ನಾರಾಯಣ ಯಾಜಿ
(ಶಂಕರ ಜಯಂತಿ ವಿಶೇಷ)
ಕೆಲವು ಪರಂಪರೆಗಳು ಕಾಪಿಟ್ಟುಕೊಂಡು ಬಂದಿರುವ ದಾಖಲೆ ಮತ್ತು ನಂಬಿಕೆಗಳ ಪ್ರಕಾರ, ಶಂಕರಾಚಾರ್ಯರು ಇಂದಿಗೆ ಸುಮಾರು 2500 ವರ್ಷಗಳ ಹಿಂದೆ ಇದ್ದರು! ಆದರೆ ಆಧುನಿಕ ಇತಿಹಾಸಕಾರರು, ಶಂಕರರ ಕಾಲವನ್ನು 8ನೇ ಶತಮಾನ ಎಂದು ಲೆಕ್ಕಹಾಕಿದ್ದಾರೆ. ಈ ಕುರಿತು ಇರುವ ಜಿಜ್ಞಾಸೆಯ ಒಂದು ಕಿರುನೋಟ ಇಲ್ಲಿದೆ.
ಶಂಕರಾಚಾರ್ಯರ ಸಿದ್ಧಾಂತದ ಕುರಿತು ವಿವಾದವಿರುವಂತೆ ಈ ಮಹಾನ್ ಜಗದ್ಗುರುಗಳ ಅವತಾರ ಕಾಲದ ಕುರಿತು ಆಧುನಿಕ ಇತಿಹಾಸಕಾರರು ಮತ್ತು ಪ್ರಾಚೀನ ಮಠೀಯ ಪರಂಪರೆಗಳ ನಡುವೆ ಒಂದು ದೊಡ್ಡ ಜಿಜ್ಞಾಸೆಯೇ ಇದೆ. ಶಂಕರರ ಕಾಲವು ಕ್ರಿ.ಶ. 8ನೇ ಶತಮಾನ (ಕ್ರಿ.ಶ. 788-820) ಎಂದು ಪ್ರಚಲಿತವಿದೆ. ಆದರೆ ಪುರಿಯ ಗೋವರ್ಧನ ಪೀಠ, ಕಂಚಿಕಾಮಕೋಟಿ, ದ್ವಾರಕಾ ‘ಪೀಠ ವಂಶಾವಳಿ’ ಮತ್ತು ಗುರು ಪರಂಪರೆಗಳ ಪ್ರಕಾರ ಆದಿ ಶಂಕರಾಚಾರ್ಯರು ಜನಿಸಿದ್ದು ಇಂದಿಗೆ ಸುಮಾರು 2500 ವರ್ಷಗಳ ಹಿಂದೆ!
ಈ ಪರಂಪರೆಗಳಲ್ಲಿ ಪ್ರಮುಖವಾದದ್ದು ಪುರಿಯ ಗೋವರ್ಧನ ಪೀಠದ ಪ್ರಂಪರೆಯ ಅಖಂಡ ಗುರುಗಳ ವಿವರ. ಈ ಪೀಠದ ಪರಂಪರೆಯ ಪ್ರಕಾರ, ಆಚಾರ್ಯ ಶಂಕರರು ಇಂದಿನ ಆಧುನಿಕ ಇತಿಹಾಸಕಾರರು ಸೂಚಿಸುವಂತೆ ಕ್ರಿ.ಶ. 8ನೇ ಶತಮಾನದಲ್ಲಿ ಹುಟ್ಟಿದವರಲ್ಲ; ಬದಲಾಗಿ, ಅವರು ಅದಕ್ಕಿಂತಲೂ ಬಹಳ ಹಿಂದಿನ ಕಾಲದ ಮಹಾನ್ ಅವತಾರ. ಈ ಪರಂಪರೆಯ ಗಣನೆಯ ಪ್ರಕಾರ, ಶಂಕರಾಚಾರ್ಯರ ಜನ್ಮ ಕ್ರಿ.ಪೂ. 507 (ಅಥವಾ ಸುಮಾರು ಕ್ರಿ.ಪೂ. 5ನೇ ಶತಮಾನ)ಕ್ಕೆ ಸೇರಿದದ್ದು ಎಂದು ಹೇಳಲಾಗುತ್ತದೆ. ಇದನ್ನು ಅವರು ಕಲಿಯುಗದ ಪ್ರಾರಂಭದದಿನದಿಂದ ಇದು ತನಕ (2593 ವರ್ಷಗಳು) ಆಧಾರದ ಮೇಲೆ ನಿರ್ಧರಿಸುತ್ತಾರೆ.
ಗೋವರ್ಧನ ಪೀಠದ ಪೀಠವಂಶಾವಳಿ ಅಂದರೆ ಗುರುಗಳ ಅಖಂಡ ಹೆಸರನ್ನು ಗಮನಿಸಿದರೆ, ಶಂಕರಾಚಾರ್ಯರಿಂದ ಇಂದಿನವರೆಗೂ ಬಂದಿರುವ ಪೀಠಾಧಿಪತಿಗಳ ಸಂಖ್ಯೆ ಸುಮಾರು 140 ರಿಂದ 150 ಪೀಠಾಧಿಪತಿಗಳು ಆಗಿಹೋಗಿದ್ದಾರೆ. ಒಂದು ಗುರುಗೆ ಸರಾಸರಿ 15 - 20 ವರ್ಷಗಳ ಕಾಲಾವಧಿ ತೆಗೆದುಕೊಂಡರೂ 140 ಗುರುಗಳು ಎಂದರೆ ಸುಮಾರು 2000- 2500 ವರ್ಷಗಳ ಅವಧಿ ಗಳಾಗುತ್ತವೆ.
ಇದನ್ನೇ ಆಧರಿಸಿ ಪುರಿ ಪೀಠವು, ಶಂಕರರ ಕಾಲವನ್ನು ಕ್ರಿ.ಪೂ. 5ನೇ ಶತಮಾನಕ್ಕೆ ಕೊಂಡೊಯ್ಯು ತ್ತದೆ. ಇದರ ಜೊತೆಗೆ, ಈ ಪರಂಪರೆ ಮತ್ತೊಂದು ಪ್ರಮುಖ ವಿಷಯವನ್ನು ಉಲ್ಲೇಖಿಸುತ್ತದೆ. ಅವರ ಪ್ರಕಾರ, ಶಂಕರರು ಬುದ್ಧನ ನಿರ್ವಾಣದ ನಂತರದ ಕೆಲವೇ ಕಾಲದಲ್ಲಿ ಅವತರಿಸಿದವರು. ಅಂದರೆ, ಬೌದ್ಧ ಧರ್ಮವು ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ, ವೇದಸಂಪ್ರದಾಯದ ಪುನರುಜ್ಜೀವನಕ್ಕಾಗಿ ಶಂಕರರು ಅವತರಿಸಿದರು ಎಂಬ ದರ್ಶನವನ್ನು ಈ ಪೀಠವು ಪ್ರತಿಪಾದಿಸು ತ್ತದೆ.
ಇದನ್ನೂ ಓದಿ: Narayana Yaji Column: ನಗುವಿನೊಳಗಿನ ಬದುಕು
ಹೀಗಾಗಿ, ಶಂಕರರು ಬೌದ್ಧ ತತ್ತ್ವಗಳ ನಂತರ ಬಂದವರು ಎಂಬುದನ್ನು ಒಪ್ಪಿಕೊಂಡರೂ, ಅದು ಕ್ರಿ.ಶ. 8ನೇ ಶತಮಾನವಲ್ಲ; ಅದಕ್ಕಿಂತ ಬಹಳ ಹಿಂದಿನ ಕಾಲವೆಂದು ಅವರು ನಿರ್ಧರಿಸುತ್ತಾರೆ.
ಗೋವರ್ಧನ ಪೀಠದ ಈ ವಾದದಲ್ಲಿ ಕೇವಲ ಗುರುಪಟ್ಟಿ ಮಾತ್ರವಲ್ಲ, ಕೆಲವು ಪರಂಪರಾತ್ಮಕ ಗ್ರಂಥಗಳೂ ಸಹ ಉಲ್ಲೇಖವಾಗುತ್ತವೆ. ಉದಾಹರಣೆಗೆ, ಕಾಶ್ಮೀರದ ‘ರಾಜತರಂಗಿಣಿ’, ನೇಪಾಳದ ರಾಜವಂಶಾವಳಿಗಳು ಮತ್ತು ದ್ವಾರಕಾ ಮತ್ತು ಪುರಿ ಪೀಠಗಳ ಗುರುಪರಂಪರೆಗಳು ಶಂಕರರನ್ನು ಪ್ರಾಚೀನ ಕಾಲಕ್ಕೆ ಕೊಂಡೊಯ್ಯುತ್ತವೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಕಂಚಿ ಕಾಮಕೋಟಿ ಸಂಪ್ರದಾಯ
ಇನ್ನೊಂದು ಮುಖ್ಯವಾದ ವಿಷಯವೆಂದರೆ ಕಂಚಿ ಕಾಮಕೋಟಿ ಸಂಪ್ರದಾಯವೂ ಸಹ ಶಂಕರರ ಕಾಲವನ್ನು 2500 ವರ್ಷಗಳಿಗೆ ಕೊಂಡೊಯ್ಯುತ್ತದೆ. ಈ ಪೀಠದ ಗುರುಗಳಾಗಿದ್ದ ಮಹದೇವ ( ನಾಲ್ಕನೇ) ಎನ್ನುವವರು ವ್ಯಾಸಾಚಲರೆನ್ನುವವರು (ಪೂರ್ವಾಶ್ರಮದಲ್ಲಿ ಕುಪ್ಪಣ್ಣ) ಎನ್ನುವವರು ರಚಿಸಿದ್ದಾರೆಂದು ನಂಬಲಾದ ‘ವ್ಯಾಸಚಲೀಯ’ವೆನ್ನುವ ಗ್ರಂಥವನ್ನು ಎನ್.ವೆಂಕಟರಾಮನ್ ಎನ್ನುವ ವಿದ್ವಾಂಸರು ಉಲ್ಲೇಖಿಸಿದ್ದಾರೆ. ಅದರಲ್ಲಿ ‘ಪ್ರಾಚೀನ ಶಂಕರ ವಿಜಯ’ ಎನ್ನುವ ಗ್ರಂಥದ ಉಲ್ಲೇಖ ಬರುತ್ತದೆ. ಅದರ ಪ್ರಕಾರ ಶಂಕರರು ಅವತರಿಸಿದ ಕಾಲದ ಶ್ಲೋಕದ ವಿವರ ಹೀಗಿದೆ.
ಅಬ್ಧೇ ಕಲೇರನಲವರ್ಷಶರಾಕ್ಷಿಸಂಖ್ಯೆ
ಶ್ರೀನನ್ದನೇ ದಿನಮಣಾವುದಗಧ್ವಭಾಜಿ
ರಾಧೇಧಿದಿಪಞ್ಚಮಿತಿಥಾವಸಿತೇತರಾಯಾಮ್
ವಾರೇ ರವೇರದಿತಿಭೇ ಶುಭಯೋಗಯುಕ್ತೇ ||
ಲಗ್ನೇ ಶುಭೇ ಶುಭಯುತೇ ಸುಷುವೇ ಕುಮಾರಂ ಶ್ರೀಪಾರ್ವತೀವ ಸುಖಿನೀ ಶುಭವೀಕ್ಷಿತೇ ಚ
ಜಾಯಾ ಸತೀ ಶಿವಗುರೋರ್ನಿಜತ್ಗುಸಂಸ್ಥೆ
ಸೂರ್ಯೆ ಕುಜೇ ರವಿಸುತೇ ಚ ಗುರೌ ಚ ಕೇನ್ದ್ರೇ ||
ಅದರ ಪ್ರಕಾರ ವೈಶಾಖ ಶುದ್ಧ ಪಂಚಮಿ ತಿಥಿ, ಭಾನುವಾರ, ಪುನರ್ವಸು ನಕ್ಷತ್ರದ ಅಭಿಜಿನ್ಮು ಹೂರ್ತದಲ್ಲಿ ಕರ್ಕಾಟಕ ಲಗ್ನ, ರವಿಕುಜಗುರುಶನಿಗಳು ಉಚ್ಛರಾಗಿರುವಾಗ, ಶುಕ್ರ ಕೇಂದದಲ್ಲಿ ಉಚ್ಛನಾಗಿರುವಾಗ ಬುಧ ರವಿಯ ಯುತಿಯಲ್ಲಿ ಆರ್ಯಾಂಬೆ ಮಗನನ್ನು ಪಡೆದಳು ಎಂದಿದೆ. ಅದರ ಪ್ರಕಾರ ಶಂಕರರ ಜನನ ಕ್ರಿ.ಪೂ. 509 (ಯುಧಿಷ್ಠಿರ ಶಕ 2631) ರಲ್ಲಿ. ಜೊತೆಗೆ ರಕ್ತಾಕ್ಷಿ ಸಂವತ್ಸರದ (ಕ್ರಿ. ಪೂ. 477) ವೈಶಾಖ ಶುದ್ಧ ದ್ವಾದಶೀ ದಿನ ಭೌತಿಕ ದೇಹವನ್ನು ತ್ಯಜಿಸಿದರು ಎನ್ನುವ ವಿವರಣೆ ಇದೆಯೆಂದು ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳು ತಿಳಿಸುತ್ತಾರೆ.
ಆದರೆ ಅವರಿಗೂ ‘ವ್ಯಾಸಚಲೀಯ’ದ ಮೂಲಶ್ಲೋಕ ಸಿಕ್ಕಿಲ್ಲ; ಅದನ್ನು ‘ಮಾಧವೀ ಶಂಕರ ವಿಜಯ’ದಲ್ಲಿ ಉಲ್ಲೇಖಿಸಿರುವುದನ್ನು ಗಮನಿಸಿದ್ದೇನೆ ಎನ್ನುತ್ತಾರೆ.
ಆದರೆ ಶೃಂಗೇರಿ ಮಠದ ಪ್ರಕಾರ ಈಶ್ವರ ಸಂವತ್ಸರದಲ್ಲಿವೈಶಾಖ ಸುದ್ಧ ಪಂಚಮಿ, ಆರ್ದ್ರಾನಕ್ಷತ್ರದ ಮಿಥುನಲಗ್ನದಲ್ಲಿ ಆಚಾರ್ಯರ ಜನನವಾಯಿತು ಎಂದಿದೆ. ವಿಕ್ರಮ ಶಕೆ ಎಂತಲೂ ವಿವರಗಳಿವೆ. ಶಂಕರಾಚಾರ್ಯರ ಕುರಿತು ಬೇರೆಲ್ಲಾ ವಿವರಣೆಗಳು, ಕುಮಾರಿಲಭಟ್ಟರ ಮತ್ತು ಮಂಡನ ಮಿಶ್ರರ ವಾದ ಮೊದಲಾದವುಗಳ ಕುರಿತು ಹೆಚ್ಚಿನ ವ್ಯತ್ಯಾಸವೂ ಇಲ್ಲ. ಈ ಎಲ್ಲಾ ಸಂಗತಿಗಳನ್ನು ಗಮನಿಸಿದ ಟಿ.ಎಂ.ಪಿ.ಮಹಾದೇವನ್, ಕೆ.ಸಚ್ಚಿದಾನಂದ ಮೂರ್ತಿ, ಸುರೇಂದ್ರನಾಥ ದಾಸಗುಪ್ತ, ಪಾಲ್ ಹ್ಯಾಕರ್ ಮೊದಲಾದ ವಿದ್ವಾಂಸರು ಭಾರತೀಯ ಅದ್ವೈತ ಪರಂಪರೆಯ ಆಂತರಿಕ ಸ್ವರೂಪವನ್ನು ವಿಶ್ಲೇಷಿಸುವ ಸಂದರ್ಭದಲ್ಲಿ, “ಶಂಕರಾಚಾರ್ಯ" ಎಂಬುದು ಕೇವಲ ಐತಿಹಾಸಿಕ ವ್ಯಕ್ತಿಯ ಹೆಸರಲ್ಲ; ಅದು ಗುರುಪೀಠದ ನಿರಂತರತೆಯನ್ನು ಸೂಚಿಸುವ ಪದವಿಯೂ ಆಗಿದೆ ಎನ್ನುವ ಅಭಿಪ್ರಾಯ ಪಡುತ್ತಾರೆ.
ಈ ಎಲ್ಲ ಸಿದ್ಧಾಂತಗಳೂ ಸಹ ವೈಶಾಖ ಶುದ್ಧ ಪಂಚಮಿಯನ್ನು ಶಂಕರ ಜಯಂತಿಯನ್ನಾಗಿ ಒಪ್ಪಿಕೊಂಡಿದ್ದಾರೆ. ಕ್ರಿ.ಪೂ. 5ನೇ ಶತಮಾನದಲ್ಲಿ ಬೌದ್ಧ ಧರ್ಮದ ಸ್ಥಿತಿ ಮತ್ತು ಶಂಕರರ ಕಾಲದ ನಡುವಿನ ಸಂಬಂಧವನ್ನು ನಾವು ಈ ಕೆಳಗಿನ ಆಯಾಮಗಳಲ್ಲಿ ವಿಶ್ಲೇಷಿಸಬಹುದು:
ಇತಿಹಾಸದ ಕೆಲವು ದಾಖಲೆಗಳ ಪ್ರಕಾರ, ಗೌತಮ ಬುದ್ಧನ ನಿರ್ವಾಣವಾಗಿದ್ದು ಕ್ರಿ.ಪೂ. 483 ಅಥವಾ 544ರಲ್ಲಿ (ವಿಭಿನ್ನ ಅಭಿಪ್ರಾಯಗಳಿವೆ). ಶಂಕರರು ಕ್ರಿ.ಪೂ. 509ರಲ್ಲಿ ಜನಿಸಿದರು ಎಂಬ ಮಠಗಳ ಸಂಪ್ರದಾಯವನ್ನು ಒಪ್ಪಿಕೊಂಡರೆ, ಶಂಕರರು ಬುದ್ಧನ ಸಮಕಾಲೀನರಾಗುತ್ತಾರೆ ಅಥವಾ ಬುದ್ಧನ ನಂತರದ ಕೇವಲ 30-40 ವರ್ಷಗಳಲ್ಲಿ ಬಂದವರಾಗುತ್ತಾರೆ.
ಆ ಕಾಲದಲ್ಲಿ ಬೌದ್ಧ ಧರ್ಮವು ಖಂಡನೆ ಮಾಡುವಷ್ಟು ಪ್ರಬಲವಾಗಿರಲಿಲ್ಲ. ಇತಿಹಾಸದ ಪ್ರಕಾರ, ಕ್ರಿ.ಪೂ. 5ನೇ ಶತಮಾನದಲ್ಲಿ ಬೌದ್ಧ ಧರ್ಮವು ಇನ್ನೂ ಶೈಶವಾವಸ್ಥೆಯಲ್ಲಿತ್ತು. ಅದು ಮಗಧದ ಸುತ್ತಮುತ್ತಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಬೌದ್ಧ ಧರ್ಮವು ಅಖಂಡ ಭಾರತದಾದ್ಯಂತ ಹರಡಿ, ವೈದಿಕ ಧರ್ಮಕ್ಕೆ ದೊಡ್ಡ ಸವಾಲಾಗಿದ್ದು ಸಮ್ರಾಟ್ ಅಶೋಕನ (ಕ್ರಿ.ಪೂ. 3ನೇ ಶತಮಾನ) ಕಾಲದ ನಂತರ. ಜೊತೆಗೆ ಶಂಕರರು ತಮ್ಮ ಭಾಷ್ಯಗಳಲ್ಲಿ ಬೌದ್ಧ ಧರ್ಮದ ವಿವಿಧ ಶಾಖೆಗಳಾದ ಮಾಧ್ಯಮಿಕ (ಶೂನ್ಯವಾದ) ಮತ್ತು ವಿಜ್ಞಾನವಾದಗಳನ್ನು ಬಹಳ ವ್ಯವಸ್ಥಿತವಾಗಿ ಖಂಡಿಸಿದ್ದಾರೆ.
ಈ ತಾರ್ಕಿಕ ಪಂಥಗಳು ಅಭಿವೃದ್ಧಿಯಾಗಿದ್ದು ಕ್ರಿ.ಶ. 2ನೇ ಶತಮಾನದಿಂದ 5ನೇ ಶತಮಾನದ ಅವಽಯಲ್ಲಿ (ನಾಗಾರ್ಜುನ, ಅಸಂಗ, ವಸುಬಂಧು ಮುಂತಾದವರಿಂದ). ಶಂಕರರು ಬುದ್ಧನ ವ್ಯಕ್ತಿತ್ವವನ್ನಾಗಲಿ ಅಥವಾ ಪ್ರಾಥಮಿಕ ಬೌದ್ಧ ಧರ್ಮವನ್ನಾಗಲಿ ಖಂಡಿಸಲಿಲ್ಲ. ಅವರು ಖಂಡಿಸಿದ್ದು ವೇದಗಳನ್ನು ನಿರಾಕರಿಸುವ ಮತ್ತು ಜಗತ್ತನ್ನು ಕೇವಲ ಶೂನ್ಯ ಎಂದು ಕರೆದ ನಂತರದ ಬೌದ್ಧ ದಾರ್ಶನಿಕ ಸಿದ್ಧಾಂತಗಳನ್ನು. ಇಂತಹ ಪ್ರೌಢ ದಾರ್ಶನಿಕ ಸಿದ್ಧಾಂತಗಳು ಕ್ರಿ.ಪೂ. 5ನೇ ಶತಮಾನದಲ್ಲಿ ಅಷ್ಟು ಪ್ರಬಲವಾಗಿರಲಿಲ್ಲ ಎಂಬುದು ಆಧುನಿಕ ಇತಿಹಾಸಕಾರರ ಪ್ರಬಲ ವಾದ.
ಕ್ರಿ.ಪೂ.5ನೇ ಶತಮಾನದಲ್ಲಿ ಬೌದ್ಧ ಧರ್ಮವು ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ಅಷ್ಟು ಪ್ರಬಲವಾಗಿರಲಿಲ್ಲ. ನಾವು ಇಂದು ಓದುತ್ತಿರುವ ಶಂಕರರ ಬೌದ್ಧಿಕ ದಿಗ್ವಿಜಯದ ಚಿತ್ರಣವು (ವಿಶೇಷವಾಗಿ ದಾರ್ಶನಿಕ ಸಂಘರ್ಷ) ಕ್ರಿ.ಶ. 7ನೇ ಶತಮಾನದ ಪರಿಸ್ಥಿತಿಗೆ ಹೆಚ್ಚು ಹತ್ತಿರವಾಗಿದೆ.
ಅಂತಿಮವಾಗಿ, ಈ ವಿಚಾರದಲ್ಲಿ ಒಂದು ಸೂಕ್ಷ್ಮ ಸತ್ಯವನ್ನು ಮನಗಾಣಬೇಕು. ಶಂಕರರ ಕಾಲದ ಕುರಿತು ಇರುವ ಈ ಭಿನ್ನಾಭಿಪ್ರಾಯಗಳು, ಅವರ ಮಹತ್ವವನ್ನು ಕಡಿಮೆ ಮಾಡುವುದಿಲ್ಲ. ಇತಿಹಾಸವು ಅವರನ್ನು ಒಂದು ಶತಮಾನದಲ್ಲಿ ಸೀಮಿತಗೊಳಿಸಲು ಪ್ರಯತ್ನಿಸಿದರೂ, ಪರಂಪರೆ ಅವರನ್ನು ಅನಂತ ಕಾಲದ ಪ್ರವಾಹದಲ್ಲಿ ನೋಡುವುದು. ಈ ಎರಡರ ಮಧ್ಯೆ ನಿಂತು ನೋಡುವಾಗ, ನಮಗೆ ಗೋಚರವಾಗುವುದು ಶಂಕರರು ಕೇವಲ ಒಂದು ಕಾಲಘಟ್ಟದ ವ್ಯಕ್ತಿಯಲ್ಲ; ಅವರು ಒಂದು ದರ್ಶನ, ಒಂದು ಚೈತನ್ಯ, ಒಂದು ನಿರಂತರ ಪರಂಪರೆ.
ಈ ಹಿನ್ನೆಲೆಯಲ್ಲಿ ಶಂಕರ ಭಗವತ್ಪಾದರ ಕಾಲವನ್ನು ಏಳು ಅಥವಾ ಎಂಟನೆಯ ಶತಮಾನ ಎನ್ನುವದನ್ನು ಒಪ್ಪಿಕೊಳ್ಳುವುದು ತಾತ್ವಿಕವಾಗಿ ಸರಿಯಾಗುತ್ತದೆ.