ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ESI Hospital: ಹಣ ನೀಡದ ಕಾರ್ಮಿಕ ಇಲಾಖೆ, ಚಿಕಿತ್ಸೆ ನೀಡದ ಇಎಸ್‌ʼಐ ಆಸ್ಪತ್ರೆ

ರಾಜ್ಯದಲ್ಲಿ 8 ಇಎಸ್‌ಐ, 140ಕ್ಕೂ ಅಧಿಕ ಡಿಸ್ಪೆನ್ಸರಿಗಳಿವೆ. ನವಜಾತ ಶಿಶುಗಳಿಗೆ ಬರುವ ಸೂಕ್ಷ್ಮ ಕಾಯಿಲೆಗಳಿಂದ ಹಿಡಿದು ಎಲ್ಲ ತರಹದ ಚಿಕಿತ್ಸೆಗಳು ಕಾರ್ಮಿಕರಿಗೆ ಮತ್ತು ಅವರ ಅವಲಂಬಿ ತರ ಕುಟುಂಬಗಳಿಗೆ ಈ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔಷಧ ಖರೀದಿ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದ್ದು, ಸಮರ್ಪಕ ವಾಗಿ ಅನುದಾನವೂ ಸದ್ಬಳಕೆಯಾಗುತ್ತಿಲ್ಲ.

ಹಣ ನೀಡದ ಕಾರ್ಮಿಕ ಇಲಾಖೆ, ಚಿಕಿತ್ಸೆ ನೀಡದ ಇಎಸ್‌ʼಐ ಆಸ್ಪತ್ರೆ

-

Ashok Nayak
Ashok Nayak Feb 20, 2026 7:07 AM

ಸರಬರಾಜುದಾರರಿಗೆ ಪಾವತಿ ಬಾಕಿ: ನೇರ ಖರೀದಿಯಲ್ಲಿ ಬಿಲ್ವಿದ್ಯೆ

ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಬರುವ ಇಎಸ್‌ಐ ಆಸ್ಪತ್ರೆಗೆ ಗ್ರಹಣ ಹಿಡಿದಿದೆ. ಒಂದೆಡೆ ಔಷಧ ಪೂರೈಕೆದಾರರಿಗೆ ಹಣ ಪಾವತಿ ವಿಳಂಬ ಮತ್ತೊಂದೆಡೆ ಟೆಂಡರ್ ಬದಲು ರೇಟ್‌ಕಾರ್ಡ್ ಆಧಾರದಲ್ಲಿ ಸರ್ಜಿಕಲ್ ಐಟಮ್ಸ್ ಖರೀದಿ ಮಾಡಲು ಮುಂದಾಗಿರುವುದು ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಔಷಧ ಪೂರೈಸಿರುವ 100ಕ್ಕೂ ಅಧಿಕ ಔಷಧ ಕಂಪನಿಗಳಿಗೆ ಹಲವು ತಿಂಗಳಿಂದ ಹಣ ಪಾವತಿಯಾಗಿಲ್ಲ. ಇಎಸ್‌ಐಎಸ್ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಿಗೆ ಕೋಟ್ಯಂತರ ರು.ಮೌಲ್ಯದ ವಿವಿಧ ಬಗೆಯ ಜೀವ ರಕ್ಷಕ ಮತ್ತು ಸಾಮಾನ್ಯ ಔಷಧಗಳನ್ನು ಕಂಪನಿಗಳು ಸರಬರಾಜು ಮಾಡಿವೆ. ಅಂದಾಜು 60 ಕೋಟಿ ರು. ಮೊತ್ತದ ಔಷಧ ಬಿಲ್ʼಗಳು ಬಾಕಿ ಉಳಿದಿವೆ.

ಇಎಸ್‌ಐಎಸ್ ನಿಯಮದಂತೆ 4 ರಿಂದ ಆರು ವಾರದೊಳಗೆ ಔಷಧ ಪೂರೈಸಿದ್ದ ಕಂಪನಿ ಗಳಿಗೆ ಹಣ ಪಾವತಿಸುವುದು ಇಲಾಖೆಯ ಅಧಿಕಾರಿಗಳ ಕರ್ತವ್ಯ. ಆದರೆ, 2025ರ ಜೂನ್ʼನಿಂದ ಈ ಔಷಧ ಬಿಲ್‌ಗಳಿಗೆ ಹಣ ಪಾವತಿಯಾಗಿಲ್ಲ.

ಗಂಭೀರ ಕಾಯಿಲೆಗಳಿಗೆ ಔಷಧಗಳಿಲ್ಲ

ರಾಜ್ಯದಲ್ಲಿ 8 ಇಎಸ್‌ಐ, 140ಕ್ಕೂ ಅಧಿಕ ಡಿಸ್ಪೆನ್ಸರಿಗಳಿವೆ. ನವಜಾತ ಶಿಶುಗಳಿಗೆ ಬರುವ ಸೂಕ್ಷ್ಮ ಕಾಯಿಲೆಗಳಿಂದ ಹಿಡಿದು ಎಲ್ಲ ತರಹದ ಚಿಕಿತ್ಸೆಗಳು ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರ ಕುಟುಂಬಗಳಿಗೆ ಈ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔಷಧ ಖರೀದಿ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದ್ದು, ಸಮರ್ಪಕವಾಗಿ ಅನುದಾನವೂ ಸದ್ಬಳಕೆಯಾಗುತ್ತಿಲ್ಲ.

ಇದನ್ನೂ ಓದಿ: Manipal Hospital: ಸಂಗೀತದ ಮೂಲಕ ಮೆದುಳಿನ‌ ಪುನಃಶ್ಚೇತನ: ಮಣಿಪಾಲ್ ಹಾಸ್ಪಿಟಲ್ಸ್‌ನಿಂದ ವಿಶೇಷ ಚಿಕಿತ್ಸಾ ಕ್ರಮ!

ರಾಜ್ಯದ ಬಹುತೇಕ ಇಎಸ್‌ಐಎಸ್, ಡಿಸ್ಪೆನ್ಸರಿಗಳಲ್ಲಿಸಾಮಾನ್ಯ ಕಾಯಿಲೆಗಳಿಂದ ಹಿಡಿದು ಗಂಭೀರ ಕಾಯಿಲೆಗಳ ನಿವಾರಿಸುವ ಔಷಧಗಳು ದಾಸ್ತಾನು ಇಲ್ಲ. ಆರೋಗ್ಯ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಸಿಎಲ್), ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ ಕಾಯಿದೆ (ಕೆಟಿಪಿಪಿ) ಅನ್ವಯ ಟೆಂಡರ್ ನಡೆಸಿ ಅರ್ಹತೆ ಪಡೆದ ಕಂಪನಿಗಳಿಂದ ಪ್ರತಿ ವರ್ಷ ನೂರಾರು ಕೋಟಿ ರು. ಔಷಧ ಮತ್ತು ಸರ್ಜಿಕಲ್ ಐಟಮ್ಸ್‌ಗಳನ್ನು ಖರೀದಿಸುತ್ತಿದೆ. ‌

ಜಿಲ್ಲೆ, ತಾಲೂಕು ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ಕೆಎಸ್ಎಂಸಿಎಲ್ ಔಷಧಗಳನ್ನು ಪೂರೈಸುತ್ತಿದೆ. ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಬರುವ ಇಎಸ್‌ಐಎಸ್, ಕೆಎಸ್‌ಎಂಸಿಎಲ್ ಮಾದರಿಯಂತೆ ಟೆಂಡರ್ ನಡೆಸಿ ಇಎಸ್‌ಐ ಆಸ್ಪತ್ರೆಗಳು ಮತ್ತು ಡಿಸ್ಪೆನ್ಸರಿಗಳಿಗೆ ಔಷಧ, ಸರ್ಜಿಕಲ್ ಸಾಮಗ್ರಿ ಐಟಮ್ಸ್ ಖರೀದಿಸಿ ಸರಬರಾಜು ಮಾಡಬೇಕು.

ಟೆಂಡರ್ ಮೂಲಕವೇ ಖರೀದಿಸಿದರೆ ಕಡಿಮೆ ದರ ಬೀಳುತ್ತದೆ. ಆದರೆ, ರೇಟ್ ಕಾರ್ಡ್ ಆಧಾರದಲ್ಲಿ ಖರೀದಿಸಿದರೆ 1 ಕೋಟಿ ರು. ಮೌಲ್ಯದ ಸರ್ಜಿಕಲ್ ಐಟಮ್ಸ್‌ಗೆ 2 ರಿಂದ 3 ಕೋಟಿ ರು. ಹಣ ನೀಡಬೇಕಾಗುತ್ತದೆ. ಹಣ ಮಾಡುವುದಕ್ಕಾಗಿ ಸರಬರಾಜುದಾರರು ಯದ್ವಾತದ್ವಾ ರೇಟ್ ಕಾರ್ಡ್ ಸಿದ್ಧಪಡಿಸಿ ಇಎಸ್‌ಐಸಿಗೆ ಸಲ್ಲಿಸಿದ್ದಾರೆ.

ರೇಟ್‌ಕಾರ್ಡ್ ಎಂಬ ಬಿಳಿಯಾನೆ: ಕಾರ್ಮಿಕ ಇಲಾಖೆ ಅಧೀನದ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಎಸ್), ಕೋಟ್ಯಂತರ ರು. ಮೌಲ್ಯದ ಶಸ್ತ್ರ ಚಿಕಿತ್ಸಾ ವಸ್ತುಗಳನ್ನು( ಸರ್ಜಿಕಲ್ ಐಟಮ್ಸ್) ಟೆಂಡರ್ ಬದಲು ರೇಟ್‌ಕಾರ್ಡ್ (ಆರ್‌ಸಿ) ಆಧಾರದಲ್ಲಿ ಖರೀದಿಸಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರಕಾರ ಗಳಿಂದ ಇಲಾಖೆಗೆ ಹತ್ತಾರು ಕೋಟಿ ರು.ಅನುದಾನ ಬರುತ್ತದೆ. ಈ ಅನುದಾನ ಬಳಸಿ ಕೊಂಡು ಇಲಾಖೆ ವ್ಯಾಪ್ತಿಯ ಇಎಸ್‌ಐಎಸ್ ಅಧಿಕಾರಿಗಳು, ನಿಯಮದಂತೆ ಟೆಂಡರ್ ಮೂಲಕ ಎಲ್-1 ಪಡೆದ ಕಂಪನಿಗಳಿಂದ ಸರ್ಜಿಕಲ್ ಐಟಮ್ಸ ಖರೀದಿಸಬೇಕಿತ್ತು. ‌

2 ವರ್ಷದ ಹಿಂದೆಯೇ ಇಲಾಖೆಯು ಟೆಂಡರ್ ಅನ್ವಯ ಖರೀದಿಸಿ ಆಸ್ಪತ್ರೆ ಮತ್ತು ಡಿಸ್ಪೆನ್ಸರಿ ಗಳಿಗೆ ಸರಬರಾಜು ಮಾಡಿತ್ತು. ಆದರೆ, ಈ ಬಾರಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎಸ್ಐಎಸ್, ಜನೌಷಧ ಕೇಂದ್ರಗಳಲ್ಲಿ ರೇಟ್ ಕಾರ್ಡ್ ಮೂಲಕ ಸರ್ಜಿಕಲ್ ಐಟಮ್ಸ್ ಖರೀದಿಸಲು 2026ರ ಸೆ.16ರವರೆಗೆ ಒಪ್ಪಂದ ಮಾಡಿಕೊಂಡಿದೆ. ‌

ಆದ್ದರಿಂದ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎಸ್‌ಐಸಿ ವ್ಯಾಪ್ತಿಯ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು, ಟೆಂಡರ್ ಬದಲು ಸ್ಥಳೀಯ ಡಿಸ್ಟ್ರಿಬ್ಯೂಟರ್ಸ್ ಸಿದ್ಧಪಡಿಸಿರುವ ರೇಟ್ ಕಾರ್ಡ್ ಆಧಾರದಲ್ಲಿ ಸರ್ಜಿಕಲ್ ಐಟಮ್ಸ್ ಖರೀದಿಸುತ್ತಿವೆ. ‌

2 ರು.ಬೆಲೆಯ ಚುಚ್ಚುಮದ್ದು 10 ರು. ನಂತೆ ಖರೀದಿಸಲಾಗುತ್ತಿದೆ. ಇಂತಹ 25ಕ್ಕೂ ಅಧಿಕ ಸರ್ಜಿಕಲ್ ಐಟಮ್ಸ್‌ಗಳನ್ನು ನಿರ್ದಿಷ್ಟ ದರಗಿಂತ ದುಪ್ಪಟ್ಟು ದರದಲ್ಲಿ ಬೇಕಾಬಿಟ್ಟಿಯಾಗಿ ಖರೀದಿಸುತ್ತಿರುವುದರಿಂದ ಸರಕಾರದ ಬೊಕ್ಕಸಕ್ಕೆ ಹತ್ತಾರು ಕೋಟಿ ರು.ನಷ್ಟವಾಗಲಿದೆ.

ಕೇಂದ್ರ ಕೊಟ್ಟರೂ ಬಿಡಿಗಾಸು ಬಿಚ್ಚದ ಕಾರ್ಮಿಕ ಇಲಾಖೆ

ಕಮಿಷನ್ ಆಸೆಗಾಗಿ ಅಧಿಕಾರಿಗಳೇ ಬಿಲ್ ಗಳನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ ಗುರು ತರ ಆರೋಪಗಳು ಕೇಳಿ ಬಂದಿವೆ. ಕೆಲ ಬಿಲ್ʼಗಳು ಕಳೆದಿವೆ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಳೆದ ವರ್ಷ ಪೂರೈಕೆ ಆದೇಶ ಪತ್ರ ಪಡೆದಿರುವ ಕಂಪನಿಗಳು, ರಾಜ್ಯದ ಇಎಸ್‌ಐ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಲ್ಲಿ ಔಷಧ ಸರಬರಾಜು ಮಾಡಿವೆ. ಕೇಂದ್ರ ಸರಕಾರದಿಂದ ಈಗಾಗಲೇ ಅನುದಾನ ಬಿಡುಗಡೆಯಾಗಿದ್ದರೂ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯು ಕಂಪನಿಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಮಾಹಿತಿ ಮೂಲಗಳು ತಿಳಿಸಿವೆ.