Vinayak V Bhat Column: ರಾಷ್ಟ್ರಋಣ ಸಂದಾಯದ ಪ್ರಜ್ಞೆ: ಭಾರತದ ಇಂದಿನ ಅಗತ್ಯ
ಇಲ್ಲಿ ಪುರಂದರ ದಾಸರು ‘ಋಣ’ ಎನ್ನುವುದನ್ನು ಆರ್ಥಿಕ ಸಾಲಕ್ಕೆ ಹೋಲಿಸಿ ಬರೆದ ಸಾಲುಗಳಂತೆ ಕಂಡರೂ, ಸೂಕ್ಷ್ಮವಾಗಿ ನೋಡಿದಾಗ ಇನ್ನೂ ಗಹನವಾದ ಅರ್ಥಕಲ್ಪನೆ ಅವರ ಮನಸ್ಸಿನಲ್ಲಿತ್ತು ಎನ್ನುವುದು ತಿಳಿಯುತ್ತೆ. ಸಾಮಾನ್ಯವಾಗಿ ಮಾತನಾಡುವಾಗ, ‘ನಾನು ನಿನಗೆ ಋಣಿ, ಅಥವಾ ಚಿರರುಣಿ, ನಿನ್ನ ಋಣದಲ್ಲಿ ಬೀಳುವುದು ನನಗಿಷ್ಟವಿಲ್ಲ, ಏನು ಮಾಡಿದರೂ ತಾಯಿಯ ಋಣ ವನ್ನು ತೀರಿಸ ಲಾಗದು’ ಮುಂತಾಗಿ ಋಣದ ಕುರಿತು ಮಾತನಾಡುತ್ತೇವೆ.
-
ವಿದ್ಯಮಾನ
ಪ್ರಾಚೀನರು ಪ್ರಮುಖವಾಗಿ ಮೂರು ಋಣಗಳಿವೆ ಎಂದಿದ್ದಾರೆ. ಮೊದಲನೆಯದಾಗಿ ಪಿತೃಋಣ, ಎರಡನೆಯದಾಗಿ ಋಷಿಋಣ ಹಾಗೂ ಮೂರನೆಯದಾಗಿ ದೇವಋಣ. ಮನುಷ್ಯ ನಾಗಿ ಹುಟ್ಟಿದವ ನಿಗೆ ಈ ಮೂರು ಋಣಗಳ ನೆನಪು ಸದಾ ಇರಬೇಕು. ಈ ಮೂರು ಋಣಗಳ ಜತೆಗೆ, ಈ ಕಾಲಕ್ಕನುಗುಣವಾಗಿ ದೇಶಋಣವನ್ನೂ ಸೇರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.
‘ಋಣವೆಂಬ ಸೂತಕವು ಬಹುಬಾಧೆ ಪಡಿಸುತಿದೆ, ಗುಣನಿಧಿಯೆ ನೀ ಎನ್ನ ರುಣವ ಪರಿಹರಿಸೋ. ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ ಸತ್ತಸೂತಕವು ಹನ್ನೊಂದು ದಿನವೂ. ಮತ್ತೆ ಋಣ ಸೂತಕವು ಜನ್ಮ ಜನ್ಮಾಂತರವು ಎತ್ತಹೋದರು ಬಿಡದು ಬೆನ್ಹತ್ತಿ ಬರುತಿಹುದೂ’ ಎನ್ನುವ ಕೀರ್ತನೆಯನ್ನು ನೀವೆಲ್ಲ ಕೇಳಿಯೇ ಇರುತ್ತೀರಿ.
ಇಲ್ಲಿ ಪುರಂದರ ದಾಸರು ‘ಋಣ’ ಎನ್ನುವುದನ್ನು ಆರ್ಥಿಕ ಸಾಲಕ್ಕೆ ಹೋಲಿಸಿ ಬರೆದ ಸಾಲುಗಳಂತೆ ಕಂಡರೂ, ಸೂಕ್ಷ್ಮವಾಗಿ ನೋಡಿದಾಗ ಇನ್ನೂ ಗಹನವಾದ ಅರ್ಥಕಲ್ಪನೆ ಅವರ ಮನಸ್ಸಿನಲ್ಲಿತ್ತು ಎನ್ನುವುದು ತಿಳಿಯುತ್ತೆ. ಸಾಮಾನ್ಯವಾಗಿ ಮಾತನಾಡುವಾಗ, ‘ನಾನು ನಿನಗೆ ಋಣಿ, ಅಥವಾ ಚಿರರುಣಿ, ನಿನ್ನ ಋಣದಲ್ಲಿ ಬೀಳುವುದು ನನಗಿಷ್ಟವಿಲ್ಲ, ಏನು ಮಾಡಿದರೂ ತಾಯಿಯ ಋಣ ವನ್ನು ತೀರಿಸಲಾಗದು’ ಮುಂತಾಗಿ ಋಣದ ಕುರಿತು ಮಾತನಾಡುತ್ತೇವೆ. ಈ ವಾಕ್ಯಗಳನ್ನು ನೋಡು ವಾಗ ಋಣ ಎನ್ನುವಂಥದ್ದಕ್ಕೆ ಕೇವಲ ಹಣಕಾಸಿನ ಸಾಲ ಎನ್ನುವ ಅರ್ಥವಷ್ಟೇ ಅಲ್ಲ, ಇನ್ನೂ ಹೆಚ್ಚಿನ ಅರ್ಥ ಚಿಂತನೆಯಿದೆ ಎನ್ನುವುದು ಗೊತ್ತಾಗುತ್ತದೆ.
ಇದು ಕೇವಲ ಹಣಕಾಸಿನ ಸಾಲವನ್ನಷ್ಟೇ ಅಲ್ಲದೆ, ನೈತಿಕ ಕೃತಜ್ಞತೆ ಅಥವಾ ಉಪಕಾರಗಳನ್ನು ತೀರಿಸಬೇಕಾದ ಸ್ಥಿತಿಯನ್ನೂ ಸೂಚಿಸುತ್ತದೆ. ಕೆಲವರಿಗೆ ಜೀವನ ಪರ್ಯಂತ ನಾವು ಋಣಿಯಾಗಿಯೇ ಇರಬೇಕಾಗುತ್ತದೆ, ಕಾರಣ ಅವರ ಋಣವನ್ನು ತೀರಿಸಿ ಮುಗಿಸಲಾಗುವುದೇ ಇಲ್ಲ.
ಉದಾಹರಣೆಗೆ ತಂದೆ-ತಾಯಿಗಳ ಋಣ, ಅದು ಏನು ಮಾಡಿದರೂ ತೀರಿಸಿ ಮುಗಿಸುವಂಥದ್ದಲ್ಲ. ಇನ್ನು, ಈ ಕೆಲಸ ಮಾಡಿ ನಾನು ಆತನ ಋಣಮುಕ್ತನಾದೆನಪ್ಪಾ ಸಾಕೋ ಸಾಕು ಎನ್ನುವ ಸಂದರ್ಭ ವೂ ಇದೆ. ಒಟ್ಟಿನಲ್ಲಿ ಇದು ಕೇವಲ ಹಣಕಾಸಿನ ಸಾಲಕ್ಕೆ ಸೀಮಿತವಾದ ಪದವಲ್ಲ ಎನ್ನುವುದಕ್ಕೆ ಇಷ್ಟೆಲ್ಲಾ ಹೇಳಬೇಕಾಯಿತು.
ಇದನ್ನೂ ಓದಿ: Vinayaka M Bhat Column: ಒಳ್ಳೆಯ ಮಾತನಾಡಲೂ ಸತತ ಅಭ್ಯಾಸದ ಬಲ ಬೇಕು !
ಕೇವಲ ಹಣಕಾಸಿನ ಋಣವಾದರೆ ಇಎಂಐ ಕಟ್ಟತ್ತಿರುವ ನಾವೆಲ್ಲರೂ ಋಣವಂತರೇ. ಹಾಗೆ ನೋಡಿದರೆ ಪ್ರತಿ ದೇಶದ ಆರ್ಥಿಕತೆಯೂ ಇಂದು ಋಣಭಾರದಿಂದ ತತ್ತರಿಸಿ ಹೋಗುತ್ತಿದೆ, ಜಾಗತಿಕ ಆರ್ಥಿಕತೆ ಇಂದು ನಿಂತಿರುವುದೇ ಋಣದ ಮೇಲೆ. ಆದರೆ, ಅದಕ್ಕಿಂತ ಮಿಗಿಲಾದ ಋಣಗಳು ನಮಗಿವೆ ಎನ್ನುವುದೇ ನಮಗೆ ತಿಳಿದಿಲ್ಲದಿರುವುದು ದುರದೃಷ್ಟಕರ.
ಋಣವಿರುವುದೇ ನಮಗೆ ತಿಳಿದಿಲ್ಲದಿರುವಾಗ ಆ ಋಣವನ್ನು ತೀರಿಸುವತ್ತ ಯತ್ನ ಮಾಡುವು ದಾದರೂ ಹೇಗೆ ಅಲ್ಲವೇ? ಋಣ ಸೂತಕವನ್ನು ತೀರಿಸದಿದ್ದರೆ ಎತ್ತಹೋದರೂ ಬಿಡದೆ ಬೆನ್ಹತ್ತಿ ಬರುತ್ತೆ ಎಂದು ದಾಸರು ಬೇರೆ ನಮಗೆ ಎಚ್ಚರಿಸಿದ್ದಾರೆ.
ಪ್ರಾಚೀನರು ಪ್ರಮುಖವಾಗಿ ಮೂರು ಋಣಗಳನ್ನು ಹೇಳುತ್ತಾರೆ. ಮೊದಲನೆಯದಾಗಿ ಪಿತೃಋಣ, ಎರಡನೆಯದಾಗಿ ಋಷಿಋಣ ಹಾಗೂ ಮೂರನೆಯದಾಗಿ ದೇವಋಣ. ನಮ್ಮನ್ನು ಹೊತ್ತು ಹೆತ್ತು ಶರೀರ ನೀಡಿ ನಾಮರೂಪಗಳಿಂದ ಕೂಡಿದ ಬದುಕನ್ನು ಕೊಟ್ಟ ತಂದೆ-ತಾಯಿಯರು ಹಾಗೂ ನಮ್ಮ ಪೂರ್ವಜರ ಋಣವನ್ನು ಪಿತೃ ಋಣವೆನ್ನುತ್ತಾರೆ.
ಅದನ್ನು ತೀರಿಸುವುದು ಹೇಗೆ ಎಂದರೆ, ನಾವೂ ತಂದೆ-ತಾಯಿಯರಾಗಿ ಲೋಕಕ್ಕೆ ಒಳ್ಳೆಯ ಪ್ರಜೆ ಗಳನ್ನು ಕೊಡುವುದರಿಂದಲೇ ಆಗಿದೆ. ಇನ್ನು ಎರಡನೆಯದಾದ ಋಷಿಋಣ, ಋಷಿಗಳು ಎಂದರೆ ಪರಮ ಜ್ಞಾನಿಗಳು ಎಂದರ್ಥ, ಋಷಿಗಳು ಎಂದರೆ ಶೋಧಕರು, ತತ್ವಾನ್ವೇಷಿಗಳು ಎಂತಲೂ ಅರ್ಥ ಮಾಡಬಹುದು.
ಪ್ರಾಚೀನ ಜ್ಞಾನ ರಾಶಿಗಳನ್ನು ಹುಡುಕಿ ತೆಗೆದು ಅದರ ಅರ್ಥಾನು ಸಂಧಾನ ಮಾಡಿ ನಮ್ಮವರೆಗೆ ತಂದು ಮುಟ್ಟಿಸಿದ ಋಣ ನಮ್ಮ ಮೇಲಿರುತ್ತದೆ. ಅವರುಗಳು ತೋರಿಸಿದ ಜ್ಞಾನವನ್ನು ಸರಿಯಾಗಿ ಅರಿತು, ಪಾಲಿಸಿ ಮುಂದಿನ ಜನಾಂಗಕ್ಕೆ ತಲುಪಿಸುವುದರ ಮೂಲಕ ಋಷಿಋಣವನ್ನು ಸ್ವಲ್ಪ ಮಟ್ಟಿಗಾದರೂ ತೀರಿಸಬಹುದಾಗಿದೆ.
ಇನ್ನು ಕೊನೆಯದಾಗಿ ಉಳಿದಿರುವುದು ದೇವಋಣ, ಜೀವ ಜೀವನ, ಸರ್ವವೂ ದೇವರ ದಯೆ ಯಿಂದಲೇ ನಮಗೆ ದೊರೆತಿರುವುದರಿಂದ ಆ ಋಣವೂ ನಮ್ಮ ಮೇಲಿರುತ್ತದೆ. ಯಜ್ಞ ದಾನ ತಪಸ್ಸು ವೇದೋಕ್ತವಾದ ಸುಕರ್ಮಗಳನ್ನು ಮಾಡುವುದರ ಮೂಲಕ ಆ ಋಣವನ್ನು ಮನುಷ್ಯನಾದವನು ತೀರಿಸಿದಂತಾಗುತ್ತದೆಯಂತೆ.
ಮನುಷ್ಯನಾಗಿ ಹುಟ್ಟಿದವನಿಗೆ ಈ ಮೂರು ಋಣಗಳ ಜ್ಞಪ್ತಿ ಸದಾ ಇರಬೇಕಾಗುತ್ತದೆ. ಪ್ರಾಚೀನರು ಗುರುತಿಸಿದ ಈ ಮೂರು ಋಣಗಳ ಜತೆಗೆ, ಈ ಕಾಲಕ್ಕನುಗುಣವಾಗಿ ದೇಶಋಣವನ್ನೂ ಸೇರಿಸಿಕೊಳ್ಳ ಬೇಕಾದ ಅವಶ್ಯಕತೆಯನ್ನು ದಾರ್ಶನಿಕರಾದ ಸ್ವಾಮಿ ವಿವೇಕಾನಂದರಂಥ ಸನ್ಯಾಸಿಗಳು, ವಿರಕ್ತ ರಾಷ್ಟ್ರಕರಾದ ಡಿವಿಜಿ ಅಂಥವರು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ, ಆರ್ಯ ಸಮಾಜ ಮುಂತಾದ ಅನೇಕ ಸ್ವಯಂ ಸೇವಕ ಸಂಘಗಳು ಮನಗಂಡಿದ್ದವು.
ಭಾರತೀಯರದ್ದು ಮೊದಲಿನಿಂದಲೂ ದೇಶದ ಕುರಿತಾಗಿ ಒಂದು ಥರ ‘Taken for granted’ ಮನೋ ಭಾವ. ದೇಶ ನಮಗೇನು ಮಾಡಿದೆ ಎನ್ನುವುದೇ ಸದಾ ನಮ್ಮ ಪ್ರಶ್ನೆಯಾಗಿರುತ್ತದೆ ವಿನಃ ನಾವು ದೇಶ ಕ್ಕೆ ಏನು ಮಾಡಬೇಕಿದೆ ಎನ್ನುವುದರ ಕುರಿತು ಲಕ್ಷ್ಯವೇ ಇರುವುದಿಲ್ಲ. ಹಾಗೆ ನೋಡಿದರೆ, ಇಂದು ದೇಶ ಸೇವೆಯೇ ಎಲ್ಲ ಧರ್ಮಗಳ ಪ್ರಮುಖ ಅಂಶವಾಗಬೇಕಾದ ಅಗತ್ಯವಿದೆ.
ನಮ್ಮ ಪ್ರಧಾನ ಮಂತ್ರಿಗಳು ಪದೇ ಪದೆ ಹೇಳುವಂತೆ ‘ದೇಶ ಸರ್ವಪ್ರಥಮ’ ವಾಗಬೇಕಿದೆ. ಒಂದು ದೇಶವನ್ನು ಉಳಿಸುವ ಸಲುವಾಗಿ, ಅಥವಾ ಸಧೃಢವಾಗಿ ಬೆಳೆಸುವ ಸಲುವಾಗಿ ಯಾವೆಲ್ಲ ತ್ಯಾಗ ಗಳನ್ನು ಆ ದೇಶದ ಸಣ್ಣ-ಸಣ್ಣ ಘಟಕಗಳು ಮಾಡಬೇಕಾದರೂ ಅದು ಒಪ್ಪಿತವೇ ಆಗಬೇಕು. ಒಂದು ಮನೆಯನ್ನು ಉಳಿಸಲು ಒಬ್ಬನ ಬಲಿದಾನ, ಒಂದು ಊರನ್ನು ಉಳಿಸಲು ಕೆಲವು ಮನೆಗಳನ್ನು ಕಳೆದುಕೊಳ್ಳಬೇಕಾಗಿ ಬಂದರೆ, ಅಥವಾ ಒಂದು ದೇಶದ ಉಳಿವಿಗಾಗಿ ಏನೆಲ್ಲಾ ತ್ಯಾಗ ಬಲಿದಾನಗಳು ಆಗಬೇಕಾದರೂ ಅದು ಸರಿಯೇ.
ನಮ್ಮ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇದನ್ನೇ ತಾನೆ ನಾವು ಕಂಡಿದ್ದು. ಮನೆ ಮಠ ಗಳನ್ನು ತ್ಯಾಗ ಮಾಡಿ ಇಡೀ ಜೀವನವನ್ನು ಹೋರಾಟದಲ್ಲಿ ಸವೆಸಿ ಹುತಾತ್ಮರಾದವರು ಲೆಕ್ಕವಿಲ್ಲ ದಷ್ಟು ಜನ. ದೇಶದ ಋಣ ತೀರಿಸುವ ಕರ್ತವ್ಯದಲ್ಲಿ ಪ್ರಾಣ ಹೆಚ್ಚಾಗಿ ಕಾಣಿಸಲೇ ಇಲ್ಲ ಅವರುಗಳಿಗೆ. ಜನತಗೆ ದೇಶಋಣದ ಕಲ್ಪನೆ ಇಲ್ಲದಿದ್ದ ಕಾಲದ ನಮ್ಮ ದೇಶವನ್ನು ಪರಕೀಯರು ಸಾವಿರಾರು ವರ್ಷಗಳ ಕಾಲ ಆಳಿದ್ದಲ್ಲವೇ.
ಕೆಲವು ಜನರಿಗೆ ದೇಶಕ್ಕಿಂತ ಸ್ವಾರ್ಥವೇ ಪ್ರಮುಖವಾದಾಗ ಪರಕೀಯರು ಅದರ ಲಾಭ ಪಡೆದದ್ದ ಲ್ಲವೇ? ರಾಷ್ಟ್ರ ಋಣ ಸಂದಾಯದ ವಿಷಯ ಬಂದಾಗ ಗ್ರೀಕ್ ತತ್ವಜ್ಞಾನಿಯಾಗಿದ್ದ ಸಾಕ್ರಟೀಸ್‌ನ ರಾಷ್ಟ್ರಕ ಪ್ರಜ್ಞೆಯ ಕುರಿತು ಹೇಳಬೇಕು, ಪಾಶ್ಚಾತ್ಯ ತತ್ತ್ವಶಾಸ್ತ್ರದ ಮೂಲ ಪುರುಷ ಎಂದು ಖ್ಯಾತಿ ಪಡೆದಿದ್ದ ಸಾಕ್ರಟೀಸ್ ನೈತಿಕತೆ, ಸದ್ಗುಣಗಳಿಗೆ ಒತ್ತುಕೊಡುತ್ತಾ ಜೀವನವನ್ನು ಸದಾ ಪರೀಕ್ಷಿಸು ವುದರ ಮೇಲೆಯೇ ಆಯುಷ್ಯ ಸವೆಸಿದ್ದವ.
ದೇಶದ ಸಾಂಪ್ರದಾಯಿಕ ದೇವರುಗಳನ್ನು ಗೌರವಿಸಲು ನಿರಾಕರಿಸಿದ್ದಕ್ಕಾಗಿ ಮತ್ತು ಯುವಕರನ್ನು ವೈಚಾರಿಕವಾಗಿ ಭ್ರಷ್ಟಗೊಳಿಸಿದ್ದಕ್ಕಾಗಿ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು, ವಿಚಾರಣೆಯ ಅವಧಿಯಲ್ಲಿ, ದಯಾಭಿಕ್ಷೆ ಬೇಡುವ ಅವಕಾಶವಿತ್ತಾದರೂ, ಕರುಣೆಗಾಗಿ ಮನವಿ ಮಾಡುವ ಬದಲು ಆತ ತನ್ನನ್ನು ತಾನು ಸಮರ್ಥಿಸಿಕೊಂಡ.
ಅಧರ್ಮದ ನಡತೆ ಮತ್ತು ಅಥೆನ್ ಯುವಕರನ್ನು ಭ್ರಷ್ಟಗೊಳಿಸಿದ ಆಪಾದನೆಯಲ್ಲಿ ತಪ್ಪಿತಸ್ಥ ನೆಂದು ಸಾಬೀತಾದ ನಂತರ ಅವರ 70ನೇ ವಯಸ್ಸಿನಲ್ಲಿ, ‘ಹೆಮ್ಲಾಕ್’ ಎನ್ನುವ ವಿಷ ಕುಡಿಸಿ ಅವನನ್ನು ಗಲ್ಲಿಗೇರಿಸಲಾಯಿತು. ಯುವಕರನ್ನು ಭ್ರಷ್ಟಗೊಳಿಸುವುದು: ಅಧಿಕಾರ ಮತ್ತು ಸಾಂಪ್ರ ದಾಯಿಕ ಮೌಲ್ಯಗಳನ್ನು ಪ್ರಶ್ನಿಸುವಂತೆ ಯುವಕರನ್ನು ಪ್ರೊತ್ಸಾಹಿಸುತ್ತಿದ್ದನೆಂದು ಅವನ ಮೇಲೆ ಆರೋಪ ಹೊರಿಸಲಾಯಿತು.
ಅವರ ಪ್ರಶ್ನಿಸುವ ವಿಧಾನವು ಆಗಾಗ್ಗೆ ಪ್ರಮುಖ ನಾಗರಿಕರನ್ನು ಸಾರ್ವಜನಿಕವಾಗಿ ಮೂರ್ಖರಂತೆ ಕಾಣುವಂತೆ ಮಾಡಿತು, ಇದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಯಿತು. ಸಾಕ್ರಟೀಸ್ ಪ್ರಜಾ ಪ್ರಭುತ್ವವನ್ನು ಬಹಿರಂಗವಾಗಿ ಟೀಕಿಸುತ್ತಿದ್ದರು, ಆಡಳಿತವನ್ನು ಬಹುಮತದ ಅಥವಾ ಲಾಟರಿ ಯಿಂದ ನಿರ್ಧರಿಸುವ ಬದಲು ನುರಿತ ತಜ್ಞರಿಗೆ ವಹಿಸಬೇಕು ಎಂದು ಅವರು ವಾದಿಸುತ್ತಿದ್ದರು.
ಅಂತರ್ಯುದ್ಧದಿಂದ ಈಗತಾನೆ ಚೇತರಿಸಿಕೊಂಡ ದೇಶದಲ್ಲಿ, ಈ ದೃಷ್ಟಿಕೋನಗಳನ್ನು ಹೊಸದಾಗಿ ಪುನಃಸ್ಥಾಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಗೆ ನೇರ ಬೆದರಿಕೆಯಾಗಿ ನೋಡಲಾಯಿತು. ಈ ನಿರಂತರ ಸಾಮಾಜಿಕ ವಿಮರ್ಶೆಯು ಅವರನ್ನು ಅಧಿಕಾರದಲ್ಲಿರುವವರಿಗೆ ಉಪದ್ರವವನ್ನಾಗಿ ಮಾಡಿತು.
ತೀರ್ಪುಗಾರರಿಂದ ತಪ್ಪಿತಸ್ಥರೆಂದು ಸಾಬೀತಾದ ನಂತರ, ಸಾಕ್ರಟೀಸ್‌ಗೆ ತನ್ನದೇ ಆದ ಶಿಕ್ಷೆಯನ್ನು ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ತಾನು ಅಥೆಗೆ ಮಾಡಿದ ಸೇವೆಗೆ ಬಹುಮಾನವಾಗಿ ಸರಕಾರದ ವೆಚ್ಚದಲ್ಲಿ ಜೀವನ ಪರ್ಯಂತ ಉಚಿತ ಊಟವನ್ನು ನೀಡಬೇಕೆಂದು ವ್ಯಂಗ್ಯವಾಗಿ ಪ್ರಸ್ತಾಪಿಸಿದರು. ಇದು ತೀರ್ಪುಗಾರರನ್ನು ಇನ್ನೂ ಕೆರಳಿಸಿ ಮರಣದಂಡನೆಯ ತೀರ್ಮಾನ ಮಾಡಲು ಕಾರಣವಾಯಿತು.
ಹೀಗೆ ಅವರು ಸೆರೆಮನೆಯಲ್ಲಿದ್ದ ಕಾಲದಲ್ಲಿ ಆತನ ಆಪ್ತ ಶಿಷ್ಯನೊಬ್ಬ ಸೆರೆಮನೆಯಿಂದ ತಪ್ಪಿಸಿ ಕೊಂಡು ಓಡಿಹೋಗುವ ಉಪಾಯವನ್ನು ಸೂಚಿಸುತ್ತಾನೆ. ತಾನು ಸೆರೆಮನೆಯ ಅಧಿಕಾರಿ ಗಳಿಗೆ ಲಂಚ ಕೊಟ್ಟು ಅವರು ನಿದ್ರೆಯಲ್ಲಿರುವಂತೆ ನೋಡಿಕೊಳ್ಳುತ್ತೇನೆ, ಆಗ ನೀವು ತಪ್ಪಿಸಿ ಕೊಂಡು ಓಡಿ ಹೋಗಿ ದೇಶಾಂತರಕ್ಕೆ ತೆರಳಿ ಜೀವ ಉಳಿಸಿಕೊಳ್ಳಬಹುದು ಎನ್ನುವುದು ಆತನ ವಿಚಾರ ವಾಗಿತ್ತು. ಜೀವ ಉಳಿಸಿಕೊಳ್ಳಬಹುದಾದ ಶಿಷ್ಯನ ಈ ಪ್ರಸ್ತಾವಕ್ಕೆ ಸಾಕ್ರಟೀಸ್ ನೀಡಿದ ಉತ್ತರ ಇಂದು ನಮಗೆ ಪ್ರಸ್ತುತವಾಗಿದೆ ಹಾಗೂ ಪ್ರೇರಕವೂ ಆಗಿದೆ.
“ಅಯ್ಯಾ ನಾನು ಮಾತೃ ದ್ರೋಹಿಯಾಗಬೇಕು ಎಂದು ನೀನು ಹೇಳುತ್ತಿರುವುದೇನು? ನಾನು ಹುಟ್ಟಿದ ಜಾಗವಿದು, ನನಗೆ ‘ಅಥೆನ್ಸ್’ ತಾಯಿ ಇದ್ದ ಹಾಗೆ, ಈ ದೇಶದ ಸಂಸ್ಥೆಗಳಿಂದಲೇ ನಾನು ವಿದ್ಯೆ ಕಲಿತಿರುವುದು, ಇಲ್ಲಿನ ಸಾಮಾಜಿಕ ವ್ಯವಸ್ಥೆಗಳ ಅಡಿಯ ಇಲ್ಲಿಯವರೆಗೆ ನನ್ನ ಪೋಷಣೆ- ರಕ್ಷಣೆ ಗಳಾಗಿರುವುದು, ಈ ದೇಶದ ಉಪಕಾ ರದಿಂದಲೇ ನಾನು ಲೋಕವಿಖ್ಯಾತನಾಗಿರುವುದು. ನನಗೆ ಸುಖಕರವಾಗುವಲ್ಲಿಯವರೆಗೆ ಈ ದೇಶದ ಪ್ರಯೋಜನ ಪಡೆದು, ಈಗ ಅದೇ ದೇಶದ ಕಾನೂ ನಿನ ಅಡಿಯಲ್ಲಿ ನನಗೆ ಶಿಕ್ಷೆ ವಿಧಿಸಿದರೆ ಹಿಂದಿನ ಉಪಕಾರಗಳನ್ನೆಲ್ಲ ಮರೆತು ಈಗ ದೇಶಕ್ಕೆ ವಂಚನೆ ಮಾಡು ಎನ್ನುವೆಯಾ? ದೇಶದಿಂದ ನಮಗೆ ಒದಗಿಬರುವ ಸೌಲಭ್ಯಗಳು, ರಕ್ಷಣೆ ಪೋಷಣೆಗಳು ಬೇಕು, ಶಿಕ್ಷೆಯ ವಿಷಯಬಂದಾಗ ಅದೇ ಮಾತೃ ಸ್ವರೂಪಿ ದೇಶಕ್ಕೆ ದ್ರೋಹ ಬಗೆಯುವುದೇ?" ಎಂದು ಕೇಳಿ, ಶಿಷ್ಯನ ಉಪಾಯ ಸರಿಯಾದದ್ದಲ್ಲ ಎಂದು ತಳ್ಳಿಹಾಕಿ ಬಿಡುತ್ತಾನೆ.
ಆತನಿಗೆ ತನ್ನ ಪ್ರಾಣಕ್ಕಿಂತ ದೇಶದ ವ್ಯವಸ್ಥೆಯ ಉಳಿವು ಹೆಚ್ಚಾಗಿ ಕಂಡಿತು. ತಾನೊಬ್ಬ ಮರಣ ಹೊಂದಿದರೆ ಹೆಚ್ಚೇನೂ ವ್ಯತ್ಯಾಸವಾಗಲಿಕ್ಕಿಲ್ಲ. ಆದರೆ, ದೇಶದ ಆಡಳಿತ ವ್ಯವಸ್ಥೆಯನ್ನು ಧಿಕ್ಕರಿಸ ಬಾರದು, ಅದರಿಂದ ತಪ್ಪಿಸಿಕೊಂಡು ಹೋಗುವ ಆಲೋಚನೆ ಮಾಡಬಾರದು ಎನ್ನುವುದಕ್ಕ ಸಾಕ್ರೆಟೀಸ್ ನಿದರ್ಶನವಾಗಿದ್ದ.
ದೇಶ ಸೇವೆಯೆಂದರೆ ಕೇವಲ ಸೈನ್ಯಕ್ಕೆ ಸೇರಿ, ಗಡಿಯಲ್ಲಿ ನಿಂತು ಗುಂಡು ಹಾರಿಸುವುದೊಂದೇ ಅಲ್ಲ, ನಮ್ಮ ನಮ್ಮ ಕೆಲಸಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ದೇಶದ ಉತ್ಪಾದಕತೆ, ಸಂಸ್ಕೃತಿ ಯ ಬೆಳವಣಿಗೆಗೆ ಶ್ರಮಿಸುತ್ತಾ, ದೇಶದ ಕಾನೂನುಗಳನ್ನು ನಿಷ್ಠೆಯಿಂದ ಪಾಲಿಸುತ್ತಾ ಉತ್ತಮ ನಾಗರಿಕ ಪ್ರಜ್ಞೆಯಿಂದ ಬದುಕಿದರೆ ಅದೂ ದೇಶ ಸೇವೆಯೇ ಆಗುತ್ತದೆ.
ಹಾಗೆ ನೋಡಿದರೆ ಇವನ್ನೆಲ್ಲ ದೇಶ ಸೇವೆ ಎನ್ನುವುದೇ ತಪ್ಪಾದ ವ್ಯಾಖ್ಯಾನವಾಗುತ್ತದೆ. ಇದಾವುದೂ ನಾವು ಬಿಟ್ಟಿಯಾಗಿ ದೇಶಕ್ಕೆ ಮಾಡುವ ಉಪಕಾರವಲ್ಲ, ಕನಿಕರ ದಾಕ್ಷಿಣ್ಯವಲ್ಲ. ಅದು ಜನ್ಮಭೂಮಿ ಯ ಋಣಸಂದಾಯ ಮಾಡುವ ಪ್ರಯತ್ನವಷ್ಟೇ ಆಗುತ್ತದೆ. ದೇಶದಿಂದ ನಾವು ಪಡೆದದ್ದು ನೂರಾರು, ಅದರಲ್ಲಿ ಸಾಧ್ಯವಾದಷ್ಟನ್ನು ತಿರುಗಿ ಕೊಡೋಣ, ನಾವು ಪಡೆದದ್ದು ಮುಂದಿನ ತಲೆಮಾರಿಗೂ ದೊರಕುವಂತಾಗಲಿ ಎನ್ನುವ ಜವಾಬ್ದಾರಿಯುತ ಮನೋವೃತ್ತಿಯನ್ನು ಕೂಡ ರಾಷ್ಟ್ರಪ್ರೇಮ ಎನ್ನಬಹುದು.
ಯಾರು ಸ್ವದೇಶದ ಋಣವನ್ನು ಅಂಗೀಕರಿಸುತ್ತಾನೋ ಅವನೇ ನಿಜವಾದ ರಾಷ್ಟ್ರಕ (ನಾಗರಿಕ) ಎನ್ನುತ್ತಾರೆ ಡಿವಿಜಿ. ನೌಕರರು ನಾನು ಮೂವತ್ತು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತನಾಗುತ್ತಿದ್ದೇನೆ ಎನ್ನುತ್ತಾರೆ. ನನ್ನ ಇಡೀ ಕುಟುಂಬವೇ ದೇಶಸೇವೆಯಲ್ಲಿ ತೊಡಗಿಸಿಕೊಂಡಿದೆ ಎನ್ನುತ್ತಾರೆ ರಾಜಕಾ ರಣಿಗಳು.
ಅದರರ್ಥ ಬೇರೇನಲ್ಲ, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದರ್ಥ. ಅಧಿಕಾರಿಗಳು ಹಾಗೂ ಅಧಿಕಾರಸ್ಥ ರಾಜಕಾರಣಿಗಳು ಸರಕಾರದಿಂದ ಅಧಿಕೃತವಾಗಿ ಸಂಬಳ ಅಥವಾ ಗೌರವಧನ ಸ್ವೀಕರಿಸುತ್ತಾರೆ, ಕಮಿಶನ್ ಲೆಕ್ಕ ಬೇರೆಯದೇ ಇದೆ, ಆದರೆ ಅವರ ಪ್ರಕಾರ ಇದು ದೇಶದ ಅಥವಾ ಸಮಾಜದ ಸೇವೆಯಂತೆ.
ವಾಸ್ತವಿಕವಾಗಿ ಸೇವೆಗೆ ಸಂಭಾವನೆ ಇರುವುದಿಲ್ಲ, ಸಂಭಾವನೆ ಪಡೆದರೆ ಅದು ಸೇವೆಯಾಗುವದಿಲ್ಲ. ಸಂಭಾವನೆಯನ್ನು ಪಡೆದೂ ಸೇವೆ ಎನಿಸಿಕೊಳ್ಳಬಲ್ಲ ಕೆಲವು ಕರ್ಮಗಳಿವೆ. ಉದಾಹರಣೆಗೆ ವೈದ್ಯ ವೃತ್ತಿ, ಶುಶ್ರೂಷಕರ ವೃತ್ತಿ, ಶಿಕ್ಷಕ ವೃತ್ತಿ, ಸ್ವಚ್ಛತಾ ಕರ್ಮ ಹಾಗೂ ಸೈನಿಕರ ಕೆಲಸ. ಇವನ್ನು ಹೊರತುಪಡಿಸಿ ‘ಸೇವಾ’ ಎನ್ನುವ ಸಂಸ್ಕೃತ ಮೂಲದ ಪದದ ಅರ್ಥ ‘ನಿಸ್ವಾರ್ಥ ಸೇವೆ’ ಅಥವಾ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮಾಡುವ ಕೆಲಸ. ಆದರೆ ಇಂದು ಈ ಪದದ ಬಳಕೆಯನ್ನು ಮಾತ್ರ ಬೇಕಾಬಿಟ್ಟಿಯಾಗಿ ಸಾರ್ವತ್ರಿಕಗೊಳಿಸಲಾಗಿದೆ.
ಇರಲಿ, ಸ್ವಾತಂತ್ರ್ಯ ಬಂದು 80 ವರ್ಷಗಳಾಗಿವೆ. ಆದರೆ, ಎಲ್ಲವೂ ಸರಿಹೋಗಿಲ್ಲ, ಅಭದ್ರತೆ ಇನ್ನೂ ಭಾರತವನ್ನು ಕಾಡುತ್ತಲೇ ಇದೆ. ಇಷ್ಟು ವರ್ಷ ಕಳೆದ ಮೇಲೂ ಮತ್ತೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹೋರಾಟದಂಥಾ ಹೋರಾಟ ಬೇಕಾಗಿದೆ. ತ್ಯಾಗ ಬಲಿದಾನಗಳ ಅಗತ್ಯವಿದೆ ಎನಿಸುತ್ತಿದೆ. ಇಂದಿನ ಅಗತ್ಯ ಇಂಥ ರಾಷ್ಟ್ರಕ ಧರ್ಮದ್ದಾಗಿದೆ, ಇಂದು ನಮ್ಮ ದೇಶಕ್ಕೆ ಮತ್ತೆ ಅವಶ್ಯವಾಗಿ ಬೇಕಾಗಿರು ವವರು ಸಂಕಲ್ಪ ಬದ್ಧರಾದ, ಸ್ವಾರ್ಥವಿರಹಿತರಾದ ರಾಷ್ಟ್ರ ಧುರಂಧರರು, ಸ್ವಯಂ ಸೇವಕರು, ಡಿವಿಜಿಯವರಂಥ ರಾಷ್ಟ್ರ ಚಿಂತನೆಯುಳ್ಳ ರಾಷ್ಟ್ರಕರು, ವೀರಸನ್ಯಾಸಿ ವಿವೇಕಾನಂದ ರಂಥವರು.
ಪಟೇಲರಂಥಾ ದಕ್ಷ ಆಡಳಿತಗಾರರು, ಆಚಾರ್ಯ ವಿನೋಬಾ ಬಾವೆ ಯವರಂಥ ಸಮಾಜ ಸೇವಕರು ಹಾಗೂ ಅರವಿಂದರಂಥ ಆಧ್ಯಾತ್ಮಿಕರು. ನಾವು ಈ ದೇಶದಿಂದ ಅಪರಿಮಿತ ಉಪಕಾರ ವನ್ನು ಪಡೆದಿದ್ದೇವೆ, ಆದ್ದರಿಂದ ಕಿಂಚಿತ್ತಾದರೂ ಆ ಋಣವನ್ನು ತೀರಿಸಬೇಕೆಂದಿರುವವರು. ಅವರು ಕಾರ್ಖಾನೆ ಕಚೇರಿ ಮಳಿಗೆಗಳಲ್ಲಿ ಕೆಲಸ ಮಾಡುವವರಾಗಿರಲಿ, ವೈದ್ಯ, ವಕೀಲರು ಗಳಾಗಿರಲಿ. ಅವರು ಏನೇ ಆಗಲಿ, ದಿನದಲ್ಲಿ ಒಂದಿಷ್ಟು ಹೊತ್ತು ದೇಶಕ್ಷೇಮದ ಚಿಂತನೆಗೆ ಮುಡಿಪಿ ಡುವ ಸಾತ್ವಿಕರಾಗಿರಬೇಕು.
ಈ ಮನೋವೃತ್ತಿಯ ಜನರನ್ನು ಒಂದೆಡೆ ಸೇರಿಸುವ ರಾಷ್ಟ್ರಪ್ರೇಮವನ್ನು ಜೀವಂತವಿರಿಸುವ ಸಂಘ ಸಂಸ್ಥೆಗಳೂ ಬೇಕು. ಈ ಸಂಘ ಸಂಸ್ಥೆಗಳ ಮೂಲಕ ದೇಶದ ಋಣ ಸಂದಾಯದ ಪ್ರಜ್ಞೆ ಪ್ರತಿ ನಾಗರಿಕರಲ್ಲೂ ವ್ಯಾಪಿಸಬೇಕು. ಕೇಳಲಿಕ್ಕೆ ಇವೆಲ್ಲ ಒಣ ಆದರ್ಶವಾದದಂತೆ ಕಾಣುವುದಾದರೂ, ರಾಷ್ಟ್ರಪ್ರೇಮ ಕೊರತೆ ದೇಶದಲ್ಲಿ ಇದ್ದೇ ಇದೆ. ಹಾಗಾಗಿ ಇಂದು ಭಾರತಕ್ಕೆ ಅತ್ಯಂತ ಅವಶ್ಯವಾಗಿ ಬೇಕಾಗಿರುವುದು ಇದೇ ರಾಷ್ಟ್ರಪ್ರೇಮವೇ ಆಗಿದೆ.