ನಮ್ಮ ಮನೆಯಲ್ಲಿ ಕೊನೆ ದಿನಗಳನ್ನು ಕಳೆದದ್ದು ನನ್ನ ಭಾಗ್ಯ
ಬಾಲ್ಯದಿಂದಲೂ ನಾನು ಎಸ್. ಎಲ್. ಭೈರಪ್ಪನವರ ಕಾದಂಬರಿಗಳನ್ನು ಓದಿಕೊಂಡು ಬೆಳೆದವನು. ಹೀಗಾಗಿ ನನ್ನ ವ್ಯಕ್ತಿತ್ವ, ಬರವಣಿಗೆ, ಜೀವನದ ಬಹುಪಾಲು ಅಂಶದಲ್ಲಿ ಭೈರಪ್ಪನವರು ಹಾಸು ಹೊಕ್ಕಾಗಿದ್ದಾರೆ. ಭೈರಪ್ಪನವರ ಕಾದಂಬರಿಯ ಅದೆಷ್ಟೋ ಪಾತ್ರಗಳು ನಮ್ಮ ಜೀವನದ ಕಷ್ಟ ಕಾಲದಲ್ಲಿ ದಾರಿದೀಪವಾಗಿವೆ. ಬಾಲ್ಯದಲ್ಲಿ ಅವರನ್ನು ಐದು ನಿಮಿಷ ನೋಡಿದರೆ ಸಾಕು ಎನ್ನುವ ಆಸೆ ಹೊಂದಿದ್ದ ನನಗೆ ಭೈರಪ್ಪನವರ ಕೊನೆಗಾಲದಲ್ಲಿ ಅವರ ಸಾಂಗತ್ಯ ದೊರೆಕಿದ್ದು ನನ್ನ ಜೀವನದ ಸುಕೃತ.
ನಮ್ಮ ಜೀವನದಲ್ಲಿ ಎದುರಾದ ಅದೆಷ್ಟೋ ಸಂದಿಗ್ಧ ಪರಿಸ್ಥಿತಿಯಲ್ಲಿ ಭೈರಪ್ಪನವರ ಕಾದಂಬರಿ ಯಲ್ಲಿನ ಪಾತ್ರಗಳ ಸಮಸ್ಯೆಗಳು ನೆನಪಾಗುತ್ತವೆ. ಬಾಲ್ಯದಲ್ಲಿ ಓದುಗ ಪ್ರೇಮಿಯಾಗಿ ಅವರ ಕಾದಂಬರಿಯನ್ನು ಓದಿದ್ದೆ. ಆದರೆ ಅವರ ಕೊನೆಯ ಎಂಟು ತಿಂಗಳು ಅವರೊಂದಿಗೆ ಕಳೆಯುವ, ನಮ್ಮ ಮನೆಯಲ್ಲಿಯೇ ಅವರ ಸೇವೆಯನ್ನು ಮಾಡುವ ಭಾಗ್ಯ ದೊರಕುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಇದನ್ನೂ ಓದಿ: SL Bhyrappa: ನೀವೆಂದೂ ನೋಡಿರದ ಭೈರಪ್ಪ ಅವರ ಬದುಕಿನ ಅಪರೂಪದ ಫೋಟೋಗಳು ಇಲ್ಲಿವೆ
ವಿಜಯ ಕರ್ನಾಟಕದ ಪ್ರಧಾನ ಸಂಪಾದಕನಾದ ಬಳಿಕ ಅವರೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದೆ. ಎಂಟು ತಿಂಗಳ ಹಿಂದೆ ನನಗೆ ಕರೆ ಮಾಡಿ, ‘ನಿಮ್ಮ ಮನೆಗೆ ಬರಬಹುದೇ’ ಎಂದು ಕೇಳಿದರು. ಅದಕ್ಕೆ ಖುಷಿಯಿಂದಲೇ ಒಪ್ಪಿ ಅವರನ್ನು ಬನ್ನಿ ಎಂದಿದ್ದೆ. ಅವರಿಗೆ ಇರುವ ಲಕ್ಷಾಂತರ ಅಭಿಮಾನಿಗಳ ಯಾರ ಮನೆಗಾದರೂ ಭೈರಪ್ಪನವರು ಹೋಗಬಹುದಾಗಿತ್ತು. ಆದರೆ ಆ ಅದೃಷ್ಟ ವನ್ನು ನನಗೆ ನೀಡಿದ್ದು ನನ್ನ ಆಜನ್ಮ ಪುಣ್ಯವೆಂದೇ ಭಾವಿಸಿದ್ದೇನೆ.
ಭೈರಪ್ಪನವರು ನಮ್ಮ ಮನೆಗೆ ಬರುವುದಾಗಿ ಹೇಳಿದಾಗ ಸಂಭ್ರಮಿಸಿದ್ದೆ. ಬಂದಾಗ ಪ್ರತಿದಿನವೂ ಅವರಿಗೆ ದಿನಪತ್ರಿಕೆ ಓದಿ ಹೇಳುತ್ತಿದೆ. ನನ್ನ ಗ್ರಂಥಾಲಯದಲ್ಲಿ ಅವರು ಕಳೆಯುತ್ತಿದ್ದ ಕ್ಷಣವನ್ನು ಸಮೀಪದಿಂದ ನೋಡಿದ್ದೇನೆ. ಅವರೊಂದಿಗೆ ಐದು ನಿಮಿಷವಿರಬೇಕು ಎನ್ನುವ ಆಸೆಯಿದ್ದ ನನಗೆ, ನಿರಂತರವಾಗಿ ಕಾಲ ಕಳೆಯುವಂತಾಯಿತು. ಅವರು ನಮ್ಮ ಮನೆಗೆ ಬಂದಾಗ ಔಟ್ ಹೌಸ್‌ನಲ್ಲಿ ಇರಿಸುತ್ತೇನೆ ಎಂದು ಅಂದುಕೊಂಡಿದ್ದರಂತೆ.
ಆದರೆ ಅವರಿಗೆ ನಾನು ಪ್ರತ್ಯೇಕ ಮನೆಯನ್ನೇ ನೀಡಿದ್ದೆ. ಅಲ್ಲಿ ಅವರ ಯೋಗಕ್ಷೇಮ ನೋಡಿ ಕೊಳ್ಳಲು ಕೆಲಸದವರನ್ನು ನೇಮಿಸಲಾಗಿತ್ತು. ಹಾಗೇ ನೋಡಿದರೆ, ನಾವು ಅವರಿಗೆ ಏನು ಮಾಡಿಲ್ಲ. ಬದಲಿಗೆ ಅವರು ನಮ್ಮೊಂದಿಗೆ ಎಂಟು ತಿಂಗಳ ಕಾಲ ನನ್ನೊಂದಿಗಿದ್ದು, ನಮಗೆ ಉಪಕಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಅವರನ್ನು ಮೆಚ್ಚುವವರು, ಇಷ್ಟಪಡುವವರು ಅವರೇನು ಕೇಳಿದರೂ ಮಾಡುವಂತಹವರು ಇದ್ದಾರೆ. ಆದರೆ ಅದೆಲ್ಲವನ್ನೂ ಬಿಟ್ಟು ನಮ್ಮ ಬಳಿ ಬಂದರು. ಇಲ್ಲಿದ್ದಷ್ಟು ಕಾಲ, ಇದು ನನ್ನ ಮನೆ ಎಂದೇ ಹೇಳುತ್ತಿದ್ದರು.
ನಾನು ಸಹ ಇದು ನಿಮ್ಮ ಮನೆ ಎಂದೇ ಹೇಳಿದ್ದೆ. ಅಂತಹ ಒಬ್ಬ ಅಕ್ಷರಜೀವಿಯ ಸಾಂಗತ್ಯ ನನ್ನ ಜೀವನದ ಸುವರ್ಣ ಗಳಿಗೆ. ಭೈರಪ್ಪನವರ ಅಗಲಿಕೆಯ ಈ ಸಮಯದಲ್ಲಿ ನ್ಯಾಯಯುತವಾಗಿ ಅವರ ಬಗ್ಗೆ ಕನಿಷ್ಠ ಒಂದು ಪುಟವನ್ನಾದರೂ ಬರೆಯಬೇಕು. ಅವರ ಬಗ್ಗೆ ಬರೆಯಲು ಹೊರಟರೆ ಪುಸ್ತಕವನ್ನು ಬರೆಯಬಹುದು. ಆದರೆ ಅವರ ಅಂತಿಮ ಕ್ಷಣದವರೆಗೂ ಜತೆಗಿದ್ದು, ಭೈರಪ್ಪನವರ ಕೊನೆ ಕ್ಷಣದ ಸಾನಿಧ್ಯ ದೊರಕಿದ್ದು ನನ್ನ ಪೂರ್ವ ಜನ್ಮದ ಸುಕೃತ.
ಅಂತಿಮ ವಿಧಿವಿಧಾನದ ಸಿದ್ಧತೆ, ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಸೇರಿದಂತೆ ಹತ್ತಾರು ಒತ್ತಡಗಳ ಜತೆಗೆ ಅವರ ಅಗಲಿಕೆಯ ಶೋಕದಿಂದಾಗಿ ನನ್ನೊಳಗಿನ ಪತ್ರಕರ್ತ ಮೌನಿಯಾದ.
(ನಿರೂಪಣೆ
ರಂಜಿತ್ ಎಚ್. ಅಶ್ವತ್ಥ)