ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಕರುಣಾಶರಧಿ ಶ್ರೀ ರಾಮಾನಂದ ಅವಧೂತರು

ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಮ್ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರ ವೇನಮಃ ಶ್ರೀ ರಾಮಾನಂದ ಅವಧೂತರ (ನಮ್ಮ ಗುರುಗಳ) ಗುಣರಾಶಿಗಳಲ್ಲಿ ಕೆಲವನ್ನಾದರೂ ನಾವು ಇಲ್ಲಿ ಅನುಭವಿಸುವ ಪ್ರಯತ್ನ ಮಾಡೋಣ. ನಮ್ಮ ಗುರುಗಳ ಗುಣಗಳ ಕುರಿತು ಹೊಸದಾಗಿ ನಾನು ಹೇಳುವುದೇನೂ ಇಲ್ಲ, ನಮ್ಮ ಗುರುಗಳನ್ನು ಸಂದರ್ಶಿಸಿದ ಯಾರಿಗಾ ದರೂ ನನ್ನ ಗುರು ಗುಣ ವರ್ಣನೆ ಎನ್ನುವುದು ಅನುಭವಕ್ಕೆ ಬಂದಿರುವುದೇ ಆಗಿರುತ್ತದೆ.

ವಿನಾಯಕ ವೆಂ.ಭಟ್

ಭಾರತೀಯ ಸಂತರ ಪರಂಪರೆಯಲ್ಲಿ ‘ಅವಧೂತ’ ಸ್ಥಿತಿಗೆ ಅತ್ಯುನ್ನತ ಸ್ಥಾನವಿದೆ. ದೇಹದ ಅರಿವಿಲ್ಲದೇ, ಲೌಕಿಕದ ಹಂಗಿಲ್ಲದೇ, ಕೇವಲ ಪರಮಾತ್ಮನ ಚಿಂತನೆಯಲ್ಲಿ ಲೀನರಾಗಿರುವ ಅವಧೂತರ ಬದುಕು ಸಾಮಾನ್ಯ ಜನರಿಗೆ ಒಂದು ಸೋಜಿಗ ಮತ್ತು ದಿವ್ಯಸೂರ್ತಿ. ತಮ್ಮ ತಪಃ ಶಕ್ತಿಯಿಂದ ಜನಮಾನಸದ ಅಜ್ಞಾನವನ್ನು ಬೆಳಗಿದ ಅಪರೂಪದ ಸಂತರಲ್ಲೊಬ್ಬ ರಾದ ಉತ್ತರ ಕನ್ನಡ ಜಿಲ್ಲೆಯ ದೀವಗಿಯ ಭಗವಾನ್ ಸದ್ಗುರು ಶ್ರೀ ಶ್ರೀ ರಾಮಾನಂದ ಅವಧೂತ ಮಹಾ ಸ್ವಾಮಿಗಳದು ಆಡಂಬರವಿಲ್ಲದ ಬದುಕು, ಅಹಂಕಾರವಿಲ್ಲದ ನಡಿಗೆ, ಭಕ್ತರ ಕಷ್ಟಗಳಿಗೆ ಸ್ಪಂದಿಸುವ ಕರುಣಾಳು ವ್ಯಕ್ತಿತ್ವ, ಮೊದಲ ನೋಟದಲ್ಲಿಯೇ ಅವರದು ಭಕ್ತರಿಗೆ ಪರಿಹಾರ ಸೂಚಿಸುವ ಹಾಗೂ ನಿರುಮ್ಮಳ ಸಂದೇಶ ನೀಡುವ ಮುಗ್ಧ, ವಾತ್ಸಲ್ಯ ಮಯಿಭಾವ. ಅವಧೂತ ರೆಂದರೆ ಹಾಗೆಯೇ; ಇವರು ನಮ್ಮ ನಡುವೆಯೇ ಇದ್ದು ನಮಗೆ ದಕ್ಕದವರು. ಅವರು ಉಪದೇಶ ನೀಡಲಿಲ್ಲ, ಪ್ರವಚನ ಕೊಡಲಿಲ್ಲ, ಅವರ ಮೌನ ಇರುವಿಕೆ ಯೇ ಒಂದು ಅದ್ಭುತ ಸಂದೇಶವಾಗಿತ್ತು. ಲೋಕದ ಯಾವ ಗದ್ದಲಕ್ಕೂ ಅಲುಗದ ಆ ಸ್ಥಿತಪ್ರಜ್ಞತೆಯಲ್ಲಿ ನಮಗೆ ಬೇಕಾದ ಉತ್ತರ ಪ್ರಾಪ್ತವಾಗುತ್ತಿತ್ತು. ಸುಮಾರು ಏಳು ದಶಕಗಳ ಕಾಲ, ಲೌಕಿಕ ಜಗತ್ತಿನ ಸುಖ-ದುಃಖಗಳಿಗೆ ಅತೀತವಾಗಿ ನಿಂತು, ಸದಾ ಪರಮಾತ್ಮನ ಚಿಂತನೆಯಲ್ಲಿ ಲೀನರಾಗಿದ್ದ ಅವರ ಅವಧೂತತ್ವದಿಂದ ಪುನೀತರಾದವರು ಲೆಕ್ಕವಿಲ್ಲ ದಷ್ಟು. ಇಂಥ ಅಪರೂಪದ ಅವಧೂತರ ವ್ಯಕ್ತಿತ್ವವನ್ನು ವಿನಾಯಕ ವೆಂ.ಭಟ್ ಅವರು ಸವಿಸ್ತಾರವಾಗಿ, ಮನೋಜ್ಞವಾಗಿ ‘ಕರುಣಾಶರಽ’ ಗ್ರಂಥದಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ಶ್ರೀಗಳು ಕೇವಲ ಒಬ್ಬ ದೇವಮಾನವರಾಗಿ ಕಾಣಿಸುವುದಿಲ್ಲ, ಬದಲಿಗೆ ನಾವು ಕಳೆದು ಕೊಂಡಿರುವ ನಮ್ಮದೇ ‘ಸರಳ’ತೆಯ ಪ್ರತಿಬಿಂಬವಾಗಿ ಕಾಣುತ್ತಾರೆ. ಬದುಕಿನ ಸಾರ್ಥಕತೆ ಯನ್ನು ಹುಡುಕುತ್ತಿರುವವರಿಗೆ, ಮಾನಸಿಕ ಶಾಂತಿಯನ್ನು ಹಂಬಲಿಸುವವರಿಗೆ ಮತ್ತು ಅವಧೂತ ಪರಂಪರೆಯ ಬಗ್ಗೆ ಆಸಕ್ತಿ ಉಳ್ಳವರಿಗೆ ಈ ಪುಸ್ತಕವು ಒಂದು ಅಪೂರ್ವ ಕಾಣಿಕೆ. ಇತ್ತೀಚೆಗೆ ಲೋಕಾರ್ಪಣೆಗೊಂಡ ಈ ಪುಸ್ತಕದ ಆಯ್ದ ಭಾಗಗಳನ್ನು ವಿಶ್ವವಾಣಿಯ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಚೈತನ್ಯಂ ಶಾಶ್ವತಂ ಶಾಂತಂ ವ್ಯೋಮಾತೀತಂ ನಿರಂಜನಮ್ ನಾದಬಿಂದು ಕಲಾತೀತಂ ತಸ್ಮೈ ಶ್ರೀಗುರವೇನಮಃ ಶ್ರೀ ರಾಮಾನಂದ ಅವಧೂತರ (ನಮ್ಮ ಗುರುಗಳ) ಗುಣರಾಶಿಗಳಲ್ಲಿ ಕೆಲವನ್ನಾ ದರೂ ನಾವು ಇಲ್ಲಿ ಅನುಭವಿಸುವ ಪ್ರಯತ್ನ ಮಾಡೋಣ. ನಮ್ಮ ಗುರುಗಳ ಗುಣಗಳ ಕುರಿತು ಹೊಸದಾಗಿ ನಾನು ಹೇಳುವುದೇನೂ ಇಲ್ಲ, ನಮ್ಮ ಗುರುಗಳನ್ನು ಸಂದರ್ಶಿಸಿದ ಯಾರಿಗಾ ದರೂ ನನ್ನ ಗುರು ಗುಣ ವರ್ಣನೆ ಎನ್ನುವುದು ಅನುಭವಕ್ಕೆ ಬಂದಿರುವುದೇ ಆಗಿರುತ್ತದೆ. ಆದರೂ, ನಮ್ಮ ಗುರುಗಳ ಗುಣಕ್ಕೇ ಮೀಸಲಿಟ್ಟು ಸ್ತುತಿಪೂರ್ವಕವಾಗಿ ನಾಲ್ಕು ಅಕ್ಷರಗಳನ್ನು ಈ ಅಧ್ಯಾಯ ದಲ್ಲಿ ಬರೆಯುವ ಪ್ರಯತ್ನ ಮಾಡುತ್ತೇನೆ.

ನಮ್ಮ ಗುರುಗಳ ಗುಣಗಡಣಗಳಲ್ಲಿ ಮೊದಲನೆಯದಾಗಿ ಹೇಳುವುದಾದರೆ ಅದು ಅವರ ಏಕ ಪ್ರಿಯದರ್ಶನತ್ವ. ದರ್ಶನ ಸಂದ ಸರ್ವರಿಗೂ ಯಾವುದೇ ಕಾಲದಲ್ಲೂ ಸಂತೋಷವನ್ನು ಉಂಟುಮಾಡುವ, ಇನ್ನೊಮ್ಮೆ ಕಣ್ತುಂಬಿಕೊಳ್ಳಬೇಕೆನ್ನುವ ವ್ಯಕ್ತಿತ್ವವನ್ನು ‘ಏಕ ಪ್ರಿಯದರ್ಶನತ್ವ’ ಎನ್ನುತ್ತಾರೆ.

ನಮ್ಮ ಗುರುಗಳ ಅಲೌಕಿಕ ದಿವ್ಯ ಸೌಂದರ್ಯವನ್ನು ವರ್ಣಿಸಲು ಸುಲಭವಾಗುವ ಕಾರಣಕ್ಕೆ ಸುಂದರ ಎಂದಷ್ಟೇ ಹೇಳಿದರೆ ಅದು ಅತ್ಯಂತ ಕಡಿಮೆಯಾಗಿ ಬಿಡಬಹುದು. ಆಸೇಚನಕವಾದ ರೂಪವಾಗಿತ್ತು ಎಂದರೆ ಒಂದುಮಟ್ಟಿಗಾಗಬಹುದೇನೋ!. ತದಾಸೇಚನಕಂತೃಪ್ತೇ ನಾಸ್ತ್ಯಂತೋ ಯಸ್ಯದರ್ಶನಾತ್.

Screenshot_3

ಅಂದರೆ, ನಾವು ಯಾರನ್ನು ಅಥವಾ ಯಾವುದನ್ನು ನೋಡುತ್ತಿದ್ದೇವೋ, ಅಲ್ಲಿಂದ ಕಣ್ಣು ಕೀಳಲಾಗದಷ್ಟು ಅಂದರೆ, ಸದಾ ನೋಡುತ್ತಲೇ ಇರಬೇಕು ಎಂದೆನಿಸುವ ಅಲೌಕಿಕ ಸೌಂದರ್ಯ ವನ್ನು ಸಂಸ್ಕೃತದಲ್ಲಿ ಆಸೇಚನಕ ಎನ್ನುವ ಶಬ್ಧದಿಂದ ಹೇಳುತ್ತಾರೆ. ಅಂತಹಾ ಆಸೇಚನಕವಾದ ಸೌಂದರ್ಯ ನಮ್ಮ ಗುರುಗಳದ್ದಾಗಿತ್ತು.

ಇನ್ನು, ಸರ್ವಸತ್ವ ಮನೋಹರಃ ಎನ್ನುವುದು ಎರಡನೆಯ ಗುಣ. ಇದು ಶ್ರೀ ರಾಮನಿಗೆ ಆರೋಪಿತ ವಾದ ಗುಣ. ಮನೋಹರತ್ವ ಎನ್ನುವುದು ಶ್ರೀ ರಾಮಾನಂದರ ಗುಣವೂ ಹೌದು. ಎಲ್ಲ ಪ್ರಾಣಿಗಳ ಕಣ್ಣಿಗೂ ಅಷ್ಟೇ ಮನೋಹರವಾಗಿ ಕಾಣುವ ಸಾತ್ವಿಕ ಸೌಂದರ್ಯ ಅಂತ ಅದರ ಅರ್ಥ. ದರ್ಶನ ಮಾತ್ರದಿಂದ ಸಕಲಭೂತಗಳ ಮನಸ್ಸನ್ನು ನಿಮಿಷಾರ್ಧದಲ್ಲಿ ತನ್ನತ್ತ ಸೆಳೆದುಕೊಳ್ಳುವ ಸಂಕರ್ಷ ಣತ್ವ. ಒಮ್ಮೆ ನಮ್ಮ ಗುರುಗಳ ಸಂದರ್ಶನವಾದರೂ ಸಾಕು, ಅವರ ಆ ಕ್ಷಣಮಾತ್ರದ ಕರುಣಾರ್ದೃ ವಾದ ದೃಷ್ಟಿಪಾತವೆನ್ನುವುದು ಭಕ್ತರನ್ನು ಶಾಶ್ವತವಾಗಿ ತನ್ನಲ್ಲಿ ಹಿಡಿದಿಡಲು ಶಕ್ತವಾಗಿರುತ್ತಿತ್ತು.

ಅತ್ಯಂತ ನಾಸ್ತಿಕನಾದರೂ, ನಮ್ಮ ಗುರುಗಳ ಒಂದು ಬಾರಿಯ ದರ್ಶನ ಮಾತ್ರದಿಂದ ಪರಮ ಆಸ್ತಿಕನಾಗುವುದು ಶತ:ಸ್ಸಿದ್ಧವಾಗಿತ್ತು. ಅಂತಹ ಸತ್ವಪೂರ್ಣವಾದ ಮನೋಹರತ್ವ ನಮ್ಮ ಗುರುಗಳದ್ದು. ಆಬಾಲವೃದ್ಧರಿಗೂ ಸುಲಭವಾಗಿ ಒದಗಿಬರುವ ಸೌಲಭ್ಯ ಪರಿಪೂರ್ಣತ್ವ ಎನ್ನು ವುದು ನಮ್ಮ ಗುರುಗಳ ಮತ್ತೊಂದು ಗುಣಾತಿಶಯ. ಈಗ ತಾನೆ ಮಾತು-ಕಾಲು ಬಂದ ಹಸುಳೆಗಳ ಜೊತೆಗೂ ತನ್ಮಯರಾಗಿ ತಾಸುಗಟ್ಟಲೇ ಸಂಭಾಷಿಸುವ ಮುಗ್ಧ ಮನಸ್ಸು ಅವರದ್ದು. ಆದರೆ, ದುರ್ಮತಿಗಳಿಗೆ ಅಷ್ಟೇ ದುರ್ಗಮ್ಯವಾದ ಕಠಿಣ ಅಂತಃಸ್ಸತ್ವ.

ಸಜ್ಜನರಲ್ಲಿ ಅತ್ಯಂತ ಸರಳ ಹಾಗೂ ಮೃದುತಮವಾದ ವರ್ತನೆ. ತಾತ್ವಿಕ ವಿಚಾರ ಬಂದಾಗ ಹೊಂದಾಣಿಕೆಗೆ ಅವಕಾಶವಿಲ್ಲದ, ವಜ್ರಕ್ಕೂ ಮಿಗಿಲಾದ ಕಾಠಿಣ್ಯದ ವರ್ತನೆ.

ಇದನ್ನೂ ಓದಿ: Vinayak V Bhat Column: ರಾಷ್ಟ್ರಋಣ ಸಂದಾಯದ ಪ್ರಜ್ಞೆ: ಭಾರತದ ಇಂದಿನ ಅಗತ್ಯ

ಹೃದಯ ಶುದ್ಧವಿರುವ, ಅಂದರೆ ಮಕ್ಕಳ ಹೃದಯ ಇರುವವರು ಮಾತ್ರ ನಮ್ಮ ಗುರುಗಳ ಕಣ್ಣಲ್ಲಿ ಕಣ್ಣಿಟ್ಟು ಸಂಭಾಷಣೆ ಮಾಡಲು ಸಾಧ್ಯವಿತ್ತು. ಅದಲ್ಲದಿದ್ದರೆ, ಅವರ ಕಟಾಕ್ಷದ ಪ್ರಖರ ತೇಜಸ್ಸಿನ ಮುಂದೆ ನತಮಸ್ತಕನಾಗದೇ ಅನ್ಯ ಮಾರ್ಗವೇ ಇರುತ್ತಿರಲಿಲ್ಲಾ. ರಾಗಾದಿದೋಷರಹಿತಂ ಸ್ವಜನಾ ನುರಾಗಂ ಎನ್ನುವ ಮಾತಿನಂತೆ, ಸ್ವಜನಾನುರಾಗ ಎನ್ನುವುದು ನಮ್ಮ ಗುರುಗಳ ಮತ್ತೊಂದು ಗುಣ. ತನ್ನಲ್ಲಿ ಪ್ರಪತ್ತಿಮಾಡಿದ ಶರಣಾಗತನನ್ನು ತನ್ನವನೆಂಬ ವಾಲ್ಲಭ್ಯ ಭಾವದಿಂದ, ಅನುರಾಗದಿಂದ (ರಾಗ ಹಾಗೂ ಅನುರಾಗ ಎಂಬ ಶಬ್ಧಗಳಲ್ಲಿ ಅರ್ಥಭೇದವಿದೆ) ಸರ್ವಥಾ ಕಾಪಿಡುವ ವೃತಿಯಾ ಗಿದ್ದವರು ನಮ್ಮ ಗುರುಗಳು.

ಸಕೃದೇವಪ್ರಪನ್ನಾಯ ತವಾಸ್ಮೀತೀ ಚ ಯಾಚತೇ, ಅಭಯಂ ಸರ್ವಭೂತೇಭ್ಯೋ ದದಾಮ್ಯೇತತ್ ವೃತಂ ಮಮ ಎನ್ನುವುದು, ರಾಮಾಯಣದ ಯುದ್ಧಕಾಂಡದಲ್ಲಿ ಶ್ರೀ ರಾಮನಾಡಿದ ಮಾತು. ಒಂದಾವರ್ತಿಯಾದರೂ ಸರಿ, “ನಾನು ನಿನ್ನವನೆಂದುಕೊಂಡು ರಕ್ಷಿಸು" ಎಂದು ಶರಣು ಬಂದವ ನನ್ನು, ಪಶು-ಪಕ್ಷಿ, ಪ್ರಾಣಿ ಮತ್ತು ರಾಕ್ಷಸಾದಿಗಳಿಂದಲಾದರೂ ಅಥವಾ ಹಾಗೆ ಶರಣು ಬಂದವರು ಪಶು, ಪಕ್ಷಿ, ಪ್ರಾಣಿ ಮತ್ತು ರಾಕ್ಷಸಾದಿಗಳಾಗಿದ್ದರೂ ಅವರನ್ನು ರಕ್ಷಿಸುವುದು ನನಗೆ ವೃತವಾಗಿದೆ ಎನ್ನುವುದು ಈ ಮಾತಿನ ಅರ್ಥ.

ಶ್ರೀರಾಮಚಂದ್ರ ವನವಾಸದಲ್ಲಿದ್ದಾಗ ಬರಿಗಾಲಿನಿಂದ ಸಂಚರಿಸುತ್ತಿದ್ದನಲ್ಲಾ! ಸ್ವಾಭಾವಿಕವಾಗಿ ಮುಳ್ಳುಗಳು ಅವನ ಪಾದಕ್ಕೆ ಒತ್ತಿಕೊಳ್ಳುತ್ತಿದ್ದವು, ಅವುಗಳನ್ನು ಲಕ್ಷ್ಮಣ ತೆಗೆಯ ಹೋದರೆ, “ಬೇಡ, ಆ ಮುಳ್ಳುಗಳನ್ನು ನನ್ನ ಪಾದಗಳಿಂದ ತೆಗೆದು ಎಸೆಯಬೇಡ, ಅವು ಜಡವಾಗಿದ್ದರೂ, ಆಸರೆ ಯನ್ನು ಬಯಸಿ ನನ್ನ ಚರಣವನ್ನಾಶ್ರಯಿಸಿ ಬಂದಿರುವಂತಹವು, ನನಗೆ ನೋವಾದರೂ ಅವುಗಳನ್ನು ರಕ್ಷಿಸುವುದು ನನ್ನ ವೃತವೇ ಆಗಿದೆ.

ಹಾಗಾಗಿ ಅವುಗಳನ್ನು ದೂರೀಕರಿಸಲಾರೆ" ಎನ್ನುತ್ತಿದ್ದನಂತೆ ಶ್ರೀ ರಾಮ. ಹೀಗೆ ಜಡ ಚೇತನಗಳೆಂದು ಭೇದ ಮಾಡದೇ, ಶರಣಾಗತಿಯನ್ನು ಮಾತ್ರ ಪುರಸ್ಕರಿಸುತ್ತಿದ್ದ ರಾಮನ ಗುಣದಂತೆ, ಆಶ್ರಿತರನ್ನು ಸದಾ ರಕ್ಷಿಸುವ ಸ್ವಭಾವ ನಮ್ಮ ಗುರುಗಳದ್ದಾಗಿದೆ.

Screenshot_4

ಹಾಗೆ, ತನ್ನಲ್ಲಿ ಪ್ರಪತ್ತಿ ಮಾಡಿದ ಪಾಮರರ ದುಶ್ಚರಿತಗಳನ್ನು ಕ್ಷಮಿಸಿ, ತಿದ್ದಿ, ಅವರುಗಳನ್ನು ಉನ್ನತ ಮಾರ್ಗದಲ್ಲಿ ತೊಡಗಿಸಿ, ಅಭಯ ನೀಡಿ ಕಾಪಿಡುವ ಧೀರತ್ವ ನಮ್ಮ ಗುರುಗಳದ್ದಾಗಿತ್ತು. ತಮ್ಮ ದಿವ್ಯ ಉಪಸ್ಥಿತಿ ಮಾತ್ರದಿಂದ ಅಲ್ಲಿ ಅತಿಶಯವಾದ ಆನಂದದ ವಾತಾವರಣವನ್ನು ಪಸರಿ ಸಿಬಿಡುವ ಮಹತ್ತು ಅವರದ್ದು. ತನ್ನ ಸ್ವಜನರಲ್ಲಿ ಸದಾ ಮಾತೃಸಮಾನ ವಾತ್ಸಲ್ಯ ಭಾವವಿ ರುತ್ತಿತ್ತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಅದು ಒಂದಲ್ಲಾ ಒಂದು ಸಂದರ್ಭದಲ್ಲಿ ನಮಗೆಲ್ಲಾ ಅನುಭವಕ್ಕೆ ಬಂದ ಸಂಗತಿಯೇ ಆಗಿದೆ. ಪ್ರಾಕೃತ ಲೋಕದಲ್ಲಿ ಅವತರಿಸುವ ಸಂದರ್ಭಗಳಲ್ಲಿ, ತನ್ನ ನಿತ್ಯ ಸೂರಿಗಳನ್ನು ಕ್ಷಣವೂ ಬಿಟ್ಟಿರ ಲಾರದೇ, ತನ್ನೊಡನೆ ತನ್ನ ನಿತ್ಯ ಸೂರಿಗಳನ್ನೂ ಬೇರೆ ಬೇರೆ ಉಪಾಧಿಯಿಂದ ತನ್ನೊಡನೆ ಧರೆಗಿಳಿಸಿಕೊಂಡು ಬಂದು, ಅವರನ್ನು ತನ್ನ ಲೀಲೆಯಾಟದ ಭಾಗವಾಗಿಸುವ ಭಗವಂತನಂತೆ, ನಮ್ಮೆಲ್ಲರನ್ನು ತಮ್ಮ ಅವತಾರ ಕಾಲದಲ್ಲಿರುವಂತೆ ನೋಡಿಕೊಂಡು ಉದ್ಧಾರ ಮಾಡಿದ ಅನುರಾಗಿ ಗಳು ನಮ್ಮ ಗುರುಗಳು.

ಶ್ರೀ ರಾಮನ ಗುಣ ಅಷ್ಟೇ ಅಲ್ಲದೇ, ಅವರ ಸರ್ವಭೂತದಯೆ ಅಥವಾ ಸರ್ವಭೂತಹಿತ ಅವಶ್ಯಕ ವಾಗಿ ಹೇಳಬೇಕಾದ ಇನ್ನೊಂದು ಗುಣ. ಸರ್ವಭೂತೇಷು ಕೋ ಹಿತಃ? ಅಂತ ಈ ಕಾಲದಲ್ಲಿ ನಮ್ಮನ್ನು ಯಾರಾದರೂ ಕೇಳಿದರೆ, ನಮ್ಮಗುರುಗಳದ್ದು ಅಗ್ರ ಪಂಕ್ತಿಯ ಸ್ಥಾನವೆಂದೇ ಹೇಳಬೇಕು.

ಇದೂ ಶ್ರೀರಾಮನ ಗುಣವೇ ಆಗಿದೆ. ಲೋಕದಲ್ಲಿ ಒಬ್ಬರಿಗೆ ಹಿತವಾಗಿ ನಡೆದುಕೊಳ್ಳುವುದಾದರೆ ಮತ್ತೊಬ್ಬನಲ್ಲಿ ಅಹಿತವಾಗಿ ತೋರುವ ಮನುಜರು ಸುಲಭ-ಸ್ವಾಭಾವಿಕವಾಗಿ ನಮಗೆ ದೊರಕುವು ದುಂಟು. ಆದರೆ, ಎಲ್ಲರಲ್ಲೂ ಏಕ ಪ್ರಕಾರವಾದ ಪ್ರೀತಿ ವಾತ್ಸಲ್ಯಗಳನ್ನು ಹೊಂದುವುದು ಎಂದರೆ ಅದು ಪರಿಪೂರ್ಣರಾದವರಿಗೆ ಮಾತ್ರ ಸಾಧ್ಯವಲ್ಲದೇ ಸಾಮಾನ್ಯರಿಗೆ ದುಃಸ್ಸಾಧ್ಯವಾದ ಗುಣ.

ಕೇವಲ ಮನುಷ್ಯರಿಗೆ ಮಾತ್ರವಲ್ಲದೇ, ಪ್ರಾಣವುಳ್ಳ ಎಲ್ಲ ಜೀವಿಗಳ ಬಗೆಗೂ ಸದಾ ಸರ್ವದಾ ಹಿತವನ್ನೇ ಬಯಸುವ ಭಗವತ್ಸ್ವಭಾವ ಜನ್ಮಜಾತವಾಗಿ ಬಂದಿತ್ತೋ ಅಥವಾ ನಮ್ಮ ಗುರುಗಳು ಅದನ್ನು ಸಾಧಿಸಿಕೊಂಡಿದ್ದರೋ ಎನ್ನುವುದು ನಮ್ಮಂತವರಿಗೆ ತಿಳಿಯದ ವಿಷಯ.

ಗೀತೆಯಲ್ಲಿ ಹೇಳಿರುವಂತೆ ಸಮೋನಹಂ ಸರ್ವಭೂತೇಷು ನಮೇ ದ್ವೇಷ್ಯೋಸ್ತಿ ನ ಪ್ರಿಯಃ ಎಂದಂತೆ, ಎಲ್ಲರಲ್ಲೂ ಪಕ್ಷಪಾತವಿಲ್ಲದ ಸಮಭಾವ ಹೊಂದಿರುವ, ರಾಗವೂ ಇಲ್ಲದ ದ್ವೇಷವೂ ಇಲ್ಲದ ಸರ್ವಭೂತಗಳಲ್ಲೂ ಅನುರಾಗವನ್ನು ಮಾತ್ರ ಹೊಂದಿರುವ ಭಗವ್ತ್ಸ್ವಭಾವ ವಂತರಾಗಿದ್ದರು ನಮ್ಮ ಗುರುಗಳು.

ತನ್ನ ಭಕ್ತರ ಕುರಿತಾದ ಔದಾರ್ಯ ಗುಣವಂತೂ ಹೃದಯೈಕ ವೇದ್ಯವಾದ ವಿಷಯ. ಶ್ರುತಿಯು ಭಗವಂತನನ್ನು ಕುರಿತು ಆತ್ಮದಾಃ ಎಂದು ವರ್ಣಿಸಿದಂತೆ, ತನ್ನ ಪದಪಂಕಜಗಳಲ್ಲಿ ಶರಣಾದ ಭಕ್ತಜನರಿಗೆ ತನ್ನನ್ನೇ ತಾನು ದಾನಮಾಡಿಕೊಳ್ಳುವ ಸ್ವಭಾವ ನಮ್ಮ ಗುರುಗಳದ್ದು. ಜ್ಞಾನಿಭ್ಯೋಪಿ ಮತೋಧಿಕಃ ಎನ್ನುವ ಭಗವದ್ಗೀತಾ ವಾಕ್ಯದಲ್ಲಿ ಹೇಳಿರುವ ಯೋಗಿತ್ವ ಹಾಗೂ ಮಾನುಷಂ ವಪುರುಥ್ಥಾಯ ಲೋಕಾನಾಂ ಹಿತಕಾಮ್ಯಯಾ ಎಂಬ ರಾಮಾಯಣದ ಮಾತಿನಂತೆ, ಲೀಲಾ ಮಾನುಷರಾಗಿದ್ದುಕೊಂಡು, ಸರ್ವದಾ ಲೋಕಹಿತವನ್ನೇ ಕಾಮನೆಯಾಗುಳ್ಳವರಾಗಿದ್ದವರು ನಮ್ಮ ಗುರುಗಳು.

ಸಾಯಣಾಚಾರ್ಯರು ಭಗ ಶಬ್ಧಕ್ಕೆ ಭಜನೀಯಂ ಭಜಿಸಲು ಯೋಗ್ಯವಾದ ಎನ್ನುವ ಅರ್ಥವನ್ನೂ ಹೇಳಿದ್ದಾರೆ. ಭಕ್ತಿ ಎನ್ನುವ ಶಬ್ದವೂ ಇದೇ ಧಾತುವಿನಿಂದ ಉತ್ಪನ್ನವಾದದ್ದಾಗಿದೆ. ನಾವು ಯಾವ ಶಕ್ತಿಯನ್ನು ಕುರಿತು ಭಕ್ತಿ ಮಾಡಿದರೆ ನಮಗೆ ಒಳ್ಳೆಯದಾದೀತೋ, ಆ ವಸ್ತುವೇ ಭಗ; ಯಾವ ಮಹಾಚೈತನ್ಯವನ್ನು ನಾವು ಸೇವಿಸಿದರೆ ನಮಗೆ ಸರ್ವಶ್ರೇಷ್ಠವಾದ ಫಲ ದೊರೆತೀತೋ, ಆ ಚೈತನ್ಯವೇ ಭಗವಾನ್ ಅಥವಾ ಭಗವಂತ ಎಂದು ತಿಳಿಯಬಹುದು.

ಶ್ರೀಮದ್ವಿಷ್ಣು ಪುರಾಣದ ಸಂಭರ್ತೇತಿ ತಥಾಭರ್ತಾ ಭಕಾರೋರ್ಥದ್ವಯಾನ್ವಿತಃ ನೇತಾ ಗಮಯಿತಾ ಸೃಷ್ಟಾ ಗಕಾರಾಥಃಸ್ತಥಾ ಮುನೇಃ ಎನ್ನುವ ಶ್ಲೋಕವೂ, ಇದೇ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಹೀಗೆ, ಭಗವಚ್ಛಬ್ಧಕ್ಕಿರುವ ಅರ್ಥ ವಿವರಣೆಗಳನ್ನು ನೋಡಿದಾಗ, ಶ್ರೀ ಶ್ರೀಧರ ಸ್ವಾಮಿಗಳಿಂದ ಪ್ರಾರಂಭವಾಗಿ ನಮ್ಮ ಗುರುಗಳ ವರೆಗೆ, ನಮ್ಮ ಪರಂಪರೆಯ ಎಲ್ಲ ಗುರುಗಳಿಗೆ ಭಗವಾನ್ ಎನ್ನುವ ಶಬ್ಧದಿಂದಲೇ ಪ್ರಾರಂಭಿಸಿ ನಾವುಗಳು ಜಯಕಾರವೆಸಗುತ್ತಿರುವುದು ಅತ್ಯಂತ ವಿಶೇಷವೂ, ಸಮಂಜಸವೂ ಆಗಿದೆ ಎನ್ನುವುದು ಮನನವಾಗುತ್ತದೆ.

ಸಂತಃ ಚಾರಿತ್ರ್ಯ ಭೂಷಣಾಃ ಎನ್ನುವಂತೆ, ಯೋಗಿಕುಲಕ್ಕೇ ಮಾದರಿಯಾದಂತ ಚಾರಿತ್ರ್ಯ ಭೂಷಿತರು ನಮ್ಮ ಗುರುಗಳು. ಎಲ್ಲಕ್ಕೂ ಮಿಗಿಲಾಗಿ, ಪರಮಹಂಸಾಶ್ರಮಿಗೆ ಭೂಷಣವಾದ ಆಡಂಬರವಿಲ್ಲದ ಪರಮ ಸಾರಳ್ಯ ಹಾಗೂ ಅತ್ಯಂತ ಪಾರದರ್ಶಕವಾದ ಅವರ ನಿತ್ಯ ಜೀವನಕ್ರಮ ಕಿರಿಯ ಸಾಧಕರಿಗೆ ಮಾದರಿಯಾಗುವಂಥಾದ್ದು.

ಅವರ ಮಿತವಾದ, ಆದರೆ ಅಷ್ಟೇ ಹಿತವಾದ ಮತ್ತು ಮೃದು ಮಧುರವಾದ ವಾಣಿಯಂತೂ ಎಷ್ಟು ಕೇಳಿದರೂ ಕರ್ಣಾನಂದಕರವೇ ಆಗಿರುತ್ತಿತ್ತು. ನೋಡುವುದಕ್ಕೆ ನಮ್ಮ ಗುರುಗಳ ವಾಣಿ ಶ್ರೀ ಮುಖದಿಂದ ಅಭಿವ್ಯಕ್ತವಾದಂತೆ ಕಂಡರೂ, ಅದು ಹೃದಯದಿಂದುದಿಸಿ ಇನ್ನೊಂದು ಹೃದಯ ವನ್ನು ಮಾತ್ರ ಮುಟ್ಟುವ ಮಾತಾಗಿರುತ್ತಿತ್ತು. ತುರೀಯಂವಾಚೋ ಮನುಷ್ಯಾಃ ವದಂತಿ ಎನ್ನುವ ವೇದವಾಕ್ಯದಂತೆ, ಸಾಮಾನ್ಯ ಮನುಷ್ಯರಂತೆ ಕೇವಲ ಬಾಯಿಂದಾಡುವ ಮಾತಾಗಿರುತ್ತಿರಲಿಲ್ಲಾ. ಅವರ ವಾಣಿಯನ್ನು ಕೇಳಿಸಿಕೊಂಡವನ ಕಷ್ಟಗಳೆಲ್ಲಾ ಕಳೆದು, ತಾನು ಹೇಳಿಕೊಳ್ಳಬೇಕು ಎಂದುಕೊಂಡು ಬಂದ ಸಮಸ್ಯೆಗಳೆಲ್ಲಾ ಮರೆತು, ದಿವ್ಯ ಅನುಭೂತಿಯನ್ನು ಹೊಂದುವಂತಾದ್ದು. “ಏನ? ಎಲ್ಲಾ ಆರಾಮನ? ಊಟ / ಆಸ್ರಿಗೆ?" ಎನ್ನುವ ಅವರ ಕುಶಲೋಪರಿಯ ಮಾತಷ್ಟೇ ಅವನ ಮನಃಸ್ಸಮಾಧಾನಕ್ಕೆ ಸಾಕಾಗಿಬಿಡುತ್ತಿತ್ತು.

ಶ್ರೀ ರಾಮನ ಗುಣವನ್ನು ಗುರುತಿಸುವಾಗ, ವಾಲ್ಮೀಕಿಗಳು ಅವನನ್ನು ಸ್ಮಿತ ಪೂರ್ವಾಭಿಭಾಷಿ ಎನ್ನುತ್ತಾರೆ. ಅಂದರೆ, ಆತ ಮಾತನಾಡುವಾಗ ಮಂದಸ್ಮಿತನಾಗಿ ನಗು ಮುಖದಿಂದಲೇ ಮಾತನಾಡು ತ್ತಿದ್ದನಂತೆ. ಜೊತೆಗೆ ಆತ ಪೂರ್ವಾಭಿಭಾಷಿ ಕೂಡಾ, ನಾಲ್ಕು ಜನವಿರುವಾಗ, ಬೇರೆಯವರು ಮೊದಲು ನನ್ನನ್ನು ಮಾತನಾಡಿಸಲಿ ಎಂದು ಕಾಯದೇ ತಾನೇ ಮಾತಿಗೆ ಮೊದಲ್ಗೊಳ್ಳುತ್ತಿದ್ದನಂತೆ.

ಶ್ರೀ ರಾಮನ ಈ ಗುಣವನ್ನು ನಮ್ಮ ಗುರುಗಳಲ್ಲೂ ನಾವು ಕಾಣಬಹುದಾಗಿತ್ತು, ಮಂದಹಾಸ ದಿಂದಲೇ ಅವರು ಸದಾ ಮಾತನಾಡುತ್ತಿದ್ದರು. ತಾವೇ ಮೊದಲ್ಗೊಂಡು ಮಾತನಾಡದವರನ್ನೂ ಮಾತನಾಡಿಸುತ್ತಿದ್ದರು.

ಹೃದಯಾಂತರಾಳದ ಮಾತುಗಳು

ನಮ್ಮ ಗುರುಗಳ ಮಾತೂ ಹಾಗೆಯೇ, ಅವರ ಯಾವ ಮಾತೂ ಕೇವಲ ಶ್ರೀ ಮುಖದಿಂದ ಬರುತ್ತಿರ ಲಿಲ್ಲ, ಬದಲಾಗಿ ಹೃದಯಾಂತರಾಳದಿಂದಲೇ ಹೊರಡುತ್ತಿತ್ತು. ಹಾಗಾಗಿ ಅದು ನಮ್ಮ ಮೇಲೆ ಅಗಾಧವಾದ ಪರಿಣಾಮವನ್ನು ಬೀರುತ್ತಿತ್ತು. ಲಾಲಿತ್ಯ, ಮಾಧುರ್ಯ ಎನ್ನುವುದು ಅವರ ನುಡಿ ಯಲ್ಲಿ ಮಾತ್ರವಲ್ಲದೇ, ಅಂತರಂಗದಲ್ಲೂ ಇರುತ್ತಿತ್ತು. ಹಾಗಾಗಿಯೇ ಅವರ ಅಂತರಂಗದಿಂದ ಹೊರಡುವ ನುಡಿಗಳು, ನೇರವಾಗಿ ಎದುರಿಗಿರುವವನ ಅಂತರಂಗವನ್ನು ತಟ್ಟುತ್ತಿತ್ತು, ಮಕ್ಕಳ ಮುಗ್ಧ ಮನಸ್ಸನ್ನೂ ಮುಟ್ಟುತ್ತಿತ್ತು.

ಋಷೀಣಾಂ ಪುನರಾದ್ಯಾನಾಂ ವಾಚಮರ್ಥೋನುಧಾವತಿಎಂಬುದು ಏಳನೇ ಶತಮಾನದ ಸಂಸ್ಕೃತ ಕವಿ ಭವಭೂತಿಯ ಉತ್ತರರಾಮಚರಿತ ನಾಟಕದ ಪ್ರಸಿದ್ಧ ಶ್ಲೋಕವಾಗಿದೆ. ಇದರ ಅರ್ಥ, ಋಷಿಗಳ, ಸಿದ್ಧ ಅವಧೂತರ ಮಾತನ್ನು ಅರ್ಥವೇ ಧಾವಿಸಿ ಬಂದು ಸೇರಿಕೊಳ್ಳುತ್ತವೆ. ಅಂದರೆ, ಅವರು ನುಡಿದ ಮಾತುಗಳು ಸತ್ಯವಾಗುತ್ತದೆ ಎಂದರ್ಥ. ಇಂಥ ಮಹನೀಯರುಗಳನ್ನು ವಾಕ್ ಸಿದ್ಧಿಯನ್ನು ಪಡೆದವರು ಎನ್ನುತ್ತಾರೆ.

ಹೀಗೆ ಯಾಕೆ ಎಂದು ನೋಡುವುದಾದರೆ, ಭಗವಂತ ಭಾಗವತ ಜನರ ಮಾತನ್ನು ಸುಳ್ಳಾಗಲು ಬಿಡುವುದಿಲ್ಲ ಎನ್ನುವುದು ಒಂದು ಉತ್ತರವಾದರೆ, ನಮ್ಮ ಗುರುಗಳಂಥಾ ನಾಮನಿಷ್ಠ ಅವಧೂತ ರಲ್ಲಿ ಭಗವಂತನೇ ಓತಪ್ರೋತವಾಗಿ ವ್ಯಾಪಿಸಿರುವುದರಿಂದ, ಅವರ ಶ್ರೀ ಮುಖದಿಂದ ನಿವ್ರತ್ತವಾದ ವಾಣಿಗೂ ಭಗವಂತನ ವಾಣಿಗೂ ಅಬೇಧವಾಗುತ್ತದೆಯಲ್ಲವೆ? ಹಾಗಾಗಿ ನಮ್ಮ ಗುರುಗಳಾಡುವ ಮಾತುಗಳು ಅತ್ಯಂತ ಪ್ರಭಾವಶಾಲಿಯಾಗಿರುತ್ತಿತ್ತು, ಅವರಾಡಿದಂತೆ ಆಗುತ್ತಿತ್ತು, ಅರ್ಥವೆನ್ನು ವುದು ಅವರ ಮಾತನ್ನು ಹಿಂಬಾಲಿಸಿ ಬರುತ್ತಿತ್ತು. ಇನ್ನು, ಅವರ (ಮೇಧಾ) ಜ್ಞಾಪಕ ಶಕ್ತಿಯಂತೂ ಅತ್ಯಂತ ಅಗಾಧವಾಗಿತ್ತು.

ಬರುವ ಭಕ್ತ ಜನರನ್ನು ಅವರು ಹೆಸರು ಹೇಳದೇ ಮಾತನಾಡಿಸಿದ್ದೇ ಇಲ್ಲ. ಕನಿಷ್ಟ ಪಕ್ಷ, “ಏನ! ವಾಜ್ಗದ್ದೆ ಹೆಗ್ಡೆ ಅಲ್ದನಾ" ಎಂದು ಅವನ ಊರಿನ ಹೆಸರು ಹೇಳುವ ಮುಖಾಂತರವಾಗಿಯಾದರೂ ಸಂಬೋಧಿಸುತ್ತಿದ್ದರು. ಅವರ 97ನೇ ವಯಸ್ಸಿನಲ್ಲೂ ಬಾಲ್ಯದ ಘಟನೆಗಳೆಲ್ಲಾ ಅತ್ಯಂತ ಹಸಿರಾಗಿಅವರ ಚಿತ್ತ ವೃತ್ತಿಯಲ್ಲಿತ್ತು.

ಏಕ ಪ್ರಿಯದರ್ಶನತ್ವ, ಸರ್ವ ಸತ್ವ ಮನೋಹರತ್ವ, ಸಮತ್ವ, ಸರಳತೆ, ಸೌಲಭ್ಯ ಪರಿಪೂರ್ಣತೆ, ಚಾರಿತ್ರ್ಯ ಭೂಷಣತೆ, ಆಸೇಚನಕವಾದ ಅಲೌಕಿಕ ಸೌಂದರ್ಯ, ಕರುಣಾಕರತ್ವ, ಹೃದಯಾಂತ ರಾಳದಿಂದ ಹೊರಡುವ ಪ್ರಿಯವಾಕ್ಯಗಳು, ಶರಣಾಗತ ರಕ್ಷಣ ದಾಕ್ಷಿಣ್ಯತ್ವ, ಸರ್ವ ಭೂತ ದಯೆ, ಭಗವತ್ಸತ್ವ, ಸ್ವಜನಾನು ರಾಗ ಹಾಗೂ ಅವರ ಅಗಾಧ ಮೇಧಾ ಶಕ್ತಿ ಹೀಗೆ ನಮ್ಮ ಗುರುಗಳ ಕೆಲವು ಗುಣವಿಶೇಷಗಳನ್ನು ಈ ಅಧ್ಯಾಯದಲ್ಲಿ ನಾವು ಅನುಸಂಧಾನ ಮಾಡಿದ ಹಾಗಾಯಿತು. ಹೇಳುತ್ತಾ ಹೋದರೆ ನಮ್ಮ ಗುರುಗಳ ಗುಣ ವರ್ಣನವನ್ನು ಬಹುವಾಗಿ ಕೊಂಡಾಡಬಹುದು, ಆದರೆ ನನ್ನ ಮಿತಿಯೊಳಗೆ ಸಾಧ್ಯವಾದದ್ದನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ.

ನಿಜಾರ್ಥದ ಭಗವಾನ್ ಆಗಿದ್ದರು!

ಐಶ್ವರ್ಯಸ್ಯ ಸಮಗ್ರಸ್ಯ ಧರ್ಮಸ್ಯ ಯಶಃ ಶ್ರಿಯಃ ವೈರಾಗ್ಯಸ್ಯಾಥ ಮೋಕ್ಷಶ್ಚ ಷಣ್ಣಾಂ ಭಗ ಇತೀಂ ಗನಾಂ ಎನ್ನುವ ಶ್ರೀಮದ್ವಿಷ್ಣು ಪುರಾಣದ ವಾಕ್ಯದಂತೆ, ಸಂಪತ್ತು, ಸಮಗ್ರವಾದ ಧರ್ಮ, ಯಶಸ್ಸು, ಶ್ರೀ, ವೈರಾಗ್ಯ ಮತ್ತು ಮೋಕ್ಷ ಈ ಆರನ್ನೂ ಸೇರಿದ ಭಗ ವನ್ನು ಹೊಂದಿದವರಾಗಿದ್ದ ಕಾರಣಕ್ಕೆ, ನಮ್ಮ ಗುರುಗಳು ನಿಜಾರ್ಥದಲ್ಲಿ ಭಗವಾನ್ ಆಗಿದ್ದವರು.

ಭಗವಂತ ಎಂದರೆ ಅರ್ಥವೇನು?

ಭಗವತ್ ಅಥವಾ ಭಗವಂತ ಎನ್ನುವ ಶಬ್ದವನ್ನು ದಿನನಿತ್ಯ ನಾವು ಬಳಸುತ್ತೇವೆ. ಗೀತೆಯಲ್ಲೂ ಈ ಶಬ್ದ ಬಹಳ ಸಾರಿ ಬಳಕೆಯಾಗಿದೆ, ಹಾಗಾದರೆ ಅದರ ಅರ್ಥವೇನು ಎನ್ನುವುದನ್ನು ಇಲ್ಲಿ ಸ್ವಲ್ಪ ಅರಿಯೋಣ. ಭಗವಚ್ಛಬ್ಧಕ್ಕೆ ಸಾಯಣಾಚಾರ್ಯರ ರುದ್ರ ಭಾಷ್ಯದಲ್ಲಿ ಉದಾಹೃತವಾದ ಅರ್ಥ ವಿವರಣೆಯನ್ನು ನೋಡುವುದಾದರೆ, ಉತ್ಪತ್ತಿಂಚ ವಿನಾಶಂಚ ಭೂತಾನಾಮಾಗತಿಂ ಗತಿಮ್, ವೇತ್ತಿ ವಿದ್ಯಾಮವಿದ್ಯಾಂಚ ಸ ವಾಚ್ಯೋ ಭಗವಾನಿತಿ.

ಜೀವಜಂತುಗಳ ಹುಟ್ಟು ಸಾವುಗಳನ್ನೂ, ಬಾಳಿನ ಏಳು ಬೀಳುಗಳನ್ನೂ ಮತ್ತು ಅವರ ಜ್ಞಾನಾ ಜ್ಞಾನದ ಸ್ವರೂಪಗಳನ್ನೂ ಯಾವಾತನು ಬಲ್ಲನೋ, ಅವನಿಗೆ ಭಗವಾನ್ ಎನ್ನುವ ಶಬ್ದ ಸಲ್ಲುತ್ತದೆ ಎನ್ನುವುದು ಈ ಮಾತಿನ ತಾತ್ಪರ್ಯ.