ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭವ್ಯ ನಿಲುವಿನ ಪಟೇಲರು

ಭವ್ಯ ನಿಲುವಿನ ಪಟೇಲರು

image-cae994b0-5ce1-4c31-a1fb-452c0f6392af.jpg
image-4f0dfa9e-4fc0-4a9f-8f1e-2ce1839573b5.jpg
ಪಟೇಲರ ಜನ್ಮ ದಿನ ಅಕ್ಟೋಬರ್ ೩೧. ಅವರ ಪ್ರತಿಮೆ ನೋಡಿದ ನೆನಪು ಮಧುರ. ನಿವೇದಿತಾ.ಎಚ್. ಗುಜರಾತ್ ಪ್ರವಾಸ ಕೈಗೊಂಡಾಗ ನಾವು ನೋಡಲೇಬೇಕೆಂದು ನಿರ್ಧಸಿದ್ದ ಸ್ಥಳಗಳಲ್ಲಿ ವಿಶ್ವದಲ್ಲಿಯೇ ಅತಿ ಎತ್ತರವಾದ ಸರ್ದಾರ್ ವಲ್ಲಭ ಭಾಯಿ ಪಟೇಲರ ‘ಏಕತಾ ಪ್ರತಿಮೆ’ ಮೊದಲ ಸ್ಥಾನದಲ್ಲಿತ್ತು. ಏಕೆಂದರೆ, ಅಮೆರಿಕದ ಸ್ವಾತಂತ್ರ್ಯದೇವಿಯ ಪ್ರತಿಮೆಗಿಂತಾ ಎತ್ತರದ ಪ್ರತಿಮೆ ಇದು! ದಾಖಲೆಯ ಸಮಯದಲ್ಲಿ ನಿರ್ಮಾಣ ಗೊಂಡು ಉದ್ಘಾಟನೆ ಗೊಂಡಿದೆ, ಸರ್ದಾರರ ಈ ಬೃಹತ್ ಪ್ರತಿಮೆ. ಅಮೆರಿಕದ ಪ್ರತಿಮೆಯನ್ನು ನಿರ್ಮಾಣ ಮಾಡಲು ೯ ವರ್ಷಗಳು ಹಿಡಿದರೆ, ಸರ್ದಾರರ ಬೃಹತ್ ಪ್ರತಿಮೆಯ ನಿರ್ಮಾಣ ೫ ವರ್ಷಗಳಲ್ಲಿಯೇ ಆಗಿಹೋಯಿತು. ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾಗಿ ಇಂದು ನಮ್ಮ ಕಣ್ಣ ಮುಂದಿದೆ. ನಾವು ಗುಜರಾತ್‌ನ ವಡೋದರಾ ತಲುಪಿ ಅಲ್ಲಿಂದ ‘ಏಕತಾ ಪ್ರತಿಮೆ’ಯನ್ನು ನೋಡಲು ಕೇವಡಿಯಾ ಗ್ರಾಮ ದೆಡೆಗೆ ಹೊರಟೆವು. ಈಗ ಅದನ್ನು ಏಕತಾ ನಗರವೆಂದೇ ಕರೆಯಲಾಗುತ್ತಿದೆ. ವಡೋದರ ಅಥವಾ ಬರೋಡಾ ದಿಂದ ೯೦ ಕಿಲೋಮೀಟರ್ ದೂರದಲ್ಲಿರುವ ಏಕತಾ ನಗರಕ್ಕೆ ತಲುಪಲು ಉತ್ತಮ ರಸ್ತೆಯಿದೆ. ಪ್ರತಿಮೆ ಇನ್ನೂ ೪-೫ ಕಿ.ಮೀ ದೂರವಿರುವಾಗಲೇ ಗೋಚರಿಸಲು ಆರಂಭವಾಗುತ್ತದೆ. ಏಕತಾ ನಗರ ತಲುಪಿ, ಕಾರ್ ಪಾರ್ಕ್ ಮಾಡಿ ಹೊರಟೆವು. ಆನ್ ಲೈನ್‌ನಲ್ಲಿಯೇ ಟಿಕೇಟುಗಳನ್ನು ಕಾದಿರಿಸಿದ್ದರಿಂದ ಸೀದಾ ಮುಖ್ಯದ್ವಾರದಿಂದ ಒಳ ಪ್ರವೇಶಿಸಿದೆವು. ಪ್ರತಿಮೆಯ ಬಳಿ ತಲುಪಲು, ಸುಮಾರು ಅರ್ಧ ಕಿ.ಮೀ ನಡೆಯಬೇಕು. ಆದರೆ ನಡೆಯುವ ಶ್ರಮ ಗೊತ್ತೇ ಆಗದಂತೆ ದಾರಿಯಲ್ಲಿ ಬಿಸಿಲಿಗೆ ತಡೆ ಯಾಗಿ ಛಾವಣಿಗಳನ್ನು ನಿರ್ಮಿಸಿದ್ದಾರೆ. ನಡೆಯಲಾಗದವರಿಗೆ ಟ್ರಾವೆಲೇಟರ್ ಇದೆ. ವಸ್ತು ಸಂಗ್ರಹಾಲಯ ಪ್ರತಿಮೆಯ ಬಳಿ ಹೋಗುವ ಮೊದಲು, ನೆಲಮಹಡಿಯಲ್ಲಿ ನಿರ್ಮಿಸಲಾಗಿರುವ ಮ್ಯೂಸಿಯಮ್ ಅಥವಾ ವಸ್ತು ಸಂಗ್ರಹಾಲಯು ನೋಡಲೇ ಬೇಕಾದ ಸ್ಥಳ. ಇಲ್ಲಿ ಪ್ರತಿಮೆಯ ನಿರ್ಮಾಣದ ವಿವಿಧ ಹಂತಗಳು, ಬಳಸಲಾಗಿರುವ ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಜತೆಗೆ ಸರ್ದಾರರ ಜೀವನ ಚರಿತ್ರೆಯನ್ನು ತಿಳಿಸಿಕೊಡುವ ವಿವಿಧ ಪ್ರಾತ್ಯಕ್ಷಿಕೆಗಳಿವೆ. ಪ್ರತಿಮೆಯನ್ನು ನಿರ್ಮಿಸಿರುವ ಶಿಲ್ಪಿ ಪದ್ಮವಿಭೂಷಣ ಪುರಸ್ಕೃತ ರಾಮ್ ವಂಜಿ ಸುತಾರ್ ಅವರ ಕೌಶಲ ಅಪೂರ್ವ. ೫೮ ಮೀಟರ್ ತಳಪಾಯದ ಮೇಲೆ ನಿಂತಿರುವ ೧೮೨ ಮೀಟರ್ ಸರ್ದಾರರ ಪ್ರತಿಮೆ ನಿಜಕ್ಕೂ ಭವ್ಯವಾಗಿದೆ. ಸರ್ದಾರರು ಅಖಂಡ ಭಾರತದ ಕನಸು ಕಂಡವರು. ಅದಕ್ಕಾಗಿ ಶ್ರಮಿಸಿದವರು. ಈ ಅದ್ಭುತ ಪ್ರತಿಮೆ ಅವರು ನೀಡಿದ ಕೊಡುಗೆಗಳಿಗೆ ಒಂದು ಸಣ್ಣ ಕೃತಜ್ಞತೆಯಂತುದೆ. ಈ ಲೋಹದ ಪ್ರತಿಮೆಯನ್ನು ಒಳಗಿ ನಿಂದ ಟೊಳ್ಳಾಗಿ ನಿರ್ಮಿಸಲಾಗಿದ್ದು, ಲಿಫ್ಟ್ ಮೂಲಕ ಪ್ರತಿಮೆಯ ಎದೆಯ ವರೆಗೂ ಹೋಗಿ, ಅಲ್ಲಿಂದ ಸರ್ದಾರ್ ಸರೋವರ್ ಡ್ಯಾಮ್ ಮತ್ತು ವಿಂಧ್ಯಾಚಲ ಬೆಟ್ಟಗಳ ರಮಣೀಯ ನೋಟಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದು ಅವರ ಹೃದಯದಲ್ಲಿ ಭಾರತ ಮತ್ತು ಭಾರತೀಯರು ಮಾತ್ರ ಇದ್ದದ್ದು ಎಂಬುದಕ್ಕೆ ರೂಪಕದಂತಿದೆ. ಸ್ವಚ್ಛವಾಗಿ ನೋಡಿಕೊಳ್ಳಲಾಗಿರುವ ಪರಿಸರದಲ್ಲಿ ಇರುವ ಏಕತಾ ಪ್ರತಿಮೆ ನಮ್ಮ ದೇಶದ ಹೆಮ್ಮೆಗಳಲ್ಲಿ ಒಂದು, ಇದೊಂದು ಆಧುನಿಕ ಕಾಲದ ವಿಸ್ಮಯ. ಇದೀಗ ಏಕತಾ ಪ್ರತಿಮೆಯು ನಮ್ಮ ದೇಶದ ಪ್ರಮುಖ ಪ್ರವಾಸಿ ತಾಣವೂ ಆಗಿ ರೂಪುಗೊಂಡಿದೆ. ಅಕ್ಟೋಬರ್ ೩೧ ಸರ್ದಾರ್ ವಲ್ಲಭ ಭಾಯಿ ಪಟೇಲರ ಜನ್ಮದಿನ. ಆ ದಿನವನ್ನು ಏಕತಾ ದಿವಸ ಎಂದು ಈಗ ಆಚರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ಭೇಟಿ ನೀಡಿದ ಈ ಅವಿಸ್ಮರಣೀಯ ಸ್ಥಳ ಮತ್ತೆ ನೆನಪಿಗೆ ಬಂತು.