ಚಾತ್ಯ ಕಾವ್ಯಮೀಮಾಂಸೆಯ ಪರಿಜ್ಞಾನವೂ ನಮಗೆ ಅಗತ್ಯ ಬೇಕಾಗಿದೆ" ಈ ರಾಕ್ಷಸೀಶಕ್ತಿಯನ್ನು ಮಣಿಸಿ ಪ್ರಜಾಪ್ರಭುತ್ವವನ್ನು ಮತ್ತೆ ನೆಲೆಗೊಳಿಸಿದ ಸಂದರ್ಭ.

ತತ್‌ಪರಿಣಾಮವಾಗಿ ಹೊಸ ಕನಸು ಭರವಸೆಗಳೊಂದಿಗೆ ಪ್ರಗತಿಪರ ಮನಸ್ಸುಗಳು ಸಂಘಟನೆಗೊಂಡು ಕನ್ನಡ ಸಂಸ್ಕೃತಿ ಹೊಸ ದಿಕ್ಕಿನತ್ತ ಚಲಿಸತೊಡಗಿತ್ತು. ಈ ಚಲನೆಗೆ ಒಂದು ಸ್ಪಷ್ಟರೂಪ, ಅಧ್ಯಯನದ ಶಿಸ್ತಿನ ಅಗತ್ಯ ವಿತ್ತು. ಜೊತೆಗೆ ಕಾಲು ಶತಮಾನ ಕನ್ನಡ ಸಾಹಿತ್ಯದಲ್ಲಿ ಪ್ರಬಲವಾಗಿದ್ದ ನವ್ಯ ಚಳುವಳಿ ಸಾವಿರ ವರ್ಷಗಳ ಕನ್ನಡ ಪರಂಪರೆಯ ಜೊತೆಗೆ ವಿಘಟನಾತ್ಮಕ ಸಂಬಂಧ ಹೊಂದಿದ್ದು ವಿದಳನ ಪ್ರಜ್ಞೆಯಿಂದ ಕನ್ನಡ ಸಂಸ್ಕೃತಿ ನರಳುತ್ತಿತ್ತು.

ಇಂತಹ ಸಂದರ್ಭದಲ್ಲಿ ಶಿವರುದ್ರಪ್ಪನವರು ತಾವು ನಿರ್ದೇಶಕರಾಗಿದ್ದ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಮೂಲಕ ಒಂದು ಆರೋಗ್ಯಕರ ಸಾಂಸ್ಕೃತಿಕ ಪರಿಸರವನ್ನು ನಿರ್ಮಿಸಲು ಗಂಭೀರವಾಗಿ ಪ್ರಯತ್ನಿಸಿದರು. ಸಂಪ್ರದಾಯ ವಾದಿಯ ಕರ್ಮಠತನದ ಹಠಮಾರಿತನವೂ ಇಲ್ಲದೆ, ಪರಂಪರೆಯ ಅರಿವಿಲ್ಲದ ಆಧುನಿಕ ಮನಸ್ಸಿನ ಸಿನಿಕತನಕ್ಕೂ ಒಳಗಾಗದೆ ಸಮಚಿತ್ತದ ನೆಲೆಯಲ್ಲಿ ಶಿವರುದ್ರಪ್ಪನವರು ಭಿನ್ನಭಿನ್ನ ಧಾರೆಯ ಎಲ್ಲ ಚಿಂತಕರನ್ನೂ ಒಂದು ಸಾಮಾನ್ಯ ವೇದಿಕೆಯಲ್ಲಿ ಸಂಕಿರಣದ ನೆಪದಲ್ಲಿ ಸಂಘಟಿಸುವ ಮೂಲಕ ಅರ್ಥಪೂರ್ಣ ಸಂವಾದಕ್ಕೆ ಅವಕಾಶ ಮಾಡಿಕೊಟ್ಟರು.

ಜಿಎಸ್‌ಎಸ್ ಅವರ ಈ ಪ್ರಯತ್ನ ಕನ್ನಡ ಪರಂಪರೆಯ ಜೊತೆ ಆಧುನಿಕ ಮನಸ್ಸು ಅರ್ಥ ಪೂರ್ಣ ಅನುಸಂಧಾನ ಮಾಡಲು ಅವಕಾಶ ಮಾಡಿಕೊಟ್ಟಿತು; ಜ್ಞಾನಮಾರ್ಗವೊಂದನ್ನು ಶಿವರುದ್ರಪ್ಪನವರು ಈ ಮೂಲಕ ತೆರೆದರು" (ಪು.172) ಎಂಬುದನ್ನು ನರಹಳ್ಳಿ ಅವರು ಸವಿವರವಾಗಿ ತೋರಿಸಿ ಕೊಟ್ಟಿದ್ದಾರೆ.

ವಿಮರ್ಶೆಯ ಸಮಗ್ರತೆ ಖಚಿತತೆ ಇಲ್ಲಿ ಎದ್ದು ಕಾಣುವ ಅಂಶ. ಜಿಎಸ್‌ಎಸ್ ಅವರ ನುಡಿ ಸೇವೆ ಚಿರಸ್ಥಾಯಿಯಾದುದು: ಪರಿವರ್ತನೆಯ ಕಾಲದ ಎಲ್ಲ ಗೊಂದಲಗಳೂ, ಸಂದಿಗ್ಧತೆ ಗಳೂ ಇದ್ದ ಸಂದರ್ಭದಲ್ಲಿ ಪರಸ್ಪರ ಸಂವಾದದ ಮೂಲಕ ಸ್ಪಷ್ಟಪಡಿಸಿಕೊಳ್ಳಲು, ಒಂದು ಅಧ್ಯಯನದ ಶಿಸ್ತನ್ನು ರೂಢಿಸಿಕೊಳ್ಳಲು ಶಿವರುದ್ರಪ್ಪನವರು ಸೂಕ್ತ ವೇದಿಕೆಯೊಂದನ್ನು ಕಲ್ಪಿಸಿದ್ದು ಕನ್ನಡ ಸಂಸ್ಕೃತಿ ಚರಿತ್ರೆಯಲ್ಲಿ ಒಂದು ಮಹತ್ವದ ಘಟನೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗಲೂ ಅವರು ಹಾಕಿಕೊಂಡ ಯೋಜನೆಗಳು, ಪ್ರಕಟಿಸಿದ ಪುಸ್ತಕಗಳು ಕನ್ನಡ ವಿಮರ್ಶೆಯನ್ನು ಬೆಳೆಸುವಲ್ಲಿ ಅತ್ಯಂತ ಉಪಯುಕ್ತವಾದಂಥವು. ವೈಯಕ್ತಿಕ ಹಿತಾಕಾಂಕ್ಷೆಗಳನ್ನು ಮೀರಿ ಸಮುದಾಯದ, ಸಮಷ್ಠಿಯ ಹಿತವನ್ನು ಅನುಲಕ್ಷಿಸಿ ನಡೆಯುವ ಅವರ ನಿಲವು ಶಿವರುದ್ರಪ್ಪನವರ ವ್ಯಕ್ತಿತ್ವವನ್ನೂ, ಬರವಣಿಗೆಯ ರಚನಾವಿನ್ಯಾಸವನ್ನೂ ರೂಪಿಸಿದಂತೆ ತೋರುತ್ತದೆ.

ಕನ್ನಡ ಸಂಸ್ಕೃತಿಯಲ್ಲಿ ಹೊಸ ಎಚ್ಚರ ಮೂಡಲು ನೆರವಾದದ್ದು, ಭರವಸೆಯ ಕನಸು ಬಿತ್ತಿದ್ದು ಅವರ ಮಹತ್ವದ ಸಾಧನೆ. ಶಿವರುದ್ರಪ್ಪ ಅವರ ಜೀವನ ಹಾಗೂ ಸಾಹಿತ್ಯ ದರ್ಶನ ಕನ್ನಡ ಸಾರಸ್ವತ ಲೋಕಕ್ಕೆ ಸಂತತವಾಗಿ ಪ್ರೇರಣೆ ನೀಡುತ್ತಾ ಬಂದಿರುವುದು ವಿಶೇಷ. ಶಿವರುದ್ರಪ್ಪ ಅವರ ಸಾಹಿತ್ಯವನ್ನು ಅಧ್ಯಯನ ಮಾಡುವವರು ಈ ಕೃತಿಯನ್ನು ಓದಿ ಕೊಂಡೇ ಮುಂದೆ ಸಾಗಬೇಕು. ಅಷ್ಟು ಅಧಿಕೃತತೆ, ಸಮಗ್ರತೆ ನರಹಳ್ಳಿಯವರ ಈ ಪುನರಾ ವಲೋಕನದಲ್ಲಿ ಇದೆ. ಇದೊಂದು ಸೂರ್ತಿದಾಯಕ ಸಾಹಿತ್ಯ ಕಥನವೂ ಆಗಿದೆ.