Ranjith H Ashwath Column: ಮೇಲ್ಮನೆಯ ಫಲಿತಾಂಶದ ಲಾಭ-ನಷ್ಟ !
ಕಳೆದ ವಾರವಷ್ಟೇ ದೇಶದ ವಿವಿಧ ರಾಜ್ಯಗಳಲ್ಲಿ 28 ವಿಧಾನಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 16 ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆ ಹಾಗೂ ಇತರರು ಇನ್ನುಳಿದ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ ಬಿಜೆಪಿ 13, ಜೆಡಿಯು, ಶಿವಸೇನಾ, ಜೆಡಿಎಸ್ ತಲಾ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
-
ಅಶ್ವತ್ಥಕಟ್ಟೆ
ರಾಜಕೀಯದಲ್ಲಿ ಚುನಾವಣಾ ಫಲಿತಾಂಶ ಯಾವಾಗಲೇ ಬಂದರೂ ಅದಕ್ಕೆ ಅದರದ್ದೇಯಾದ ಮಹತ್ವವಿರುತ್ತದೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಸಂಸತ್ ಚುನಾವಣೆಯವರೆಗಿನ ಫಲಿತಾಂಶ ಪಕ್ಷಗಳಿಗೆ ಒಂದೊಂದು ಹೊಸ ಪಾಠವನ್ನು ಕಲಿಸುವುದರಲ್ಲಿ ಅನುಮಾನವೇ ಇಲ್ಲ. ಚುನಾವಣಾ ಫಲಿತಾಂಶಗಳು ಕೆಲವೊಮ್ಮೆ ಸರಕಾರಗಳನ್ನು ಬದಲಾಯಿಸಿದರೆ, ಇನ್ನೂ ಕೆಲವೊಮ್ಮೆ ರಾಜಕೀಯ ಯಾವ ದಿಕ್ಕಿನತ್ತ ಸಾಗುತ್ತಿದೆ ಎನ್ನುವ ದಿಕ್ಸೂಚಿಯಾಗಿ ಕಾರ್ಯ ನಿರ್ವಹಿಸುತ್ತದೆ.
ಯಾವುದೇ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸೋಲಾದರೆ ಅದನ್ನು ಆಡಳಿತ ವಿರೋಧಿ ಅಲೆ ಎನ್ನುವ ರೀತಿಯಲ್ಲಿ ಪ್ರತಿಪಕ್ಷಗಳು ಬಿಂಬಿಸುವ ಪ್ರಯತ್ನವನ್ನು ಮಾಡುತ್ತದೆ. ಕೆಲವೊಮ್ಮೆ ಇದು ಸತ್ಯವಾಗಿದ್ದರೂ, ಕೆಲವೊಮ್ಮೆ ದಿಕ್ಸೂಚಿಯಾಗಿರಲೇಬೇಕು ಎನ್ನುವ ನಿಯಮವೇನಿಲ್ಲ. ಆದರೂ ಗೆಲುವು ಸಾಧಿಸಿದ, ಸೋಲುಂಡ ಪಕ್ಷಗಳು ಫಲಿತಾಂಶವನ್ನು ತಮ್ಮದೇಯಾದ ರೀತಿಯ ‘ವಿಶ್ಲೇಷಣೆ’ಗಳನ್ನು ಮಾಡುವುದು ಸಹಜ ಪ್ರಕ್ರಿಯೆ.
ಕಳೆದ ವಾರವಷ್ಟೇ ದೇಶದ ವಿವಿಧ ರಾಜ್ಯಗಳಲ್ಲಿ 28 ವಿಧಾನಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ 16 ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆ ಹಾಗೂ ಇತರರು ಇನ್ನುಳಿದ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿಯೂ ಬಿಜೆಪಿ 13, ಜೆಡಿಯು, ಶಿವಸೇನಾ, ಜೆಡಿಎಸ್ ತಲಾ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಸಮಾಜವಾದಿ ಪಕ್ಷ ಐದು, ಎಂವಿಎ 4, ಜನ ಸುರಾಜ್ ಹಾಗೂ ಪಕ್ಷೇತರರು ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಆದರೆ ಈ 28 ಸ್ಥಾನದಲ್ಲಿ ಕಾಂಗ್ರೆಸ್ ಒಂದೇ ಒಂದು ಗೆಲ್ಲದಿರುವುದು ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸೋಲಿಗಿಂತ ಹೆಚ್ಚಾಗಿ, ಕರ್ನಾಟಕದಲ್ಲಿ ಸೋಲು ಕಾಂಗ್ರೆಸ್ ಬಹುದೊಡ್ಡ ಹಿನ್ನಡೆಯಾಗಿದೆ. ಭಾರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದ್ದ ಕಾಂಗ್ರೆಸ್ ರಾಜ್ಯದಲ್ಲಿ ನಡೆದ ನಾಲ್ಕು ವಿಧಾನಪರಿಷತ್ ಸ್ಥಾನಗಳಲ್ಲಿ ಕನಿಷ್ಠ ಎರಡು ಸ್ಥಾನವನ್ನಾದರೂ ಗೆಲ್ಲಬೇಕು ಎನ್ನುವ ಆಲೋಚನೆಯಲ್ಲಿ ಕಾರ್ಯ ನಿರ್ವಹಿಸಿತ್ತು.
ಇದನ್ನೂ ಓದಿ: Ranjith H Ashwath Column: ಸಚಿವರನ್ನು ಸಚಿವರಾಗಿ ನೋಡಲು ಸಮಸ್ಯೆಯೇನು ?
ಅದಕ್ಕಾಗಿ ಎಂಟ್ಹತ್ತು ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಿ, ಗ್ರೌಂಡ್ ಲೆವೆಲ್ ನಲ್ಲಿ ಕಾರ್ಯ ತಂತ್ರ ರೂಪಿಸಿತ್ತು. ಅದರಲ್ಲಿಯೂ ಚುನಾವಣಾ ವರ್ಷವಾಗಿರುವುದರಿಂದ ಪರಿಷತ್ ಚುನಾವಣೆಯಲ್ಲಿ ಹಿನ್ನಡೆಯಾಗದಂತೆ ಎಚ್ಚರವಹಿಸಲು ಭಾರಿ ಕಸರತ್ತು ನಡೆಸಿತ್ತು. ಆದರೂ ಬೆಂಗಳೂರು ಶಿಕ್ಷಕರ ಕ್ಷೇತ್ರದಂತಹ ಭದ್ರಕೋಟೆಯಲ್ಲಿಯೇ ಕಾಂಗ್ರೆಸ್ ಸೋತಿರುವುದು ಪಕ್ಷದೊಳಗೆ ತೀವ್ರ ಚರ್ಚೆಗೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಈ ಚುನಾವಣೆಯಲ್ಲಿ ಪುಟ್ಟಣ್ಣ ಸೋಲಿಗೆ ಹತ್ತಾರು ಕಾರಣಗಳನ್ನು ನಾಯಕರು ಈಗ ಹುಡುಕುತ್ತಿದ್ದಾರೆ.
ಬಿಜೆಪಿ-ಜೆಡಿಎಸ್ ಕಾಂಬಿನೇಷನ್ ಮತಗಳನ್ನು ಕೊಡುವುದಿಲ್ಲವೆಂದು ಪುಟ್ಟಣ್ಣ, ಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಬಹುತೇಕರು ಈ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿದರು ಎನ್ನುವುದು ಅದರಲ್ಲಿರುವ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಆದರೆ ರಾಜಕೀಯ ಮೊಗಸಾಲೆಯಲ್ಲಿ, ಇತ್ತೀಚಿಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಸ್ಟಿಂಗ್ ಗದ್ದಲ, ಆಡಳಿತ ಕಾರ್ಯವೈಖರಿ, ಪಕ್ಷದ ಸಂಘಟನೆಯಲ್ಲಿ ಆಗುತ್ತಿರುವ ಲೋಪದೋಷಗಳು ಪುಟ್ಟಣ್ಣ ಸೋಲಿಗೆ ಇನ್ನುಳಿದ ಕಾರಣಗಳು ಎನ್ನುವ ಮಾತುಗಳು ಕೇಳಿಬರುತ್ತಿದೆ.
ಚಿಂತಕರ ಚಾವಡಿ ಎನಿಸಿರುವ ಮೇಲ್ಮನೆ ಚುನಾವಣೆ, ಅದರಲ್ಲಿಯೂ ಶಿಕ್ಷಕರ, ಪದವೀಧರರ ಚುನಾವಣೆ ಗಳಲ್ಲಿ ಮೊದಲಿನಿಂದಲೂ ಬಿಜೆಪಿಗೆ ಮೇಲುಗೈ ಸಾಧಿಸಿರುವ ಇತಿಹಾಸವಿದೆ. ಕಳೆದ ವಾರ ಮುಗಿದ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳ ಮೇಲೆ ಹೆಚ್ಚು ಆಸೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೆ ಕಾಂಗ್ರೆಸ್ಗಿಂತ ಹೆಚ್ಚಾಗಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಪುಟ್ಟಣ್ಣ ಅವರ ಭದ್ರಕೋಟೆ ಎನಿಸಿತ್ತು.
ಹಾಗೆ ನೋಡಿದರೆ, ಬಿಜೆಪಿ ಗೆಲುವು ಸಾಧಿಸಿರುವ ಮೂರು ಕ್ಷೇತ್ರಗಳು ಬಿಜೆಪಿಯ ಸೀಟುಗಳೇ ಆಗಿದ್ದರಿಂದ ಅದನ್ನು ಉಳಿಸಿಕೊಂಡಂತಾಗಿದೆ. ಆದರೆ ಐದು ಬಾರಿ ವಿಧಾನ ಪರಿಷತ್ ಚುನಾವಣೆ ಯಲ್ಲಿ ಗೆಲುವು ಸಾಧಿಸಿದ್ದ ಪುಟ್ಟಣ್ಣ ಸೋಲು ಕಾಂಗ್ರೆಸ್ಗೆ ದೊಡ್ಡ ಆಘಾತ ನೀಡಿದೆ. ಹೆಚ್ಚು ನಿರೀಕ್ಷೆ ಇಲ್ಲದೇ, ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎ.ಪಿ. ರಂಗನಾಥ್ 10810 ಮತಗಳ ಅಂತರದ ಗೆಲುವು ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ.
ರಂಗನಾಥ್ ಗೆಲುವಿನಿಂದ ಬಿಜೆಪಿ-ಜೆಡಿಎಸ್ಗೆ ಮೇಲ್ಮನೆಯಲ್ಲಿ ಹೆಚ್ಚುವರಿ ‘ಸಂಖ್ಯಾ ಬಲ’ ಬಂದಿದೆ. ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ನಾಯಕರಿಗೆ ಮೇಲ್ಮನೆಯ ನಾಲ್ಕು ಕ್ಷೇತ್ರದ ಸೋಲು ಬಹು ದೊಡ್ಡ ಆಘಾತವನ್ನು ಸೃಷ್ಟಿಸಿದೆ. ಪುಟ್ಟಣ್ಣ ಗೆಲುವಿನ ‘ಅತಿ ವಿಶ್ವಾಸ’ದಲ್ಲಿ ಕೈಸುಟ್ಟುಕೊಂಡಿದ್ದಾರೆ. ಆದರೆ ಮೈತ್ರಿ ನಾಯಕರು ಪುಟ್ಟಣ್ಣನವರ ಸೋಲನ್ನು ‘ರಾಜ್ಯದ ಜನರ ಅಭಿಪ್ರಾಯ’ ಎನ್ನುವ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ಶುರುಮಾಡಿದ್ದಾರೆ. ಅದರಲ್ಲಿಯೂ ಸ್ಟಿಂಗ್ ಗುಮ್ಮ ಬಯಲಿಗೆ ಬಂದ ಬಳಿಕ, ಕಾಂಗ್ರೆಸ್ನ ಬಹುತೇಕ ನಾಯಕರು ಮೌನಕ್ಕೆ ಶರಣಾಗಿದ್ದಾರೆ.
ಮೇಲ್ಮನೆಯಲ್ಲಿನ ಸೋಲಿಗಿಂತ ಹೆಚ್ಚಾಗಿ, ಡಿಸೆಂಬರ್ ಅಂತ್ಯಕ್ಕೆ ನಡೆಸಲು ಉದ್ದೇಶಿಸಿರುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ, ಅದಾದ ಬಳಿಕ ಜಿಬಿಎ ಚುನಾವಣೆಯ ಆಲೋಚನೆ ಯಲ್ಲಿರುವುದರಿಂದ ಈ ಸೋಲು ಸ್ಥಳೀಯ ಸಂಸ್ಥೆ ಚುನಾವಣೆಗೂ ಮುಂದುವರೆದರೆ ಎನ್ನುವ ಆತಂಕ ಬಹುತೇಕ ನಾಯಕರಲ್ಲಿದೆ.
ಸದ್ಯ ಕಾಂಗ್ರೆಸ್ನಲ್ಲಿರುವ ವಿಚಿತ್ರ ಸನ್ನಿವೇಶವನ್ನು ಯಾವ ರೀತಿ ನಿಭಾಯಿಸಬೇಕು ಎನ್ನುವುದು ಪಕ್ಷದೊಳಗಿನ ಚರ್ಚೆಯಾಗಿದ್ದರೆ, ಈ ಸಮಯವನ್ನು ಯಾವ ರೀತಿ ಪ್ರಯೋಜನ ಪಡೆಯಬೇಕು ಎನ್ನುವುದು ಬಿಜೆಪಿಯೊಳಗಿರುವ ಚಿಂತನೆಯಾಗಿದೆ. ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳನ್ನು ಮೀರಿ ಜೆಡಿಎಸ್ ಸದ್ಯ ‘ಚಾಲ್ತಿ’ಯಲ್ಲಿರುವ ಪ್ರಯತ್ನವನ್ನು ನಡೆಸಿದ್ದು, ಅದರಲ್ಲಿಯೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ, ಟೀಕೆ ಮಾಡಲು ಸಿಗುವ ಒಂದೇ ಒಂದು ಅವಕಾಶವನ್ನು ಬಿಡುತ್ತಿಲ್ಲ.
ಇನ್ನೊಂದೆಡೆ ಬಿಜೆಪಿಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕರ ಬದಲಾವಣೆಯ ಚರ್ಚೆ ಜೋರಾಗಿ ನಡೆಯುತ್ತಿರುವುದರಿಂದ ಹಾಗೂ ಪಕ್ಷದೊಳಗಿರುವ ಗೊಂದಲಗಳಿಂದ ಮಾತನಾಡಿದರೆ ಕೆಲಸವೆಲ್ಲಿ ಕೆಡುತ್ತದೋ ಎನ್ನುವ ಕಾರಣಕ್ಕೆ ಮೌನಕ್ಕೆ ಜಾರಿದ್ದಾರೆ.
ಮೇಲ್ನೋಟಕ್ಕೆ ಬಿಜೆಪಿಯಲ್ಲಿ ನಾಲ್ಕೈದು ಹೆಸರು ಈಗಾಗಲೇ ರೇಸ್ನಲ್ಲಿ ಓಡುತ್ತಿದ್ದರೂ, ಅಂತಿಮ ಕ್ಷಣದಲ್ಲಿ ಏನಾಗಲಿದೆ ಎನ್ನುವ ಬಗ್ಗೆ ಮೋದಿ, ಅಮಿತ್ ಶಾ ಹೊರತುಪಡಿಸಿ ಇನ್ಯಾರಿಗೂ ತಿಳಿಯುವುದಿಲ್ಲ ಎನ್ನುವುದು ವಾಸ್ತವ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಥಾನಕ್ಕೆ ಲಿಂಗಾಯತ ಸಮುದಾಯದ ವಿ.ಸೋಮಣ್ಣ ಅವರನ್ನು ಕೂರಿಸೋ ಚರ್ಚೆಗಳು ಒಂದೆಡೆಯಾದರೆ, ಪ್ರತಿಪಕ್ಷ ನಾಯಕ ಅಶೋಕ್ ಜಾಗಕ್ಕೆ ಅದೇ ಸಮುದಾಯದ ಅಶ್ವತ್ಥನಾರಾಯಣ ಅಥವಾ ಒಬಿಸಿ ಕೋಟಾದಲ್ಲಿ ಸುನೀಲ್ ಕುಮಾರ್ ಹೆಸರು ಓಡುತ್ತಿದೆ. ಆದರೆ ಸೋಮಣ್ಣ ಆಯ್ಕೆ ಬಗ್ಗೆ ಪಕ್ಷದಲ್ಲಿಯೇ ಹಲವರ ಆಕ್ಷೇಪಣೆ ಗಳಿರುವುದರಿಂದ ಹಾಗೂ ಇಡೀ ಲಿಂಗಾಯತ ಸಮುದಾಯ ವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವರೇ ಎನ್ನುವ ಪ್ರಶ್ನೆಗಳು ಅನೇಕರಲ್ಲಿರುವುದರಿಂದ ಏನಾಗಲಿದೆ ಎನ್ನುವ ಸ್ಪಷ್ಟನೆ ಇಲ್ಲ.
ಹಾಗೆಂದು, ಈ ಬದಲಾವಣೆಗಳ ಚರ್ಚೆಗೆ ಕೊನೆಯೆಂದು ಎನ್ನುವ ಪ್ರಶ್ನೆಗೂ ಬಿಜೆಪಿಯಲ್ಲಿ ಉತ್ತರವಿಲ್ಲ ವಾಗಿದೆ. ಸಚಿವ ಬಿ.ನಾಗೇಂದ್ರ ವಿರುದ್ಧ ಪಾದಯಾತ್ರೆ ಆರಂಭಿಸಿ ಬಳ್ಳಾರಿ ಪಾದಯಾತ್ರೆ ಆರಂಭಿಸಿದಾಗ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿತ್ತು. ಆದರೆ ಪಕ್ಷದೊಳಗೆ ನಡೆಯುತ್ತಿರುವ ‘ರಿಜೀಮ್’ ಬದಲಾವಣೆ ಮತ್ತೇನಾಗಲಿದೆ ಎನ್ನುವ ಗೊಂದಲಕ್ಕೆ ಕಾರ್ಯಕರ್ತ ರನ್ನು ದೂಡಿದೆ. ಈ ಎಲ್ಲ ಗೊಂದಲಗಳ ನಡುವೆಯೇ, ಯುವ ಸಮುದಾಯಕ್ಕೆ ಎಸ್ಐಆರ್ ಕುರಿತಾದ ಮಾಹಿತಿಯನ್ನು ನೀಡುವ ಹಾಗೂ ಕಾಂಗ್ರೆಸ್ಸಿನ ಅರಾಜಕತೆಯ ಮನಸ್ಥಿತಿಯನ್ನು ಬಯಲು ಮಾಡುವ ಉದ್ದೇಶದಿಂದ ನ.1ರಿಂದ ನ.30ರವರೆಗೆ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಎಂಬ ಅಭಿಯಾನವನ್ನು ನಡೆಸುತ್ತಿದೆ. ಆದರೆ ಈ ಅಭಿಯಾನ ಪಕ್ಷಕ್ಕೆ ಯಾವ ಪ್ರಮಾಣ ದಲ್ಲಿ ಬೂಸ್ಟ್ ನೀಡಲಿದೆ ಎನ್ನುವುದನ್ನು ಮುಂದೆ ಕಾದು ನೋಡಬೇಕಿದೆ.
ಬಿಜೆಪಿ-ಕಾಂಗ್ರೆಸ್ನೊಳಗಿರುವ ಈ ಎಲ್ಲ ಗೊಂದಲದ ಈ ಸಮಯವನ್ನು ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿದ್ದು, ಇದಕ್ಕಾಗಿಯೇ ರಾಜ್ಯ ಸರಕಾರದ ವಿರುದ್ಧ ದಿನಕ್ಕೊಂದು ವಿಷಯವನ್ನು ಇಟ್ಟುಕೊಂಡು ‘ಸುದ್ದಿ’ಯಲ್ಲಿದ್ದಾರೆ. ಆದರೆ ಈಗ ಸ್ಟಿಂಗ್ ವಿಷಯದಲ್ಲಿ ಕುಮಾರಸ್ವಾಮಿ ಅವರ ಹೆಸರನ್ನು ಬೆಂಗಳೂರು ಆಯುಕ್ತರ ಮೂಲಕವೇ ಹೇಳಿಸುವ ಮೂಲಕ ಹೊಸ ವಿವಾದವನ್ನು ಸರಕಾರ ಸೃಷ್ಟಿಸಿದೆ. ಹಾಗೆ ನೋಡಿದರೆ, ತನಿಖೆ ನಡೆಯುತ್ತಿರುವ ಹಂತದಲ್ಲಿ ಈ ರೀತಿಯ ಸೂಕ್ಷ್ಮ ವಿಷಯವನ್ನು ಯಾವುದೇ ಅಧಿಕಾರಿ ಬಹಿರಂಗಪಡಿಸುವುದಿಲ್ಲ. ಆದರೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಬಹಿರಂಗವಾಗಿ ಹೇಳಿರುವುದು ಮತ್ತೊಂದು ವಿವಾದವನ್ನು ಸೃಷ್ಟಿಸಿದೆ. ಆದರೆ ಕುಮಾರಸ್ವಾಮಿ ಅವರ ವಿರುದ್ಧ ಬಂದಿರುವ ಈ ಆರೋಪ ಅವರಿಗೆ ಲಾಭವೋ- ನಷ್ಟವೋ ಎನ್ನುವು ದನ್ನೂ ಕಾದು ನೋಡಬೇಕಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ವಿಷಯ ಸದ್ಯ ಯಾರ ತಲೆಗೆ ಸುತ್ತಿಕೊಳ್ಳಲಿದೆ ಎನ್ನುವುದಕ್ಕಿಂತ, ಈ ಘಟನೆಯಿಂದ ರಾಜ್ಯ ಕಾಂಗ್ರೆಸ್ ಯಾವ ಪ್ರಮಾಣ ದಲ್ಲಿ ಹೊಡೆತ ಬೀಳಲಿದೆ ಎನ್ನುವ ಸ್ಪಷ್ಟನೆ ಕಾಂಗ್ರೆಸ್ ನಾಯಕರಲ್ಲಿಲ್ಲ. ಕುಮಾರಸ್ವಾಮಿ ಮನೆಯಲ್ಲಿ ಫೋನ್ ಬದಲಾಗಿದೆ ಎನ್ನುವ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಹೇಳಿಕೆಯ ಆಧಾರದಲ್ಲಿ ಇಡೀ ಪ್ರಕರಣವನ್ನು ಜೆಡಿಎಸ್ ‘ತಲೆಗೆ’ ಕಟ್ಟುವ ಆಲೋಚನೆ ಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಕಿಚನ್ ಕ್ಯಾಬಿನೆಟ್ನಲ್ಲಿ ಸ್ಟಿಂಗ್ ಕುರಿತಾಗಿ ನೀಡಿದ್ದ ಎಚ್ಚರಿಕೆಯ ಬಳಿಕ ಸ್ಟಿಂಗ್ ಪ್ರಕರಣ ಮುನ್ನಲೆಗೆ ಬಂದಿರುವುದರಿಂದ, ಮುಂದಿನ ದಿನದಲ್ಲಿ ಈ ಪ್ರಕರಣ ಕಾಂಗ್ರೆಸ್ನೊಳಗೆ ಯಾವ ರೀತಿಯಲ್ಲಿ ಅಥವಾ ಅಹಿಂದ ನಾಯಕನ ವಿರುದ್ಧದ ಷಡ್ಯಂತ್ರ ಪಕ್ಷಕ್ಕೆ ಯಾವ ರೀತಿಯ ಹೊಡೆತ ಬೀಳಲಿದೆ ಎನ್ನುವುದಕ್ಕೆ ಉತ್ತರ ಸಿಗಲು ಇನ್ನಷ್ಟು ಸಮಯ ಬೇಕಾಗುತ್ತದೆ ಎನ್ನುವುದು ಸ್ಪಷ್ಟ.
ಅದರಲ್ಲಿಯೂ ಸ್ಟಿಂಗ್ ಪ್ರಕರಣ ಬಹಿರಂಗವಾದ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈವರೆಗೆ ಕೇವಲ ಒಂದೇ ಒಂದು ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಕ್ರಿಯೆ ನೀಡಿದ ಸಮಯದಲ್ಲಿಯೂ ಸ್ಪಷ್ಟವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ನೇರ ಆರೋಪ ಮಾಡುವುದ ರೊಂದಿಗೆ, ‘ಅವರದ್ದೇ ಸರಕಾರ.. ಏನು ಮಾಡುತ್ತಾರೋ ನೋಡೋಣ’ ಎನ್ನುವ ಮಾತನ್ನು ಆಡಿರುವ ಹಿಂದಿರುವ ಸಂದೇಶವೇನು ಎನ್ನುವ ಸ್ಪಷ್ಟನೆ ಇಲ್ಲ.
ಇನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿದ ಬಳಿಕ, ಸ್ಟಿಂಗ್ ವಿಷಯದ ಹೊರತಾಗಿಯೂ ಸಿದ್ದರಾಮಯ್ಯನವರು ಎಲ್ಲಿಯೂ ಪ್ರತಿಕ್ರಿಯೆ ನೀಡುತ್ತಿಲ್ಲ. ಸರಕಾರ ಬದಲಾದಂತೆ ತಮ್ಮ ಆಪ್ತ ವಲಯದಲ್ಲಿ ಆಗಿರುವ ಬದಲಾವಣೆಗೂ ‘ಮೌನ’ವಾಗಿರುವ ಸಿದ್ದರಾಮಯ್ಯ ತಮ್ಮ ಬಳಿ ಅಹಿಂದ ಅಸ್ತ್ರ ವನ್ನು ಎಷ್ಟು ಪ್ರಬಲವಾಗಿ ಉಳಿಸಿಕೊಂಡಿದ್ದಾರೆ? ಹಾಗೂ ಈ ಅಸ್ತ್ರವನ್ನು ಯಾವ ರೀತಿ ಪ್ರಯೋಗ ಮಾಡಲಿದ್ದಾರೆ ಎನ್ನುವುದರ ಮೇಲೆ ರಾಜ್ಯ ರಾಜಕೀಯದ ಸ್ಥಿತ್ಯಂತರಗಳು ಅಡಗಿವೆ.
ಈಗಾಗಲೇ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದರೂ, ಸಕ್ರಿಯ ರಾಜಕಾರಣದಲ್ಲಿರುವ ಸಂದೇಶ ನೀಡಿದ್ದಾರೆ. ಹೀಗಿರುವಾಗ, ತಮ್ಮ ಬಳಿಯಿರುವ ವೋಟ್ಬ್ಯಾಂಕ್ ಅನ್ನು ಕಾಂಗ್ರೆಸ್ಗೆ ವರ್ಗಾಯಿಸುವರೋ ಅಥವಾ ತಟಸ್ಥರಾಗುವ ಮೂಲಕ ‘ಭದ್ರ’ವಾಗಿರುವ ಮತಬ್ಯಾಂಕ್ ಅನ್ನು ಹರಿದುಹಂಚಿ ಹೋಗುವಂತೆ ಮಾಡುವರೋ ಎನ್ನುವುದರ ಮೇಲೆ ಮುಂದಿನ ಚುನಾವಣಾ ಲೆಕ್ಕಾಚಾರಗಳಿವೆ. ಈ ಎಲ್ಲ ಗೊಂದಲ-ಗೋಜಲುಗಳ ನಡುವೆಯೇ ಬಿಜೆಪಿ-ಜೆಡಿಎಸ್ ವಿಧಾನಪರಿಷತ್ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕು ಕ್ಲೀನ್ಸ್ವೀಪ್ ಮಾಡಿದೆ. ಅದರಲ್ಲಿಯೂ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಪಕ್ಷದ ಎಲ್ಲೆಗಳನ್ನು ಮೀರಿ ಐದು ಬಾರಿ ಗೆಲುವು ಸಾಧಿಸಿದ್ದ ಪುಟ್ಟಣ್ಣ, ಆಡಳಿತ ಪಕ್ಷದಿಂದಲೇ ಸ್ಪರ್ಧಿಸಿದ್ದರೂ ಸೋಲಿನ ರುಚಿ ಕಂಡಿರುವುದು ಹತ್ತಾರು ವಿಶ್ಲೇಷಣೆಗಳಿಗೆ ಕಾರಣವಾಗಿದೆ.
ಪರಿಷತ್ನಲ್ಲಿ ಕಾಂಗ್ರೆಸ್ಗೆ ಆಗಿರುವ ತೀವ್ರ ಹಿನ್ನಡೆ ಅಂಕಿ-ಅಂಶದ ಲೆಕ್ಕಾಚಾರದಲ್ಲಿ ಬಹುದೊಡ್ಡ ಸಮಸ್ಯೆಯಾಗದಿದ್ದರೂ, ಮುಂಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯ ರಾಜಕೀಯ ಲೆಕ್ಕಾ ಚಾರದಲ್ಲಿ ಹಿನ್ನಡೆಯೆಂದೇ ವಿಶ್ಲೇಷಿಸಲಾಗುತ್ತಿದೆ. ಆದರೆ ಈ ಹಿನ್ನಡೆಯನ್ನು ಬಿಜೆಪಿ ಯಾವ ರೀತಿ ಬಳಸಿಕೊಳ್ಳಲಿದೆ? ಪರಿಷತ್ ಚುನಾವಣೆಯ ರೀತಿಯಲ್ಲಿಯೇ ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿಯೂ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವರ್ಕ್ಔಟ್ ಆಗುವುದೇ ಎನ್ನುವುದೇ ಈಗಿರುವ ಬಹುದೊಡ್ಡ ಪ್ರಶ್ನೆ. ಅದಕ್ಕೆ ಉತ್ತರ ಚುನಾವಣಾ ಫಲಿತಾಂಶಗಳೇ ನೀಡಬೇಕಿದೆ!