ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Sanjay Gubbi Column: ಚಿರತೆಯ ಅಪರೂಪದ ಬೇಟೆ

ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ನಾನು ವನ್ಯಜೀವಿಗಳ ಹಲವಾರು ವಿಚಾರ ಗಳನ್ನು ಕಲಿತದ್ದು, ಈ ನಂಟಷ್ಟೇ ಅಲ್ಲದೇ ನಮ್ಮ ಅಧ್ಯಯನಕ್ಕೂ ಅದು ಸೂಕ್ತ ಪ್ರದೇಶವಾದು ದರಿಂದ ಅಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದೇವೆ. ದೇವರಾಯನದುರ್ಗದ ಕಾಯ್ದಿಟ್ಟ ಅರಣ್ಯ 41.8 ಚದರ ಕಿಲೋಮೀಟರ್ ವಿಸ್ತೀರ್ಣದ ಕಾಡು. 2023ರಲ್ಲಿ ಮೂರನೇ ಬಾರಿ ಇಲ್ಲಿ ಕ್ಯಾಮರಾ ಟ್ರ್ಯಾಪ್ ಇದನ್ನು 1906ರಲ್ಲೇ ಮೈಸೂರು ಸಂಸ್ಥಾನ, ರಕ್ಷಿತಾರಣ್ಯ ವಾಗಿ ಘೋಷಣೆ ಮಾಡಿತ್ತು

Sanjay Gubbi Column: ಚಿರತೆಯ ಅಪರೂಪದ ಬೇಟೆ

-

Profile
Ashok Nayak May 24, 2026 11:09 AM

ಸಂಜಯ್ ಗುಬ್ಬಿ

ನಮ್ಮ ನಾಡಿನ ವನ್ಯಜೀವಿಗಳ ದಿನಚರಿಯನ್ನು ಅಧ್ಯಯನ ಮಾಡಿ, ಆ ಕುರಿತು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವೈಜ್ಞಾನಿಕ ಹಿನ್ನೆಲೆಯ ಬರಹಗಳನ್ನು ಬರೆಯುವ ಅಪರೂಪದ ಲೇಖಕರಲ್ಲಿ ಸಂಜಯ್ ಗುಬ್ಬಿ ಅಗ್ರಗಣ್ಯರು. ಕಳೆದ ಹಲವು ದಶಕ ಗಳಿಂದ ವನ್ಯಜೀವಿಗಳ ಅಧ್ಯಯನ ಮಾಡಿರುವ ಇವರು, ಚಿರತೆಗಳ ಕುರಿತು ನಡೆಸಿರುವ ಸಂಶೋಧನೆ ವಿಶಿಷ್ಟ. ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಅಧ್ಯಯನ ನಡೆಸುವಾಗ, ದೇವರಾಯನ ದುರ್ಗ ಪ್ರದೇಶದಲ್ಲಿ ಚಿರತೆಯೊಂದು ಬಾವಲಿಯನ್ನು ಕಚ್ಚಿಕೊಂಡು ನಡೆಯುತ್ತಿರುವ ಚಿತ್ರವನ್ನು ಗಮನಿಸಿ, ಅವರು ಅಚ್ಚರಿಗೊಂಡರು. ಏಕೆಂದರೆ, ವೈವಿಧ್ಯಮಯ ಆಹಾರ ಸೇವಿಸುವ ಚಿರತೆಯ ಮೆನು ಕಾರ್ಡ್‌ನಲ್ಲಿ ಇದೇ ಮೊದಲ ಬಾರಿ ಬಾವಲಿ ಸ್ಥಾನ ಪಡೆದಿದೆ! ಇದು ಒಂದು ದಾಖಲೆ. ಆದರೆ, ಚಿರತೆಯು ಆ ಬಾವಲಿಯನ್ನು ಎಲ್ಲಿ ಬೇಟೆಯಾಡಿತು ಎಂದು ತಿಳಿಯಲು ಅವರು ನಡೆಸಿದ ಅಂದಿನ ಪ್ರಯತ್ನದಲ್ಲಿ ಉತ್ತರ ದೊರತಿಲ್ಲ. ಆ ಕುರಿತು ಅವರ ಅಧ್ಯಯನ ಇನ್ನೂ ಮುಂದುವರಿದಿದೆ. 24.5.2026ರಂದು ಬಿಡುಗಡೆಯಾಗುತ್ತಿರುವ ಅವರ ಹೊಸ ಪುಸ್ತಕ ‘ಕಾಡಿನ ಗೆಳೆಯರ ಕಾಡುವ ಕಥೆಗಳು’ ಇದರಲ್ಲಿ ಇಂತಹ ಹಲವು ಅಪರೂಪದ ಬರಹಗಳಿದ್ದು, ಅಂತಹ ಒಂದು ಬರಹದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.

ಡೆಕ್ಕನ್ ಪ್ರಸ್ಥಭೂಮಿಯ ಶಿಲಾಸ್ತರಗಳು ನಮ್ಮ ಹಲವಾರು ವನ್ಯಜೀವಿಗಳು ಮತ್ತು ವಿಶಿಷ್ಟ ವಾದ ವನ್ಯಜೀವಿ ಆವಾಸಸ್ಥಾನಗಳಿಗೆ ಕೂಡ ನೆಲೆಯಾಗಿವೆ. ಕತ್ತೆ ಕಿರುಬ, ತೋಳ, ಕರಡಿ, ಕಪ್ಪಲು ನರಿ, ಗುಳ್ಳೆ ನರಿ, ಕಿರುಬ ಬೆಕ್ಕು, ಕೊಂಡು ಕುರಿ, ಸಣ್ಣ ಹುಲ್ಲೆ, ಚಿಪ್ಪು ಹಂದಿ, ಕಾಡುಪಾಪ ಇನ್ನಿತರ ಸ್ತನಿಗಳು, ರಣಹದ್ದು, ದೊರವಾಯನ ಹಕ್ಕಿಯಂತಹ ನಶಿಸುವ ಹಂತದಲ್ಲಿರುವ ಪಕ್ಷಿಗಳು, ಅಪರೂಪದ ಜಾಲಾರಿ ಮರ, ಗೊಡ್ಡು ಈಚಲು ಗಿಡಗಳು (ಸೈಕಾಡ್) ಡೆಕ್ಕನ್ ಪ್ರಸ್ಥ ಭೂಮಿಯ ವಿಶೇಷತೆಗಳು.

ಇತ್ತೀಚಿಗಷ್ಟೇ ಫ್ಯಾನ್ ಥ್ರೌಟೆಡ್ ಹಲ್ಲಿ ಎಂಬ ಹೊಸ ಸರೀಸೃಪವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಯಿತು. ಡೆಕ್ಕನ್ ಪ್ರಸ್ಥಭೂಮಿಯ ಬೆಟ್ಟ ಗುಡ್ಡಗಳು ಚಿರತೆಗಳಿಗೆ ಸಹ ಅತ್ಯುತ್ತಮ ಆವಾಸಸ್ಥಾನ. ಕರ್ನಾಟಕದಲ್ಲಿ ಇಂತಹ ಸ್ಥಳಗಳಲ್ಲಿ ಚಿರತೆಗಳ ಬಗ್ಗೆ ಯಾವುದೇ ಅಧ್ಯಯನ ಆಗಿಲ್ಲದ ಕಾರಣ, ಕೆಲ ಪ್ರದೇಶಗಳನ್ನು ಆಯ್ದು ಚಿರತೆಗಳ ಸಂಖ್ಯೆ ಯನ್ನು ಅಂದಾಜಿಸುವ ಕೆಲಸ ಹಲವು ವರ್ಷಗಳಿಂದ ನಡೆಸಿದ್ದೇವೆ.

ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ನಾನು ವನ್ಯಜೀವಿಗಳ ಹಲವಾರು ವಿಚಾರಗಳನ್ನು ಕಲಿತದ್ದು, ಈ ನಂಟಷ್ಟೇ ಅಲ್ಲದೇ ನಮ್ಮ ಅಧ್ಯಯನಕ್ಕೂ ಅದು ಸೂಕ್ತ ಪ್ರದೇಶವಾದುದರಿಂದ ಅಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದೇವೆ. ದೇವರಾಯನದುರ್ಗದ ಕಾಯ್ದಿಟ್ಟ ಅರಣ್ಯ 41.8 ಚದರ ಕಿಲೋಮೀಟರ್ ವಿಸ್ತೀರ್ಣದ ಕಾಡು. 2023ರಲ್ಲಿ ಮೂರನೇ ಬಾರಿ ಇಲ್ಲಿ ಕ್ಯಾಮರಾ ಟ್ರ್ಯಾಪ್ ಇದನ್ನು 1906ರಲ್ಲೇ ಮೈಸೂರು ಸಂಸ್ಥಾನ, ರಕ್ಷಿತಾರಣ್ಯ ವಾಗಿ ಘೋಷಣೆ ಮಾಡಿತ್ತು. ಇದಕ್ಕೆ ಲಗತ್ತಾಗಿಯೇ ಪಂಡಿತನಹಳ್ಳಿ (11.4 ಚ.ಕಿಮೀ), ರಾಮದೇವರಬೆಟ್ಟ (4 ಚ.ಕಿಮೀ), ಗೊಲ್ಲಳ್ಳಿ (0.3 ಚ.ಕಿಮೀ) ಕಾಯ್ದಿಟ್ಟ ಅರಣ್ಯಗಳು ಮತ್ತು ಯಾವುದೇ ಸಂರಕ್ಷಣಾ ಕಾನೂನಿನ ಅಡಿಯಲ್ಲಿ ರಕ್ಷಣೆಯಾಗದ 11.61 ಚದರ ಕಿಲೋ ಮೀಟರಿನಷ್ಟು (2869 ಎಕರೆ) ಕಲ್ಲು ಬೆಟ್ಟಗಳಿಂದ ಕೂಡಿದ ಅರಣ್ಯ ಪ್ರದೇಶವಿದೆ.

ಎಲ್ಲವೂ ಸೇರಿ ಸುಮಾರು 69 ಚ.ಕಿಮೀ (17,050 ಎಕರೆ) ನಷ್ಟಿರುವ ಬೆಟ್ಟಗುಡ್ಡಗಳು, ಗುಡ್ಡಗಳ ಮೇಲೆ ಸಮತಟ್ಟಾದ ಪ್ರದೇಶಗಳಲ್ಲಿ ಹುಲ್ಲುಗಾವಲುಗಳು ಮತ್ತು ಕಣಿವೆಗಳಲ್ಲಿ ಕಾಡಿರುವ ಅಂದವಾದ ಪ್ರದೇಶ. ಕಾಡು ಅಂದ ಮೇಲೆ ವಸಾಹತುದಾರರು ನೀಲಗಿರಿ ತೋಪು ನೆಟ್ಟಿರಲೇಬೇಕಲ್ಲವೇ, ಅದು ಕೂಡ ದೇವರಾಯನದುರ್ಗದಲ್ಲಿದೆ.

ಇದನ್ನೂ ಓದಿ: Animal Cruelty: ನಂಜನಗೂಡಿನಲ್ಲಿ ಕರುವಿನ ಬಾಲ ಕತ್ತರಿಸಿದ ದುರುಳರು

ಅಳವಡಿಸಿ ಚಿರತೆಗಳ ಸಂಖ್ಯೆಯನ್ನು ವೈಜ್ಞಾನಿಕವಾಗಿ ಅಂದಾಜು ಮಾಡುತ್ತಿದ್ದೆವು. ಹಿಂದಿನ ವರ್ಷಗಳ ನಮ್ಮ ಅಧ್ಯಯನದ ಪ್ರಕಾರ ಇಲ್ಲಿ ಸುಮಾರು 20 ಚಿರತೆಗಳಿರುವುದು ತಿಳಿದುಬಂದಿತ್ತು. ಈ ಬಾರಿಯೂ ಅಷ್ಟೇ ಚಿರತೆಗಳಿರುವ ಅಂದಾಜಿತ್ತು. ಈ ವರ್ಷ ಇಲ್ಲಿ ಕ್ಯಾಮರಾ ಟ್ರ್ಯಾಪ್‌ಗಳನ್ನು ಅಳವಡಿಸಿ ಆಗಲೇ 20 ದಿನಗಳಾಗಿತ್ತು ಮತ್ತು ಆಗಲೇ ಸಾಕಷ್ಟು ಚಿರತೆಗಳ ಚಿತ್ರಗಳು ಕ್ಯಾಮರಾ ಟ್ರ್ಯಾಪ್‌ಗಳಲ್ಲಿ ದಾಖಲಾಗಿದ್ದವು.

ಸುಮಾರು 10 ವರ್ಷದ ದೃಢವಾದ ಗಂಡು ಚಿರತೆಯೊಂದರ ಮೈಮೇಲಿನ ಚುಕ್ಕೆಗಳು ದಕ್ಷಿಣ ಅಮೇರಿಕಾದಲ್ಲಿ ಸಿಗುವ ಜಾಗ್ವಾರ್‌ಗಳಂತೆ ಇದ್ದವು, ಒಂದೇ ಚಿತ್ರದಲ್ಲಿ ಮೂರು ವಯಸ್ಕ ಚಿರತೆಗಳಿದ್ದ ಚಿತ್ರಗಳು, ಹೀಗೆ ಹಲವಾರು ಆಸಕ್ತಿದಾಯಕ ಚಿತ್ರಗಳು ಪ್ರತಿದಿನವೂ ದೊರಕುತ್ತಿದ್ದವು.

ಅಪರೂಪದ ಚಿತ್ರ!

ಆದರೆ ಆಗಸ್ಟ್ ತಿಂಗಳ ಕೊನೆಯ ದಿನಗಳಲ್ಲಿ ಸಿಕ್ಕಿದ ಚಿತ್ರವೊಂದು ನನ್ನನ್ನು ಆಶ್ಚರ್ಯ ಚಕಿತಗೊಳಿಸಿತು. ದೇವರಾಯನದುರ್ಗದಿಂದ ಉರ್ಡಗೆರೆ ಕಡೆ ಹೋಗುವ ರಸ್ತೆಯ ಬದಿಯಲ್ಲಿದ್ದ ಗುಡ್ಡದ ಮೇಲೆ ಕೂಡ ಕ್ಯಾಮರಾ ಟ್ರ್ಯಾಪ್ ಅಳವಡಿಸಿದ್ದೆವು. ಆಗಸ್ಟ್ ತಿಂಗಳ 26ನೇ ತಾರೀಕಿನ ರಾತ್ರಿ 10.55ರ ಸಮಯದಲ್ಲಿ ನಮ್ಮ ಕ್ಯಾಮರಾ ಟ್ರ್ಯಾಪ್ ಮುಂದೆ ನಡೆದು ಹೋದ ಚಿರತೆಯೊಂದು ಪ್ರಪಂಚದಲ್ಲಿ ಹಿಂದೆಂದೂ ದಾಖಲಾಗದ ಮಾಹಿತಿಯನ್ನು ನಮಗೆ ಒದಗಿಸಿತು. ರಾತ್ರಿಯ ಸಮಯದಲ್ಲಿ ಈ ಹೆಣ್ಣು ಚಿರತೆ ಬಾವಲಿಯೊಂದನ್ನು (ಫ್ಲೈಯಿಂಗ್ ಫಾಕ್ಸ್) ಹಿಡಿದುಕೊಂಡು ಹೋಗುತ್ತಿರುವ ಚಿತ್ರ ಸೆರೆಯಾಗಿತ್ತು.

ಬಾಯಲ್ಲಿ ಕಚ್ಚಿ ಹಿಡಿದಿದ್ದ ಬಾವಲಿಯ ತೆರೆದ ಕಣ್ಣುಗಳ ಗುಡ್ಡೆಗಳು, ಬೆಳಕನ್ನು ಇನ್ನೂ ಪ್ರತಿಫಲಿಸುತ್ತಿದ್ದವು. ಚಾಕ್ಲೆಟ್ ಬಣ್ಣದ ರೆಕ್ಕೆ, ಹಳದಿ ಮಿಶ್ರಿತ ಕಂದು ಬಣ್ಣದ ಮೈ ಹೊಂದಿದ್ದ ಬಾವಲಿ ಬಹುಶಃ ಆಗಷ್ಟೇ ಚಿರತೆಯ ಬಾಯಿಗೆ ಸಿಕ್ಕಿಕೊಂಡಿತ್ತು. ಸುಮಾರು 5 ರಿಂದ 6 ವರ್ಷ ವಯಸ್ಸಿನ ಈ ಚಿರತೆ ನಮಗೆ ಹಲವು ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾಗಳಲ್ಲಿ ದಾಖಲಾಗಿ ಕೆಲ ಆಸಕ್ತಿದಾಯಕ ಮಾಹಿತಿಗಳನ್ನು ಒದಗಿಸಿತು.

Screenshot_8

ಇದೇ ಚಿರತೆ ಎರಡು ದಿನಗಳ ನಂತರ, ಅಂದರೆ 28ನೇ ಆಗಸ್ಟಿನಂದು ಅದು ಬಾವಲಿ ಹಿಡಿದಿದ್ದ ಜಾಗದಿಂದ ಸುಮಾರು 850 ಮೀಟರ್ ದೂರದಲ್ಲಿ, ಮಧ್ಯಾಹ್ನ 4.28ರ ಸಮಯ ದಲ್ಲಿ ಮಂಗವೊಂದನ್ನು ಬೇಟೆಯಾಡಿ ಎತ್ತಿಕೊಂಡು ಹೋಗುತ್ತಿರುವ ದೃಶ್ಯ ನಮ್ಮ ಕ್ಯಾಮರಾ ಟ್ರ್ಯಾಪ್‌ಗಳು ಸೆರೆ ಹಿಡಿದಿದ್ದವು.

ಅದೇ ರಾತ್ರಿ 10.28ಕ್ಕೆ, ಹಿಂದೆ ಬಾವಲಿ ಹಿಡಿದಿದ್ದ ಜಾಗದಲ್ಲಿ ನಮ್ಮ ಕ್ಯಾಮರಾ ಟ್ರ್ಯಾಪ್ ಮುಂದೆ ನಡೆದು ಹೋದ ಚಿರತೆ ಹತ್ತು ನಿಮಿಷದಲ್ಲಿ (10.38) ಮತ್ತೆ ಇನ್ನೊಂದು ಬಾವಲಿ ಯನ್ನು ಬೇಟೆಯಾಡಿದ್ದು ನಮ್ಮ ಕ್ಯಾಮರಾದಲ್ಲಿ ಮತ್ತೆ ಸೆರೆಯಾಗಿತ್ತು. ಇದು ಬಾವಲಿ ಗಳನ್ನು ಹಿಡಿದಿರುವ ಎರಡನೇ ಚಿತ್ರವಾಗಿತ್ತು; ಅಂದರೆ ಈ ಚಿರತೆ ಬಾವಲಿಯನ್ನು ಆಕಸ್ಮಿಕ ವಾಗಿ ಹಿಡಿದಿರಲಿಲ್ಲ. ಇದು ಬಾವಲಿಗಳನ್ನು ಬೇಟೆಯಾಡುವ ವಿಧಾನವನ್ನು ಬಹುಶಃ ಕರಗತಗೊಳಿಸಿಕೊಂಡಿತ್ತು!

ಮೊದಲ ಬಾರಿ

ಚಿರತೆ ಬಾವಲಿಯನ್ನು ಬೇಟೆಯಾಡುವ ಸನ್ನಿವೇಶ ದೇವರಾಯನದುರ್ಗದ ಕಾಡುಗಳಲ್ಲಿ ಮೊಟ್ಟ ಮೊದಲ ಬಾರಿ ದಾಖಲಾಗಿದೆ. ಅದೇ ಜಾಗದಲ್ಲಿ 29 ಆಗಸ್ಟಿನಂದು ಮುಂಜಾನೆ 4.11ಕ್ಕೆ ಮತ್ತೆ ಹಾಜರಾದ ಚಿರತೆ ಈಗ ತನ್ನ ಆರು ತಿಂಗಳ ಮರಿಯನ್ನು ಕರೆದುಕೊಂಡು ಬಂದು ತನ್ನ ಕೌಟುಂಬಿಕ ಚಿತ್ರವನ್ನು ಸಹ ತೆಗೆಯಿರಿ ಎನ್ನುವ ಹಾಗೆ ನಮ್ಮ ಕ್ಯಾಮರಾಗಳ ಮುಂದೆ ಹಾದು ಹೋಗಿತ್ತು.

ತಾಯಿಯ ಹೊಟ್ಟೆಯ ತಳಭಾಗದಷ್ಟು ಎತ್ತರವಿದ್ದ ಚಿರತೆ ಮರಿ ತಾಯಿಯಷ್ಟೇ ಸುಂದರ ತುಪ್ಪಳವನ್ನು ಹೊಂದಿದ್ದು ಆರೋಗ್ಯಕರ ಸ್ಥಿತಿಯಲ್ಲಿತ್ತು. ಬಾವಲಿಗಳನ್ನು ಬೇಟೆ ಯಾಡುವ ಬಗ್ಗೆ ಈ ತಾಯಿಗೆ ತಿಳಿದಿದ್ದ ವಿಶೇಷವಾದ ಕಲೆ ಈ ಮರಿಯೂ ಕೂಡ ಕಲಿತುಕೊಳ್ಳುವ ಸಾಧ್ಯತೆಯಿದೆ. ಚಿರತೆಗಳು ಬಾವಲಿಗಳನ್ನು ಬೇಟೆಯಾಡುವ ವಿಚಾರ ಎಲ್ಲಿಯೂ ದಾಖಲಾಗಿಲ್ಲ. ನಮ್ಮ ವಿಶೇಷವಾದ ಚಿರತೆ ಮತ್ತು ದೇವರಾಯನದುರ್ಗದ ಕಾಡುಗಳು ಚಿರತೆಗಳ ಬಗ್ಗೆ ನಮಗೆ ವಿಶಿಷ್ಟವಾದ ಮಾಹಿತಿಯೊಂದನ್ನು ನೀಡಿ ಹೊಚ್ಚ ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದವು.

ಚಿರತೆಗಳು ತಮ್ಮ ಆಹಾರದ ಬಗ್ಗೆ ರಗಳೆ ಮಾಡದೆ ಸಾಕಷ್ಟು ಹೊಂದಿಕೊಳ್ಳುವ ಸ್ವಭಾವ ದವು. ಅದರ ಈ ಗುಣ ಅವುಗಳು ಎಲ್ಲ ತರಹದ ಆವಾಸಸ್ಥಾನಗಳಲ್ಲೂ ಹೊಂದಿಕೊಂಡು ಬದುಕುವುದಕ್ಕೆ ಕಾರಣವಾಗಿದೆ. ಆಫ್ರಿಕಾದಲ್ಲಿ ನಡೆದ ಅಧ್ಯಯನಗಳ ಪ್ರಕಾರ ಚಿರತೆಗಳು 110 ಸ್ತನಿ ಪ್ರಭೇದಗಳನ್ನು ಭಕ್ಷಿಸುವುದು ದಾಖಲಾಗಿದೆ.

ಪಕ್ಷಿಗಳು, ಸರೀಸೃಪಗಳು ಎಲ್ಲವನ್ನೂ ಸೇರಿಸಿದರೆ ಚಿರತೆಗಳ ಮೆನು ಕಾರ್ಡ್‌ನಲ್ಲಿ 200ಕ್ಕೂ ಹೆಚ್ಚಿನ ಪ್ರಭೇದಗಳ ವನ್ಯಜೀವಿಗಳು ದಾಖಲಾಗಿವೆ. ಆಹಾರದ ಬಗ್ಗೆ ನಾಚಿಕೆ ಇಲ್ಲದ ಪ್ರಾಣಿ. ಕೆಲವೊಮ್ಮೆಯಂತೂ ಏನಪ್ಪಾ ಇದು ನಾನು ಅಭ್ಯಸಿಸುತ್ತಿರುವ ವನ್ಯಜೀವಿ ಹೀಗೆ ಅನಿಸಬೇಕು- ಹೆಗ್ಗಣ, ಉಡ, ಮೀನಿನಂತಹ ಆಸಕ್ತಿದಾಯಕ ಪ್ರಾಣಿಗಳು ಕೂಡ ಅವುಗಳ ಆಹಾರದ ಪದ್ಧತಿಯಲ್ಲಿರುವುದು ದಾಖಲಾಗಿದೆ. ಆದರೆ ಇದರ ವಿಸ್ತಾರವಾದ ಮೆನು ಕಾರ್ಡಿನಲ್ಲಿ ಬಾವಲಿಗಳು ಎಂದೂ ದಾಖಲಾಗಿರಲಿಲ್ಲ. ಹಾಗಾಗಿ ದೇವರಾಯನದುರ್ಗದಲ್ಲಿ ಈ ಹೆಣ್ಣು ಚಿರತೆ ಬಾವಲಿಗಳನ್ನು ಬೇಟೆಯಾಡುತ್ತಿರು ವುದು ವಿಶೇಷವಾದ ಸಂಗತಿ ಯಾಗಿದೆ.

ಮರದ ತುದಿಗೆ ಚಿರತೆ ಏರಿತೇ ಕನ್ನಡದಲ್ಲಿ ಹಿರೇಹಕ್ಕಿ ಎಂದು ಕರೆಯಲ್ಪಡುವ ಈ ಬಾವಲಿ ಪ್ರಭೇದಕ್ಕೆ ಆಂಗ್ಲ ಭಾಷೆಯಲ್ಲಿ ಫ್ಲೈಯಿಂಗ್ ಫಾಕ್ಸ್ ಎಂದು ಕರೆಯುತ್ತಾರೆ. ವಯಸ್ಕ ಹಿರೇಹಕ್ಕಿಗಳು ಸುಮಾರು 1.5 ಕೆ.ಜಿ ತೂಗುತ್ತವೆ ಮತ್ತು ಅವುಗಳ ರೆಕ್ಕೆಗಳನ್ನು ಅಗಲಿಸಿದರೆ 5 ಅಡಿ ತನಕ ಅಗಲವಿರುತ್ತದೆ. ಹಣ್ಣುಗಳನ್ನೇ ತಿಂದು ಬದುಕುವ ಹಿರೇಹಕ್ಕಿ ಬೆಳಗಿನ ವೇಳೆ ದೊಡ್ಡ ಮರಗಳ ಮೇಲೆ ವಿಶ್ರಮಿಸಿ ಸಂಜೆಯಾದಂತೆ ದೂರದ ಪ್ರದೇಶಗಳಿಗೆ ಆಹಾರ ಹುಡುಕಿಕೊಂಡು ಹಾರುತ್ತವೆ.

ಸಾಮಾನ್ಯವಾಗಿ ಮರಗಳ ತುದಿಗಳಲ್ಲಿ ಹಣ್ಣು ತಿನ್ನುವ ಬಾವಲಿಗಳನ್ನು ಈ ಚಿರತೆ ಹೇಗೆ ಹಿಡಿಯುತ್ತದೆ ಎನ್ನುವುದೇ ನನಗೆ ಇಂದಿಗೂ ಆಶ್ಚರ್ಯಕರವಾದ ಸಂಗತಿ. ನಮ್ಮ ಕ್ಯಾಮರಾ ಗಳಲ್ಲಿ ದಾಖಲಾದ ಎರಡೂ ಪ್ರಸಂಗಗಳಲ್ಲಿಯೂ ಅದು ಹಿರೇಹಕ್ಕಿಯನ್ನು ಹಿಡಿದದ್ದು ರಾತ್ರಿಯ ವೇಳೆಯಾದುದರಿಂದ ಅದು ಹಿರೇಹಕ್ಕಿಯನ್ನು ಹೊಂಚು ಹಾಕಿ ಬೇಟೆ ಯಾಡಿರ ಬೇಕು. ಅದು ಹೇಗೆ ಮರದ ಮೇಲೆಯೇ ಹೊಂಚು ಹಾಕಿ ಬೇಟೆಯಾಡಿದೆ ಎನ್ನುವುದು ಇಂದಿಗೂ ನಿಗೂಢ.

ಕಪ್ಪನೆಯ ರಾತ್ರಿಗಳಲ್ಲಿ ಚಿರತೆಗಳು ಮರದ ಮೇಲೆ ಬೇಟೆಯಾಡುತ್ತಿದ್ದರೆ ಅವುಗಳಿಗೆ ಬೇಟೆ ಕಾಣುವುದಷ್ಟೇ ಅಲ್ಲದೆ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಹಾರುವುದಕ್ಕೆ ಅವುಗಳ ಮಧ್ಯ ಇರುವ ಅಂತರ ಮತ್ತು ಎತ್ತರವನ್ನು ಕೂಡ ಕತ್ತಲಲ್ಲಿ ಅಂದಾಜಿಸುವಷ್ಟು ಸಾಮರ್ಥ್ಯವಿದೆ. ಚಿರತೆಗಳ ಕಣ್ಣ ಪೊರೆಯ ಹಿಂದೆ ಟಪೀಟಂ ಎಂಬ ಪ್ರತಿಫಲಿಸುವ ಅಂಗಾಂಶವಿರುತ್ತದೆ. ಇದು ಕಿರಿದಾದ ಬೆಳಕನ್ನು ಕೂಡ ವಧಿಸಬಲ್ಲದು ಮತ್ತು ಚಿರತೆಗಳು ಕತ್ತಲಲ್ಲಿ ಬೇಟೆಯಾಡುವುದಕ್ಕೆ ಸಹಕರಿಸುತ್ತದೆ. ಕೆಲ ಪ್ರಾಣಿಗಳಲ್ಲಿ ಈ ಅಂಗಾಂಶವಿದ್ದು, ಮನುಷ್ಯನಲ್ಲಿ ಇದು ಅಲಭ್ಯ.

ಬೇಟೆ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಮಂಗ, ಮುಚ್ಚ ಇಂತಹ ಪ್ರಾಣಿಗಳು ಕತ್ತಲಾದಂತೆ ಮರಗಳ ಮೇಲೆ ಅಥವಾ ಕಮರಿಗಳಲ್ಲಿ ಆಶ್ರಯ ಪಡೆಯುತ್ತವೆ. ಆದರೆ ಚಿರತೆಯಿಂದ ಹಗಲಲ್ಲಾಗಲಿ ಅಥವಾ ರಾತ್ರಿಯಲ್ಲಾಗಲಿ, ನೆಲದಲ್ಲಾಗಲಿ, ಮರದ ಮೇಲಾಗಲಿ, ಯಾವ ಬಲಿ ಪ್ರಾಣಿಯೂ ಸುರಕ್ಷಿತವಾಗಿದ್ದೇನೆಂದು ಹೇಳಿಕೊಳ್ಳಲಾಗದು.

ಗುಡ್ಡಗಳ ಮೇಲಿರುವ ಪುಟ್ಟ ಹುಲ್ಲುಗಾವಲುಗಳಲ್ಲಿ ಹಳದಿ ಹೂವು ಹೊಂದಿರುವ ಚಿಕ್ಕ ಗಿಡಗಳು, ಕೆಲವು ಕಡೆ ಗುಲಾಬಿ ಬಣ್ಣದ ಹೂ ಬಿಟ್ಟ ಕರ್ಣಕುಂಡಲದ ಗಿಡಗಳಿದ್ದವು. ಮಳೆಗಾಲ ಆಗಷ್ಟೇ ಮುಗಿಯುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಹವಾಮಾನದ ಬದಲಾವಣೆಯಿಂದ ಸೆಪ್ಟೆಂಬರ್ ತಿಂಗಳ ಕೊನೆಯಲ್ಲೂ ಮಳೆ ಬರುತ್ತಿತ್ತು.

ನಮ್ಮ ಚಿರತೆ ಹೇಗೆ ಹಿರೇಹಕ್ಕಿಗಳನ್ನು ಹಿಡಿಯುತ್ತಿದೆ ಎಂಬುದರ ಬಗ್ಗೆ ಕುರುಹು ಗಳೇನಾದರೂ ಸಿಗಬಹುದೇ ಎಂದು ಅರಸಿ ಹಲವು ಬಾರಿ ಆ ಸ್ಥಳಕ್ಕೆ ಹಿಂದಿರುಗಿದ್ದೆ. ಚಿರತೆ ನಮಗೆ ಸೆರೆ ಸಿಕ್ಕ ಸ್ಥಳದ ಹತ್ತಿರ ಹಿರೇಹಕ್ಕಿಗಳು ವಿಶ್ರಮಿಸುವ ಯಾವುದಾದರೂ ಮರಗಳು ಇವೆಯೇ ಎಂದು ಪರೀಕ್ಷಿಸಲು ನಮ್ಮ ಕ್ಯಾಮರಾ ಟ್ರ್ಯಾಪ್ ಹಾಕಿದ್ದ ಜಾಗದಿಂದ ಒಂದೆರಡು ಕಿಲೋಮೀಟರ್ ಸುತ್ತಳತೆಯಲ್ಲಿ ಬೆಟ್ಟ ಹತ್ತಿ ಹುಡುಕಿದೆ, ಹಳ್ಳಕೊಳ್ಳಗಳನ್ನು ಕೆದಕಿದೆ, ದೊಡ್ಡ ಬಂಡೆಗಳ ಕೆಳಗೆ ಏನಾದರೂ ಹಿರೇಹಕ್ಕಿಗಳು ವಿರಮಿಸುತ್ತವೆಯೋ ಎಂದು ತೆವಳಿ ಪರೀಕ್ಷಿಸಿದೆ, ಎಲ್ಲೂ ಹಿರೇಹಕ್ಕಿಗಳ ಕುರುಹು ಸಿಗಲಿಲ್ಲ.

ಕೆಲವೊಮ್ಮೆ ಸಂಜೆ ಕತ್ತಲಾಗುವ ಸಮಯಕ್ಕೆ ಹೋದೆ, ಆಗ ಬಾವಲಿಗಳು ಬೆಳಗಿನ ವೇಳೆ ವಿಶ್ರಮಿಸುವ ಮರಗಳನ್ನು ಬಿಟ್ಟು ಆಹಾರ ಹುಡುಕುತ್ತ ಹೋಗುತ್ತವೆ. ಹಾಗಾಗಿ ನಮ್ಮ ಬ್ಯಾಟ್‌ವುಮನ್ ನಮ್ಮ ಕ್ಯಾಮರಾದಲ್ಲಿ ಸೆರೆ ಸಿಕ್ಕ ಜಾಗದ ಹತ್ತಿರ ಬಾವಲಿಗಳು ಬೇರೆ ಕಡೆಗಳಿಂದ ಹಣ್ಣು ತಿನ್ನಲು ಬರುವವೋ ಎಂದು ಪರೀಕ್ಷಿಸಲು ಪ್ರಯತ್ನಿಸಿದೆ.

ಒಂದೆರಡು ಬಾರಿ ಹುಣ್ಣಿಮೆಯ ದಿನವೂ ಹೋದೆ. ಆದರೆ ನಿಸರ್ಗ ತನ್ನ ನಿಗೂಢತೆಯನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ಹಿರೇಹಕ್ಕಿಗಳು ವಿಶ್ರಮಿಸುವ ಮರಗಳು ಇರಲಿಲ್ಲ. ಹಿರೇಹಕ್ಕಿ ಗಳು ಸಂಜೆಯ ವೇಳೆ ಈ ಪ್ರದೇಶಕ್ಕೆ ಹಾರಿ ಬರುವ ಕುರುಹುಗಳು ಸಿಗಲಿಲ್ಲ. ಹಾಗಾದರೆ ಈ ಚಿರತೆ ಹಿರೇಹಕ್ಕಿಗಳನ್ನು ಹೇಗೆ ಹಿಡಿಯುತ್ತಿದೆ ಎನ್ನುವುದು ಇನ್ನಷ್ಟು ನಿಗೂಢವಾಯಿತು.

ಏನಾದರೂ ಸ್ವಿಗ್ಗಿ ಅಥವಾ ಝೋಮಾಟೋದಿಂದ ಆರ್ಡರ್ ಮಾಡಿ ತರಿಸಿಕೊಳ್ಳುತ್ತಿತ್ತೆ? ಏನಾದರೂ ಇರಲಿ. ಈ ಗುಟ್ಟು ಬಹುಶಃ ಹಾಗೆಯೇ ಚಿದಂಬರ ರಹಸ್ಯವಾಗಿ ಇರುವುದು ಒಳಿತೇನೋ ಎಂದೆನಿಸಿ ನನ್ನ ಪ್ರಯತ್ನವನ್ನು ನಿಲ್ಲಿಸಿದೆ.

ಇಲ್ಲಿಯವರೆಗೂ ದೇವರಾಯನದುರ್ಗ ಬೆಟ್ಟದ ಮೇಲಿರುವ ಯೋಗನರಸಿಂಹ ಮತ್ತು ಭೋಗನರಸಿಂಹಸ್ವಾಮಿ ದೇವಸ್ಥಾನಗಳಿಗೆ ಪ್ರಖ್ಯಾತಿಯಾಗಿದ್ದು ಈಗ ನಮ್ಮ ಬ್ಯಾಟ್ ವುಮನ್ ಮತ್ತು ಬ್ಯಾಟ್‌ಗರ್ಲ್‌ನಿಂದಾಗಿ ಪ್ರಪಂಚದ ಚಿರತೆಗಳ ಭೂಪಟದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ.