ಟಿ.ಪ್ರಭಾಕರ್
ಚಿತ್ರಕಲಾ ಪರಿಷತ್ ಉಪಾಧ್ಯಕ್ಷ
ರಾಮಕೃಷ್ಣ ಹೆಗಡೆ ಅವರ ಬಗ್ಗೆ ಮಾತನಾಡುವುದಕ್ಕೆ ವಿಶೇಷವಾದ ಪರಿಚಯದ ಅಗತ್ಯವೇ ಇಲ್ಲ. ಅವರು ಕರ್ನಾಟಕ ಕಂಡಂತಹ ಅಪರೂಪದ ರಾಜಕಾರಣಿ ಮಾತ್ರವಲ್ಲ, ದೇಶದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. ಒಂದು ಹಂತದಲ್ಲಿ ಅವರು ಪ್ರಧಾನಿಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದ್ದರು. ಆದರೆ ಹಲವು ರಾಜಕೀಯ ಕಾರಣಗಳಿಂದ ಆ ಅವಕಾಶ ಅವರಿಗೆ ದೊರೆಯಲಿಲ್ಲ. ಆದರೂ ಅವರ ವ್ಯಕ್ತಿತ್ವ, ನಡವಳಿಕೆ, ಆಡಳಿತದ ದೃಷ್ಟಿಕೋನ ಮತ್ತು ಸಾರ್ವಜನಿಕ ಬದುಕಿನ ಶೈಲಿ ಇಂದಿಗೂ ಅವರನ್ನು ವಿಭಿನ್ನವಾಗಿ ನಿಲ್ಲಿಸುತ್ತದೆ.
ಹೆಗಡೆ ಅವರು ಅತ್ಯಂತ ಉತ್ತಮವಾದ ವಾತಾವರಣ ದಲ್ಲಿ ಬೆಳೆದವರು. ಅವರ ವ್ಯಕ್ತಿತ್ವದಲ್ಲಿ ಒಂದು ರೀತಿಯ ಸಭ್ಯ ಗುಣವಿತ್ತು. ದೊಡ್ಡ ಹುದ್ದೆಯಲ್ಲಿದ್ದರೂ ಸಾಮಾನ್ಯರೊಂದಿಗೆ ನಡೆದು ಕೊಳ್ಳುವಾಗ ಯಾವುದೇ ರೀತಿಯ ಅಹಂ ಇರಲಿಲ್ಲ, ಪ್ರಾಮಾಣಿಕವಾಗಿ ಇದ್ದರು. ಅವರ ಮನೆಗೆ ಯಾರೇ ಬಂದರೂ, ಅವರು ಎಷ್ಟೇ ಪ್ರಮುಖ ವ್ಯಕ್ತಿಯಾಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ, ಅವರನ್ನು ಬೀಳ್ಕೊಡುವಾಗ ಕಾರಿನವರೆಗೂ ಬಂದು, ಅವರು ಕಾರಿನಲ್ಲಿ ಕುಳಿತು ಹೊರಡುವವ ರೆಗೂ ನಿಂತುಕೊಂಡೇ ಇರುತ್ತಿದ್ದರು.
ಇದು ಸಣ್ಣ ವಿಷಯದಂತೆ ಕಾಣಬಹುದು. ಆದರೆ ಸಾರ್ವಜನಿಕ ಬದುಕಿನಲ್ಲಿ ವ್ಯಕ್ತಿಯ ಸಂಸ್ಕಾರವನ್ನು ತೋರಿಸುವುದು ಇಂತಹ ಸಣ್ಣ ಸಣ್ಣ ನಡವಳಿಕೆಗಳೇ. ಹೆಗಡೆ ಅವರ ಸೌಜನ್ಯ ಮತ್ತು ಸೂಕ್ಷ್ಮತೆ ಕೇವಲ ಸ್ವಾಗತಿಸುವುದಕ್ಕೆ ಸೀಮಿತವಾಗಿರಲಿಲ್ಲ. ಅತಿಥಿಗಳಿಗೆ ಕಾಫಿ ಕೊಡಿಸು ವಂತಹ ಸಾಮಾನ್ಯ ವಿಷಯದಲ್ಲೂ ಅವರು ಬಹಳ ಗಮನ ಕೊಡುತ್ತಿದ್ದರು. ಯಾರಿಗೆ ಸಕ್ಕರೆ ಬೇಕು, ಯಾರು ಶುಗರ್ ಲೆಸ್ ತೆಗೆದುಕೊಳ್ಳುತ್ತಾರೆ, ಎಷ್ಟು ಸಕ್ಕರೆ ಹಾಕಬೇಕು ಇಂತಹ ಸಣ್ಣ ವಿಷಯಗಳನ್ನೂ ಅವರು ಗಮನಿಸುತ್ತಿದ್ದರು.
ಇದನ್ನೂ ಓದಿ: Birth centenary of Ramakrishna Hegde: ಹೆಗಡೆಯವರ ಮಾರ್ಗದರ್ಶನವೇ ನನಗೆ ದಾರಿ
ಕಪ್, ಸಾಸರ್‌ಗಳನ್ನು ಹೇಗೆ ಇಡಬೇಕು ಎಂಬುದನ್ನೂ ಸಹಾಯಕ ಸಿಬ್ಬಂದಿಗೆ ತಿಳಿಸಿ ಕೊಡು ತ್ತಿದ್ದರು. ಇದು ಕೆಲವರಿಗೆ ಅತಿಯಾದ ಸೂಕ್ಷ್ಮತೆ ಎನಿಸಬಹುದು. ಆದರೆ ಅದೇ ಅವರ ವ್ಯಕ್ತಿತ್ವದ ವಿಶೇಷತೆ. ಸಾರ್ವಜನಿಕ ಬದುಕಿನಲ್ಲಿ ದೊಡ್ಡ ವಿಚಾರಗಳ ಬಗ್ಗೆ ಮಾತ್ರವಲ್ಲ, ಸಣ್ಣ ವಿಷಯ ಗಳಲ್ಲೂ ಶಿಸ್ತು ಮತ್ತು ಸೌಜನ್ಯ ಇರಬೇಕು ಎಂಬುದು ಅವರ ಸ್ವಭಾವವಾಗಿತ್ತು. ಅವರಿಗೆ ಕೋಪ ಬರುವುದನ್ನು ನಾನು ಬಹಳ ಅಪರೂಪವಾಗಿ, ಬಹುತೇಕ ನೋಡೇ ಇಲ್ಲ. ಎಲ್ಲ ಸಂದರ್ಭದಲ್ಲೂ ಅವರು ಅತ್ಯಂತ ಸಮತೋಲನದಿಂದ ನಡೆದುಕೊಳ್ಳುತ್ತಿದ್ದರು.
ಹೆಗಡೆ ಅವರ ಜನಪರ ಕಾಳಜಿ ಎಷ್ಟು ಸೂಕ್ಷ್ಮವಾಗಿತ್ತು ಎಂಬುದಕ್ಕೆ ಒಂದು ಸಣ್ಣ ಘಟನೆ ಸಾಕು. ಬೆಂಗಳೂರಿನ ಕಾವೇರಿ ಥಿಯೇಟರ್ ಮುಂದೆ ಅವರ ಕಾರಿನಲ್ಲಿ ಹೋಗುತ್ತಿದ್ದೆವು. ಆಗ ಮೊಬೈಲ್‌ಗಳ ಕಾಲವೂ ಅಲ್ಲ. ರಸ್ತೆಯಲ್ಲಿ ನೀರು ಅನ್ಯಾಯವಾಗಿ ಹರಿದು ಹೋಗುತ್ತಿತ್ತು. ಹೆಗಡೆ ಅವರು ಅದನ್ನು ಗಮನಿಸಿದರು. ಕೂಡಲೇ ಆಗಿನ ಬೆಂಗಳೂರು ಜಲಮಂಡಳಿ ಅಧ್ಯಕ್ಷರಿಗೆ ದೂರವಾಣಿ ಮಾಡಿ, ನೋಡಿ, ನೀರು ಅನ್ಯಾಯವಾಗಿ ಹೋಗ್ತಾ ಇದೆ ಎಂದು ಗಮನಕ್ಕೆ ತಂದರು. ಇದು ದೊಡ್ಡ ಯೋಜನೆಯಲ್ಲ. ದೊಡ್ಡ ಭಾಷಣವೂ ಅಲ್ಲ. ಆದರೆ ರಸ್ತೆಯಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ಗಮನಿಸಿ, ಅದನ್ನು ತಕ್ಷಣ ಸಂಬಂಧಪಟ್ಟವರ ಗಮನಕ್ಕೆ ತರುವಷ್ಟು ಸಾರ್ವಜನಿಕ ಸಂಪನ್ಮೂಲಗಳ ಬಗ್ಗೆ ಕಾಳಜಿ ಅವರಲ್ಲಿತ್ತು.
ಜನರ ಹಣ, ಜನರ ನೀರು, ಜನರ ರಸ್ತೆ ಯಾವುದೇ ಸಾರ್ವಜನಿಕ ಸಂಪನ್ಮೂಲ ವ್ಯರ್ಥವಾಗಬಾರದು ಎಂಬ ಸೂಕ್ಷ್ಮ ಮನಸ್ಸು ಅವರಲ್ಲಿತ್ತು. ಒಮ್ಮೆ ಎಂ.ಬಿ.ರಸ್ತೆಯಲ್ಲಿ ಹೋಗುತ್ತಿದ್ದಾಗ ಮರಗಳನ್ನು ಕಡಿಯ ಲಾಗುತ್ತಿತ್ತು. ಅದನ್ನು ಕಂಡ ಹೆಗಡೆ ಅವರು ತಕ್ಷಣ ವಾಹನ ನಿಲ್ಲಿಸುವಂತೆ ಹೇಳಿ, ಯಾಕಪ್ಪಾ? ಯಾವುದೂ ಮರ ಕಟ್ ಮಾಡಬೇಡಿ. ಹೇಗೆ ಬೇಕೋ ಹಾಗೆ ಹೊಂದಿಸಿ ಕಟ್ ಮಾಡ್ಕೊಳ್ಳಿ ಎಂದು ಹೇಳಿದರು. ಅವರ ಮಾತಿನ ಅರ್ಥ ಅಭಿವೃದ್ಧಿಯೇ ಬೇಡ ಎಂಬುದಾಗಿರಲಿಲ್ಲ.
ರಸ್ತೆ ಬೇಕು, ಅಭಿವೃದ್ಧಿ ಬೇಕು. ಆದರೆ ಅದಕ್ಕಾಗಿ ಮರಗಳನ್ನು ಕಡಿಯಲೇಬೇಕೆಂಬುದು ಅವರ ನಿಲುವಾಗಿರಲಿಲ್ಲ. ಅವರು ದ್ವಿಚಕ್ರ, ತ್ರಿಚಕ್ರ ಆಗಲಿ, ಅದಕ್ಕೆ ಬೇರೆ ಆಗಿ ಮಾಡಿ ಎಂಬ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಇಲ್ಲಿ ಹೆಗಡೆ ಅವರ ಆಡಳಿತದ ಒಂದು ಪ್ರಮುಖ ಗುಣ ಗೋಚರಿಸುತ್ತದೆ.
ಸಮಸ್ಯೆ ಬಂದಾಗ ಒಂದನ್ನು ನಾಶ ಮಾಡಿ ಇನ್ನೊಂದನ್ನು ನಿರ್ಮಿಸುವುದಕ್ಕಿಂತ, ಎರಡನ್ನೂ ಉಳಿಸಿಕೊಳ್ಳುವ ಮಾರ್ಗ ಹುಡುಕಬೇಕು ಎಂಬುದು ಅವರ ಚಿಂತನೆ. ಹೆಗಡೆ ಅವರೊಂದಿಗಿನ ಆತ್ಮೀಯತೆಯಲ್ಲಿ ಗಂಭೀರ ರಾಜಕೀಯ ಘಟನೆಗಳಷ್ಟೇ ಅಲ್ಲ, ಇಂತಹ ಹಾಸ್ಯಮಯ ಮತ್ತು ವೈಯಕ್ತಿಕ ನೆನಪುಗಳೂ ಇವೆ. ಅವರು ದೈಹಿಕವಾಗಿಯೂ ಬಹಳ ಸೂಕ್ಷ್ಮರಾಗಿದ್ದರು. ಒಂದು ಸಂದರ್ಭದಲ್ಲಿ ಅವರೊಂದಿಗೆ ಮಾತನಾಡುತ್ತಾ, ಸರ್, ಇಷ್ಟೊಂದು ಸೂಕ್ಷ್ಮಆದ್ರೆ ಹೇಗೆ ಸರ್ ನೀವು? ಎಂದು ಕೇಳಿದ್ದೆ.
ಅದಕ್ಕೆ ಅವರು ತಮಾಷೆಯಾಗಿ, ನಾನು ಮಾನಸಿಕವಾಗಿ ಸೂಕ್ಷ್ಮ ಅಲ್ಲ, ದೈಹಿಕವಾಗಿ ಸೂಕ್ಷ್ಮ ಎಂಬ ರೀತಿಯಲ್ಲಿ ಹೇಳಿ ನಕ್ಕಿದ್ದರು. ಅವರ ವ್ಯಕ್ತಿತ್ವದಲ್ಲಿ ಇಂತಹ ಹಾಸ್ಯಪ್ರಜ್ಞೆಯೂ ಇತ್ತು. ಗಂಭೀರ ವಾದ ರಾಜಕೀಯ ವ್ಯಕ್ತಿಯಾಗಿದ್ದರೂ, ಆತ್ಮೀಯರೊಂದಿಗೆ ಸಹಜವಾಗಿ ಬೆರೆಯುವ ಗುಣ ಅವರಲ್ಲಿತ್ತು. ನನ್ನ ಮೇಲೆ ಅವರು ಇಟ್ಟಿದ್ದ ವಿಶ್ವಾಸವೂ ಅವರ ವ್ಯಕ್ತಿ ತ್ವದ ಮತ್ತೊಂದು ಮುಖ. ಅವರು ನನ್ನನ್ನು ಕೆಎಸ್‌ಆರ್ ಟಿಸಿ ಅಧ್ಯಕ್ಷರನ್ನಾಗಿ ಮಾಡಿದರು. ವಿವಿಧ ಶಿಫಾರಸುಗಳು ನಡೆದಿದ್ದರೂ, ನಾನು ಸುಮಾರು ಹದಿನೆಂಟು ತಿಂಗಳು ಆ ಜವಾಬ್ದಾರಿಯಲ್ಲಿ ಕೆಲಸ ಮಾಡಿದೆ.
ನಂತರ ರಾಜಕೀಯ ಪರಿಸ್ಥಿತಿಗಳಿಂದ ರಾಜೀನಾಮೆ ನೀಡಬೇಕಾದ ಸಂದರ್ಭ ನಿರ್ಮಾಣವಾಯಿತು. ಆದರೆ ಹೆಗಡೆ ಅವರಿಂದ ನನಗೆ ಯಾವುದೇ ವೈಯಕ್ತಿಕ ನಿರೀಕ್ಷೆ ಇರಲಿಲ್ಲ. ಅವರೂ ನನ್ನಿಂದ ಯಾವುದೇ ವೈಯಕ್ತಿಕ ಪ್ರತಿಫಲವನ್ನು ನಿರೀಕ್ಷಿಸಲಿಲ್ಲ. ಅವರೊಂದಿಗಿನ ಸಂಬಂಧದ ಮೂಲವೇ ವಿಶ್ವಾಸ ಮತ್ತು ಆತ್ಮೀಯತೆ. ಅವರು ಯಾರನ್ನಾದರೂ ಜವಾಬ್ದಾರಿಗೆ ತಂದರೆ, ಆ ವ್ಯಕ್ತಿಯ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಲು ಅವಕಾಶ ಕೊಡುತ್ತಿದ್ದರು. ಅದು ಅವರ ನಾಯಕತ್ವದ ದೊಡ್ಡ ಗುಣ. ರಾಮಕೃಷ್ಣ ಹೆಗಡೆ ಅವರಂತಹ ನಾಯಕರನ್ನು ನೆನಪಿಸಿಕೊಳ್ಳುವಾಗ ಅವರ ಹುದ್ದೆಗಳನ್ನು ಮಾತ್ರ ನೆನಪಿಸಿಕೊಳ್ಳುವುದು ಸಾಕಾಗುವುದಿಲ್ಲ. ಅವರು ಹೇಗೆ ಬದುಕಿದರು ಎಂಬುದನ್ನು ನೆನಪಿಸಿಕೊಳ್ಳಬೇಕು.
ಮುಖ್ಯಮಂತ್ರಿಯಾಗಿದ್ದರೂ ಸಾಮಾನ್ಯ ಮನುಷ್ಯನಂತೆ ನಡೆದುಕೊಂಡರು. ಮನೆಗೆ ಬಂದ ಅತಿಥಿಯನ್ನು ಕಾರಿನವರೆಗೆ ಬಂದು ಬೀಳ್ಕೊಟ್ಟರು. ಕಾಫಿಯ ಕಪ್‌ನಿಂದ ಹಿಡಿದು ಸಕ್ಕರೆಯ ಪ್ರಮಾಣದವರೆಗೆ ಗಮನಿಸಿದರು. ತಮ್ಮೊಂದಿಗೆ ಕೆಲಸ ಮಾಡಿದವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದರು. ಅವರ ಹಿಂದೆ ಒಂದೇ ವ್ಯಕ್ತಿತ್ವವಿತ್ತು, ಅದು ಸೂಕ್ಷ್ಮ ಮನಸ್ಸು, ಶಿಸ್ತು, ಸೌಜನ್ಯ, ಜನಪರ ಕಾಳಜಿ ಮತ್ತು ಸರಳತೆ.
ಹೆಗಡೆ ಅವರು ದೇಶದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದರು. ಪ್ರಧಾನಿಯಾಗುವ ಸಾಮರ್ಥ್ಯ ಮತ್ತು ಅವಕಾಶ ಎರಡೂ ಅವರ ರಾಜಕೀಯ ಬದುಕಿನ ಒಂದು ಹಂತದಲ್ಲಿ ಇದ್ದವು. ಆದರೆ ಇತಿಹಾಸ ಬೇರೆ ದಾರಿಯನ್ನು ಆಯ್ಕೆ ಮಾಡಿಕೊಂಡಿತು. ಆದರೆ ಪ್ರಧಾನಿಯಾಗಲಿಲ್ಲ ಎಂಬ ಕಾರಣಕ್ಕೆ ಅವರ ನಾಯಕತ್ವದ ಎತ್ತರ ಕಡಿಮೆಯಾಗುವುದಿಲ್ಲ.
ಏಕೆಂದರೆ ಒಬ್ಬ ನಾಯಕನ ಮಹತ್ವವನ್ನು ಆತ ಯಾವ ಹುzಗೆ ಏರಿದ ಎಂಬುದರಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ. ಆತ ಜನರೊಂದಿಗೆ ಹೇಗೆ ನಡೆದುಕೊಂಡ, ಸಾರ್ವಜನಿಕ ಬದುಕಿಗೆ ಯಾವ ಮೌಲ್ಯಗಳನ್ನು ಕೊಟ್ಟ, ತನ್ನ ಸುತ್ತಲಿನವರ ಮೇಲೆ ಯಾವ ಪ್ರಭಾವ ಬೀರಿದ ಎಂಬುದರಿಂದ ಅಳೆಯಬೇಕು. ಆ ದೃಷ್ಟಿಯಲ್ಲಿ ನೋಡಿದರೆ, ರಾಮಕೃಷ್ಣ ಹೆಗಡೆ ಅವರ ವ್ಯಕ್ತಿತ್ವಕ್ಕೆ ನಿಜಕ್ಕೂ ಹೆಗಡೆ ಅವರೇ ಸಾಟಿ