ನವ ಯುಗದ ಆದಿ ಈ ಯುಗಾದಿ
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಹೊಸತು ಹೊಸತು ತರುತಿದೆ ಎಂದು ವರಕವಿ ಬೇಂದ್ರೆ ಹಾಡಿದರು; ಅದರಂತೆ, ನಮ್ಮೆಲ್ಲರ ಮನಸ್ಸಿನಲ್ಲಿ ಈ ಯುಗಾದಿಯು ಹೊಸ ಸಂತಸ ವನ್ನು ಮತ್ತು ಉತ್ಸಾಹವನ್ನು ತುಂಬಲಿ, ಬದುಕಿನ ಹೊಸ ಹೊಸ ಅಭಿಯಾನಗಳಿಗೆ ಸ್ಫೂರ್ತಿಯನ್ನು ತುಂಬಲಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು


ಪಲ್ಲವಿ ಚೆನ್ನಬಸಪ್ಪ
ಯುಗಾದಿ ಎಂದರೆ ಮೊದಲು ನೆನಪಾಗುವುದು ಬೇವುಬೆಲ್ಲದ ಮಿಶ್ರಣ ಮತ್ತು ವಸಂತಮಾಸದ ಮಾವಿನ ಚಿಗುರು. ಯುಗಾದಿ ಹಲವು ಆರಂಭಗಳಿಗೆ ಮುನ್ನುಡಿ. ಚೈತ್ರ ಶುದ್ಧ ಪಾಡ್ಯಮಿಯ ದಿನವೇ ಯುಗಾದಿ. ಋತುಗಳ ರಾಜ ವಸಂತಕಾಲ ಆರಂಭವಾಗುವ ಈ ದಿನದಂದು ಸೂರ್ಯನು ಆಗಸದಲ್ಲಿ ತನ್ನ ಆಧಿಪತ್ಯವನ್ನು ತೋರುವುದಂತೂಖ ದಿಟ; ಅಧಿಕೃತವಾಗಿ ಬೇಸಿಗೆಕಾಲ ಆರಂಭವಾಗುವ ದಿನ. ನಮ್ಮ ದೇಶದ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ.
ಪ್ರತೀವರ್ಷದ ಯುಗಾದಿಯ ದಿನ, ಹೊಸ ಸಂವತ್ಸರದ ಆರಂಭವಾಗುತ್ತದೆ. ಪ್ರಸ್ತುತ ವಿಶ್ವಾವಸು ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಯುಗಾದಿಯಂದು ಸೂರ್ಯೋದಯದ ಸಮಯದಲ್ಲಿಯೇ ಬ್ರಹ್ಮದೇವ ಸೃಷ್ಟಿಯ ಕಾರ್ಯವನ್ನು ಆರಂಭಿಸಿದರು, ಕಾಲಗಣನೆ ಆರಂಭವಾದ ದಿನ ಮತ್ತು ನಾರಾಯಣನ ಏಳನೇ ಪ್ರಸಿದ್ಧ ಅವತಾರವಾದ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಟ್ಟಿಗೆ 14 ವರ್ಷಗಳ ವನವಾಸ ಮುಗಿಸಿ, ಮರಳಿ ಅಯೋಧ್ಯೆಗೆ ಬಂದು ರಾಜನಾಗಿ ಪಟ್ಟಾಭಿಷಿಕ್ತನಾದ ದಿನ, ಅಂದರೆ ರಾಮರಾಜ್ಯ ಆರಂಭವಾದ ದಿನವೆಂದು ಹಲವು ಉಲ್ಲೇಖಗಳು, ನಂಬಿಕೆಗಳು ಇವೆ. ಯುಗಾದಿಯಾದ ಒಂಬತ್ತನೇ ದಿನ ಶ್ರೀರಾಮನವಮಿಯ ಆಚರಣೆ. ಈ ಹಬ್ಬ ವನ್ನು ಕರ್ನಾಟಕದಲ್ಲಿ ಯುಗಾದಿ ಎಂದು ಕರೆದರೆ, ಉತ್ತರ ಭಾರತದ ಕಡೆ ಭೈಸಾಖಿ ಎಂದೂ ಮತ್ತು ಮಹಾರಾಷ್ಟ್ರದ ಕಡೆ ಗುಡಿಪಾಡ್ವ ಎಂದೂ ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ.
ಇದನ್ನೂ ಓದಿ: Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ
ನಮ್ಮ ರಾಜ್ಯದ ಕರಾವಳಿಯಲ್ಲಿ ಸೌರಮಾನ ಯುಗಾದಿಯ ಆಚರಣೆ ನಡೆಯುತ್ತಿದ್ದು, ಇದು ಸಾಮಾನ್ಯವಾಗಿ ಎಪ್ರಿಲ್ 14ರಂದು ಪ್ರತಿ ವರ್ಷ ಬರುತ್ತದೆ. ಬಿಸು, ವಿಷು ಎಂದೂ ಈ ಹಬ್ಬವನ್ನು ಕರೆಯುವುದುಂಟು. ನಮ್ಮ ದೇಶದ ಹಲವು ಹಬ್ಬಗಳ ಆಚರಣೆಯ ಹಿಂದೆ ಅನುಭವಜನ್ಯ ಎನ್ನಬಹುದಾದ ಕೆಲವು ವಿಶೇಷಗಳಿರುವುದನ್ನು ಕಾಣಬಹುದು.
ಈ ಹಬ್ಬದಲ್ಲಿ ಹರಳೆಣ್ಣೆಯ ಅಭ್ಯಂಜನಕ್ಕೆ ಬಹಳ ಮಹತ್ವ ನೀಡಲಾಗಿದೆ. ಯುಗಾದಿಯಂದು ನಡು ಮಧ್ಯಾಹ್ನದ ಹೊತ್ತಿಗೆ ಮೈತುಂಬಾ ಎಣ್ಣೆ ಹಚ್ಚಿಕೊಂಡು, ಸಾಕಷ್ಟು ಹೊತ್ತು ಬಿಸಿಲಿನಲ್ಲಿ ಓಡಾಡಿ, ನಂತರ ಅಭ್ಯಂಜನ ಮಾಡಿದರೆ ಅದು ದೇಹಕ್ಕೆ ತಂಪು ಎನ್ನಲಾಗಿದೆ; ಜತೆಗೆ ಬೇಸಿಗೆಕಾಲವನ್ನು ಸವೆಸಲು ದೇಹಕ್ಕೆ ಮತ್ತೆ ಚರ್ಮಕ್ಕೆ ಹೊಸ ಉರುಪನ್ನು ತರುತ್ತದೆ; ಈ ರೀತಿಯ ಸ್ನಾನದಿಂದ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ದೇಹವನ್ನು ಸೇರುತ್ತದೆ ಎಂದೂ ಈಚೆಗೆ ತಿಳಿಯಲಾಗಿದೆ.
ಯುಗಾದಿಯ ಪ್ರಮುಖ ಆಚರಣೆಯಾದ ಬೇವಮತ್ತು ಬೆಲ್ಲವನ್ನು ತಿನ್ನುವುದರಿಂದಲೂ ಹಲವು ಆರೋಗ್ಯಲಾಭಗಳಿವೆ ಎನ್ನುವರು. ಬೇವು, ಬೆಲ್ಲದಿಂದ ದೇಹಕ್ಕೆ ದೃಢತೆ ದೊರೆಯುತ್ತದೆ. ನಮ್ಮ ಬದುಕಿನಲ್ಲಿ ನಾನಾ ಸನ್ನಿವೇಶಗಳು ಎದುರಾಗುತ್ತವೆ; ಅವು ಸುಖವಿರಲಿ, ಕಷ್ಟವಿರಲಿ, ಇದೇ ರೀತಿ ಬೇವು ಮತ್ತು ಬೆಲ್ಲವನ್ನು ಸಮಚಿತ್ತದಿಂದ ಸೇವಿಸುವಂತೆ, ಅಂತಹ ಸನ್ನಿವೇಶಗಳನ್ನೂ ಸ್ವೀಕರಿ ಸಬೇಕೆಂಬ ಅರ್ಥವಿದೆ.
ನಮ್ಮ ದೇಶದಲ್ಲಿ ಆಚರಿಸಿಕೊಂಡು ಬಂದ ಇನ್ನೊಂದು ಪದ್ಧತಿ ಎಂದರೆ, ಯುಗಾದಿಯ ದಿನ ಪಂಚಾಂಗ ಶ್ರವಣ; ಆ ವರ್ಷದ ಪಂಚಾಗವನ್ನು ಓದುವುದು ಮತ್ತು ಊರಿನ ಜನರು ಅದನ್ನು ಕೇಳುವುದು ಇದರ ಒಂದು ಭಾಗ; ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳೂ ಸೃಷ್ಟಿ ಯಾದ್ದದ್ದನ್ನು ಪಂಚಾಂಗದಲ್ಲಿ ಪಠಿಸುವುದರಿಂದ ಅಥವಾ ಶ್ರವಣ ಮಾಡುವುದರಿಂದ, ಸೃಷ್ಟಿಯ ವಿಸ್ಮಯದ ಅರಿವು ಜನರಿಗೆ ಆಗುವುದು. ಯುಗಾದಿಯ ಅವಿಭಾಜ್ಯ ಅಂಗ ಎನ್ನಬಹುದಾದ ಹೋಳಿಗೆಯು, ಹಬ್ಬದ ಮನೆಗಳಲ್ಲಿ ಹೊಸ ಸವಿಯನ್ನು ತರುತ್ತದೆ.
ಇನ್ನೂ ಈ ವಸಂತಕಾಲದ ಸೊಬಗು ಕಣ್ತುಂಬಿಕೊಳ್ಳುವುದೇ ಚೆಂದ. ಕೋಗಿಲೆಯ ದನಿ ಇಂಪಾಗ ಲೆಂದೇ ಮಾಮರ ಚಿಗುರಿ ನಿಂತಂತೆ, ಎಲ್ಲ ಗಿಡ ಮರಗಳು ತನ್ನ ಹಳೆತನವನ್ನು ಕಳೆದುಕೊಂಡು ಹೊಸತಾಗಿ ಮೈದುಂಬಿ ಚಿಗುರಿ ನಿಲ್ಲುವ ಕಾಲ. ಎಲ್ಲೆಡೆ ಸಂಭ್ರಮ, ಸೃಷ್ಟಿಯ ಅದ್ಭುತವೆನಿಸುವ ಕುಸುಮಗಳ ಘಮ, ಹೊಸ ಚೈತನ್ಯದೊಂದಿಗೆ ಪ್ರಕೃತಿಯು ಹೊಸ ವರ್ಷವನ್ನು ಸ್ವಾಗತಿಸುವ ಈ ಸುದಿನ ಯುಗದ ಆದಿಯ ದಿನ.
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎಂಬ ಹಾಡನ್ನು ವರಕವಿ ಬೇಂದ್ರೆ ಬರೆದರು ಮತ್ತು ಎಲ್ಲರ ಮನಗಳನ್ನು ಸಂಪನ್ನಗೊಳಿಸಿದರು. ಆ ಹಾಡಿನಂತೆ, ಪ್ರತೀ ವರ್ಷವು ಯುಗಾದಿಯು, ನಮ್ಮ ಬದುಕಿನಲ್ಲಿ ಹೊಸತನವನ್ನು ಹೊತ್ತು ಬರುತ್ತದೆ. ಹೊಸ ಚಿಗುರಿನೊಂದಿಗೆ ಹಳೆ ಬೇರಿನ ಸಂಪ್ರದಾಯದ ಶುಭ ಆಚರಣೆಗಳನ್ನು ಉಳಿಸಿ, ಬೆಳೆಸಿಕೊಳ್ಳೋಣ.
ಎಲ್ಲರ ಬಾಳಿನಲ್ಲಿ ಈ ಯುಗಾದಿ ನವೀನತೆಯನ್ನು ಚೆಲ್ಲಲಿ. ಚೈತ್ರದ ಚಿಗುರಂತೆ ಬದುಕು ಸದಾ ಚೈತನ್ಯತೆಯಿಂದ ಕೂಡಿರಲಿ. ಒಳಿತಾಗಲಿ. ಎಲ್ಲರ ಬಾಳು ಬೆಳಕಾಗಲಿ.