ಸಂದರ್ಶನ: ರಂಜಿತ್ ಎಚ್.ಅಶ್ವತ್ಥ
ಅನುಮೋದಿತ ಯೋಜನೆಗೂ ಅನುದಾನ ಕೊಡದಷ್ಟು ರಾಜ್ಯ ಸರಕಾರ ದಿವಾಳಿ
ಸರಕಾರ ಪರಿಹಾರ ನೀಡದ ಕಟ್ಟಡಗಳಿಗೆ ಸಿಎಸ್ಆರ್ ಅನುದಾನದಲ್ಲಿ ಪರಿಹಾರ
ಕಾಮಗಾರಿಗಳನ್ನು ಮುಗಿಸಿ ಎಂದು ಹೇಳಿ ಹೋಗುತ್ತಾರೆ ಹೊರತು, ಆ ಕಾಮಗಾರಿ ಪೂರ್ಣಗೊಳಿಸಲು ಬೇಕಿರುವಷ್ಟು ಅನುದಾನ ನೀಡುವುದಿಲ್ಲ. ಹಿಂದಿನ ಸರಕಾರದ ಅವಧಿಯಲ್ಲಿ ಅನುಮೋದನೆಗೊಂಡಿರುವ ಯೋಜನೆಗೂ ಅನುದಾನ ನೀಡಲು ಸಾಧ್ಯ ವಾಗದಷ್ಟು ದಿವಾಳಿತನ ಈ ಸರಕಾರಕ್ಕಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ.
ಬೆಂಗಳೂರಿನ ಪ್ರಮುಖ ಐಟಿ ಹಬ್ ಅನ್ನು ಸಂಪರ್ಕಿಸುವ ವರ್ತೂರು- ಗುಂಜೂರು ರಸ್ತೆ ಕಾಮಗಾರಿ ವಿಷಯದಲ್ಲಿ ಸರಕಾರದ ವಿಳಂಬ ಧೋರಣೆಯನ್ನು ಟೀಕಿಸಿರುವ ಅವರು, ಇದೀಗ ಅಧಿಕೃತ ಗುತ್ತಿಗೆದಾರರ ಬದಲಿಗೆ ‘ಗುಡ್ವಿಲ್’ನಲ್ಲಿ ಇತರೆ ಗುತ್ತಿಗೆದಾರರಿಂದ ಕಾಮಗಾರಿಗೆ ವೇಗ ನೀಡುವ ಪ್ರಯತ್ನ ನಡೆಸಿದ್ದಾರೆ. ವರ್ತೂರು-ಗುಂಜೂರು ರಸ್ತೆಯ ಪ್ರಾಮುಖ್ಯತೆ, ಇತಿಹಾಸ, ಅನುದಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ‘ವಿಶ್ವವಾಣಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.
ವರ್ತೂರು-ಗುಂಜೂರು ರಸ್ತೆ ಅಭಿವೃದ್ಧಿಯ ಯೋಚನೆ ಬಂದಿದ್ದೇಗೆ?
2009ರಲ್ಲಿ ನಾನು ಸಚಿವನಾಗಿದ್ದ ಸಮಯದಲ್ಲಿ ಏರ್ಪೋರ್ಟ್ ರಸ್ತೆ ಸಂಪರ್ಕಕ್ಕೆ ಪ್ರಸ್ತಾವನೆ ನೀಡಿದ್ದೆ. ಈ ಭಾಗದಿಂದ ಕಾಡುಗೋಡಿ, ಬೂದುಗೆರೆ ಕ್ರಾಸ್ ಹಾಗೂ ಮಂಡೂರು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಹೋಗಲು ಅನುಕೂಲವಾಗುವ ರಸ್ತೆ ಇದಾಗಿದೆ. ಐಟಿಪಿಎಲ್ ಇರುವುದರಿಂದ ಈ ಭಾಗದ ಜನರಿಗೂ ಅನುಕೂಲವಾಗು ತ್ತದೆ ಎಂಬ ಉದ್ದೇಶವಿತ್ತು. ಈ ಪ್ರಸ್ತಾ ವನೆಗೆ ಹಿಂದಿನ ಸರಕಾರದಲ್ಲಿ ಅನುಮೋದನೆ ದೊರೆಯಿತು. ಆರಂಭದಲ್ಲಿ 60 ಅಡಿ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ, ಸ್ಥಳೀಯರು ರಥೋತ್ಸವದ ಸಂದರ್ಭದಲ್ಲಿ ರಥ ತಿರುಗಿಸಲು ಸಮಸ್ಯೆ ಯಾಗುತ್ತದೆ ಹಾಗೂ 60 ಅಡಿ ರಸ್ತೆ ಸಾಕಾಗುವುದಿಲ್ಲ ಎಂದು ಮನವಿ ಮಾಡಿದರು. ಹೀಗಾಗಿ ಯೋಜನೆಯನ್ನು ಪರಿಷ್ಕರಿಸಿ 100 ಅಡಿ ರಸ್ತೆ ಮತ್ತು 60 ಅಡಿ ಫ್ಲೈಓವರ್ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಯಿತು.
ಇದನ್ನೂ ಓದಿ: Ranjith H Ashwath Column: ಮೇಲ್ಮನೆಯ ಫಲಿತಾಂಶದ ಲಾಭ-ನಷ್ಟ !
ವರ್ತೂರು-ಗುಂಜೂರು ರಸ್ತೆ ಕಾಮಗಾರಿ ಯಾವಾಗ ಮುಗಿಯುವ ನಿರೀಕ್ಷೆಯಿದೆ?
ನಾನು ಈ ಕಾಮಗಾರಿಯ ಹಿಂದೆ ಬಿದ್ದಿದ್ದೇನೆ. ಕೆಎಡಿಸಿಎಲ್ನಿಂದ ಸಹಕಾರ ಸಿಗುತ್ತಿಲ್ಲ. ಪ್ರವೇಶದ ಬಳಿ ಎರಡು ಆಸ್ತಿ ಗಳ ಸಮಸ್ಯೆಯಿದೆ. ಹೊಸ ಸೇತುವೆ ನಿರ್ಮಾಣವಾಗಿದ್ದರೂ ಸಂಪರ್ಕ ರಸ್ತೆ ಯಿಲ್ಲದೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಳೆಯ ಸೇತುವೆಯನ್ನು ತಾತ್ಕಾಲಿಕವಾಗಿ ಕಾರು ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೆರೆದಿದ್ದೇವೆ. ಸರಕಾರದ ಸಚಿವರು ಬಂದು ಪರಿಶೀಲನೆ ನಡೆಸಿ ಮೋಟಾರ್ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಿ ಎಂದು ಹೇಳಿ ಹೋಗಿದ್ದಾರೆ. ಆದರೆ, ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಸರಕಾರ ಸಿದ್ಧವಿಲ್ಲ. ಹೀಗಾಗಿ ಬೇರೆ ಗುತ್ತಿಗೆದಾರರನ್ನು ಕರೆತಂದು ಕೆಲಸ ಮಾಡಿಸುವ ಪರಿಸ್ಥಿತಿ ಬಂದಿದೆ.
ಕಾಮಗಾರಿ ವಿಳಂಬಕ್ಕೆ ಕಾರಣವೇನು?
33 ಆಸ್ತಿಗಳಿಗೆ ಪರಿಹಾರ ನೀಡುವುದು ಬಾಕಿಯಿದೆ. ಭೂಮಾಲೀಕರು ಟಿಡಿಆರ್ ಬೇಡ, ಪರಿಹಾರ ನೀಡಿದರೆ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದ್ದರು. ಹಲವು ಸಭೆಗಳನ್ನು ನಡೆಸಿ ಅವರನ್ನು ಒಪ್ಪಿಸಿದ್ದೇನೆ. ಗುತ್ತಿಗೆದಾರರು ಕಾಮ ಗಾರಿ ವಿಳಂಬವಾಗಿರುವುದರಿಂದ ಇಂದಿನ ಎಸ್ಆರ್ ದರಕ್ಕೆ ಗುತ್ತಿಗೆ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಿಲ್ಲ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಕೊನೆಗೆ ಬೇರೆ ಇಬ್ಬರು ಗುತ್ತಿಗೆದಾರರನ್ನು ಕರೆತಂದು, ಪಾವತಿ ಬಗ್ಗೆ ಚಿಂತಿಸಬೇಡಿ, ಮೊದಲು ಕೆಲಸ ಆರಂಭಿಸಿ ಎಂದು ಮನವಿ ಮಾಡಿದ್ದೇನೆ. ಅವರು ಸಹಕಾರ ನೀಡುತ್ತಿzರೆ. ಈಗ ಕಾಮಗಾರಿ ಹೇಗೆ ಸಾಗುತ್ತಿದೆ? ಈಗ ನೀವೇ ನೋಡುತ್ತಿದ್ದೀರಿ. ಹಿಂದೆ ಶಾಲಾ ಬಸ್ಗಳು ಮೂರು-ನಾಲ್ಕು ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ನಿಲ್ಲುತ್ತಿದ್ದವು. ಈಗ ಆ ಪರಿಸ್ಥಿತಿ ಇಲ್ಲ. ವಾಹನಗಳ ಸಂಚಾರ ಸುಗಮವಾಗಿದೆ. ಇನ್ನೂ ಎರಡು-ಮೂರು ಕಡೆ ಬಾಟಲ್ ನೆಕ್ ಸಮಸ್ಯೆಯಿದೆ. ಹೊಸ ಸೇತುವೆಯ ಸಂಪರ್ಕ ರಸ್ತೆಗೆ ಸಂಬಂಧಿಸಿದಂತೆ ಎರಡು ಆಸ್ತಿಗಳ ಸಮಸ್ಯೆ ಬಾಕಿಯಿದೆ. ಅದನ್ನು ಇತ್ಯರ್ಥಪಡಿಸಿದರೆ ಸಂಚಾರ ಮತ್ತಷ್ಟು ಸುಗಮವಾಗಲಿದೆ.
ಈ ರಸ್ತೆಯಿಂದ ಸಂಚಾರ ದಟ್ಟಣೆ ಎಷ್ಟು ಕಡಿಮೆಯಾಗಬಹುದು?
100 ಅಡಿ ರಸ್ತೆ ಹಾಗೂ 60 ಅಡಿ ಫ್ಲೈ-ಓವರ್ ನಿರ್ಮಾಣದಿಂದ ಒಟ್ಟು 160 ಅಡಿ ಸಂಚಾರ ವ್ಯವಸ್ಥೆ ಸಿಗಲಿದೆ. ಈ ಭಾಗದಲ್ಲಿ ಹಲವು ಶಾಲೆಗಳಿವೆ. ಅಂತಾರಾಷ್ಟ್ರೀಯ ಶಾಲೆಗಳೂ ಇವೆ. ಶಾಲೆಗಳಿಗೆ ಹೋಗುವವರು ಮತ್ತು ಐಟಿ-ಬಿಟಿ ಉದ್ಯೋಗಿಗಳಿಗೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅನೇಕ ವಸತಿ ಯೋಜನೆಗಳು ಬಂದಿರುವುದರಿಂದ ಜನಸಂಖ್ಯೆ ಹೆಚ್ಚಾಗಿದೆ. ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ರಸ್ತೆಗಳು ಬೇಕೇ ಬೇಕು. ಇನ್ನೊಂದು ಐದು ವರ್ಷಗಳ ನಂತರ ಈ ರಸ್ತೆಯೂ ಸಾಕಾಗದ ಪರಿಸ್ಥಿತಿ ಬರಬಹುದು.
ಕೆಲ ಕಟ್ಟಡಗಳಿಗೆ ಪರಿಹಾರ ಸಿಕ್ಕಿಲ್ಲ: ಅವು ಗಳಿಗೆ ಪರ್ಯಾಯ ಮಾರ್ಗವೇನು?
ದೇವಸ್ಥಾನಗಳು, ಮಸೀದಿಗಳು, ಶಾಲೆಗಳು ಮತ್ತು ಮಾರುಕಟ್ಟೆ ಕಟ್ಟಡಗಳಿಗೆ ಸರಕಾರ ಹಣ ನೀಡ ಬೇಕಿತ್ತು. ಹಳೆಯ ದೇವಸ್ಥಾನಗಳನ್ನು ಪುನರ್ನಿರ್ಮಾಣ ಮಾಡಬೇಕಿದೆ. ಆವುಗಳಿಗೆ ಪರಿಹಾರ ಕೊಡಲು ಸರಕಾರದ ಬಳಿ ಹಣ ನೀಡಲಾಗದ ಸ್ಥಿತಿಯಿದೆ. ಆದ್ದರಿಂದ ಸರಕಾರವನ್ನು ನಂಬಿಕೊಂಡರೆ ಆಗುವುದಿಲ್ಲ ಎಂದು ಸಿಎಸ್ಆರ್ ನಿಧಿ ಮೂಲಕ ಹಣ ತಂದು ಕೆಲಸ ಮಾಡುತ್ತಿದ್ದೇವೆ.
ಎರಡು ಆಂಜನೇಯ ದೇವಸ್ಥಾನಗಳು, ಯಲ್ಲಮ್ಮ ದೇವಸ್ಥಾನ, ಹೊರತೂರು ಮಸೀದಿ, ಗುಂಜೂರಿನ ಶ್ರೀರಾಮ ದೇವಸ್ಥಾನ, ದ್ರೌಪದಮ್ಮನ ಕಮಾನು, ಉರ್ದು ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಠಡಿಗಳು ಹಾಗೂ ಮಾರುಕಟ್ಟೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಅಂದಾಜು 15 ಕೋಟಿ ರು. ಬೇಕಾಗುತ್ತದೆ. ಈ ಹಣವನ್ನು ಸರಕಾರವೇ ನೀಡಬೇಕಾಗಿತ್ತು. ಆದರೆ ನೀಡಿಲ್ಲ. ಒಂದು ಕಡೆ ಬಸ್, ಹಾಲು ಸೇರಿದಂತೆ ಎಲ್ಲದರ ದರಗಳನ್ನು ಹೆಚ್ಚಿಸುತ್ತಾರೆ. ಇನ್ನೊಂದು ಕಡೆ ಹಣದ ಕೊರತೆಯಿಲ್ಲ ಎನ್ನುತ್ತಾರೆ. ಹೊಸ ಯೋಜನೆಗಳು ಹೋಗಲಿ, ಈಗಾಗಲೇ ಅನುಮೋದನೆ ಗೊಂಡಿರುವ ಯೋಜನೆಗಳಿಗೂ ಹಣ ಕೊಡದಂತ ಕೆಟ್ಟ ಪರಿಸ್ಥಿತಿಗೆ ಬಂದಿದೆ. ಅಷ್ಟರ ಮಟ್ಟಿಗೆ ಈ ಸರಕಾರ ದಿವಾಳಿಯಾಗಿದೆ.
ಕಾಂಗ್ರೆಸ್ ಸರಕಾರ ಬಂದ ಬಳಿಕವೇ ಯೋಜನೆಗೆ ವೇಗ ಸಿಕ್ಕಿದೆ ಎನ್ನುವ ಮಾತಿದೆಯಲ್ಲ?
ನಾನು ಶಾಸಕನಾಗಿದ್ದಾಗಲೇ ಭೂ ಸ್ವಾಧೀನ ಮತ್ತು ಕಟ್ಟಡಗಳ ತೆರವು ವಿಚಾರವಾಗಿ ಮೂರು-ನಾಲ್ಕು ಸಭೆ ಗಳನ್ನು ಮಾಡಿದ್ದೇನೆ. ಈಗಿನ ಸರಕಾರ ಮಾಡಬೇಕಾಗಿರುವುದು ಹಣ ಬಿಡುಗಡೆ ಮಾಡುವುದು ಮಾತ್ರ. ಗುತ್ತಿಗೆದಾರರು ಎಸ್ಆರ್ ದರ ಕೇಳುತ್ತಿದ್ದಾರೆ. ಸರಕಾರ ಅದಕ್ಕೆ ತೀರ್ಮಾನ ಮಾಡುತ್ತಿಲ್ಲ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು ಭೇಟಿ ನೀಡಿ, ಸಂಚಾರಕ್ಕೆ ವ್ಯವಸ್ಥೆ ಮಾಡಿ ಎಂದು ಹೇಳಿ ಹೋಗುತ್ತಾರೆ. ಆದರೆ ಯೋಜನೆ ಮಾಡಲು ಅನುದಾನ ಕೊಡುವುದಿಲ್ಲ. ಅನುದಾನ ನೀಡುವ ಬಗ್ಗೆ ಸಚಿವ ಸಂಪುಟಕ್ಕೆ ತರುತ್ತಿಲ್ಲ. ಕಾಂಗ್ರೆಸ್ ಸರಕಾರ ಬಂದ ಬಳಿಕ ವೇಗ ಸಿಕ್ಕಿದೆ ಎನ್ನುವವರು ನನ್ನ ಮುಂದೆ ನಿಂತು ಹೇಳಲಿ.
ಅನುದಾನ ಬಿಡುಗಡೆಯಾಗದಿರಲು ಕಾರಣವೇನು?
ಈಗಾಗಲೇ ಹಿಂದಿನ ಸರಕಾರದಲ್ಲಿ ಅನು ಮೋದನೆಯಾಗಿರುವ ಯೋಜ ನೆಗೆ ಅನುದಾನ ನೀಡದೇ ಇರಲು ಅನುದಾನ ಕೊರತೆ ಕಾರಣವಿರ ಬಹುದು. ಇಲ್ಲವೇ ಕಮಿಷನ್ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಅನುದಾನ ನೀಡಲು ಕಾಯುತ್ತಿದ್ದಾರೋ ಗೊತ್ತಿಲ್ಲ. ಅನೇಕ ಯೋಜನೆಗಳು ಬಾಕಿ ಉಳಿದಿವೆ. ಒಂದು ಕಡೆ ಹಣಯಿದ್ದರೂ ಬಿಡುಗಡೆ ಮಾಡುತ್ತಿಲ್ಲ. ಮತ್ತೊಂದೆಡೆ ರಾಜ್ಯ ಸರಕಾರದ ಯೋಜನೆಗಳಿಗೆ ಹಣವೇ ಇಲ್ಲದ ಪರಿಸ್ಥಿತಿ ಇದೆ.
ಮುಂದಿನ ಯೋಜನೆಗಳೇನು?
ಮಹದೇವಪುರ ಭಾಗದಲ್ಲಿ ರಸ್ತೆಗಳು ಬಹಳ ಮುಖ್ಯ. ಸಿಡಿಪಿ ರಸ್ತೆಗಳು ನಿರ್ಮಾಣವಾಗಬೇಕು. 150 ಅಡಿ ರಸ್ತೆಯ ಶೇ.70ರಷ್ಟು ಕೆಲಸ ಮಾಡಿದ್ದೆ. ಆದರೆ, ಕೆಲವು ಸಮಸ್ಯೆಗಳನ್ನು ಈ ಸರಕಾರ ಇತ್ಯರ್ಥ ಪಡಿಸುತ್ತಿಲ್ಲ. ರಸ್ತೆಗಳು ನಿರ್ಮಾಣವಾದರೆ ಜಮೀನುಗಳ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಅನುದಾನ ನೀಡುತ್ತಿಲ್ಲ ಎಂಬ ಅನುಮಾನವಿದೆ. ರಸ್ತೆ ಅಭಿವೃದ್ಧಿಯ ಜತೆಗೆ ರಾಜಕಾಲುವೆಗಳ ಸಂಪರ್ಕವೂ ಬಹಳ ಮುಖ್ಯವಾಗಿದೆ.
ರಾಜಕಾಲುವೆ ಅಭಿವ ದ್ಧಿ ಏಕೆ ಮುಖ್ಯ?
ವಿಧಾನಸೌಧಕ್ಕೆ ಹೋಲಿಸಿದರೆ ಮಹದೇವಪುರ ಭಾಗ ಸುಮಾರು 80 ಅಡಿ ಕೆಳಗಿದೆ. ಇಡೀ ಬೆಂಗಳೂರಿನಲ್ಲಿ ಮಳೆ ಬಿದ್ದರೆ ನೀರೆಲ್ಲವೂ ಈ ಭಾಗಕ್ಕೆ ಹರಿದು ಬರುತ್ತದೆ. ರಾಜಕಾಲುವೆ ಗಳನ್ನು ನಿರ್ಮಿಸದಿದ್ದರೆ ನೀರು ಹರಿದುಹೋಗಲು ಸಾಧ್ಯವಿಲ್ಲ. ಪ್ರವಾಹ ಉಂಟಾಗುತ್ತದೆ. ಹಿಂದೆ ಸಿದ್ದರಾಮಯ್ಯನವರು ಇಲ್ಲಿ ಪ್ರವಾಹ ಉಂಟಾದಾಗ ಬಂದು ಕಣ್ಣಾರೆ ನೋಡಿದ್ದಾರೆ. ವಿಶ್ವಬ್ಯಾಂಕ್ ಯೋಜನೆಯಡಿ ಹಣ ಬಂದಿದ್ದರೂ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಂಡಿದ್ದ ಯೋಜನೆಗೆ ಈಗ ಹಣ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
![]()
ಈ ಸರಕಾರದಲ್ಲಿ ಹಣವಿಲ್ಲದೇ ದಿವಾಳಿ ಯಾಗಿದೆ. ಅಭಿವೃದ್ಧಿ ಕಾರ್ಯದ ಬಗ್ಗೆ ಆಲೋಚಿಸುವ ಬದಲು ಬೇರೆಲ್ಲ ವಿಷಯಗಳನ್ನು ಚರ್ಚಿಸುತ್ತಿದ್ದಾರೆ. ಕಾಮಗಾರಿ ಆರಂಭಿಸಿ ಎಂದು ಬಂದು ಹೇಳಿ ಹೋಗುವ ಬದಲು, ಈಗಾಗಲೇ ಅನುಮೋದನೆಗೊಂಡಿರುವ ಕಾಮಗಾರಿಗೆ ಅನುದಾನ ನೀಡಲಿ. ಗುತ್ತಿಗೆದಾರರು ಕೇಳುತ್ತಿರುವ ಎಸ್ ಆರ್ ದರ ಏರಿಕೆಗೆ ಸಂಬಂಧಿಸಿದಂತೆ ಯಾವುದಾದರೂ ಒಂದು ಸ್ಪಷ್ಟ ತೀರ್ಮಾನಕ್ಕೆ ಸರಕಾರ ಬರಲಿ.
-ಅರವಿಂದ ಲಿಂಬಾವಳಿ, ಮಾಜಿ ಸಚಿವ