Bengaluru Rains: ರಾಜಧಾನಿಯ ವಿವಿಧೆಡೆ ಗುಡುಗು ಸಹಿತ ಮಳೆ ಆರ್ಭಟ; ಬೆಂಗಳೂರು–ಹೊಸೂರು ಹೆದ್ದಾರಿ ಜಲಾವೃತವಾಗಿ ವಾಹನ ಸವಾರರ ಪರದಾಟ
ಮುಂದಿನ ಮೂರು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಮುಂದಿನ 48 ಗಂಟೆಗಳವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
-
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸಂಜೆ ವರುಣ (Bengaluru Rains) ಅಬ್ಬರಿಸಿದ್ದು, ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರು-ಹೊಸೂರು ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ತುಂಬಿದ್ದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ನಗರದಲ್ಲಿ ಏಕಾಏಕಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜಾಜಿನಗರ, ಮಲ್ಲೇಶ್ವರ, ಮೆಜೆಸ್ಟಿಕ್, ಲಾಲ್ ಬಾಗ್, ಬೈಯಪ್ಪನಹಳ್ಳಿ, ಎಂಜಿ ರಸ್ತೆ, ಹೆಬ್ಬಾಳ, ಕೋರಮಂಗಲ, ವೈಟ್ಫಿಲ್ಡ್, ದೊಮ್ಮಲೂರು, ಜಯನಗರ, ಕಾರ್ಪೋರೇಷನ್ ವೃತ್ತ, ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ ಸೇರಿ ಅನೇಕ ಕಡೆಗಳಲ್ಲಿ ಜೋರು ಮಳೆ ಆಗಿದೆ.
ಇನ್ನು ಬೆಂಗಳೂರು-ಹೊಸೂರು ಹೆದ್ದಾರಿಯ ಚಂದಾಪುರ ಸಮೀಪದ ಕಿತ್ತಾಗನಹಳ್ಳಿ ಕ್ರಾಸ್ನಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆಯಾಯಿತು. ವಾಹನಗಳು ನೀರಿನಲ್ಲೇ ಸಂಚರಿಸುವಂತಾಗಿದ್ದು, ಕೆಲವೆಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಕಾರಣ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಂದಿನ 3 ದಿನ ರಾಜ್ಯದಲ್ಲಿ ಗುಡುಗು ಸಹಿತ ಮಳೆ; ಯೆಲ್ಲೋ ಅಲರ್ಟ್
ಮುಂದಿನ ಮೂರು ದಿನ ರಾಜ್ಯದಲ್ಲಿ ರಾಜ್ಯದ ಬಹುತೇಕ ಕಡೆ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಮುಂದಿನ 48 ಗಂಟೆಗಳವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ಸುಮಾರು 30°C ಮತ್ತು 20°C ಇರುವ ಸಾಧ್ಯತೆಯಿದೆ.