ಸಿದ್ದರಾಮಯ್ಯ, ಮುಖ್ಯಮಂತ್ರಿ
ನಾಡೋಜ ಪಾಟೀಲ ಪುಟ್ಟಪ್ಪನವರಿಂದ ಆರಂಭಗೊಂಡು, ಹುಬ್ಬಳ್ಳಿ-ಧಾರವಾಡಕ್ಕೆ ಸೀಮಿತವಾಗಿದ್ದ ವಿಶ್ವವಾಣಿಗೆ 65ರ ಹರೆಯ. ಈ ಐತಿಹಾಸಿಕ ಪತ್ರಿಕೆಯನ್ನು ಪಾಪು ಅವರು ವಿಶ್ವೇಶ್ವರ ಭಟ್ಟರ ಕೈಗಿಟ್ಟು ಇಂದಿಗೆ 10 ವರ್ಷ ತುಂಬಿ 11ನೇ ವರ್ಷ. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಭ ಆಶಯ ನುಡಿ.
ಸಿದ್ದರಾಮಯ್ಯ, ಮುಖ್ಯಮಂತ್ರಿ ಪತ್ರಕರ್ತನ ದೂರದೃಷ್ಟಿ ಕೇವಲ ಪತ್ರಿಕೆಗಷ್ಟೆ ಸೀಮಿತವಲ್ಲ. ಆ ದೂರದೃಷ್ಟಿಯ ದೂರ ಹೇಗಿರಬೇಕೆಂದರೆ ಪತ್ರಿಕೋದ್ಯಮಕ್ಕೆ ಹೊಸದೊಂದು ಭಾಷ್ಯವನ್ನೇ ಬರೆಯಬೇಕು. ಹಾಗೆ ಬರೆದು ತೋರಿಸಿದವರು ‘ವಿಶ್ವವಾಣಿ’ ಪತ್ರಿಕೆಯ ಮಾಲೀಕರು ಮತ್ತು ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್.
ಇವರ ಕೂಸು ‘ವಿಶ್ವವಾಣಿ’ ಹತ್ತು ವರ್ಷ ತುಂಬಿ ಹನ್ನೊಂದಕ್ಕೆ ಕಾಲಿಟ್ಟಿರುವುದೇ ಇದಕ್ಕೆ ಸಾಕ್ಷಿ. ಅವರು ನನ್ನಂತೆ ಕುಗ್ರಾಮದಿಂದ ಬಂದವರು. ಉತ್ತರ ಕನ್ನಡದ ಕುಗ್ರಾಮದ ಕನಸು ಕಂಗಳ ಹುಡುಗ ಅವಸರದ ಅಕ್ಷರ ಲೋಕದಲ್ಲಿ ತನ್ನದೇ ಛಾಪು ಮೂಡಿಸಿ, ಅಸಾಧ್ಯ ಸಾಧ್ಯತೆಗಳನ್ನು ಒರೆಗೆ ಹಚ್ಚಿ ಸಾಧ್ಯ ಮಾಡಿ ತೋರಿಸಿದ್ದಾರೆ.
ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ವಿಶ್ವೇಶ್ವರ ಭಟ್ ಅವರಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಅವರ ರೀತಿಯ ಇವರ ಸಂಪಾದಕತ್ವದ ‘ವಿಶ್ವವಾಣಿ’ ಸಮೂಹದ ಪತ್ರಿಕೆಗಳು ತನ್ನದೇ ಆದ ವೈಶಿಷ್ಟ್ಯ ಉಳಿಸಿಕೊಂಡಿವೆ. ಕಳೆದ ವಾರವಷ್ಟೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಅವರ ಪತ್ರಿಕಾ ಸಾಹಸವನ್ನು ಮೆಚ್ಚಿ ಮಾತನಾಡಿದ್ದೆ.
ಇದನ್ನೂ ಓದಿ: Vishweshwar Bhat Column: ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ !
ಇವರ ಸಂಪಾದಕತ್ವದ ‘ಪ್ರವಾಸಿ ಪ್ರಪಂಚ’ ಪತ್ರಿಕೆ ಬಹುಬೇಗ ಜನಪ್ರಿಯಗೊಂಡು, ಹೊಸ ಹೆಜ್ಜೆ ಗುರುತನ್ನು ಮೂಡಿಸುತ್ತಿರುವುದನ್ನು ನಾನು ಉಲ್ಲೇಖಿಸಿದ್ದೆ. ಪ್ರವಾಸೋದ್ಯಮ ಕ್ಷೇತ್ರದ ಪ್ರಚಾರ ದೃಷ್ಟಿಯಿಂದ ಈ ಪತ್ರಿಕೆ ಮಹತ್ತರ ಕೊಡುಗೆ ನೀಡಲಿದೆ. ಇಂಥ ಪ್ರಯೋಗ ಕನ್ನಡದಲ್ಲಿ ಮಾತ್ರ ಅಲ್ಲ, ಭಾರತೀಯ ಪತ್ರಿಕೋದ್ಯಮದ ಮೊದಲನೆಯದು ಎಂದು ಕೇಳಿದ್ದೇನೆ.
ಯಾವುದೇ ಕ್ಷೇತ್ರ ಆದರೂ Update ಆಗುವುದು ಬಹಳ ಮುಖ್ಯ. ಈ ವಿಚಾರದಲ್ಲಿ ವಿಶ್ವೇಶ್ವರ ಭಟ್ ಅವರು ನಿಸ್ಸೀಮರು. 1958ರಲ್ಲಿ ಹುಬ್ಬಳ್ಳಿಯಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅವರು ಪ್ರಾರಂಭಿಸಿದ ವಿಶ್ವವಾಣಿ ಅರ್ಧ ಶತಮಾನ ಪೂರೈಸಿದರೆ, 2016ರಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಸಾರಥ್ಯದಲ್ಲಿ ದಶಕ ಪೂರೈಸಿ, ಎರಡನೇ ದಶಕಕ್ಕೆ ದಾಪುಗಾಲಿಟ್ಟಿದೆ.
‘ವಿಶ್ವವಾಣಿ’ಯ ಅತಿ ದೊಡ್ಡ ಶಕ್ತಿಯೆಂದರೆ ಅದರ ಅಂಕಣಗಳು. ಎರಡು ಪೂರ್ಣ ಪುಟಗಳಲ್ಲಿ ಪ್ರಕಟವಾಗುವ ಲೇಖನ, ಅಂಕಣಗಳು ಓದುಗರಿಗೆ ಸಮೃದ್ಧ ಓದನ್ನು ನೀಡುವುದು ಅತಿಶಯೋಕ್ತಿ ಯೇನಲ್ಲ. ವಿಶ್ವೇಶ್ವರ ಭಟ್ ಅವರ ‘ನೂರೆಂಟು ವಿಶ್ವ’, ‘ಸಂಪಾದಕರ ಸದ್ಯಶೋಧನೆ’, ‘ಇದೇ ಅಂತರಂಗ ಸುದ್ದಿ’, ‘ಆ ದಿ ಎಡಿಟರ್’ ಮತ್ತು ‘ಭಟ್ಟರ್ ಸ್ಕಾಚ್’ ಅಂಕಣಗಳು ಬಹಳ ಜನಪ್ರಿಯ ಆಗಿವೆ.
ರಾಜಕೀಯ, ಸಾಹಿತ್ಯ, ವಿಜ್ಞಾನ, ಆರೋಗ್ಯ ಮತ್ತು ಪ್ರಚಲಿತ ವಿದ್ಯಮಾನಗಳ ಜತೆಗೆ ವಿಶ್ವದ ಪ್ರವಾಸಿ ತಾಣಗಳನ್ನು ಅವುಗಳ ಸಾಂಸ್ಕೃತಿಕ ಮತ್ತು ಭೌಗೋಳಿಕ ಮಹತ್ವದ ಕುರಿತು ವಿಶ್ವೇಶ್ವರ ಭಟ್ ವಿಶ್ಲೇಷಣಾತ್ಮಕವಾಗಿ ಬರೆಯುತ್ತಾರೆ.
ಅಚ್ಚುಕಟ್ಟಾಗಿ ಬದುಕುವುದು, ರಸವತ್ತಾಗಿ ಬರೆಯುವುದು ಸಣ್ಣ ಮಾತಲ್ಲ. ದೇಶಗಳನ್ನು ಸುತ್ತು ತ್ತಲೇ ಅದಕ್ಕೆ ಪೈಪೋಟಿ ಕೊಡುವಂತೆ ಪುಸ್ತಕಗಳನ್ನು ಓದುತ್ತಾ, ಓದುವ ಪುಸ್ತಕಗಳಿಗೂ ಪೈಪೋಟಿ ಕೊಡುವಂತೆ ಬರೆಯುತ್ತಾ ಬದುಕನ್ನು ಆಸ್ವಾದಿಸುವುದು. ಇದರ ಜತೆಗೆ ತಾನು ಅಂದುಕೊಂಡಂತೆ ಪತ್ರಿಕೆಯನ್ನು ತರುವುದು ದೊಡ್ಡ ಸಂಗತಿಯಾಗಿ ಕಾಣುತ್ತದೆ.
ನನಗೂ ಭಟ್ಟರಿಗೂ ವೈಚಾರಿಕವಾಗಿ ಭಿನ್ನಾಭಿಪ್ರಾಯಗಳಿವೆ. ಹಾಗೆ ಭಿನ್ನಾಭಿಪ್ರಾಯಗಳಿದ್ದಾಗಲೂ ಪರಸ್ಪರ ಒಪ್ಪಿಕೊಳ್ಳುವ ವಿಚಾರವಿದೆಯಲ್ಲ, ಅದು ಮನುಷ್ಯ ಲೋಕದಲ್ಲಿ ಇರಬಹು ದಾದ ಆರ್ದ್ರತೆ. ನಮ್ಮ ದೇಶದ ಹೆಮ್ಮೆ ಸಂವಿಧಾನದ ಆಶಯವೂ ಇದೇ ಅಲ್ಲವೇ? ಭಟ್ಟರು ಬರೀ ಲೇಖಕ ಅಷ್ಟೆ ಅಲ್ಲ, ಉದ್ಯಮದ ಒಳತಳಗಳನ್ನು ಬಹಳ ಚೆನ್ನಾಗಿ ಅರಿತಿರುವ ಸೂಕ್ಷ್ಮಗ್ರಾಹಿ. ಅವರು ಸಂಪಾದಕರಷ್ಟೇ ಅಲ್ಲ.
ನೇತೃತ್ವ ವಹಿಸುವ, ಅಪಾರ ಶಿಷ್ಯವೃಂದವನ್ನು ಹೊಂದಿರುವ ಮತ್ತು ಆ ಶಿಷ್ಯವೃಂದ ಅಪಾರ ಪ್ರತಿಭಾವಂತರೂ ಆಗಿರುವುದು ವಿಶೇಷ. ಈ ಕಾರಣಕ್ಕೆ ಅವರು ಸಂಪಾದಕನ ಜತೆಗೆ ನಾಯಕನೂ ಹೌದು. ಅವರ ಶಿಷ್ಯ ಬಳಗವೇ ಅವರ ಶಕ್ತಿ. ವ್ಯವಹಾರ ಕೌಶಲ, ಸೃಜನಶೀಲತೆ ಎರಡನ್ನೂ ಮೇಳೈಸಿ ಕೊಂಡಿರುವ ಭಟ್ಟರ ಬರಹಗಳಲ್ಲಿ ವೈವಿಧ್ಯಮಯ ವಿಷಯಗಳಿರುತ್ತವೆ.
ಅವರ ಬರಹಗಳಲ್ಲಿ ಸಕಾರಾತ್ಮಕ ಸಂಗತಿಗಳಿರುತ್ತವೆ. ನೂರಕ್ಕೂ ಹೆಚ್ಚು ದೇಶಗಳಲ್ಲಿ ಪ್ರವಾಸ ಮಾಡಿರುವ ಭಟ್ಟರು, ತಮ್ಮ ವಿಶಾಲ ಅನುಭವದ ಹಿನ್ನೆಲೆಯಲ್ಲಿ ಬರೆಯುತ್ತಾರೆ. ಅವರ ಬರಹಗಳ ಲ್ಲಿರುವ ಹಲವು ಒಳ್ಳೆಯ ಗುಣಗಳನ್ನು ಇಷ್ಟಪಡುತ್ತೇನೆ. ಪ್ರಜಾಪ್ರಭುತ್ವದ ಆಶಯಗಳನ್ನು ಇನ್ನಷ್ಟು ಬಲಪಡಿಸುತ್ತಾ, ವಿಶ್ವವಾಣಿ ಪತ್ರಿಕೆ ಇನ್ನಷ್ಟು ಸಮೃದ್ಧವಾಗಿ ಬೆಳೆಯಲಿ. ಅದರ ಫಲ ಕನ್ನಡಿಗರಿಗೆ ಸಿಗಲಿ ಎಂದು ಈ ಶುಭ ಸಂದರ್ಭದಲ್ಲಿ ಹಾರೈಸುತ್ತೇನೆ.