Gundu Shankar Column: ಅಮೆರಿಕದ ಗರುಡ ಪುರಾಣ !
ಉತ್ತರ ಅಮೆರಿಕ ಖಂಡದಲ್ಲಿ ನೆಲೆಯಾಗಿದ್ದ ಮೂಲನಿವಾಸಿಗಳ ಸಂಸ್ಕೃತಿ ಮತ್ತು ನಂಬಿಕೆಗಳಲ್ಲಿ ಗರುಡ ಪಕ್ಷಿ ಬಹುಮುಖ್ಯ ಪಾತ್ರ ವಹಿಸಿದೆ. ಈ ಪಕ್ಷಿಯು ಇಲ್ಲಿನ ಆಚರಣೆಗಳಲ್ಲಿ, ಕಥೆಗಳಲ್ಲಿ ಹಾಸು ಹೊಕ್ಕಾಗಿದೆ. ಈ ಸಂಸ್ಕೃತಿಯಲ್ಲಿ ಗರುಡ ನೆಂದರೆ ಪ್ರಾಮಾಣಿಕತೆ, ಧೈರ್ಯ, ವಿವೇಕ, ಗಾಂಭೀರ್ಯ ಮತ್ತು ಸ್ವಾತಂತ್ರ್ಯಗಳ ಸಂಕೇತ; ಆಧ್ಯಾ ತ್ಮಿಕ ಜಗತ್ತಿಗೆ ತಮ್ಮನ್ನು ಬೆಸೆಯುವ ಕೊಂಡಿಯೆಂಬ ನಂಬಿಕೆ
ಗುಂಡೂ ಶಂಕರ್ ನ್ಯೂಜೆರ್ಸಿ
ಸುಮಾರು ಇಪ್ಪತ್ತೆರಡು ಸಾವಿರ ವರ್ಷಗಳಿಂದ ಉತ್ತರ ಅಮೆರಿಕ ಖಂಡದಲ್ಲಿ ನೆಲೆಯಾಗಿದ್ದ ಮೂಲನಿವಾಸಿಗಳ ಸಂಸ್ಕೃತಿ ಮತ್ತು ನಂಬಿಕೆಗಳಲ್ಲಿ ಗರುಡ ಪಕ್ಷಿ ಬಹುಮುಖ್ಯ ಪಾತ್ರ ವಹಿಸಿದೆ. ಈ ಪಕ್ಷಿಯು ಇಲ್ಲಿನ ಆಚರಣೆಗಳಲ್ಲಿ, ಕಥೆಗಳಲ್ಲಿ ಹಾಸುಹೊಕ್ಕಾಗಿದೆ. ಈ ಸಂಸ್ಕೃತಿಯಲ್ಲಿ ಗರುಡ ನೆಂದರೆ ಪ್ರಾಮಾಣಿಕತೆ, ಧೈರ್ಯ, ವಿವೇಕ, ಗಾಂಭೀರ್ಯ ಮತ್ತು ಸ್ವಾತಂತ್ರ್ಯಗಳ ಸಂಕೇತ; ಆಧ್ಯಾ ತ್ಮಿಕ ಜಗತ್ತಿಗೆ ತಮ್ಮನ್ನು ಬೆಸೆಯುವ ಕೊಂಡಿಯೆಂಬ ನಂಬಿಕೆ. ನಭದಲ್ಲಿ ಯಾರೂ ಮುಟ್ಟಲಾಗದ ಎತ್ತರದಲ್ಲಿ ಹಾರುವ ಈ ಪಕ್ಷಿ ಸ್ವರ್ಗ ಮತ್ತು ಭೂಮಿಯ ನಡುವಿನ ಸಂದೇಶಕಾರ ಎಂದು ಅವರು ನಂಬಿದ್ದರು.
ಗುಂಡೂ ಶಂಕರ್, ನ್ಯೂಜೆರ್ಸಿ ಕೆಲ ದಿನಗಳ ಹಿಂದೆ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲೊಂದು ಐತಿಹಾಸಿಕ ಮಹತ್ವದ ವಿದ್ಯಮಾನ ನಡೆಯಿತು. ತನ್ನ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಅಧ್ಯಕ್ಷ ಜೋ ಬೈಡನ್, ಅಮೆರಿಕದ ಬೋಳುತಲೆಯ ಗಿಡುಗ (ಬಾಲ್ಡ್ ಈಗಲ್) ಪಕ್ಷಿಯನ್ನು ರಾಷ್ಟ್ರೀಯ ಪಕ್ಷಿ ಎಂದು ಅಧಿಕೃತವಾಗಿ ಘೋಷಿಸಿ, ಅದಕ್ಕೆ ರಾಷ್ಟ್ರಗೌರವವನ್ನು ಅರ್ಪಿಸಿದ ಕಾನೂನುಪತ್ರಕ್ಕೆ ಸಹಿ ಹಾಕಿದರು.
ಇದನ್ನೂ ಓದಿ: Ravi Sajangadde Column: AI ತಂತ್ರಜ್ಞಾನದಲ್ಲಿ ಪ್ರಭುತ್ವ ಸಾಧಿಸಲು ಪೈಪೋಟಿ !
ಸಾಮಾನ್ಯವಾಗಿ ಈ ರೀತಿಯ ರಾಷ್ಟ್ರೀಯ ಮಹತ್ವದ ಸಂದರ್ಭಗಳಲ್ಲಿ ಕಂಡುಬರುವ ಆಡಂಬರ, ಸಂಭ್ರಮಗಳಾವುವೂ ಇದಕ್ಕಿರಲಿಲ್ಲ. ಆದರೂ ಈ ವಿಷಯ ನನ್ನನ್ನು ಕಾಡಿ, ಸ್ವಲ್ಪ ಖಿನ್ನತೆಯ ಭಾವವೂ ಆವರಿಸಿದಂತಾಯಿತು. ಈ ದೇಶದಲ್ಲಿ 1782ರಿಂದಲೇ ಗಿಡುಗವನ್ನು ರಾಷ್ಟ್ರೀಯ ಸಂಕೇತ ವನ್ನಾಗಿ ಬಳಸಿಕೊಳ್ಳುತ್ತಿದ್ದರು. ಈ ಚಿಹ್ನೆ ಅಮೆರಿಕದ ಬಾವುಟದಷ್ಟೇ ಜನಜನಿತ.
ಅಮೆರಿಕದ ಅಧಿಕೃತ ಮೊಹರಿನ ಕೇಂದ್ರದಲ್ಲಿ ಕಂಡುಬರುವ ಮತ್ತು ರಾರಾಜಿಸುತ್ತಿದ್ದ ಗರುಡನಿಗೆ ಈ ಗೌರವ ಪಟ್ಟ ಲಭಿಸಿದ್ದು ಈಗಷ್ಟೇ. ಇಲ್ಲಿನ ಕ್ರೀಡಾ ತಂಡಗಳು, ಬಟ್ಟೆಯ ಕಂಪೆನಿಗಳು, ಹಾಡು ಗಳು ಮತ್ತು ಚಲನಚಿತ್ರಗಳು ಈ ಪಕ್ಷಿಯನ್ನು ಅಮೆರಿಕದ ಸಂಕೇತವೆಂಬಂತೆ ಧಾರಾಳವಾಗಿ ಬಳಸಿ ಕೊಂಡಿವೆ. ಅಪೋಲೋ ಬಾಹ್ಯಾಕಾಶ ಯೋಜನೆಯ ಹನ್ನೊಂದನೇ ನೌಕೆ ಆಪೋಲೋ 11ದಲ್ಲಿದ್ದ ಮಾಡ್ಯೂಲ್‌ಗೆ ‘ಈಗಲ್’ ಎಂದೇ ಹೆಸರಿದ್ದದ್ದು. ಆ ನೌಕೆ ಚಂದ್ರನ ಮೇಲೆ ಕಾಲಿಟ್ಟಾಗ ಗಗನಯಾತ್ರಿ ಗರುಡಾವರೋಹಣವಾಗಿದೆ (ಈಗಲ್ ಹ್ಯಾಸ್ ಲ್ಯಾಂಡೆಡ್) ಎಂದು ಉದ್ಗರಿಸಿದ್ದ!
ಇದೊಂದು ರೀತಿಯಲ್ಲಿ ಬಾಹ್ಯಾಕಾಶದ ಮೇಲೆ ಅಮೆರಿಕದ ಸಾರ್ವಭೌಮತ್ವವನ್ನು ಸಾರುವ ಸಂಕೇತ ಸಂದೇಶವೂ ಆಯಿತೆನ್ನಿ. ಪ್ರಪಂಚದ ಎಲ್ಲೆಡೆ ಗರುಡ ಪಕ್ಷಿಗಳು ಇವೆ. ಈ ಬೋಳುತಲೆಯ ಗರುಡ ಪಕ್ಷಿಗೆ ಉತ್ತರ ಅಮೆರಿಕವೇ ನೈಸರ್ಗಿಕ ನೆಲೆ. ಗಾಢ ಕಂದು ಬಣ್ಣದ ಮೈಬಣ್ಣದ ಕಾರಣದಿಂದ ಬಿಳಿ ಬಣ್ಣದ ತಲೆ ಹಾಗೆ ಭಾಸವಾಗುತ್ತದೆ. ಎಂಟು ಕೆಜಿಯಷ್ಟು ತೂಕದ ಈ ಪಕ್ಷಿ ರೆಕ್ಕೆ ಬಿಚ್ಚಿದರೆ ಬರೋಬ್ಬರಿ ಎಂಟು ಅಡಿಯಷ್ಟು ಅಗಲಕ್ಕೆ ಹರಡುತ್ತದೆ!
ಹೆಣ್ಣು ಪಕ್ಷಿ ಗಾತ್ರದಲ್ಲಿ ಗಂಡಿಗಿಂತ ಶೇ.25ರಷ್ಟು ದೊಡ್ಡದು. ಇವು ಕಟ್ಟುವ ಗೂಡುಗಳೂ ಪಕ್ಷಿ ಕುಲದ ಅರಮನೆಗಳೇ ಸರಿ. ಸಾಮಾನ್ಯವಾಗಿ 4-5 ಅಡಿ ಅಗಲ, 3-4 ಅಡಿ ಎತ್ತರವಿರುವುದಾದರೂ, ಅಪರೂಪಕ್ಕೆ 10 ಅಡಿ ಅಗಲ, 20 ಅಡಿ ಆಳ, 12 ಅಡಿ ಎತ್ತರ, ಸುಮಾರು ಎರಡು ಟನ್‌ತೂಕದ ಗೂಡುಗಳೂ ಕಾಣಸಿಗುತ್ತವಂತೆ! ವಿನಾಶದ ಹಾದಿಯಲ್ಲಿದ್ದ ಗರುಡ ಪಕ್ಷಿಯನ್ನು 1995ರವರೆಗೆ ಅಳಿವಿನ ಅಂಚಿನಲ್ಲಿರುವ ಸಂತತಿ ಎಂದು ಪರಿಗಣಿಸಲಾಗಿತ್ತು.
ಹತ್ತೊಂಬತ್ತನೇ ಶತಮಾನದಲ್ಲಿ ಈ ಪಕ್ಷಿಯು ಕುರಿಗಳನ್ನು, ಚಿಕ್ಕ ಪ್ರಾಣಿಗಳನ್ನು, ಪುಟ್ಟ ಮಕ್ಕಳ ನ್ನೂ ಬೇಟೆಯಾಡಿ ಎತ್ತಿಕೊಂಡೊಯ್ಯುತ್ತದೆ ಎಂದೇ ಜನ ನಂಬಿದ್ದರು. ಅಲ್ಲಿನ ಜನರು ಈ ಅಮಾ ಯಕ ಪಕ್ಷಿಗಳನ್ನು ಗುಂಡಿಟ್ಟು ಕೊಲ್ಲುತಿದ್ದರು. 20ನೇ ಶತಮಾನದಲ್ಲಿ ರಾಸಾಯನಿಕಗಳ ಬಳಕೆ ಹೆಚ್ಚಾಗಿ ಅದರಲ್ಲೂ ಡಿಡಿಟಿಯ ಅತಿ ಬಳಕೆಯಿಂದ ಸಂತಾನೋತ್ಪತ್ತಿಯ ಶಕ್ತಿ ಕುಂದಿ, ಅವುಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಯಿತು.
ಈಗ ಡಿಡಿಟಿ ಬಳಕೆ ನಿಷೇಧವಾಗಿದೆ. ಗರುಡ ಪಕ್ಷಿಗೆ ಕಾನೂನಿನ ರಕ್ಷಣೆಯೂ ದೊರಕಿದೆ. 1800ರಲ್ಲಿ 3-4 ಲಕ್ಷಗಳಿದ್ದ ಅವುಗಳ ಸಂಖ್ಯೆ 1970ರ ಸುಮಾರಿಗೆ ಕೇವಲ 415 ಜೋಡಿಗಳಿಗೆ ಇಳಿದಿತ್ತು! ಈಗ ಸುಮಾರು 1.15 ಲಕ್ಷಕ್ಕೆ ಏರಿರುವುದು ಸಮಾಧಾನಕರ ಬೆಳವಣಿಗೆ ಎನ್ನಬಹುದು. ಗರುಡ ಪಕ್ಷಿಗೆ ಈ ಮಟ್ಟದ ಮನ್ನಣೆ, ಸ್ಥಾನಗಳು ದೊರಕಿದ್ದು ಅಮೆರಿಕ ಸಂಯುಕ್ತ ರಾಷ್ಟ್ರದ ನಿರ್ಮಾಣವಾದ ಮೇಲೆ ಮಾತ್ರವಲ್ಲ.
ಅಲ್ಲಿನ ಮೂಲನಿವಾಸಿಗಳ ಸಂಸ್ಕೃತಿಯಲ್ಲಿ, ಪರಂಪರೆಯಲ್ಲಿ ಗರುಡ ಪಕ್ಷಿಯ ಬಗ್ಗೆ ಪೂಜ್ಯ ಭಾವ ನೆಯಿತ್ತು. ಯುರೋಪಿಯನರು ಬರುವ ಮುನ್ನವೇ ಇಲ್ಲಿನ ಬುಡಕಟ್ಟುಗಳ ಜೀವನದಲ್ಲಿ ಗರುಡ ಪಕ್ಷಿಗೆ ಮಹತ್ವದ ಪಾತ್ರವಿತು. ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಗರುಡನನ್ನು ಮಹಾ ವಿಷ್ಣು ವಿನ ವಾಹನವೆಂದು ಪೂಜಿಸುತ್ತಾರೆ. ಇದು ಥೈಲ್ಯಾಂಡ್ ಮತ್ತು ಇಂಡೋನೇಷಿಯಾದ ರಾಷ್ಟ್ರೀಯ ಸಂಕೇತವೂ ಹೌದು.
ಸ್ವರ್ಗ ಮತ್ತು ಭೂಮಿಯ ನಡುವಿನ ಕೊಂಡಿ
ಸುಮಾರು ಇಪ್ಪತ್ತೆರಡು ಸಾವಿರ ವರ್ಷಗಳಿಂದ ಉತ್ತರ ಅಮೆರಿಕ ಖಂಡದಲ್ಲಿ ನೆಲೆಯಾಗಿದ್ದ ಇಲ್ಲಿನ ಮೂಲನಿವಾಸಿಗಳ ಸಂಸ್ಕೃತಿ ಮತ್ತು ನಂಬಿಕೆಗಳಲ್ಲಿ ಗರುಡ ಪಕ್ಷಿ ಬಹುಮುಖ್ಯ ಪಾತ್ರ ವಹಿಸಿದೆ. ಈ ಪಕ್ಷಿಯು ಇಲ್ಲಿನ ಆಚರಣೆಗಳಲ್ಲಿ, ಕಥೆಗಳಲ್ಲಿ ಹಾಸು ಹೊಕ್ಕಾಗಿದೆ. ಈ ಸಂಸ್ಕೃತಿಯಲ್ಲಿ ಗರುಡ ನೆಂದರೆ ಪ್ರಾಮಾಣಿಕತೆ, ಧೈರ್ಯ, ವಿವೇಕ, ಗಾಂಭೀರ್ಯ ಮತ್ತು ಸ್ವಾತಂತ್ರ್ಯಗಳ ಸಂಕೇತ. ಆಧ್ಯಾ ತ್ಮಿಕ ಜಗತ್ತಿಗೆ ತಮ್ಮನ್ನು ಬೆಸೆಯುವ ಕೊಂಡಿಯೆಂಬ ನಂಬಿಕೆ. ನಭದಲ್ಲಿ ಯಾರೂ ಮುಟ್ಟಲಾಗದ ಎತ್ತರದಲ್ಲಿ ಹಾರುವ ಈ ಪಕ್ಷಿ ಸ್ವರ್ಗ ಮತ್ತು ಭೂಮಿಯ ನಡುವಿನ ಸಂದೇಶಕಾರ ಎಂದು ಅವರು ನಂಬಿದ್ದರು.
ಮೂಲನಿವಾಸಿಗಳ ಧಾರ್ಮಿಕ ಆಚಾರಣೆಗಳಲ್ಲಿ ಗರುಡ ಪಕ್ಷಿಯ ಗರಿಗಳಿಗೆ ಅತ್ಯಂತ ಪೂಜನೀಯ ಸ್ಥಾನವಿದೆ. ತಲೆಗೆ ಧರಿಸಿಕೊಳ್ಳುವ ಪಟ್ಟಿಗಳಲ್ಲಿ ಮತ್ತು ಆಚರಣೆಯ ಪರಿಕರಗಳಲ್ಲಿ ರೆಕ್ಕೆಗಳನ್ನು ಬಳಸುತ್ತಾರೆ. ಅವರು ನಡೆಸುವ ಶಮನಾಚಾರಣೆಗಳಲ್ಲಿ ವೈದ್ಯ(ಶಾಮನ್) ರೋಗಿಯ ದೇಹಕ್ಕೆ ಗರುಡ ಪಕ್ಷಿಯ ಹೆಗಲನ್ನು ಸ್ಪರ್ಶಿಸುವ ಸಂಪ್ರದಾಯವಿದೆ. ಇಲ್ಲೊಂದು ವಿಷಾದಕರ ಸಮೀಕರಣ ವೆಂದರೆ ಮೂಲನಿವಾಸಿಗಳ ದುಃಸ್ಥಿತಿಯೂ ತಾವು ಪೂಜಿಸುವ ಪಕ್ಷಿಯದಕ್ಕಿಂತ ಬೇರೆಯಲ್ಲ ಎನ್ನು ವುದು. ಅಸಲಿಗೆ ಅವರ ಶೋಚನೀಯ ಸ್ಥಿತಿ ಅದಕ್ಕಿಂತ ಘೋರ, ಹೃದಯ ವಿದ್ರಾವಕ.
ಮೂಲ ನಿವಾಸಿಗಳು
ಪುರಾತತ್ವ ಶೋಧಕರ ಪ್ರಕಾರ ಪ್ರಾಚೀನ ಮನುಕುಲದವರು ಸುಮಾರು 22000 ವರ್ಷಗಳ ಹಿಂದೆ ಯುರೋಪ್‌ನಿಂದ ಬೆರಿಂಗ್ ಜಲಸಂಧಿ ಅಥವಾ ಬಹುಶಃ ಬೇರಾವುದೋ ಜಲಮಾರ್ಗದಿಂದ ಇಂದಿನ ಅಲಾಸ್ಕಾ ಎಂದು ಕರೆಯುವ ಭೂಭಾಗಕ್ಕೆ ವಲಸೆ ಬಂದರು. ಅಲ್ಲಿಂದ ಉತ್ತರ ಅಮೆರಿಕ ಖಂಡದಲ್ಲೆಡೆ ಹರಡಿದ ಈ ಜನಾಂಗ ಮುಂದಿನ ಶತಮಾನಗಳಲ್ಲಿ ವ್ಯವಸ್ಥಿತವಾದ, ಸಮರ್ಥವಾದ ನಾಗರಿಕ ಸಮಾಜವಾಗಿ ರೂಪುಗೊಂಡಿತು. ವಿವಿಧ ಬುಡಕಟ್ಟುಗಳನ್ನು ಕಟ್ಟಿಕೊಂಡು, ಪ್ರತ್ಯೇಕ ಧಾರ್ಮಿಕ, ವ್ಯವಸಾಯಿಕ ಪದ್ಧತಿಗಳನ್ನು ರೂಡಿಸಿಕೊಂಡು ವಿಕಸನಗೊಂಡವು.
ಹದಿನೈದನೆಯ ಶತಮಾನದಿಂದ ಇಲ್ಲಿಗೆ ಬಂದಿಳಿದಯೂರೋಪಿಯನ್ನರ ಸಂಪರ್ಕದಿಂದ ‘ಮೊದಲ ಮಂದಿ’ಯ ಬದುಕಿನಲ್ಲಿ ತೀವ್ರ ಬದಲಾವಣೆಗಳಾದವು. ಅವರು ತಂದಿಟ್ಟ ರೋಗಗಳು ಅರ್ಧದಷ್ಟು ಜನಸಂಖ್ಯೆ ನಾಶಿಸಲು ಕಾರಣವಾದರೆ, ಉಳಿದ ಮಂದಿ ಆಕ್ರಮಣಕಾರರ ಮಾರಣ ಹೋಮಕ್ಕೆ ಬಲಿಯಾದರು. ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಪಶ್ಚಿಮ ಭಾಗಗಳ ಆಕ್ರಮಣ ಮತ್ತು ಯುರೋಪಿಯನ್ನರ ಭೂದಾಹ, ಅಧಿಕಾರಗಳಿಗೆ ಸೋತು ಶರಣಾದ ಅಳಿದುಳಿದ ಮೂಲ ನಿವಾಸಿ ಜನಾಂಗ ದೂರ ಪ್ರದೇಶಗಳಿಗೆ ಪಲಾಯನ ಮಾಡಬೇಕಾಯಿತು. ಕೆಲವು ಬುಡಕಟ್ಟಿನವರು ಹೋರಾಡುವ ಧೈರ್ಯ ತೋರಿದರೂ ಅಂತಿಮವಾಗಿ ಅಮೆರಿಕನ್ ಸರಕಾರವೇ ವಿಜಯಿ ಯಾಯಿತು.
ಅವರ ಮೇಲೆ ಮೇಲಿಂದ ಮೇಲೆ ದಮನನೀತಿಯ ಹೊಸ ಕಟ್ಟುಪಾಡುಗಳನ್ನು, ಕಾನೂನುಗಳನ್ನು ಹೇರಲಾಯಿತು, ಅವರನ್ನು ಕೆಲವೇ ಪ್ರದೇಶಗಳಿಗೆ ಸೀಮಿತಗೊಳಿಸಲಾಯಿತು. 1795ರಲ್ಲಿ ಅಲ್ಪ ಸ್ವಾಯತ್ತತೆ ಮುಂದೆ ಸ್ವಾಗತಾರ್ಹ ಬದಲಾವಣೆಗಳಾದರೂ ಅವು ನಿಧಾನಗತಿಯ ಬೆಳವಣಿಗೆಗಳು. 1975ರಲ್ಲಿ ಬುಡಕಟ್ಟು ಸಮುದಾಯಗಳಿಗೆ ಅಲ್ಪ ಸ್ವಾಯತ್ತತೆ ದೊರಕಿತು. ಅಲ್ಲಿಂದೀಚೆಗೆ ಈ ಸಮುದಾಯಗಳು
ಮತ್ತೆ ನೆಲೆಯೂರಲು ಪ್ರಾರಂಭಿಸಿದವೆನ್ನಬಹುದು. ಅನೇಕ ರಾಜ್ಯಗಳಲ್ಲಿ ಅವರ ಮೊಕದ್ದಮೆಗಳಿಗೆ ಜಯವೂ ದೊರಕುತ್ತಿತ್ತು. 21ನೆಯ ಶತಮಾನದಲ್ಲಿ ಮೂಲನಿವಾಸಿಗಳು ತಮ್ಮ ಪ್ರದೇಶಗಳ ಮತ್ತು ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಮೇಲೂ ಸ್ವಲ್ಪ ಮಟ್ಟಿನ ಒಡೆತನ ಸಾಧಿಸಿದ್ದಾರೆ. ಆದರೂ ಆಧುನಿಕ ಬೆಳವಣಿಗೆ ಎಂಬ ಹೆಸರಿನಲ್ಲಿ ನಡೆಯುವ ಪ್ರಕೃತಿಯ ವಿನಾಶದ ವಿರುದ್ಧ ಮತ್ತು ಶೋಷ ಣೆಯ ವಿರುದ್ಧ, ತಮ್ಮ ಅಸ್ತಿತ್ವದ ಉಳಿವಿಗಾಗಿ ಇಂದಿಗೂ ಮೂಲನಿವಾಸಿಗಳು ಹೋರಾಟವನ್ನು ಮುಂದುವರೆಸಿಕೊಂಡೇ ಬಂದಿದ್ದಾರೆ.
ಈ ಪ್ರಮುಖವಾದ ಹೋರಾಟಗಳಲ್ಲೊಂದು ಇವರ ಭೂಮಿಯಲ್ಲಿ ತೈಲಕೊಳವೆಗಳನ್ನು ಹೂಳು ವುದರ ವಿರುದ್ಧ ನಡೆಯುವ ಪ್ರತಿಭಟನೆ. ಈಗಾಗಲೇ ಒಂದು ಯೋಜನೆಯನ್ನು ಯಶಸ್ವಿಯಾಗಿ ತಡೆಯಲಾಗಿದೆ. ಉತ್ತರ ಡಕೋಟಾ ರಾಜ್ಯದಲ್ಲಿ ಇದರ ವಿರುದ್ಧ ಕಾನೂನು ಸಮರ ನಡೆಯುತ್ತಿದೆ. ಮೂಲ ನಿವಾಸಿಗಳ ಜನಸಂಖ್ಯೆ ಕುಂದಿದೆ. ಹದಿನೈದನೆಯ ಶತಮಾನದಲ್ಲಿ ಕೊಲಂಬಸ್ ಇಲ್ಲಿಗೆ ಕಾಲಿಡುವ ಮುನ್ನ ಇವರ ಜನಸಂಖ್ಯೆ ಸುಮಾರು 2-6 ಮಿಲಿಯನ್ ಇತ್ತೆಂದು ಅಂದಾಜು.
1800ರ ಹೊತ್ತಿಗೆ ಇದು ಕೇವಲ 6 ಲಕ್ಷಕ್ಕೆ ಇಳಿಯಿತು ಮತ್ತು 1890ರ ಹೊತ್ತಿಗೆ ಕೇವಲ 2.50 ಲಕ್ಷಕ್ಕೆ ಜಾರಿತೆಂದೂ ತಿಳಿಯಲಾಗಿದೆ. ಈಗ ಸುಮಾರು 3.7 ಲಕ್ಷ ಇರಬಹುದು. ಅಂದರೆ ಅಮೆರಿಕದ 33.4 ಕೋಟಿ ಜನಸಂಖ್ಯೆಯಲ್ಲಿ, ಮೂಲ ನಿವಾಸಿಗಳ ಸಂಖ್ಯೆ ಇಂದು ಕೇವಲ ಶೇಕಡಾ 1.1ರಷ್ಟು ಮಾತ್ರ!
ಅಮೆರಿಕದ ಇತಿಹಾಸದ ಹಲವು ಘಟ್ಟಗಳಲ್ಲಿ ಮೂಲನಿವಾಸಿಗಳ ಸಂತತಿ ಸಂಪೂರ್ಣವಾಗಿ ನಶಿಸಿ ಯೇ ಹೋಗಿಬಿಡಬಹುದೆಂಬ ಶಂಕೆ ಹುಟ್ಟಿತ್ತು. ಅಂತಹ ಪ್ರಮಾದ ಘಟಿಸಲಿಲ್ಲವಾದರೂ, ಎಷ್ಟೋ ಮೂಲ ಭಾಷೆಗಳು, ಸಮುದಾಯಗಳೇ ನಿಧಾನವಾಗಿ ಕಣ್ಮರೆಯಾಗುತ್ತಿವೆ.
ಮೊದಲ ಬಾರಿ ಪೌರತ್ವ
ಸ್ವಾರಸ್ಯವೆಂದರೆ, 1924ರಲ್ಲಿ ಮೂಲನಿವಾಸಿಗಳನ್ನು ಅಮೆರಿಕದ ಪ್ರಜೆಗಳೆಂದು ಅಂಗೀಕರಿಸಿ ಪೌರತ್ವ ನೀಡಲಾಯಿತು. ಅವರ ದೈವಸ್ವರೂಪಿ ಪಕ್ಷಿಗೆ ಸರಿಯಾಗಿ 100 ವರ್ಷಗಳಾದ ಮೇಲೆ, ಅಂದರೆ ಈಗ ಅಧಿಕೃತ ಮನ್ನಣೆ ದೊರಕಿತು. ಈ ದೊಡ್ಡ ದೇಶದ ಮೂಲ ಜನಾಂಗವೊಂದು ಬದಲಾಗುತ್ತಿರುವ ಪ್ರಪಂಚದಲ್ಲಿ ತನ್ನದೇ ಸ್ವಂತ ನೆಲದಲ್ಲಿ ತನ್ನ ಸ್ಥಾನ ಕಂಡುಕೊಳ್ಳಲು ತೀವ್ರ ವಾಗಿ ಹೆಣಗುತ್ತಿದೆ. ಈ ಎರಡೂ ಜೀವ ಪ್ರಬೇಧಗಳು ತಮ್ಮ ಮೂಲವಾಸಸ್ಥಳದಲ್ಲಿ, ಅಲ್ಲಿನ ಒಡೆ ತನದ ಸ್ವಾಭಾವಿಕ ಹಕ್ಕನ್ನು ಹೊಂದಿದ್ದರೂ, ಹೊರಗಿನಿಂದ ಬಂದು ನೆಲೆಸಿದವರ ದಯೆಯಿಂದ ಅಽಕೃತ ಎಂಬ ಮೊಹರನ್ನು ಪಡೆಯಬೇಕಾಗಿ ಬಂದಿದ್ದು ಕ್ರೂರ ವಿಡಂಬನೆಯೆನಿಸುವುದಿಲ್ಲವೇ? ಅದಕ್ಕಾಗಿಯೇ ಈ ಘಟನೆ ನನ್ನನ್ನು ತೀವ್ರವಾಗಿ ಕಾಡಿದ್ದು.
ಈಗ ಹೊಸ ಅಧ್ಯಕ್ಷರು ಬಂದಿದ್ದಾರೆ. ಸೋತುಹೋದ ಅಧ್ಯಕ್ಷ ಬೈಡನ್ ಗರುಡವನ್ನು ರಾಷ್ಟ್ರೀಯ ಲಾಂಛನವನ್ನಾಗಿ ಮಾಡಿ, ಗರುಡ ಚಿಹ್ನೆಯಿರುವ ಅಧಿಕೃತ ಮೊಹರಿನ ಪಾರುಪತ್ಯೆಯನ್ನು ಹೊಸ ಅಧ್ಯಕ್ಷನಿಗೆ ಬಿಟ್ಟು ಕೊಟ್ಟಿದ್ದಾರೆ. ಈಗ ಅಧಿಕಾರ ಸ್ವೀಕರಿಸಿರುವ ಅಧ್ಯಕ್ಷ ಟ್ರಂಪ್ ಗರುಡನ ಶಕ್ತಿ ಮತ್ತು ಬಲಗಳನ್ನು ಬಳಸಿಕೊಂಡು ಜಗತ್ತಿನ ಮೇಲೆ ಅಮೆರಿಕದ ಹೆಚ್ಚುಗಾರಿಕೆಯನ್ನು ಮೆರೆಯ ಬೇಕೆಂದಿದ್ದಾರೆ! ಗರುಡನ ದೂರದೃಷ್ಟಿ, ವಿವೇಕ ಮತ್ತು ಸ್ಥೈರ್ಯಗಳು ಅಧ್ಯಕ್ಷ ಟ್ರಂಪ್‌ಗೆ ದಾರಿ ದೀಪವಾಗಲಿ ಎಂಬುದೇ ನಮ್ಮ ಹಾರೈಕೆ!