ಧ್ಯಾನ್ ಪೂಣಚ್ಚ, ಬೆಂಗಳೂರು
ರೈತ ಸಮಸ್ಯೆ, ಕೋಗಿಲು ಕಲಹದ ವಿರುದ್ಧ ದನಿಯೇಕಿಲ್ಲ?: ಕಾರ್ಯಕರ್ತರ ಅಳಲು
ರಾಜ್ಯ ಬಿಜೆಪಿಯಲ್ಲಿ ನಾಯಕ್ವದ ಸಮಸ್ಯೆ
ಬಿಎಸ್‌ವೈ ಖದರ್ ಎಲ್ಲಿ?: ಆಂತರಿಕ ಪ್ರಶ್ನೆ
ಆಡಳಿತಾರೂಢ ರಾಜ್ಯ ಕಾಂಗ್ರೆಸ್ ಸರಕಾರ ಎಡವಟ್ಟುಗಳನ್ನು ಮಾಡಿಕೊಂಡು ಪ್ರತಿಪಕ್ಷ ಗಳಿಗೆ ಬಿಸಿಬಿಸಿ ಬಿರಿಯಾನಿಯನ್ನು ತನ್ನ ಕೈಯಾರೆ ಬಡಿಸುತ್ತಿದ್ದರೂ ಅತಿಯಾದ ಗ್ಯಾಸ್ಟ್ರಿಕ್, ತೇಗು, ಅತಿಸಾರದಿಂದ ಬಳಲುತ್ತಿರುವುದರಿಂದ ನಮ್ಮ ನಾಯಕರು ಆಲಸಿಗಳಾಗಿದ್ದಾರೆ ಎಂಬುದು ಪ್ರತಿಪಕ್ಷದ ಕಾರ್ಯಕರ್ತರ ಅಳಲಾಗಿದೆ.
ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಳ್ಳಾರಿ ಗುಂಡೇಟಿನ ಪ್ರಕರಣದಿಂದ ಹಿಡಿದು, ಕೋಗಿಲು ಕಲಹದ ಬಾಂಗ್ಲಾ ವಿಚಾರ ಸೇರಿದಂತೆ ಕಾಂಗ್ರೆಸ್ ಸರಕಾರದಲ್ಲಾದ ಹತ್ತು ಹಲವು ಪ್ರಕರಣವಿದ್ದರೂ, ಪ್ರತಿಪಕ್ಷವಾಗಿರುವ ಬಿಜೆಪಿ ಪಕ್ಷದ ನಾಯಕರೊಳಗಿನ ಒಳ ಜಗಳ ಹಾಗೂ ಜೆಡಿಎಸ್ ತನ್ನ ಪಕ್ಷದೊಳಗಿನ ತೊಳಲಾಟದಿಂದಾಗಿ ಕಾರ್ಯಕರ್ತರ ಮನಸ್ಸು, ಅವರ ಅನಿಸಿಕೆ ಹಾಗೂ ಹೋರಾಟದಂತೆ ನಡೆಯದಿರುವುದು ಈಗ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸುತ್ತಿದೆ.
ಇದಲ್ಲದೆ, ಪ್ರತಿಪಕ್ಷಗಳು ಕೂಡ ‘ಹೊಂದಾಣಿಕೆ’ ರಾಜ ಕಾರಣಕ್ಕೆ ಬಲಿಯಾಗಿವೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದ್ದು, ಬಿಜೆಪಿ ನಾಯಕರ ಮೈಚಳಿ ಬಿಟ್ಟಂತಿಲ್ಲ ಎಂಬ ಬೇಸರದ ನುಡಿಗಳು ಕೇಳಿ ಬಂದಿವೆ.
ಇದನ್ನೂ ಓದಿ: R T Vittalmurthy Column: ಯುದ್ಧಕ್ಕೆ ರೆಡಿಯಾಗಿ ಅಂದ್ರಂತೆ ಸಿದ್ದು
ರಾಜ್ಯ ಬಿಜೆಪಿಯಲ್ಲಿ ಮುಗಿಯದ ಒಳಜಗಳ ಇವೆಲ್ಲದಕ್ಕೂ ಕಳಶವಿಟ್ಟಂತೆ ಕೆಲಸ ಮಾಡುತ್ತಿದೆ. ರಾಜ್ಯಾಧ್ಯಕ್ಷರ ಹುದ್ದೆ ಸಂಬಂಽತ ಗದ್ದಲ ಕೇಸರಿ ಪಡೆಯಲ್ಲಿ ಇನ್ನೂ ಜೀವಂತವಾಗಿದೆ. ಇದಲ್ಲದೆ ಪ್ರತಿಪಕ್ಷದ ನಾಯಕರಾಗಿದ್ದರೂ ಆಡಳಿತಾರೂಢ ಕಾಂಗ್ರೆಸ್ ಸರಕಾರದ ವಿರುದ್ದ ಸದನದ ಒಳಗಾಗಲೀ, ಹೊರಗಾಗಲೀ ಸಂಘಟಿತ ಹೋರಾಟ ಮಾಡುವಲ್ಲಿ ನಾಯಕರು ಎಡವುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.
ಬೂತ್, ಗ್ರಾಮ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಪಡೆಯಿ ದ್ದರೂ ಆಯಾ ಸ್ಥಳೀಯ ಮಟ್ಟದಲ್ಲೂ ಕೂಡ ನಾಯಕತ್ವದ ವಿಚಾರದಲ್ಲಿ ಹಲವಾರು ಗೊಂದಲಗಳಿದೆ. ರಾಜ್ಯಾಧ್ಯಕ್ಷರ ಕಡೆಯವರು ಎಂಬ ಗುಂಪು ಒಂದೆಡೆಯಾದರೆ ಅಲ್ಲೂ ಜಾತಿ, ಭಿನ್ನ ಮನಸ್ಥಿತಿ ಹಾಗೂ ನಾಯಕತ್ವದ ಕಾದಾಟಗಳಿವೆ.
ಇದು ಅಲ್ಲಲ್ಲಿ ಕಂಡು ಬಂದರೂ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಭಾಗದ ಸ್ಥಳೀಯ ಮುಖಂಡರಲ್ಲಿ ಹಲವು ಭಿನ್ನಾಭಿಪ್ರಾ ಯಗಳಿದೆ. ಇದನ್ನು ಬಗೆಹರಿಸ ಬೇಕಾಗ ರಾಜ್ಯ ನಾಯಕರು ಕೂಡ ಸ್ಥಳಿಯ ಕಾರ್ಯಕರ್ತರ ಜೊತೆ ಕೂತು ಮಾತನಾಡು ವುದಾಗಲಿ, ಇಲ್ಲವೇ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿಲ್ಲ ಎನ್ನುವುದಕ್ಕಿಂತಲೂ ತಮ್ಮದೇಯಾದ ಸಮಸ್ಯೆಗಳಿಂದ ಹೊರಬಂದರೆ ಸಾಕು ಎಂಬಂತಹ ಸ್ಥಿತಿ ರಾಜ್ಯ ಬಿಜೆಪಿಯಲ್ಲಿ ನಿರ್ಮಾಣವಾಗಿದೆ.
ನಾಯಕತ್ವದ್ದೇ ಸಮಸ್ಯೆ: ಬಿಜೆಪಿಯಲ್ಲಿ ರಾಜ್ಯಮಟ್ಟದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಸಮಸ್ಯೆಗಳಾದರೆ ಒಬ್ಬ ದೊಡ್ಡ ನಾಯಕರು ಒಂದು ಕಡೆ ಹೋದರೆ, ಮತ್ತೊ ಬ್ಬರು ನಾಯಕರು ಕೇವಲ ಬೆಂಗಳೂರಿಗಷ್ಟೇ ಸೀಮಿತ ಎನ್ನುವಂತಾಗಿದೆ. ಇಲ್ಲೂ ಕೂಡ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತಾಗಿದೆ ಎಂಬುದು ಕಾರ್ಯಕರ್ತರ ಅಳಲಾಗಿದೆ.
ಪ್ರತಿಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಕಾಲಘಟ್ಟ ಹಾಗೂ ಅಧಿಕಾರದಲ್ಲಿದ್ದಾಗಿನ ಖದರ್ ಈಗಿನ ಯಾವ ನಾಯಕರಲ್ಲೂ ಕಾಣುತ್ತಿಲ್ಲ. ಅಲ್ಲದೆ, ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಕಾರ್ಯಕರ್ತರೊಂದಿಗೆ ನಿಂತು ಸಮಸ್ಯೆ ಬಗೆಹರಿಸುತ್ತಿದ್ದ ಆಗಿನ ಹಿರಿಯ ನಾಯಕರಲ್ಲಿನ ಹೋರಾಟದ ಕೆಚ್ಚು ಈಗಿನ ನಾಯಕರಲ್ಲಿ ಕಾಣುತ್ತಿಲ್ಲ ಎನ್ನುವುದು ಕೂಡ ನಿಜವಾಗಿದ್ದು ಇದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.
ಕೇಂದ್ರದ ಜಿ ರಾಮ್ ಜಿ ಅನ್ನು ಬೆಂಬಲಿಸಿ ತಮ್ಮ ಕಾರ್ಯಕರ್ತರು ಹಾಗೂ ಜನಮಾನಸ ದಲ್ಲಿ ಅಂದೋಲನಕ್ಕೆ ಸಿದ್ದವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಬೇಕಿದ್ದ ರಾಜ್ಯ ಬಿಜೆಪಿ ಇನ್ನೂ ನಿದ್ದೆ ಬಿಟ್ಟು ಎದ್ದಂತಿಲ್ಲ. ಕೇಂದ್ರದ ಯೋಜನೆ ಪರವೇ ನಮ್ಮವರು ಹೋರಾಟ ಸಂಘಟಿಸಿ ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಸರಿಯಾದ ಒಂದು ಉತ್ತರ ಕೊಡಲಿಲ್ಲ. ಇನ್ನು ರಾಜ್ಯದ ಇತರೆ ಸಮಸ್ಯೆಯ ಬಗೆಹರಿಸಿಯಾರೇ ಎಂಬುದು ಕೂಡ ಈಗ ಕಟ್ಟಾ ಹಾಗೂ ಕಚ್ಚಾ ಬಿಜೆಪಿ ಕಾರ್ಯಕರ್ತರ ಅಳಲಾಗಿದೆ.
ಇದಲ್ಲದೆ, ಹಿಂದಿನ ಧಾರ್ಮಿಕ ಹಬ್ಬ ನಿಷೇಧ ವಿಚಾರದಿಂದ ಹಿಡಿದು ಈಗಿನ ದ್ವೇಷ ಭಾಷಣ ಮಸೂದೆ ಸೇರಿದಂತೆ, ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗದ ಬಗೆಗಿನ ವಿವಾದವನ್ನು ಕೂಡ ನಮ್ಮ ನಾಯಕರು ಮುಂದುವರಿಸಲಿಲ್ಲ.
ಸದನದಲ್ಲಿ ಗದ್ದಲವಾದರೂ ಅದನ್ನು ಮುಂದೆ ತೆಗೆದುಕೊಂಡು ಹೋಗಲಿಲ್ಲ. ಉತ್ತರ ಕರ್ನಾಟಕದ ರೈತರ ವಿಚಾರ ಕೇವಲ ಅಧಿವೇಶನಕ್ಕೆ ಮಾತ್ರ ಸೀಮಿತವಾಗಿ ಅಲ್ಲೇ ಕಮರಿ ಹೊಗಿದೆ. ಇತ್ತ ಕಾಂಗ್ರೆಸ್ ಸರಕಾರ ಅದು ಕೇಂದ್ರದ್ದೇ ತಪ್ಪು ಎಂದು ಬಿಂಬಿಸುವಲ್ಲಿ ಯಶ ಕಂಡಿದೆ. ಇಂತಹ ಹಲವು ಸಮಸ್ಯೆಗಳ ವಿರುದ್ದ ಕಾಂಗ್ರೆಸ್ ಕೋಲು ಕೊಟ್ಟು ಹೊಡಿ ಅಂದರೂ ಬಿಜೆಪಿ ಹಾಗೂ ಜೆಡಿಎಸ್ ಶಕ್ತಿಹೀನವಾಗಿದೆ ಎಂಬುದು ಆಯಾ ಪಕ್ಷಗಳ ಕಾರ್ಯ ಕರ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಜೆಡಿಎಸ್‌ಗೆ ಸಂಘಟನೆ ಸಮಸ್ಯೆ
ಬಿಜೆಪಿಯ ವ್ಯಥೆ ಒಂದೆಡೆಯಾದರೆ ಜೆಡಿಎಸ್‌ನ ಗೋಳು ಕೇಳದಂತಾಗಿದೆ. ಉತ್ತಮ ಕಾರ್ಯಕರ್ತರ ಪಡೆ ಹಾಗೂ ಮತ ಬ್ಯಾಂಕ್ ಹೊಂದಿದ್ದರೂ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಕಡಿಮೆಯಾಗಿದೆ ಎಂಬುದು ತೆನೆ ಹೊತ್ತ ಮಹಿಳೆ ಕಾರ್ಯಕರ್ತರ ಅಳಲಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಈ ಇಳಿ ವಯಸ್ಸಿನಲ್ಲೂ ಕಾರ್ಯಕರ್ತರಿಗೆ ಶಕ್ತಿ ತುಂಬಲು ಸಭೆ ಮಾಡುತ್ತಿದ್ದರೂ, ಎಲ್ಲೆಡೆ ಓಡಾಡಲು ಸಮಸ್ಯೆಯಾಗುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಹೋದ ನಂತರ ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಕುಂಠಿತವಾಗಿದೆ ಎಂಬುದು ಕೂಡ ಕಾರ್ಯಕರ್ತರ ನೋವಾಗಿದೆ. ಪ್ರಜ್ವಲ್ ಪ್ರಕರಣದಿಂದ ಪಕ್ಷಕ್ಕೆ ಒಂದಷ್ಟು ಹಾನಿಯಾದಂತೆ ಕಂಡುಬಂದರೂ ಜೆಡಿಎಸ್ ಮತ ಬ್ಯಾಂಕ್ ಇನ್ನೂ ಗಟ್ಟಿಯಾಗಿದೆ. ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದರೂ, ದೇವೇಗೌಡ ಹಾಗೂ ಕುಮಾರಸ್ವಾಮಿ ಮಟ್ಟದ ಪ್ರಭಾವ ಬೀರುತ್ತಿಲ್ಲ ಎಂಬ ಕೊರಗೂ ಆ ಪಕ್ಷದ ಅಭಿಮಾನಿಗಳಲ್ಲಿದೆ.