ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ !

ಹಿಂತಿರುಗಿ ನೋಡಿದಾಗ ಅಚ್ಚರಿಯಾಗುತ್ತದೆ. ಎದುರಾದ ಸವಾಲುಗಳು ಹಿಮಾಲಯದಷ್ಟಿದ್ದರೂ, ಅದನ್ನು ದಾಟುವ ಛಲವೂ ನನಗಿತ್ತು, ಈಗಲೂ ಇದೆ. ಅಡೆತಡೆಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿ ಕೊಂಡು ಸಾಗಿದ ಈ ಪಯಣದಲ್ಲಿ ಸೋಲಿಗಿಂತ ಗೆಲುವಿನ ರುಚಿಯೇ ಹೆಚ್ಚು ಆಪ್ತ. ಇಂದು ‘ವಿಶ್ವವಾಣಿ’ ಬೆಳೆದು ನಿಂತಿರುವ ರೀತಿಗೆ ಹತ್ತು ವರ್ಷಗಳ ಹಿಂದೆ ಇಟ್ಟ ಆ ಸಣ್ಣ ಹೆಜ್ಜೆಯೇ ಕಾರಣ.

Vishweshwar Bhat Column: ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ !

-

ನೂರೆಂಟು ವಿಶ್ವ

ಕಾಲದ ವೇಗ ಎಂಥದ್ದು ಎಂಬುದು ಹಿಂತಿರುಗಿ ನೋಡಿದಾಗಷ್ಟೇ ಅರಿವಾಗುತ್ತದೆ. ನಾನು ‘ವಿಶ್ವ ವಾಣಿ’ ಎಂಬ ಅಕ್ಷರ ಜ್ಯೋತಿಯನ್ನು ನಾಡೋಜ ಪಾಟೀಲ ಪುಟ್ಟಪ್ಪ (ಪಾಪು) ಅವರಿಂದ ಪಡೆದು ಇಂದಿಗೆ ಸರಿಯಾಗಿ 10 ವರ್ಷಗಳು ತುಂಬುತ್ತಿವೆ. ಇದು ಕೇವಲ ಒಂದು ಪತ್ರಿಕೆಯ ಮಾಲೀಕತ್ವ ಬದಲಾವಣೆಯಷ್ಟೇ ಆಗಿರಲಿಲ್ಲ.

ಬದಲಾಗಿ, ನನ್ನ ಪತ್ರಿಕೋದ್ಯಮ ಬದುಕಿನ ದೊಡ್ಡ ಸಾಹಸಕ್ಕೆ ಮುನ್ನುಡಿ ಬರೆದ ಅಪೂರ್ವ ದಿನ, ಕ್ಷಣವೂ ಆಗಿತ್ತು. ಹತ್ತು ವರ್ಷಗಳ ಹಿಂದೆ, ಇದೇ ದಿನದಂದು ನಾನು ಹೊತ್ತ ಜವಾಬ್ದಾರಿಯ ಭಾರ ಎಷ್ಟಿತ್ತು ಎಂಬುದು ಇಂದಿಗೂ ನನ್ನ ಭುಜಗಳಿಗಷ್ಟೇ ಗೊತ್ತು.

ಅಂದು ಕಂಡ ಕನಸುಗಳು, ಇಟ್ಟ ಹೆಜ್ಜೆಗಳು ಮತ್ತು ಎದುರಿಸಿದ ಅಡೆತಡೆಗಳೇ ಇಂದು ನನ್ನನ್ನು ಮತ್ತು ‘ವಿಶ್ವವಾಣಿ’ಯನ್ನು ಗಟ್ಟಿಗೊಳಿಸಿವೆ. ದಶಕದ ಈ ಪಯಣವನ್ನು ‘ಸಿಂಹಾವಲೋಕನ’ ಮಾಡಿಕೊಳ್ಳುವಾಗ, ಎದುರಾದ ಸವಾಲುಗಳು ಬೆಟ್ಟದಷ್ಟಿದ್ದರೂ, ಅದನ್ನು ಮೀರಿ ನಿಂತ ಛಲವೂ ಅಷ್ಟೇ ಎತ್ತರದ್ದಾಗಿತ್ತು ಎಂಬ ತೃಪ್ತಿ ನನಗಿದೆ.

ಹನ್ನೊಂದು ವರ್ಷಗಳ ಹಿಂದೆ ಇದೇ ದಿನ ನನ್ನ ಎದೆಯಲ್ಲಿ ಒಂದು ಬಗೆಯ ಆತಂಕ ಮನೆ ಮಾಡಿತ್ತು, ಕೈಯಲ್ಲಿ ಅನಿಶ್ಚಿತತೆಯ ನಡುಕವಿತ್ತು. ಅದು ನನ್ನನ್ನು ಸುಮ್ಮನೆ ಕೂರಲು ಬಿಡಲಿಲ್ಲ. ಬೆನ್ನಿಗೆ ಕಟ್ಟಿಕೊಂಡ ಕೆಂಡದ ಮೂಟೆಯಂತೆ ಪತ್ರಿಕೋದ್ಯಮದ ಈ ಮಹಾ ಸಾಹಸಕ್ಕೆ ಅಂದು ಮುನ್ನುಡಿ ಬರೆದಿದ್ದೆ. ಆ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಪ್ರತಿ ದಿನವೂ ಒಂದು ಹೋರಾಟ, ಪ್ರತಿ ಸಂಚಿಕೆಯೂ ಒಂದು ಸವಾಲು. ಅಂದು ಹೊತ್ತ ಜವಾಬ್ದಾರಿಯ ಭಾರಕ್ಕೆ ನನ್ನ ಭುಜಗಳು ಎಷ್ಟೋ ಬಾರಿ ಸೋತಿದ್ದವು, ಆದರೆ ಮನಸ್ಸು ಮಾತ್ರ ಸೋಲೊಪ್ಪಲು ತಯಾರಿರಲಿಲ್ಲ. ‘ವಿಶ್ವವಾಣಿ’ ಎಂಬ ಹೆಸರನ್ನು ಉಳಿಸುವು ದಕ್ಕಿಂತ ಹೆಚ್ಚಾಗಿ, ಅದನ್ನು ಒಂದು ಒಳ್ಳೆಯ ಪತ್ರಿಕೆಯಾಗಿ ರೂಪಿಸಿ ಕನ್ನಡಿಗರ ಕೈಯಲ್ಲಿಡಬೇಕು ಎಂಬ ಹುಚ್ಚು ಹಠ ನನ್ನನ್ನು ನಿತ್ಯವೂ ನಿದ್ದೆ ಮಾಡದಂತೆ ಕಾಡಿತ್ತು. ಅಂದು ಕಂಡ ಕನಸುಗಳು ಇಂದು ನನಸಾಗಿ ಕಣ್ಣ ಮುಂದೆ ನಿಂತಾಗ, ಆ ಹಳೆಯ ಕೆಟ್ಟ ಕನಸುಗಳೆಲ್ಲ ಮಾಯವಾಗಿ ಮನಸ್ಸು ನಿರಾಳ.

ಇದನ್ನೂ ಓದಿ: Vishweshwar Bhat Column: ದಂತಕತೆಯಾದ ʼದಂತʼ ರಾಜ: ಒಂದು ಆನೆಯ ಮಹಾಪಯಣ

ಹಿಂತಿರುಗಿ ನೋಡಿದಾಗ ಅಚ್ಚರಿಯಾಗುತ್ತದೆ. ಎದುರಾದ ಸವಾಲುಗಳು ಹಿಮಾಲಯದಷ್ಟಿದ್ದರೂ, ಅದನ್ನು ದಾಟುವ ಛಲವೂ ನನಗಿತ್ತು, ಈಗಲೂ ಇದೆ. ಅಡೆತಡೆಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಸಾಗಿದ ಈ ಪಯಣದಲ್ಲಿ ಸೋಲಿಗಿಂತ ಗೆಲುವಿನ ರುಚಿಯೇ ಹೆಚ್ಚು ಆಪ್ತ. ಇಂದು ‘ವಿಶ್ವವಾಣಿ’ ಬೆಳೆದು ನಿಂತಿರುವ ರೀತಿಗೆ ಹತ್ತು ವರ್ಷಗಳ ಹಿಂದೆ ಇಟ್ಟ ಆ ಸಣ್ಣ ಹೆಜ್ಜೆಯೇ ಕಾರಣ.

ಬದುಕು ಎಂದರೆ ಹೀಗೆ, ಇಲ್ಲಿ ಸಾಹಸ ಮಾಡದಿದ್ದರೆ ಸಾರ್ಥಕತೆ ಎಲ್ಲಿಂದ ಬರಬೇಕು? ಅಂದು ಹೊತ್ತ ಆ ಅಗ್ನಿಕುಂಡ ಇಂದಿಗೂ ಅಕ್ಷರ ಪ್ರೇರಣೆಯ ಅಗ್ನಿದಿವ್ಯವಾಗಿ ಬೆಳಗುತ್ತಿದೆ. ಆ ದಿನಗಳಲ್ಲಿ ಪತ್ರಿಕೆಯ ಮಾಲೀಕತ್ವ ಅಂದ್ರೆ ಅದು ಬರೀ ಹಣದ ವ್ಯವಹಾರವಾಗಿರಲಿಲ್ಲ, ಅದು ಅಕ್ಷರಗಳ ಜತೆಗಿನ ಒಂದು ಪ್ರೇಮ ಪ್ರಕರಣವಾಗಿತ್ತು. ಅಕ್ಷರಗಳನ್ನೇ ಉಸಿರಾಡುವ ನನಗೆ, ಆ ಅಗ್ನಿಪಥದಲ್ಲಿ ನಡೆಯುವಾಗ ಅನೇಕರು, ‘ಇವನ ಕೈಲಿ ಇದು ಸಾಧ್ಯವೇ?’ ಎಂದು ನಕ್ಕಿದ್ದರು.

ಆ ನಗುಗಳೇ ನನಗೆ ಇಂಧನವಾದವು. ‘ವಿಶ್ವವಾಣಿ’ಯ ಹಳೆಯ ಪುಟಗಳ ಗಂಧದ ನಡುವೆ ನಾನು ನವೀನ ಕಾಲದ ಕನ್ನಡಿಗರ ನಾಡಿಮಿಡಿತವನ್ನು ಹುಡುಕಿದೆ. ಅಂದು ಇಟ್ಟ ಪ್ರತಿಯೊಂದು ಹೆಜ್ಜೆ ಯಲ್ಲೂ ಒಂದು ಭರವಸೆಯಿತ್ತು, ಪ್ರತಿ ಸವಾಲಿನಲ್ಲೂ ಒಂದು ಗೆಲುವಿನ ಹಸಿವಿತ್ತು. ಹತ್ತು ವರ್ಷಗಳ ಈ ಜೈತ್ರಯಾತ್ರೆಯಲ್ಲಿ ನಾನು ಗಳಿಸಿದ್ದು ಈ ನಾಡಿನ ಅಸಂಖ್ಯಾತ ಓದುಗರ ಪ್ರೀತಿ, ಅಭಿಮಾನ ಮತ್ತು ವಿಶ್ವಾಸ.

ಕಳೆದ ಒಂದು ದಶಕದಲ್ಲಿ ಪತ್ರಿಕೋದ್ಯಮ ಮತ್ತು ಕನ್ನಡ ಪತ್ರಿಕೋದ್ಯಮ ಸಾಕಷ್ಟು ಬದಲಾಗಿವೆ. ಈ ಅವಧಿ ಅಕ್ಷರಶಃ ಒಂದು ಯುಗಾಂತರದಂತೆ ಭಾಸವಾಗುತ್ತಿದೆ. ಶತಮಾನಗಳಿಂದ ರೂಢಿಸಿ ಕೊಂಡು ಬಂದಿದ್ದ ಮುದ್ರಣ ಮಾಧ್ಯಮದ ಭದ್ರ ಬುನಾದಿಯನ್ನು ಕಾಲದ ವೇಗ ಮತ್ತು ತಂತ್ರ ಜ್ಞಾನದ ಅಬ್ಬರ ಅಲುಗಾಡಿಸಿವೆ. ಈ ಬದಲಾವಣೆಯ ಪಯಣದಲ್ಲಿ ಎರಡು ಪ್ರಮುಖ ಘಟ್ಟಗಳು ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿದವು - ಒಂದು ಕೋವಿಡ್ ಮಹಾಮಾರಿ ಮತ್ತೊಂದು ಸಾಮಾಜಿಕ ಜಾಲತಾಣಗಳ ಅಬ್ಬರ.

Screenshot_1 R

ಕೋವಿಡ್ ಬರುವವರೆಗೂ ಪತ್ರಿಕೆ ಎಂದರೆ ಬೆಳಗ್ಗೆ ಕಾಫಿಯ ಜೊತೆಗೆ ಕೈಗೆ ಸಿಗುವ ಕಾಗದದ ಕಂತೆ ಎಂಬ ಅಲಿಖಿತ ನಿಯಮವಿತ್ತು. ಆದರೆ ಲಾಕ್‌ಡೌನ್ ಎಂಬ ಕತ್ತಲೆಕಾಲ ಪತ್ರಿಕಾ ವಿತರಣೆಯ ಸರಪಳಿಯನ್ನೇ ಕತ್ತರಿಸಿ ಹಾಕಿತು. ಜನರು ಪತ್ರಿಕೆಯನ್ನು ಕೈಯಿಂದ ಮುಟ್ಟಲು ಹೆದರಿದ ಆ ಕ್ಷಣದಲ್ಲಿ, ದಶಕಗಳಿಂದ ಪಾಲಿಸಿಕೊಂಡು ಬಂದಿದ್ದ ಮಾರುಕಟ್ಟೆ ಪಟ್ಟುಗಳು ತಲೆಕೆಳಗಾದವು.

ಇದು ಪತ್ರಿಕೋದ್ಯಮವನ್ನು ಅನಿವಾರ್ಯವಾಗಿ ಡಿಜಿಟಲ್ ಲೋಕಕ್ಕೆ ತಳ್ಳಿತು. ಇ-ಪೇಪರ್ ಮತ್ತು ವೆಬ್‌ಸೈಟ್‌ಗಳು ಕೇವಲ ಆಯ್ಕೆಯಾಗಿ ಉಳಿಯದೇ, ಅಸ್ತಿತ್ವದ ಪ್ರಶ್ನೆಯಾದವು. ಜಾಹೀರಾತುಗಳ ಕುಸಿತ ಮತ್ತು ಕಾಗದದ ಬೆಲೆ ಏರಿಕೆ ಪತ್ರಿಕಾ ಸಂಸ್ಥೆಗಳನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದರೂ, ಅದು ಹೊಸ ಮಾದರಿಯ ಪತ್ರಿಕೋದ್ಯಮಕ್ಕೆ ನಾಂದಿ ಹಾಡಿತು.

ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣಗಳು ಪತ್ರಿಕೋದ್ಯಮದ ಸ್ಥಾಪಿತ ನಿಯಮಗಳನ್ನು ಪುಡಿಪುಡಿ ಮಾಡಿದವು. ಹಿಂದೆ ಪತ್ರಕರ್ತರು ಸುದ್ದಿಯ ಏಕಸ್ವಾಮ್ಯ ಹೊಂದಿದ್ದರು. ಆದರೆ ಇಂದು ಪ್ರತಿಯೊಬ್ಬ ನಾಗರಿಕನೂ ಒಬ್ಬ ವರದಿಗಾರನೇ. ಫೇಸ್‌ಬುಕ್, ಎಕ್ಸ್ (ಟ್ವಿಟರ್) ಮತ್ತು ವಾಟ್ಸಾಪ್‌ ಗಳು ಸುದ್ದಿಯ ವೇಗವನ್ನು ಹೆಚ್ಚಿಸಿದವು ನಿಜ, ಆದರೆ ಅದರ ಜತೆಗೇ ‘ಫೇಕ್ ನ್ಯೂಸ್’ ಎಂಬ ಪಿಡುಗನ್ನೂ ತಂದವು.

ಬ್ರೇಕಿಂಗ್ ನ್ಯೂಸ್‌ಗಳ ಭರಾಟೆಯಲ್ಲಿ ವಿಶ್ಲೇಷಣಾತ್ಮಕ ಓದುವಿಕೆ ಹಿಂದೆ ಸರಿಯಿತು. ಗಂಭೀರ ಸುದ್ದಿ ಗಳಿಗಿಂತ ‘ಕ್ಲಿಕ್ ಬೈಟ್’ ಸುದ್ದಿಗಳೇ ಹೆಚ್ಚು ಸದ್ದು ಮಾಡತೊಡಗಿದವು. ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಹೇಳುವುದಾದರೆ, ಈ ಸ್ಥಿತ್ಯಂತರ ದೊಡ್ಡ ಸವಾಲಾಗಿತ್ತು. ಹಳೆಯ ಪೀಳಿಗೆಯ ಓದುಗರು ಇಂದಿಗೂ ಮುದ್ರಿತ ಅಕ್ಷರಗಳನ್ನೇ ನಂಬುತ್ತಿದ್ದರೆ, ಹೊಸ ಪೀಳಿಗೆ ಸ್ಮಾರ್ಟ್ ಫೋನ್‌ಗಳಲ್ಲಿ ಸುದ್ದಿ ಹುಡುಕುತ್ತಿದೆ.

ಈ ಎರಡೂ ತಲೆಮಾರುಗಳ ನಡುವೆ ಸೇತುವೆಯಾಗುವುದು ಇಂದು ‘ವಿಶ್ವವಾಣಿ’ಯಂಥ ಪತ್ರಿಕೆಗಳ ಮುಂದಿರುವ ಅತಿ ದೊಡ್ಡ ಸಾಹಸ. ಬದಲಾವಣೆ ಜಗತ್ತಿನ ನಿಯಮ, ಆದರೆ ಈ ಅನಿಶ್ಚಿತತೆಯ ನಡುವೆಯೂ ಸುದ್ದಿಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ ವಾಗಿದೆ.

ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆಯೂ ಪತ್ರಿಕೆಗಳು ಇಂದಿಗೂ ಭದ್ರವಾಗಿದ್ದರೆ ಅದಕ್ಕೆ ಕಾರಣ ಪತ್ರಿಕೆಯ ವಿಶ್ವಾಸಾರ್ಹತೆ ಮತ್ತು ಮುದ್ರಿತ ಅಕ್ಷರಗಳ ನಂಟು, ಮೋಹ. ಸಾಮಾಜಿಕ ಜಾಲತಾಣಗಳು ಮಾಹಿತಿಯ ಸುನಾಮಿಯನ್ನೇ ಎಬ್ಬಿಸಿರಬಹುದು, ಆದರೆ ಅಕ್ಷರ ಲೋಕದ ಗಾಂಭೀರ್ಯ ಮತ್ತು ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ ಇಂದಿಗೂ ಪತ್ರಿಕೆಗಳೇ ಸಾರ್ವ ಭೌಮ.

ಕಾಲ ಎಷ್ಟು ಬದಲಾದರೂ, ಸ್ಕ್ರೀನ್ ಮೇಲೆ ಮೂಡುವ ಬೆಳಕಿನ ಅಕ್ಷರಗಳಿಗಿಂತ, ಕಾಗದದ ಮೇಲೆ ಶಾಶ್ವತವಾಗಿ ಕುಳಿತ ಕಪ್ಪು ಅಕ್ಷರಗಳ ಮೇಲೆ ಜನರಿಗೆ ನಂಬಿಕೆ ಹೆಚ್ಚು. ಈ ವಿಶ್ವಾಸವೇ ಪತ್ರಿಕೋ ದ್ಯಮದ ಅತಿ ದೊಡ್ಡ ಆಸ್ತಿ ಮತ್ತು ಅದು ಅಲುಗಾಡದಂತೆ ಕಾಪಾಡುತ್ತಿರುವ ಶ್ರೀರಕ್ಷೆ.

ನಾನು ಹೇಳಿ-ಕೇಳಿ ಪ್ರಿಂಟ್ ಪತ್ರಕರ್ತ. ಮೂರು ವರ್ಷ ನ್ಯೂಸ್ ಚಾನೆಲ್ ಸಂಪಾದಕನಾಗಿದ್ದರೂ, ನನಗೆ ಮಾತಾಡುವುದಕ್ಕಿಂತ, ಬರೆಯುವುದರಲ್ಲಿಯೇ ಹೆಚ್ಚು ಆಸಕ್ತಿ. ಆದರೆ ಮುದ್ರಣ ಮಾಧ್ಯಮದ ಮಂದಗತಿಯ ನಡೆ ಹೊಸ ಸಾಹಸಕ್ಕೆ ಮುಂದಾಗುವವರಿಗೆ ಎಚ್ಚರಿಕೆಯ ಗಂಟೆಯಂತೆ ತೋರುವ ಈ ದಿನಗಳಲ್ಲಿ, ನಾನು ಭರವಸೆ ಕಂಡಿದ್ದು ಮುದ್ರಣ ಮಾಧ್ಯಮದ ಹೊಸ ಸಾಧ್ಯತೆಗಳಲ್ಲಿಯೇ.

ಇರುವ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುವುದರಲ್ಲಿಯೇ ತೃಪ್ತಿ ಕಾಣುವುದರ ಜತೆಗೆ ಹೊಸ ಸಾಧ್ಯತೆ ಮತ್ತು ಹೊಸ ಪ್ರಯೋಗಗಳಲ್ಲಿ ನಂಬಿಕೆ ಇಟ್ಟುಕೊಂಡು ಆರಂಭಿಸಿದ ‘ಪ್ರವಾಸಿ ಪ್ರಪಂಚ’ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ದಿಟ್ಟ ಹೆಜ್ಜೆ. ಪ್ರವಾಸ, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಮೀಸಲಾದ, ಇಪ್ಪತ್ತನಾಲ್ಕು ಪುಟಗಳ, ಬ್ರಾಡ್ ಶೀಟ್ ಆಕಾರದ ವಾರಪತ್ರಿಕೆ ಆರಂಭಿಸಿದ್ದು ಭಾರತೀಯ ಪತ್ರಿಕೋದ್ಯಮದಲ್ಲಿ ಒಂದು ದಾಖಲೆಯೇ.

ಈ ಹೊಸ ಪತ್ರಿಕೆ ಅತ್ಯಂತ ಕಡಿಮೆ ಅವಽಯಲ್ಲಿ ಕನ್ನಡಿಗರ ಅಚ್ಚುಮೆಚ್ಚಿನ ಪತ್ರಿಕೆಯಾಗಿದ್ದು ಒಂದು ಅಪೂರ್ವ ಸಾಧನೆಯೇ. ‘ಪ್ರವಾಸಿ ಪ್ರಪಂಚ’ ಪ್ರಿಂಟ್, ವೆಬ್, ಡಿಜಿಟಲ್ ಮತ್ತು ಸೋಶಿಯಲ್ ಮೀಡಿಯಾ... ಹೀಗೆ ಎಲ್ಲ ಪ್ಲಾಟ್‌ ಫಾರ್ಮ್‌ಗಳಲ್ಲಿ ಲಭ್ಯವಿದೆ.

ಇಲ್ಲಿ ತನಕ ಕನ್ನಡದಲ್ಲಿ ಬಂದ ಪತ್ರಿಕೆಗಳ ಅತ್ಯಂತ ಸುಂದರ ಎಂಬುದು ‘ಪ್ರವಾಸಿ ಪ್ರಪಂಚ’ದ ಅಗ್ಗಳಿಕೆ. ಹೊಸ ಪತ್ರಿಕೆಯನ್ನು ಆರಂಭಿಸಲು ಹಿಂದೆ ಮುಂದೆ ನೋಡುವ ಈ ದಿನಗಳಲ್ಲಿ, ರಾಜಕೀಯ, ಸಿನಿಮಾ, ಕ್ರೈಂ, ಕ್ರೀಡೆ, ಸೆನ್ಸೇಷನ್ ಸುದ್ದಿ ಇಲ್ಲದ ಪತ್ರಿಕೆ ಹೊರತರುವುದನ್ನು ಊಹಿಸಿ ಕೊಳ್ಳಲೂ ಸಾಧ್ಯವಿಲ್ಲದ ದಿನಗಳಲ್ಲಿ, ‘ಪ್ರವಾಸಿ ಪ್ರಪಂಚ’ ನೆಲೆಯೂರಿದ್ದು ಸಣ್ಣ ಸಂಗತಿಯೇನಲ್ಲ. ಹೊಸತನ್ನು ಸುಂದರವಾಗಿ ಕೊಟ್ಟರೆ ಕನ್ನಡಿಗರು ಸ್ವೀಕರಿಸುತ್ತಾರೆ ಎಂಬುದಕ್ಕೆ ‘ಪ್ರವಾಸಿ ಪ್ರಪಂಚ’ ಒಂದು ತಾಜಾ ನಿದರ್ಶನ.

ಕಳೆದ ಒಂದು ದಶಕದಲ್ಲಿ ‘ವಿಶ್ವವಾಣಿ’ ಭದ್ರವಾಗಿ ನೆಲೆಯೂರಿರುವುದಕ್ಕೆ ಅದು ಹುಟ್ಟು ಹಾಕಿದ ಇತರ ಸಂಸ್ಥೆಗಳೇ ಸಾಕ್ಷಿ. ಕಳೆದ ನಲವತ್ತೆರಡು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರಪ್ರಥಮ ದೈನಿಕ ‘ಲೋಕಧ್ವನಿ’, ‘ವಿಶ್ವವಾಣಿ’ ತೆಕ್ಕೆಗೆ ಬಂದು ಹೊಸ ರೂಪ, ವಿನ್ಯಾಸ ಪಡೆದು ಪ್ರಕಟವಾಗು ತ್ತಿದೆ.

ಕಳೆದ ವರ್ಷ ‘ಲೋಕಧ್ವನಿ’ಯ ಕೊಪ್ಪಳ ಆವೃತ್ತಿ ಆರಂಭವಾಗಿದ್ದು, ಈ ವರ್ಷ ಇನ್ನೂ ಎರಡು ಜಿಲ್ಲೆಗಳಲ್ಲಿ ತನ್ನ ಅಸ್ತಿತ್ವವನ್ನು ವೃದ್ಧಿಸಿಕೊಳ್ಳಲಿದೆ. ಕಳೆದ ವರ್ಷದಿಂದ ವಿಶ್ವವಾಣಿ ಡಿಜಿಟಲ್ ಲೋಕಕ್ಕೂ ಕಾಲಿಟ್ಟಿದ್ದು, ‘ವಿಶ್ವವಾಣಿ ಟಿವಿ’, ’ವಿಶ್ವವಾಣಿ ಹೆಲ್ತ್’, ‘ವಿಶ್ವವಾಣಿ ಮನಿ’, ‘ವಿಶ್ವವಾಣಿ ಪ್ರಾಪರ್ಟಿ’ ಚಾನೆಲ್‌ಗಳನ್ನು ಆರಂಭಿಸಿದೆ. ‌

ಸ್ಯಾಟಲೈಟ್ ಚಾನೆಲ್‌ಗೆ ಕಮ್ಮಿಯಿಲ್ಲದ ಅತ್ಯಂತ ಸುಸಜ್ಜಿತ ಡಿಜಿಟಲ್ ಟೀಮ್ ನವಮಾಧ್ಯಮದ ಎಲ್ಲ ಪಟ್ಟುಗಳಿಗೆ ತೆರೆದುಕೊಂಡು, ಕನ್ನಡ ಪತ್ರಿಕೋದ್ಯಮದ ಹೊಸ ಸಾಧ್ಯತೆಗಳನ್ನು ಅನ್ವೇಷಿ ಸುತ್ತಾ ದಾಪುಗಾಲಿಡುತ್ತಿರುವುದು ಗಮನಾರ್ಹ. ‘ವಿಶ್ವವಾಣಿ’ ಪತ್ರಿಕೆ ರಾಜ್ಯದ ತೆರೆಮರೆ ಯಲ್ಲಿರುವ ಅಸಾಮಾನ್ಯ ಸಾಧಕರನ್ನು ವಿದೇಶಗಳಲ್ಲಿ ಸನ್ಮಾನಿಸುವ ಉದ್ದೇಶದಿಂದ ‘ವಿಶ್ವವಾಣಿ ಗ್ಲೋಬಲ್ ಫೋರಂ’ ಎಂಬ ಹೊಸ ಪ್ರಯೋಗವನ್ನು ಆರಂಭಿಸಿ, ಆ ಮೂಲಕ ಈ ತನಕ ಜಪಾನ್, ರಷ್ಯಾ, ಫ್ರಾನ್ಸ್, ಕಾಂಬೋಡಿಯ, ವಿಯೆಟ್ನಾಂ, ಬಾಲಿ, ಒಮಾನ್, ಭೂತಾನ್, ಮಾಲ್ಡೀವ್ಸ್, ಮಾರಿಷಸ್ ಸೇರಿದಂತೆ ಹನ್ನೆರಡು ದೇಶಗಳಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದ್ದು ಸಹ ಕನ್ನಡ ಪತ್ರಿಕೋ ದ್ಯಮದಲ್ಲಿ ಹೊಸ ಸಾಹಸವೇ.

ವಿದೇಶಿ ನೆಲದಲ್ಲಿ ಕಾರ್ಯಕ್ರಮ ಆಯೋಜಿಸಿದ ಮೊದಲ ಪತ್ರಿಕೆ ‘ವಿಶ್ವವಾಣಿ’ಯೇ. ಇದರ ಜತೆಗೆ, ‘ವಿಶ್ವವಾಣಿ ಪುಸ್ತಕ’ ಪ್ರಕಾಶನ ಐವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದೆ. ಕನ್ನಡ ಪತ್ರಿಕೆಯೊಂದು ಪುಸ್ತಕ ಪ್ರಕಾಶನದಲ್ಲೂ ಸಕ್ರಿಯವಾಗಿರುವುದು ವಿಶೇಷವೇ. ಇನ್ನು ಕನ್ನಡದ ಮಾತಿನ ಮಂಟಪ ‘ವಿಶ್ವವಾಣಿ ಕ್ಲಬ್ ಹೌಸ್’ ಮನೆಮಾತು. ಸಾವಿರದ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ನಿತ್ಯ ಸಂವಾದಕ್ಕೆ ಆಸ್ಪದ ನೀಡಿರುವುದು ದಾಖಲೆಯೇ ಸರಿ.

ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವ್ಯಾಸಂಗ ಮಾಡುವಾಗ, ‘ಅವಲೋಕನ’ ಎಂಬ ಪತ್ರಿಕೆಯನ್ನು ಆರಂಭಿಸಿz. ನಂತರ ‘ಸಂಯುಕ್ತ ಕರ್ನಾಟಕ’, ‘ವಿಜಯ ಕರ್ನಾಟಕ’, ‘ಕನ್ನಡಪ್ರಭ’, ‘ಸುವರ್ಣ ನ್ಯೂಸ್ ಚಾನೆಲ’ಗಳಲ್ಲಿ ಸುತ್ತಾಡಿ, ಈಗ ನನ್ನದೇ ‘ವಿಶ್ವವಾಣಿ’ ಎಂಬ ಸ್ವಂತ ಮನೆ ಮಾಡಿಕೊಂಡಿದ್ದೇನೆ.

ಆಗ ‘ಅವಲೋಕನ’ದಲ್ಲಿ ನನ್ನೊಂದಿಗೆ ಒಬ್ಬ ಸ್ನೇಹಿತನಿದ್ದ. ವಿಶ್ವವಾಣಿ, ಲೋಕಧ್ವನಿ, ವಿಶ್ವವಾಣಿ ಟಿವಿ, ಪ್ರವಾಸಿ ಪ್ರಪಂಚ, ವಿಶ್ವವಾಣಿ ಪುಸ್ತಕ ಸೇರಿ ಈಗಿನ ನನ್ನ ‘ವಿಶ್ವಕುಟುಂಬ’ದಲ್ಲಿ ನನ್ನೊಂದಿಗೆ ಇನ್ನೂರಕ್ಕೂ ಹೆಚ್ಚು ಮಂದಿ ಇದ್ದಾರೆ. ರಾಜರಾಜೇಶ್ವರಿನಗರದಲ್ಲಿ ‘ವಿಶ್ವವಾಣಿ’ ಸ್ವಂತ ಕಟ್ಟಡ ಹೊಂದುವ ದಿನ ದೂರವಿಲ್ಲ.

ಇವೆಲ್ಲವುಗಳ ಮಧ್ಯೆ ನನ್ನ ಬರಹ, ಪ್ರವಾಸ ಮುಂದುವರಿದಿದೆ. ವಾರದಲ್ಲಿ ಕನಿಷ್ಠ ನಾಲ್ಕು ಕಾರ್ಯ ಕ್ರಮಗಳಲ್ಲಿ ಭಾಗಿಯಾಗುವುದು ಇದ್ದೇ ಇದೆ. ಹಿಂದಿನ ವರ್ಷವೊಂದೇ ಇಪ್ಪತ್ಮೂರು ದೇಶಗಳಿಗೆ ಹೋಗಿದ್ದೆ. ಈ ವರ್ಷ ಹತ್ತು ಪುಸ್ತಕಗಳನ್ನಾದರೂ ಹೆರಬೇಕು ಅಂದುಕೊಂಡಿದ್ದೇನೆ. ಇವೆಲ್ಲವೂ ಸಾಧ್ಯವಾಗಿದ್ದು ಓದುಗರೂ, ಹಿತೈಷಿಗಳೂ ಆದ ನಿಮ್ಮ ಆಶೀರ್ವಾದದಿಂದ.

ನೀವು ನನ್ನ ಮೇಲೆ ತೋರಿದ ಪ್ರೀತಿ ಅಷ್ಟಿಷ್ಟಲ್ಲ. ಈ ವಿಷಯದಲ್ಲಿ ನಾನು ಅದೃಷ್ಟವಂತ. ಕಳೆದ ಮೂವತ್ತು ವರ್ಷಗಳಿಂದ ನಾನು ಬರೆದಿದ್ದನ್ನು ಓದುತ್ತಾ, ನನ್ನನ್ನು ತಿದ್ದಿದವರು, ಮುನ್ನಡೆಸಿ ದವರು ನೀವು. ಏಕಾಂಗಿಯಾಗಿ ‘ವಿಶ್ವವಾಣಿ’ಯನ್ನು ಆರಂಭಿಸಿದಾಗ ಕೈಹಿಡಿದವರೂ ನೀವೇ. ನಿಮಗೆ ನಾನು ಚಿರಋಣಿ. ಅಂದುಕೊಂಡಂತೆ ಆದರೆ ನಿಮಗೆ ಇನ್ನೊಂದು ಅಚ್ಚರಿ ಸದ್ಯದ ನೀಡುತ್ತೇನೆ. ನಿಮ್ಮ ಬಲಗೈ ಸದಾ ನನ್ನ ತಲೆ ಮೇಲಿರಲಿ.