ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

B K Meenakshi Column: ಸಂತೆಶಿವರದಲ್ಲಿ ಭೈರಪ್ಪನವರೊಂದಿಗೆ !

ಭೈರಪ್ಪನವರ ಆತ್ಮಕಥೆಯಲ್ಲಿ ಬರುವ ವ್ಯಕ್ತಿಗಳು, ಗೌರಮ್ಮನವರ ಬಗ್ಗೆ, ಭೈರಪ್ಪನವರ ಕಾದಂ ಬರಿಗಳ ಬಗ್ಗೆ ಅವರಿಗೆ ಎಷ್ಟು ಮಾತಾಡಿದರೂ ಸಾಲದು, ನಮಗೂ ಎಷ್ಟು ಕೇಳಿದರೂ ಇನ್ನೂ ಇನ್ನೂ ಕೇಳುತ್ತಲೇ ಇರುವಾಸೆ. ಆ ದಿನವಂತೂ ಭೈರಪ್ಪನವರು ಜನಾನುರಾಗಿ! ಪ್ರತಿಯೊಬ್ಬರ ಬಗ್ಗೆಯೂ ವಿವರಗಳು ಬೇಕು, ಅವರೊಂದಿಗೆ ಮಾತುಕತೆಯಾಡಲೇ ಬೇಕು, ಊರವರ ಪರಿಸರ ಮನೆಗಳನ್ನು ಸ್ವತಃ ವೀಕ್ಷಿಸಲೇ ಬೇಕು.

ಸಂತೆಶಿವರದಲ್ಲಿ ಭೈರಪ್ಪನವರೊಂದಿಗೆ !

Profile Ashok Nayak Mar 16, 2025 9:57 AM

ಬಿ.ಕೆ.ಮೀನಾಕ್ಷಿ, ಮೈಸೂರು

ಕಾದಂಬರಿಕಾರರೊಬ್ಬರು ತಮ್ಮ ಹಳ್ಳಿಗೆ ನೀರನ್ನು ತರಿಸಲು ಮಾಡಿದ ಪ್ರಯತ್ನ ಮತ್ತು ಅದರ ಯಶಸ್ಸು ಅನನ್ಯ. ಡಾ. ಎಸ್.ಎಲ್.ಭೈರಪ್ಪನವರ ಅಭಿಲಾಷೆಯಂತೆ ಇಂದು ಸಂತೆಶಿವರದ ಕೆರೆ ತುಂಬಿದೆ!

ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸ ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದವ ರ್ಗೆರವಟ್ಟಾಗಿರು ಶಿಷ್ಟರಂ ಪೊರೆ ಈ ಪದ್ಯದಲ್ಲಿನ ಪ್ರತಿನುಡಿಯೂ, ಡಾ.ಎಸ್.ಎಲ್.ಭೈರಪ್ಪನವರನ್ನು ಕುರಿತು ಬರೆದ ನುಡಿಯಂತಿದೆ. ಆ ದಿನ ಅವರಿಗಾಗೇ ಹರಿದು ಬಂದ ಜನಸ್ತೋಮ, ಸುತ್ತ ಹತ್ತಳ್ಳಿಯವರ ಸಂಭ್ರಮ, ಸಂತಸ, ಮೇರೆ ಮೀರಿದ ಪರಿಶ್ರಮ, ಗಣ್ಯರ ಆಗಮನ, ಅವರ ನಮ್ರ ನುಡಿಗಳು ಇವೆಲ್ಲವನ್ನೂ ನಾನು ಸುಮ್ಮನೆ ಕುಳಿತು ಕೇಳುತ್ತಿರುವಾಗ ನನಗರಿವಿಲ್ಲದೆ ನನ್ನ ಕಣ್ಣುಗಳು ತುಂಬಿಕೊಳ್ಳುತ್ತಿದ್ದವು.

ಎಲ್ಲರೂ ಅವರ ಭಕ್ತರಂತೆ ವರ್ತಿಸಿದರು, ಅವರ ಅನುಯಾಯಿಯಂತೆ ನಲಿದರು, ಅವರ ಕೆಲಸ ಕಾರ್ಯಗಳನ್ನು, ಅವರಿಗಾಗಿ ಮಾಡಬೇಕಾದ ಯಾವುದೇ ಅಲಂಕಾರ ಮುಂತಾದ ಎಲ್ಲ ಕಾರ್ಯನಿರ್ವಹಣೆಯನ್ನು ನಿರ್ವಂಚನೆಯಿಂದ ನಮ್ಮೂರ ದೇವರಿವರು ಎನ್ನು ವಂತೆ ಶ್ರದ್ಧೆ ಭಕ್ತಿಯಿಂದ ಮಾಡಿದರಲ್ಲಾ.....ಕೋಟಿ ಕೋಟಿ ಪರಿಚಯ, ಗೃಹಭಂಗದ ಪಾತ್ರ ಗಳ ನಿಜರೂಪಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಿದರು.

ಇದನ್ನೂ ಓದಿ: Vishweshwar Bhat Column: ಜಪಾನ್‌ ಇಷ್ಟವಾಗಲು ಮುಖ್ಯ ಕಾರಣ ಜಪಾನಿಯರು !

ಭೈರಪ್ಪನವರ ಆತ್ಮಕಥೆಯಲ್ಲಿ ಬರುವ ವ್ಯಕ್ತಿಗಳು, ಗೌರಮ್ಮನವರ ಬಗ್ಗೆ, ಭೈರಪ್ಪನವರ ಕಾದಂಬರಿಗಳ ಬಗ್ಗೆ ಅವರಿಗೆ ಎಷ್ಟು ಮಾತಾಡಿದರೂ ಸಾಲದು, ನಮಗೂ ಎಷ್ಟು ಕೇಳಿ ದರೂ ಇನ್ನೂ ಇನ್ನೂ ಕೇಳುತ್ತಲೇ ಇರುವಾಸೆ. ಆ ದಿನವಂತೂ ಭೈರಪ್ಪನವರು ಜನಾನು ರಾಗಿ! ಪ್ರತಿಯೊಬ್ಬರ ಬಗ್ಗೆಯೂ ವಿವರಗಳು ಬೇಕು, ಅವರೊಂದಿಗೆ ಮಾತುಕತೆಯಾಡಲೇ ಬೇಕು, ಊರವರ ಪರಿಸರ ಮನೆಗಳನ್ನು ಸ್ವತಃ ವೀಕ್ಷಿಸಲೇ ಬೇಕು. ಅಂದು ಸಂಜೆ ಅವರನ್ನು ತಿರುಗಾಡಿಸಿಕೊಂಡು ಬರಲು, ಸಹನಾ ವಿಜಯಕುಮಾರ್ ಮತ್ತು ಭೈರಪ್ಪನವರ ತಂಗಿ ರಾಧಾ ಹೊರಟರು. ಇಬ್ಬರೂ, ಭೈರಪ್ಪನವರ ಎರಡು ಭುಜಗಳನ್ನು ತಮ್ಮ ಹೆಗಲಿ ಗೇರಿಸಿಕೊಂಡು, ಮನೆಯಿಂದ ಆಚೆ ಹೊರಟರು. ಇಂತಹ ಭಾಗ್ಯ ನಮಗೆ ಮತ್ತೆ ಸಿಗುವು ದುಂಟೇ? ನಾವೂ ಅವರ ಜೊತೆಜೊತೆಗೇ ಹೆಜ್ಜೆ ಹಾಕಿ ಆ ರಾತ್ರಿಯಲ್ಲಿ, ಪೈಜಾಮಾ ಬನಿಯನ್ನು ಧರಿಸಿದ ಭೈರಪ್ಪನವರ ಮೆರವಣಿಗೆ ಶುರುವಾಯಿತು.

‘ಇದು ಶಾಲೆ ಅಲ್ವೇ?’ ಎಂದು ಕೇಳುತ್ತಾ, ಬಿದ್ದೋಗಿರುವ ಶಾಲಾ ಕಟ್ಟಡ, ಅದರ ಎದುರಿನ ದೇವಾಲಯದ ಪಳೆಯುಳಿಕೆಗಳನ್ನು ವೀಕ್ಷಿಸುತ್ತಾ ಮನೆಮನೆಗೂ ಭೇಟಿ ಕೊಟ್ಟರು. ಭೈರಪ್ಪ ನವರ ಮುಂದೆ ಆಯಾ ಮನೆಯವರು ಬಂದು ನಿಂತರು, ಯಾರೂ ತಮ್ಮ ಸ್ವಂತ ಹೆಸರಿನ ಪರಿಚಯ ಹೇಳಿಕೊಳ್ಳದೆ, ಅವರ ತಾತ, ಮುತ್ತಾತ, ತಂದೆ, ಅಜ್ಜಿ, ತಾಯಿಯರ ಮೂಲಕ ತಮ್ಮನ್ನು ಪರಿಚಯ ಮಾಡಿಕೊಂಡರು.

‘ಓಹೋ, ಹೌದೇ? ಓ ನೀವಲ್ವೇ? ಅವರೆಲ್ಲಿ? ಇವರೆಲ್ಲಿ?’ ಎನ್ನುತ್ತಾ ಬೀದಿಯ ಕೊನೆಯವ ರೆಗೂ ನಡೆದರು. ಕವಿದ ಕತ್ತಲಿನೊಳಗೆ ನುಸುಳಿ, ‘ಅಲ್ಲಿ ದೇವಸ್ಥಾನದ ಹತ್ತಿರ ಹೋಗೋಣ’ ಎಂದು ಹಠ ಹಿಡಿದರು. ‘ಬೇಡ, ಕತ್ತಲಾಗಿದೆ, ಬೇಕಾದರೆ ನಾಳೆ ಹೋಗೋಣ’ ಎಂದು ಮನ ವೊಲಿಸಿ ವಾಪಸ್ಸು ಅವರ ನೆಚ್ಚಿನ ಗಂಗಾಧರೇಶ್ವರ ದೇವಸ್ಥಾನಕ್ಕೆ ಕರೆತಂದು ಕೂರಿಸಿದರು.

‘ಇಲ್ಲೇ ಮಹದೇವಯ್ಯನವರು ಇರುತ್ತಿದ್ದುದು, ಹಾಡುತ್ತಿದ್ದುದು’ ಎನ್ನುತ್ತಾ ಒಳನಡೆದರು. ಅದು ಉತ್ಸವ ಮೂರ್ತಿಯ ದೇವಸ್ಥಾನ. ಮೂರ್ತಿಗೆ ಅಲಂಕಾರ ಮಾಡಿದ್ದರು, ಬಟ್ಟೆ ಸೀರೆ ಗಳನ್ನು ಯಥೇಚ್ಛವಾಗಿ ಹೊದಿಸಲಾಗಿತ್ತು. ಒಡವೆಗಳನ್ನೂ ಹಾಕಿದ್ದರು. ‘ಇದೆಲ್ಲ ಇರ ಬಾರದು, ಕಲ್ಲಿನ ಮೂರ್ತಿ ನೋಡಬೇಕು ಅದೇ ಚಂದ’ ಎಂದರು. ಅದಕ್ಕೆ ಸಹನಾ, ‘ಇದು ಉತ್ಸವ ಮೂರ್ತಿ.

ಮೂಲ ಮೂರ್ತಿ ಅಲ್ಲವಲ್ಲಾ?’ ಎನ್ನುತ್ತಾ ಅವರನ್ನು ಕರೆತಂದು ದೇವಸ್ಥಾನದ ಜಗುಲಿ ಯಲ್ಲಿ, ಒಂದು ಕುರ್ಚಿಯ ಮೇಲೆ ಕೂರಿಸಿದರು. ಅಲ್ಲೇ ಒಂದು ಭಜನಾ ಕಾರ್ಯಕ್ರಮ. ತಾಳ ಖಂಜರಗಳ ಮೇಳಮಿಳಿತದೊಂದಿಗೆ ಮಾಧುರ್ಯ ತುಂಬಿದ ಭಜನೆ ಕೇಳುತ್ತಾ ಅರ್ಧಗಂಟೆ ಕುಳಿತರು. ನಂತರ ‘ಛಳಿಯಾಗುತ್ತೆ ಬನ್ನಿ ಒಳಗೆ ಹೋಗೋಣ’ ಎನ್ನುತ್ತಾ ಮನೆಗೆ ಹೋಗುವ ಬದಲು ಹೊಕ್ಕಿದ್ದು ಲೈಬ್ರರಿಯನ್ನು.

ಇಲ್ಲೊಂದು ಪ್ರಸಂಗ ಹೇಳಲೇ ಬೇಕು. ಭಜನೆಯ ನಂತರ ಹಾಗೇ ಲೈಬ್ರರಿಯ (ಭೈರಪ್ಪನವರ ಪುಸ್ತಕ, ಕೈಬರಹ, ಪ್ರಶಸ್ತಿಗಳ ಪ್ರದರ್ಶನದ ಕೋಣೆ) ಕಡೆಗೆ ಹೊದೆವು. ಅಲ್ಲಿ ಎಲ್ಲವನ್ನೂ ನೋಡುತ್ತಾ, ಕೆಲವನ್ನು ಗುರುತಿಸುತ್ತಾ, ಕೆಲವನ್ನು ಕೇಳಿ ವಿವರ ಪಡೆದುಕೊಳ್ಳುತ್ತಾ ಸಾಗಿ ಬಂದ ಭೈರಪ್ಪನವರ ಎದುರಿಗೆ ಒಂದು ಫೋಟೋ ಹಿಡಿದರು.

ಅದರಲ್ಲಿ ‘ಇವರು ಯಾರು?’ ಎಂದು ಒಬ್ಬರ ಮೇಲೆ ಬೆರಳು ಇಟ್ಟು ತೋರಿಸಿದರು ಸಹನಾ. ಭೈರಪ್ಪನವರು ಅದನ್ನು ನೋಡಿ, ಮುಖದಲ್ಲಿ ಸಣ್ಣಗೆ ನಗು ತುಳುಕಿಸಿ, ಕಣ್ಣಲ್ಲೊಂದು ಬೆಳಕು ಮಿಂಚಿಸಿ, ತಲೆ ತಗ್ಗಿಸಿ ಹೇಳಿದ್ದು, ‘ಇನ್ಯಾರೆ? ನಮ್ಮ ಯಜಮಾನತಿ’ ಎಂದು! ಎದುರಿಗಿದ್ದ ನಾನು, ‘ಆಹಾ! ಇವರೇ ಕೆಂಪಾಗಿದ್ದಾರೆ, ಮುಖದಲ್ಲಿ ನಗು ಹೇಗೆ ತುಳುಕಿದೆ?’ ಎಂದೆ.

ಕತ್ತೆತ್ತಿ ನನ್ನನ್ನು ನೋಡಿದರು. ಮುಖದಲ್ಲಿ ನಗು ಹಾಗೇ ಇತ್ತು. ‘ನಾಳೆ ಮಲ್ಲಿಗೆ ಹೂವು ಮುಡಿದುಕೊಂಡು ಬರಲು ಹೇಳಿದ್ದಾರಂತೆ ಸಮಾರಂಭಕ್ಕೆ ಎಂದು ಯಾರೋ ನುಡಿದರು. ಕೇಳಿಸಿತೋ ಇಲ್ಲವೋ ಆದರೆ ಮುಖದಲ್ಲೊಂದು ನಗು ನಸು ಲಜ್ಜೆಯಿಂದೆಂಬಂತೆ ಮಿನುಗುತ್ತಲೇ ಇತ್ತು. ಅಂತೆಯೇ ಮೇಡಂ, ಸಮಾರಂಭಕ್ಕೆ ರೇಶಿಮೆ ಸೀರೆಯುಟ್ಟು, ಮಲ್ಲಿಗೆ ಮುಡಿದೇ ಬಂದು ಭೈರಪ್ಪನವರ ಆಸೆಯನ್ನು ನೆರವೇರಿಸಿದ್ದರು!

ಕಾದಂಬರಿಯ ಪುಟಗಳು

ಮಾರನೇದಿನ ಬಣ್ಣ ಬಣ್ಣದ ರಂಗೋಲಿ ತಳಿರುತೋರಣ, ಬಾಳೇಕಂದು ಕಟ್ಟಿದ ಬೀದಿ ಗಳಲ್ಲಿ, ಬೆಳ್ಳಿರಥದಲ್ಲಿ ಪತಿಪತ್ನಿಯರ ಮೆರವಣಿಗೆ, ಜನ ಕಣ್ತುಂಬಿಕೊಂಡರು. ಅವರ ಎಲ್ಲ ಕಾದಂಬರಿಗಳ ಮುಖಪುಟಗಳು, ಟ್ಯಾಬ್ಲೋಗಳು. ಸಮಾರಂಭದಲ್ಲಿ ಸುತ್ತೂ ಹತ್ತಳ್ಳಿಯ ಜನ ಸಾಗರೋಪಾದಿಯಲ್ಲಿ ಹರಿದು ಬಂದು ಬಿಸಿಲಿನಲ್ಲೂ ತಾಳ್ಮೆಯಿಂದ ಎಲ್ಲರ ಭಾಷಣ-ಮಾತುಗಳನ್ನು ಕೇಳಿದರು. ವಿಶ್ವೇಶ್ವರ ಭಟ್ಟರು, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ

ಬೊಮ್ಮಾಯಿಯವರ ಮಾತುಗಳು ಜನರ ಮನಸ್ಸನ್ನು ತಟ್ಟಿದವು. ಮಹಾರಾಜರ ಮಾತು ಭೈರಪ್ಪನವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸಿತು. ಪ್ರತಿಮಾತಿಗೂ ಜನ ಕರಗಿಹೋದರು. ಭೈರಪ್ಪನವರ ಪ್ರಯತ್ನದಿಂದ ತಮ್ಮ ಊರಿನ ಕೆರೆಗೆ ನೀರು ಬಂದಿದೆ ಎಂಬ ವಿಚಾರವು ಜನರನ್ನು ಸಂತಸಪಡಿಸಿತ್ತು.

ತಾಯಿ ಗೌರಮ್ಮ

ಭೈರಪ್ಪನವರೂ ಮಾತನಾಡಿದರು. ತಮ್ಮ ಬದುಕಿನಲ್ಲಿ ಸಂದುಹೋದ ಬಡತನ, ಬೇಗುದಿ ಗಳನ್ನು ನೆನೆದರು. ಅಮ್ಮನನ್ನು ಕೊಂಡಾಡಿದರು. ತನ್ನಮ್ಮನಿಂದಲೇ ತಾನಿವತ್ತು ಹೀಗಿರು ವುದು ಎಂದರು. ಅಪ್ಪನ ಬಗ್ಗೆಯೂ ಹೇಳಿದರು. ಯಾವ ಕಾರ್ಯಕ್ರಮಗಳಿಗೂ ಬರದ ಪತ್ನಿ ಇವತ್ತು ಬಂದಿರುವುದಕ್ಕೆ ಹೆಮ್ಮೆ ಪಟ್ಟರು. ಹಳ್ಳಿ ಜನರಿಗೆ ಇವರ ಸಾಹಿತ್ಯದ ಅರಿವಿದೆಯೇ? ಆ ಹಳ್ಳಿಗರ ಮಾತಿನಲ್ಲೇ ಕೇಳಿ; ‘ಅವ್ವಾ, ನಮ್ಮೂರಿಗೆ ನೀರು ತಂದುಕೊಟ್ಟು ನಮ್ಮನ್ನೆಲ್ಲ ಬದುಕಿಸಿದ ದ್ಯಾವ್ರು ಕಣ್ರವ್ವಾ ಈ ನಮ್ಮಪ್ಪ! ಕೆರೆ ನೀರು ಬತ್ತೋಗಿತ್ತು.

ತೆಂಗಿನ ತೋಟ, ಹೊಲ ಗದ್ದೆಗಳಿಗೆ ನೀರಿರ‍್ಲಿಲ್ಲ, ಭೂಮಿ ಒಣ್ಗೋಗಿ ಬಾಯ್ಬುಟ್ಕೊಂಡಿತ್ತು. ಬೆಳೆ ಇಲ್ಲ, ಮಳೆ ಇಲ್ಲ! ಏನ್ ಮಾಡ್ಬೇಕ್ರವ್ವಾ ನಾವು ಹಳ್ಳೀ ಮುಕ್ಕಾಗಳು. ಇಂತಾ ಟೈಮ್ನಾಗೆ ನಮ್ ಜೀವ ಉಳುಸ್ದೋರು ಈ ಮಾನುಭಾವ್ರು, ಕೆರೇಲಿ ಮೀನ್ ಬಂದವೆ. ತೆಂಗು ಫಲ ಬುಟ್ಟವೆ. ನೆಲ ತಣ್ದದೆ. ನಾವೂ ತಣ್ಗಿದೀವಿ’ ಎಂದರು ಹಳ್ಳಿಯ ಒಬ್ಬರು ಹಿರಿಯರು.

ಬಾಲ್ಯದಲ್ಲಿ ಭೈರಪ್ಪನವರು ಈಜಾಡುತ್ತಿದ್ದ ಕೆರೆ ಇಂದು ತುಂಬಿದೆ. ಇವರ ಒಂದು ಮನ ವಿಗೆ ಸ್ಪಂದಿಸಿ, ಸರಕಾರವು ಹಣವನ್ನು ಮಂಜೂರು ಮಾಡಿ ಕೆರೆಕಟ್ಟೆ ತುಂಬುವಂತೆ ಮಾಡಿದೆ. ವಿಶ್ವೇಶ್ವರ ಭಟ್ಟರ ಮೂಲಕ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕೂಡಲೇ ಮರು ಮಾತಾಡದೆ ಅಂದಿನ ಮುಖ್ಯಮಂತ್ರಿಯವರು ಬೊಮ್ಮಾಯಿ ಇಪ್ಪತ್ತೈದು ಕೊಟಿ ಹಣವನ್ನು ಮಂಜೂರು ಮಾಡಿದರಂತೆ. ಇದರ ಫಲವಾಗಿ ಕೆರೆ ಕಟ್ಟೆಗಳು ತುಂಬಿವೆ. ಆ ಸಾರ್ಥಕತೆಯನ್ನು ಭೈರಪ್ಪನವರು ಸಾಹಿತಿಯಾಗಿ ಮಾತ್ರವಲ್ಲ, ಸಂತೆಶಿವರಕ್ಕೆ ಗಂಗೆ ಹರಿಸಿದ ಭಗೀರಥರಾಗಿ ಅನುಭವಿಸುತ್ತಿದ್ದಾರೆ.

ಆದರೆ ಭೈರಪ್ಪನವರನ್ನು ನೋಡ ನೋಡುತ್ತಲೇ ನನಗನಿಸಿದ್ದು, ಇದೆಲ್ಲ ಕೀರ್ತಿ, ಹೊಗಳಿಕೆ, ಮೆಚ್ಚುಗೆ, ಕೊಂಡಾಟಗಳಿಂದ ದೂರವೇ ಉಳಿದಿರುವ ನಿರ್ಲಿಪ್ತರೆನಿಸಿತು. ಜನ ಸನ್ಮಾನಿಸುತ್ತಿದ್ದಾರಾ...ಅವರ ಸಂತೋಷಕ್ಕೆ ಸನ್ಮಾನಿಸಿದರು, ಕೊಂಡಾಡಿದರಾ... ಅವರಿಗೆ ಸಂತೋಷವಾಗಿದೆ. ಹೊಗಳಿದರಾ.... ಮಾಡಿದ ಕೆಲಸ ಖುಷಿ ತಂದಿರಬೇಕು. ಹೀಗೆ ಯೋಚಿಸುತ್ತಿದ್ದಿರಬಹುದು.

ಈಗ ಹೇಳುತ್ತೇನೆ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಪದುಮನಾಭನ ಪಾದದೊಲಿಮೆ ಎನಗಾಯಿತು ಎಂಬಂತೆ, ಸಂತೆಶಿವರದಲ್ಲಿ ಭೈರಪ್ಪನವರನ್ನು ನೋಡಿ ನನಗನಿಸಿತು, ಜೀವನ ಸಾರ್ಥಕವೆನಿಸಿತು. ಅವರ ತಾಯಿ ಗೌರಮ್ಮನವರ ಆಶಯದಂತೆ, ಜನೋಪಕಾರಿಯಾದರು, ಜನಗಳಿಗೆ ಸಂತೋಷ ನೀಡಿದರು. ಪರಿಶುದ್ಧ ಜೀವನ! ಬದುಕೇ ಸಾರ್ಥಕ ಪಾವನ! ಭೈರಪ್ಪನವರಂತಹವರು ಸಾವಿರ ಸಾಹಿತಿಗಳು ಹುಟ್ಟಿ ಬರಲಿ. ನಾಡು ನಗುನಗುತಿರಲಿ.