ಸುರೇಂದ್ರ ಪೈ, ಭಟ್ಕಳ
ಇಂದಿನ ದುಬಾರಿ ದಿನಗಳಲ್ಲಿ, ಕೇವಲ ಇಪ್ಪತ್ತು ರುಪಾಯಿ ಶುಲ್ಕ ಪಡೆದು, ರೋಗಿಗಳ ತಪಾಸಣೆ ನೀಡುವ ವೈದ್ಯರು, ಆದರ್ಶವನ್ನು ಪಾಲಿಸುವ ಧನ್ವಂತರಿ ಎನ್ನಬಹುದು!
ಕೇರಳದ ಕಣ್ಣೂರಿನಲ್ಲಿ ಬಡವರಿಗೆ ಕೇವಲ 2 ರೂಪಾಯಿ ಶುಲ್ಕ ಪಡೆದು 5 ದಶಕಗಳ ಕಾಲ ಚಿಕಿತ್ಸೆ ನೀಡಿ ‘2 ರೂಪಾಯಿ ಡಾಕ್ಟರ್ ’ ಎಂದು ಪ್ರಸಿದ್ಧಿ ಪಡೆದ ದಿ.ಡಾ.ಎ.ಕೆ.ರೈರು ಗೋಪಾಲ್ ಅವರ ಬಗ್ಗೆ ಹಲವರಿಗೆ ತಿಳಿದಿರಬಹುದು. ಇಂತಹವರೇ ಒಬ್ಬರು ವೈದ್ಯರು ನಮ್ಮ ಕರ್ನಾಟಕದಲ್ಲಿದ್ದಾರೆ!
ಅವರೇ ಹೊಸದುರ್ಗ ತಾಲೂಕಿನ ಡಾ.ಇ ಎಸ್. ಬ್ರಹ್ಮರಾಜು. ಇಂದಿನ ದುಬಾರಿ ಜಗತ್ತಿನಲ್ಲೂ ಕೇವಲ ಇಪ್ಪತ್ತು ರೂಪಾಯಿ ಪಡೆದು ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಬಡವರಿಗೆ ಆರೋಗ್ಯ ಸೇವೆಯನ್ನು ನೀಡುತ್ತಾ ಎಲ್ಲರಿಂದಲ್ಲೂ ‘ಇಪ್ಪತ್ತು ರೂಪಾಯಿ ಡಾಕ್ಟರ್’ ಎಂದು ಜನ ಮನ್ನಣೆಯನ್ನು ಪಡೆದ ಸರಳ, ಸಜ್ಜನ ಪ್ರತಿಭಾನ್ವಿತ ವೈದ್ಯರು ಇವರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ತಮ್ಮದೇ ಆದ ಹೆಸರಿಲ್ಲದ ಚಿಕ್ಕ ಕ್ಲಿನಿಕ್ ನಡೆಸುವ ಇವರು ಪ್ಯಾಮಿಲಿ ಫಿಜಿಶಿಯನ್ ಆಗಿದ್ದಾರೆ. ಇವರ ಕ್ಲಿನಿಕ್‌ಗೆ ಬೋರ್ಡ್ ಇಲ್ಲ. ಕಾರಣ ಇವರು ನೀಡುವ ಆಪ್ತ ಜನಪರ ಆರೋಗ್ಯಸೇವೆಯೇ ಇವರ ಹೆಗ್ಗುರುತು.
ಎಂ.ಬಿ.ಬಿ.ಎಸ್. ಪದವಿ ಪಡೆದ ಬಳಿಕ ತಮ್ಮ ಹುಟ್ಟೂರಾದ ಹೊಸದುರ್ಗದಲ್ಲಿ ತಮ್ಮದೇ ಚಿಕ್ಕ ಕ್ಲಿನಿಕ್ ನಡೆಸುತ್ತಾ ಸುತ್ತ ಮುತ್ತ ಹಳ್ಳಿಯ ಜನರ ಪಾಲಿಗೆ ವೈದ್ಯ ನಾರಾಯಣ ಎನಿಸಿಕೊಂಡರು. ರೋಗಿಯನ್ನು ಕೂಲಂಕಷವಾಗಿ ಪರೀಕ್ಷಿಸಿ ಔಷಧಿ ಬರೆದು ಕೊಡಲು ಇವರು ಬರೋಬ್ಬರಿ 15 ರಿಂದ 20 ನಿ ಮಿಷ ತೆಗೆದುಕೊಳ್ಳುತ್ತಾರೆ. ಅವರು ರೋಗಿಯನ್ನು ಪ್ರೀತಿಯಿಂದ ಮಾತನಾಡಿಸಿ, ಅವರ ಕೌನ್ಸಿಂಗ್ ಮಾಡುತ್ತಾ ಧೈರ್ಯ ತುಂಬಿ ಮನೆಯ ಮಗನಂತೆ, ಸ್ನೇಹಿತರಂತೆ ನಡೆದುಕೊಳ್ಳುತ್ತಾರೆ.
ಇದನ್ನೂ ಓದಿ: Surendra Pai Column: ಶಾಲಾ ವಾರ್ಷಿಕೋತ್ಸವ ಉದ್ದೇಶ ಮಕ್ಕಳ ದಾಖಲಾತಿ ಹೆಚ್ಚಳವೇ ?
ಒಂದು ವೇಳೆ ರೋಗಿಯ ಆರ್ಥಿಕ ಸ್ಥಿತಿ ಕಷ್ಟಕರವಾಗಿದ್ದರೆ ಅಂತಹವರಿಗೆ ಶಿವಮೊಗ್ಗ, ಬೆಂಗಳೂರಿ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮಾರ್ಗದರ್ಶನ ಮಾಡುತ್ತಾರೆ. ಗಂಭೀರ ಹಾಗೂ ತುರ್ತು ಪರಿಸ್ಥಿತಿಯಲ್ಲಿ ತಮಗೆ ಗೊತ್ತಿರುವ ಆಪ್ತ ವೈದ್ಯರ ಬಳಿ ಕಳುಹಿಸಿ ಕಡಿಮೆ ಖರ್ಚಿ ನಲ್ಲಿ ಉತ್ತಮ ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳುತ್ತಾರ. ರೋಗಿಗಳಿಗೆ ಅನಗತ್ಯವಾಗಿ ಆ ಟೆಸ್ಟ್, ಈ ಚೆಕಪ್ ಮಾಡಿಸಬೇಕು ಎಂದು ಬರೆದುಕೊಡುವುದಿಲ್ಲ. ಹಾಗಾಗಿ ಇವರ ಬಳಿ ಚಿಕಿತ್ಸೆ ಪಡೆಯಲು ಸಾಲು ಸಾಲು ಜನರು ಕಾದು ಕುಳಿತಿರುತ್ತಾರೆ.
ಜತೆಗೆ, ಇವರೊಬ್ಬ ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದ ವೈದ್ಯರು. ವಿಶೇಷವೆಂದರೆ ಇವರು ಮೊಬೈಲ್ ಬಳಕೆಯಿಂದ ದೂರವಿದ್ದಾರೆ; ಹಾಗಾಗಿ ಇವರನ್ನು ಭೇಟಿ ಆಗಬೇಕೆಂದರೆ ಅವರ ಕ್ಲಿನಿಕ್ ಅಥವಾ ಮನೆಗೆ ಭೇಟಿ ನೀಡಬೇಕು.
ಓದುವ ಹವ್ಯಾಸ: ಇವರಿಗೆ ಓದುವ ಹವ್ಯಾಸವಿದೆ; ಪರಿಸರದ ಮೇಲೆ ಅಪಾರ ಪ್ರೀತಿ. ಪರಿಸರ, ವಿಜ್ಞಾನಕ್ಕೆ ಸಂಬಂಧಿಸಿದಂತೆ ಇರುವ ಎಲ್ಲಾ ಕನ್ನಡ ಪುಸ್ತಕಗಳನ್ನೂ ಓದಿದ್ದಾರೆ; ಸಂಗ್ರಹಿಸಿದ್ದಾರೆ. ಅವರ ಮನೆಯಲ್ಲೇ ಚಿಕ್ಕ ಗ್ರಂಥಾಲಯವೂ ಇದೆ. ಇವರ ಆರೋಗ್ಯಸೇವೆಯನ್ನು ಗುರುತಿಸಿ ರೋಟರಿ ಕ್ಲಬ್ , ಜೈನ್ ಸಮಾಜ, ವೀರಶೈವ ಸಮಾಜ, ವೈದ್ಯಕೀಯ ಸಂಘ, ತಾಲೂಕು ಆಡಳಿತ ಸೇರಿದಂತೆ ಇನ್ನಿತರ 18 ಸ್ಥಳೀಯ ಸಂಘ ಸಂಸ್ಥೆಗಳು ಸನ್ಮಾನಿಸಿವೆ.
ಸಂತೃಪ್ತ ಜೀವನ: ಈ ವೈದ್ಯರು ಸರಳ ಜೀವನಕ್ಕೆ ಆದ್ಯತೆ ನೀಡುವವರು; ಮನೆಯಲ್ಲೂ ಸರಳ ಬದುಕು. ಅವರ ಪತ್ನಿಯಾದ ಜ್ವಾಲಾ ರೋಖಡೆ ಅವರೂ ಸರಳ ಜೀವನವನ್ನೇ ಇಷ್ಟಪಸುವವರು. ‘ನಮ್ಮದು ಸರಳ ಜೀವನ. ಇರಲು ಸ್ವಂತ ಮನೆಯಿದೆ, ಎರಡು ಹೊತ್ತಿನ ಊಟಕ್ಕೇನು ತೊಂದರೆ ಯಿಲ್ಲ. ಕೇವಲ ಬಡವರು ಮಾತ್ರವಲ್ಲ, ಆರ್ಥಿಕವಾಗಿ ಸ್ಥಿತಿವಂತರೂ ಸಹ ಡಾಕ್ಟರ್ ಬಳಿ ತಪಾ ಸಣೆಗೆ ಬರುತ್ತಾರೆ.
ಬಡವರಿಗೆ ಕಡಿಮೆ ಶುಲ್ಕ ಪಡೆದು ಚಿಕಿತ್ಸೆ ನೀಡಿದಾಗ, ಬಹಳ ತೃಪ್ತಿ. ಕೆಲವರು, ಶುಲ್ಕವಾದ 20 ರೂಪಾಯಿ ಸಹ ನೀಡದೆ ಹೋಗುವುದೂ ಉಂಟು; ಇನ್ನು ಕೆಲವರು ಹರಿದು ಹೋದ ನೋಟು ನೀಡಿ, ಬೇರೆ ಹಣವಿಲ್ಲ ಎಂದು ಚಿಕಿತ್ಸೆ ಪಡೆದ ಉದಾಹರೆಗಳೂ ಇವೆ.
ಅದೇನೇ ಇದ್ದರೂ, ತಮ್ಮ ಪತಿಯ ಆರೋಗ್ಯ ಸೇವೆಯು ಸಾವಿರಾರು ಬಡ ರೋಗಗಳಿಗೆ ನೆರವಾಗು ತ್ತಿದ್ದು, ರೋಗಿಗಳ ಮುಖದಲ್ಲಿ ನೆಮ್ಮದಿಯನ್ನು ನೋಡುವುದೆ ಒಂಥರಾ ಋಷಿ. ಜೀವನದಲ್ಲಿ ಹಣ ಸಂಪಾದನೆ ಮಾಡುವುದೇ ಮುಖ್ಯವಲ್ಲ. ಹಾಗೂ ನಾಲ್ಕು ಜನರಿಗೆ ಸೇವೆ ಮಾಡಿದಾಗ ಸಿಗುವ ತೃಪ್ತಿ ಹಣದಲ್ಲಿ ಸಿಗುವುದಿಲ್ಲ’ ಎನ್ನುತ್ತಾರೆ, ಅವರ ಪತ್ನಿ.
ಖಾಸಗಿ ಆಸ್ಪತ್ರೆ ಎಂದಾಕ್ಷಣ ದುಬಾರಿ ಎಂಬ ಅಭಿಪ್ರಾಯ ಮೂಡುತ್ತಿರುವ ಇಂದಿನ ದಿನಗಳಲ್ಲಿ, ಕೇವಲ ಇಪ್ಪತ್ತು ರೂಪಾಯಿ ಶುಲ್ಕ ಪಡೆದು, ಸಂದರ್ಭೋಚಿತ ಚಿಕಿತ್ಸೆ ನೀಡುವ ಈ ವೈದ್ಯರು, ಜನಸಾಮಾನ್ಯರ ಆರೋಗ್ಯದ ಕುರಿತು ವಹಿಸುವ ಕಾಳಜಿ ಅಪಾರ. ಕಾರ್ಪೊರೇಟ್ ಆಸ್ಪತ್ರೆಗಳು, ದುಬಾರಿ ಆಧುನಿಕ ಚಿಕಿತ್ಸೆಗಳು ಇವುಗಳಿಂದಾಗಿ ಸದಾ ಸುದ್ದಿಯಲ್ಲಿರುವ ಇಂದಿನ ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಶುಲ್ಕ ಪಡೆದು ಚಿಕಿತ್ಸೆ ನೀಡುವ ಡಾ. ಬ್ರಹ್ಮರಾಜು ವಿಭಿನ್ನವಾಗಿ ನಿಲ್ಲುತ್ತಾರೆ.