ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಶ್ವಯಾನದಲ್ಲಿ ದಾಖಲೆ ಬರೆದ ಪುಟ್ಟ ಹಕ್ಕಿ

ಗಿಡುಗ ಜಾತಿಯ ಅಮೂರ್ ಫಾಲ್ಕನ್ ಮತ್ತೊಮ್ಮೆ ತನ್ನ ಅಪ್ರತಿಮ ಹಾರಾಟ ಸಾಮರ್ಥ್ಯ ದಿಂದ ವಿಜ್ಞಾನಿಗಳನ್ನು ಬೆರಗು ಗೊಳಿಸಿದೆ. ಮಣಿಪುರದಿಂದ ರೇಡಿಯೋ ಟ್ಯಾಗ್ ಮಾಡಲ್ಪಟ್ಟ ಅಪಾಪಂಗ್ ಎಂಬ ಗಂಡು ಪಕ್ಷಿಯು ಸೊಮಾಲಿಯಾದಿಂದ ಮಧ್ಯ ಭಾರತದವರೆಗೆ 95 ಗಂಟೆಗಳಲ್ಲಿ 4750 ಕಿಲೋ ಮೀಟರ್ ದೂರವನ್ನು ಎಲ್ಲಿಯೂ ನಿಲ್ಲದೆ ಕ್ರಮಿಸಿ ಹೊಸ ದಾಖಲೆ ಬರೆದಿದೆ.

95 ಗಂಟೆಗಳಲ್ಲಿ 4750 ಕಿ.ಮೀ ನಿರಂತರ ಹಾರಾಟ ನಡೆಸಿದ ಅಪಾಪಂಗ್

ಡೆಹ್ರಾಡೂನ್: ವಿಶ್ವದ ಅತಿ ಉದ್ದದ ವಲಸೆ ಹಕ್ಕಿಗಳಲ್ಲಿ ಒಂದಾದ ಗಿಡುಗ ಜಾತಿಯ ಅಮೂರ್ ಫಾಲ್ಕನ್ ಮತ್ತೊಮ್ಮೆ ತನ್ನ ಅಪ್ರತಿಮ ಹಾರಾಟ ಸಾಮರ್ಥ್ಯ ದಿಂದ ವಿಜ್ಞಾನಿಗಳನ್ನು ಬೆರಗು ಗೊಳಿಸಿದೆ. ಮಣಿಪುರದಿಂದ ರೇಡಿಯೋ ಟ್ಯಾಗ್ ಮಾಡಲ್ಪಟ್ಟ ಅಪಾಪಂಗ್ ಎಂಬ ಗಂಡು ಪಕ್ಷಿಯು ಸೊಮಾಲಿಯಾದಿಂದ ಮಧ್ಯ ಭಾರತದವರೆಗೆ 95 ಗಂಟೆಗಳಲ್ಲಿ 4750 ಕಿಲೋ ಮೀಟರ್ ದೂರವನ್ನು ಎಲ್ಲಿಯೂ ನಿಲ್ಲದೆ ಕ್ರಮಿಸಿ ಹೊಸ ದಾಖಲೆ ಬರೆದಿದೆ.

ಅರಬ್ಬಿ ಸಮುದ್ರದ ಮೇಲೆ ಪಯಣ: ಸೊಮಾಲಿಯಾದಿಂದ ಹೊರಟ ಈ ಪಕ್ಷಿ, ವಿಶಾಲವಾದ ಅರಬ್ಬಿ ಸಮುದ್ರದ ಮೇಲೆ ಯಾವುದೇ ಅಡೆತಡೆಯಿಲ್ಲದೆ ಹಾರುತ್ತಾ ಸೋಮವಾರ ರಾತ್ರಿ ವಾರಾಣಸಿಯಿಂದ 120 ಕಿ.ಮೀ ದೂರದಲ್ಲಿರುವ ಸೋನ್ ನದಿಯ ದಡಕ್ಕೆ ಬಂದು ತಲುಪಿದೆ ಎಂದು ಡೆಹ್ರಾಡೂನ್ʼನ ವನ್ಯಜೀವಿ ಸಂಸ್ಥೆಯ ವಿeನಿ ಡಾ.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಅಪಾಪಂಗ್ ಸೋಮವಾರ ರಾತ್ರಿ 9.30ಕ್ಕೆ ತನ್ನ ನಿರಂತರ ಹಾರಾಟವನ್ನು ಕೊನೆಗೊಳಿಸಿತು. ಕೇವಲ ಒಂದು ಗಂಟೆಯ ವಿಶ್ರಾಂತಿಯ ನಂತರ ಮತ್ತೆ 200 ಕಿ.ಮೀ ಕ್ರಮಿಸಿ ಬಿಹಾರದ ಗಯಾ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ತಂಗಿದೆ. ಕಳೆದ ನವೆಂಬರ್‌ನಲ್ಲಿ ಇದೇ ಪಕ್ಷಿ ಭಾರತದಿಂದ ಕೀನ್ಯಾಕ್ಕೆ 6100 ಕಿ.ಮೀ ನಿರಂತರ ಹಾರಾಟ ನಡೆಸಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: National Bird Day: ಆಕಾಶದ ಅತಿಥಿಗಳ ರಕ್ಷಿಸೋಣ

ನವೆಂಬರ್ 11, 2025ರಂದು ಮಣಿಪುರದ ತಮೆಂಗ್ಲಾಂಗ್ ಜಿಲ್ಲೆಯ ಚಿಯುಲುನ್ ಗ್ರಾಮದಲ್ಲಿ ಅಪಪಾಂಗ್ ಎಂಬ ಗಂಡು ಹಕ್ಕಿ ಮತ್ತು ಅಹು ಮತ್ತು ಅಲಾಂಗ್ ಎಂಬ ಎರಡು ಹೆಣ್ಣು ಹಕ್ಕಿ ಸೇರಿ ಒಟ್ಟು ಮೂರು ಅಮೂರ್ ಫಾಲ್ಕನ್‌ಗಳಿಗೆ ಸ್ಯಾಟಲೈಟ್ ಟ್ರಾನ್ಸ್‌ಮೀಟರ್ ಅಳವಡಿಸಲಾಗಿತ್ತು. ಅಪಾಪಂಗ್ ಜತೆಗೆ ಟ್ಯಾಗ್ ಮಾಡಲ್ಪಟ್ಟಿದ್ದ ‘ಅಹು’ ಮತ್ತು ಅಲಾಂಗ್’ ಎಂಬ ಇತರ ಎರಡು ಹೆಣ್ಣು ಪಕ್ಷಿಗಳು ಸದ್ಯಕ್ಕೆ ಸೋಮಾಲಿಯಾದ ಇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಮೂರ್ ಫಾಲ್ಕನ್‌ಗೆ ಕಟ್ಟುನಿಟ್ಟಿನ ರಕ್ಷಣೆ: ಪಾರಿವಾಳದ ಗಾತ್ರದ ಈ ಪುಟ್ಟ ಹಕ್ಕಿಗಳು ಆಗ್ನೇಯ ರಷ್ಯಾ ಮತ್ತು ಈಶಾನ್ಯ ಚೀನಾದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ವರ್ಷಕ್ಕೆ ಒಟ್ಟು 20000 ಕಿ.ಮೀ ಪ್ರಯಾಣ ಬೆಳೆಸುವ ಇವು, ಅಕ್ಟೋಬರ್‌ನಲ್ಲಿ ಮಣಿಪುರ ಮತ್ತು ನಾಗಾಲ್ಯಾಂಡ್‌ಗೆ ಆಗಮಿಸುತ್ತವೆ. ಇಲ್ಲಿ ದಷ್ಟಪುಷ್ಟವಾಗಿ ಬೆಳೆದ ನಂತರ ಆಫ್ರಿಕಾದತ್ತ ಸಾಗುತ್ತವೆ. ಸ್ಥಳೀಯವಾಗಿ ಇವುಗಳನ್ನು ‘ಅಖುವೈಪುಯಿನಾ’ ಎಂದು ಕರೆಯಲಾಗುತ್ತದೆ. ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಇವುಗಳಿಗೆ ಕಟ್ಟುನಿಟ್ಟಿನ ರಕ್ಷಣೆ ನೀಡಲಾಗಿದೆ.

ಕಾರವಾರದ ಸುತ್ತ್ತಲೂ ಆವಾಸ

100ರಿಂದ 150 ಗ್ರಾಂ ತೂಕದ ಪುಟ್ಟ ಹಕ್ಕಿ ಅಮೂರ್ ಫಾಲ್ಕನ್. ಆದರೆ, ಇದಕ್ಕಿರುವ ಹಾರುವ ಸಾಮರ್ಥ್ಯ ಅದ್ಭುತ. ಗಿಡುಗನ ಜಾತಿಗೆ ಸೇರಿದ ಈ ಬೇಟೆಗಾರ ಪಕ್ಷಿಗಳು ಭಾರತದ ಪೂರ್ವ ಭಾಗ ದಲ್ಲಿರುವ ಮಂಗೋ ಲಿಯಾ, ಚೀನಾ ಮತ್ತು ರಷ್ಯಾ ದೇಶದ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಅಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ಮಹಾ ವಲಸೆಗೆ ತಂಡದ ಸಮೇತ ಸಿದ್ಧವಾಗುತ್ತದೆ. ಆಫ್ರಿಕಾ ಖಂಡದ ವಿವಿಧ ದೇಶಗಳಿಗೆ ಹಾರಿ ಹೋಗಿ ಒಂದಷ್ಟು ದಿನ ಕಳೆದು, ಚಳಿಗಾಲ ಮುಗಿದ ಬಳಿಕ ಪುನಃ ತಮ್ಮ ವಾಸ ಸ್ಥಳಗಳಿಗೆ ಮರಳುತ್ತವೆ. ಹಾಗೆ ಅವು ಸಾಗುತ್ತ ಭಾರತದ ಮೂಲಕ ಹಾದುಹೋಗುತ್ತವೆ. ನಾಗಾಲ್ಯಾಂಡ್‌ನಲ್ಲಿ ಒಂದಷ್ಟು ದಿನ ವಿಶ್ರಾಂತಿ ಪಡೆದು ದಕ್ಷಿಣದತ್ತ ಪ್ರಯಾಣಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಕಾರವಾರದ ಸುತ್ತಮುತ್ತ ಕೂಡ ಕಾಣಿಸಿ ಕೊಳ್ಳುವುದನ್ನು ಪಕ್ಷಿ ವೀಕ್ಷಕರು ಗುರುತಿಸಿದ್ದಾರೆ.

*

ಸೋಮಾಲಿಯಾದಿಂದ ಭಾರತಕ್ಕೆ ಕೇವಲ ನಾಲ್ಕು ದಿನಗಳಲ್ಲಿ ಆಗಮಿಸಿದ ಅಮೂರ್ ಫಾಲ್ಕನ್

ಪಕ್ಷಿ ಪ್ರಪಂಚದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಕೇವಲ 150 ಗ್ರಾಂ ತೂಕದ ಪುಟ್ಟ ಹಕ್ಕಿ