Alamatti News: ಹಿಂಗಾರು ಬೆಳೆಗೆ ಅಗತ್ಯವಿರುವ 80 ಟಿಎಂಸಿ ನೀರು ಲಭ್ಯವಿಲ್ಲ; ರೈತರು ಸಹಕರಿಸಲು ಮನವಿ
2026–27ನೇ ಸಾಲಿನ ಮುಂಗಾರು ಹಂಗಾಮು ಆರಂಭವಾಗಿ, ಜುಲೈ 6ರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗಿತ್ತು. ಸೆಪ್ಟೆಂಬರ್ 16ರಂದು ಒಳಹರಿವು ಸ್ಥಗಿತಗೊಂಡಿದೆ. ಅಕ್ಟೋಬರ್ 15ರ ವೇಳೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 85.61 ಟಿಎಂಸಿ ಜೀವಜಲ ಸಂಗ್ರಹವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
-
ಆಲಮಟ್ಟಿ : 2026–27ನೇ ಸಾಲಿನ ಹಿಂಗಾರು ಹಂಗಾಮಿಗೆ ನೀರಾವರಿ ಕಲ್ಪಿಸಲು ಅಗತ್ಯವಿರುವ 80 ಟಿಎಂಸಿ ನೀರು ಲಭ್ಯವಿಲ್ಲದ ಕಾರಣ, ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆ ಜಾಲಕ್ಕೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆ ಸರ್ವಾನುಮತದಿಂದ ನಿರ್ಧರಿಸಿದೆ.
ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ವಿಜಯಾನಂದ ಎಸ್. ಕಾಶಪ್ಪನವರ ಅಧ್ಯಕ್ಷತೆಯಲ್ಲಿ ಅ.15ರಂದು ಬೆಂಗಳೂರಿನ ವಿಕಾಸಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 318ರಲ್ಲಿ ಸಭೆ ನಡೆಯಿತು.
ಇದನ್ನೂ ಓದಿ: Alamatti: ಕಡಿಮೆಯಾಗುತ್ತಿರುವ ಆಲಮಟ್ಟಿ ಜಲಾಶಯ ಮಟ್ಟ; ಶೂನ್ಯಕ್ಕಿಳಿದ ಒಳಹರಿವು; ಬಾಗಿನಕ್ಕೆ ಹೆಚ್ಚಿದ ಒತ್ತಡ
2026–27ನೇ ಸಾಲಿನ ಮುಂಗಾರು ಹಂಗಾಮು ಆರಂಭವಾಗಿ, ಜುಲೈ 6ರಿಂದ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಪ್ರಾರಂಭವಾಗಿತ್ತು. ಸೆಪ್ಟೆಂಬರ್ 16ರಂದು ಒಳಹರಿವು ಸ್ಥಗಿತಗೊಂಡಿದೆ. ಅಕ್ಟೋಬರ್ 15ರ ವೇಳೆಗೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 85.61 ಟಿಎಂಸಿ ಜೀವಜಲ ಸಂಗ್ರಹವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ನೀರು ಹರಿಸುವ ವೇಳಾಪಟ್ಟಿ
ಅ.8ರಿಂದ 21ರವರೆಗೆ ಕಾಲುವೆಗಳಲ್ಲಿ ನೀರು ಹರಿಸಲಾಗುತ್ತಿದೆ. ನಂತರ ಅ.22ರಿಂದ 25ರವರೆಗೆ ನಾಲ್ಕು ದಿನಗಳ ಕಾಲ ನೀರು ಹರಿಸುವುದನ್ನು ಮುಂದುವರಿಸಲಾಗುತ್ತದೆ.
ಅ.26ರಿಂದ ನವೆಂಬರ್ 2ರವರೆಗೆ ಎಂಟು ದಿನಗಳ ಕಾಲ ಕಾಲುವೆ ಜಾಲದಲ್ಲಿ ನೀರು ಹರಿಸುವುದನ್ನು ವಾರಾ ಬಂದಿ ಪದ್ಧತಿ ಅನುಸರಿಸಲಾಗುತ್ತದೆ.
ಬಳಿಕ ನವೆಂಬರ್ 3ರಿಂದ 12ರವರೆಗೆ ಮಾತ್ರ ಹತ್ತು ದಿನಗಳ ಕಾಲ ಮತ್ತೆ ನೀರು ಹರಿಸಲಾಗುತ್ತದೆ ಎಂದು ಕುಡಿಯುವ ನೀರಿಗೆ ಮೊದಲ ಆದ್ಯತೆ, ಮುಂಗಾರು ಹಂಗಾಮಿಗೆ ಅಗತ್ಯವಿರುವ ನೀರನ್ನು ಹೊರತುಪಡಿಸಿ ಲಭ್ಯವಿರುವ ನೀರನ್ನು ಡಿಸೆಂಬರ್ 1, 2026ರಿಂದ ಜೂನ್ 30, 2027ರವರೆಗೆ ಕುಡಿಯುವ ನೀರಿನ ಯೋಜನೆಗಳಿಗೆ, ಕೆರೆಗಳನ್ನು ತುಂಬಿಸಲು, ಕಾಲುವೆಗಳ ಮೂಲಕ ಕುಡಿಯುವ ನೀರು ಪೂರೈಸಲು, ಆವಿಯಾಗುವಿಕೆ, ಉಷ್ಣ ವಿದ್ಯುತ್ ಸ್ಥಾವರಗಳು, ಕೈಗಾರಿಕೆಗಳು, ಬ್ಯಾರೇಜ್ ಗಳಲ್ಲಿ ನೀರಿನ ಸಂಗ್ರಹ ಹಾಗೂ ರೈತರ ಹಿಂಗಾರು ಬೆಳೆಗಳ ಬಳಕೆಯಂತಹ ಅಗತ್ಯಗಳಿಗೆ ಕಾಯ್ದಿರಿಸಲಾಗಿದೆ.
ಮಳೆಯ ಕೊರತೆ ಮತ್ತು ಒಳಹರಿವು ಸ್ಥಗಿತಗೊಂಡಿರುವುದರಿಂದ ವಾತಾವರಣದಲ್ಲಿ ಉಷ್ಣತೆ ಹೆಚ್ಚುತ್ತಿದೆ. ಇದರಿಂದ ಲಭ್ಯವಿರುವ ನೀರು ಆವಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಹಿಂಗಾರು ಹಂಗಾಮಿನ ನೀರಾವರಿಗೆ ಅಗತ್ಯವಿರುವ 80 ಟಿಎಂಸಿ ನೀರು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ನೀರು ಪೂರೈಸಲು ಸಾಧ್ಯವಿಲ್ಲ ಎಂಬ ನಿರ್ಧಾರ ಕೈಗೊಳ್ಳಲಾಗಿದೆ.
ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಕ್ರಮ
ಮುಂಗಾರು ಹಂಗಾಮಿನ ಉಳಿದ ಅವಧಿಯಲ್ಲಿ ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ತಲುಪಿಸುವುದು ಹಾಗೂ ರೈತರು ಅನಧಿಕೃತ ಪಂಪ್ಸೆಟ್ಗಳನ್ನು ಅಳವಡಿಸಿ ನೀರೆತ್ತುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಲಾಗಿದೆ.
ಇದಕ್ಕಾಗಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಪಾಲಕ ಅಭಿಯಂತರರು ಹಾಗೂ ಜೆಸ್ಕಾಂ/ಹೆಸ್ಕಾಂ ಕಾರ್ಯಪಾಲಕ ಅಭಿಯಂತರರನ್ನು ಒಳಗೊಂಡ ಸಮಿತಿ ರಚಿಸಿ, ಅಗತ್ಯವಿದ್ದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸಂಬಂಧಿತ ಸೆಕ್ಷನ್ 144ರ ಅಡಿಯಲ್ಲಿ ಕ್ರಮ ಕೈಗೊಂಡು ಕಾಲುವೆಗಳ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಸೂಚಿಸಲಾಗಿದೆ.
ನೀರಿನ ಅಭಾವದ ಈ ಸಂಕಷ್ಟದ ಸಂದರ್ಭದಲ್ಲಿ ರೈತರು ಅನಗತ್ಯವಾಗಿ ನೀರು ಪೋಲು ಮಾಡದೆ ಮಿತವಾಗಿ ಬಳಸಬೇಕು ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ಪ್ರಕಟಣೆ ಮನವಿ ಮಾಡಿದೆ.
“ಜೀವಜಲ ಅತೀ ಅಮೂಲ್ಯ, ಪೋಲು ಮಾಡಬೇಡಿ; ಜಾಗೃತಿಯಿಂದ ಬಳಕೆ ಮಾಡಿ” ಎಂಬ ಘೋಷಣೆಯೊಂದಿಗೆ ಎಲ್ಲ ರೈತ ಬಾಂಧವರು ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಶಾಸಕರುಗಳಿಂದ ಸಭೆಯಲ್ಲಿ ಜಟಾಪಟಿ
ನಾರಾಯಣಪುರ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆದು ನಿಂತಿದ್ದು ಕಾಲುವೆಯ ಕೊನೆಯ ಅಂಚಿನವರೆಗೆ ಇದುವರೆಗೆ ಸರಿಯಾಗಿ ನೀರು ಹರಿದಿಲ್ಲ ಆದ್ದರಿಂದ ವಾರ ಬಂದಿ ನಿಗದಿ ಮಾಡದೆ ನವೆಂಬರ್ 10 ವರೆಗೆ ಸತತ ಕಾಲುವೆಯಲ್ಲಿ ನೀರು ಹರಿಸುವಂತೆ ಸಭೆಯಲ್ಲಿ ಮಾತಿನ ಜಟಾಪಟಿ ನಡೆದ ಪ್ರಸಂಗ ಜರುಗಿತು ಆದರೆ ಸಭೆ ಸತತ ನೀರು ಹರಿಸುವುದು ಅಸಾಧ್ಯವೆಂದು ಹೇಳಿ ಅಧಿಕಾರಿಗಳು ಕಲ್ಯಾಣ ಕರ್ನಾಟಕ ಭಾಗದ ಶಾಸಕರುಗಳಿಗೆ ಮನವರಿಕೆ ಮಾಡಿದರೆಂದು ತಿಳಿದು ಬಂದಿದೆ.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ,ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಮ್.ಬಿ.ಪಾಟೀಲ(M B Patil), ಅವಳಿ ಜಿಲ್ಲೆಗಳ ಶಾಸಕರುಗಳಾದ ಸಿ.ಎಸ್.ನಾಡಗೌಡ ಯಶವಂತರಾಯ ಪಾಟೀಲ ,ರಾಜುಗೌಡಾ ಅಶೋಕ ಮನಗೂಳಿ, ಉಮೇಶ ಮೇಟಿ,ಜೆ.ಟಿ.ಪಾಟೀಲ(C. S. Nadagouda, Yashwantray Patil, Rajugouda, Ashok Managuli, Umesh Meti, J. T. Patil), ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ಧೇಶಕ ಕೃಷ್ಣಮೂರ್ತಿ, ಕುಲಕರ್ಣಿ, ಆಲಮಟ್ಟಿ ವಲಯದ ಮುಖ್ಯ ಇಂಜಿನಿಯರ್ ಡಿ.ಬಸವರಾಜ್ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಅಭಿಮನ್ಯು, ಹಾಗೂ ಎಲ್ಲ ವಿಭಾಗಗಳ ಕಾರ್ಯಪಾಲಕ ಇಂಜಿನಿಯರುಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.