ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hurricane Melissa: ಜಮೈಕಾಗೆ ಅಪ್ಪಳಿಸಿದ ಮೆಲಿಸ್ಸಾ ಚಂಡಮಾರುತ; 7 ಸಾವು, ನಿರ್ಗತಿಕರಾದ ಸಾವಿರಾರು ಮಂದಿ

Hurricane Melissa hits Jamaica: ಜಮೈಕಾಗೆ ಅತ್ಯಂತ ಪ್ರಬಲ ಚಂಡಮಾರುತ ಮೆಲಿಸ್ಸಾ ಅಪ್ಪಳಿಸಿದ ನಂತರ ಇದೀಗ ಕ್ಯೂಬಾ ಚಂಡಮಾರುತ ಎದುರಿಸಲು ಸಜ್ಜಾಗಿದೆ. ಜಮೈಕಾದ ನೈಋತ್ಯ ಕರಾವಳಿಯಲ್ಲಿ ನ್ಯೂ ಹೋಪ್ ಬಳಿಯ ಭೀಕರ ಚಂಡಮಾರುತವಾಗಿ ಅಪ್ಪಳಿಸಿದ ಚಂಡಮಾರುತವು 185 mph (ಗಂಟೆಗೆ 295 ಕಿ.ಮೀ) ವೇಗದಲ್ಲಿ ಗಾಳಿ ಬೀಸಿತು.

ಜಮೈಕಾಗೆ ಅಪ್ಪಳಿಸಿದ ಮೆಲಿಸ್ಸಾ ಚಂಡಮಾರುತ; 7 ಸಾವು

-

Priyanka P Priyanka P Oct 29, 2025 11:38 AM

ಕಿಂಗ್ಸ್ಟನ್: ಕೆರಿಬಿಯನ್ ದ್ವೀಪ ರಾಷ್ಟ್ರ ಜಮೈಕಾಗೆ (Jamaica) ಅತ್ಯಂತ ಪ್ರಬಲ ಮೆಲಿಸ್ಸಾ ಚಂಡಮಾರುತ (Hurricane Melissa) ಅಪ್ಪಳಿಸಿದ ಪರಿಣಾಮ 7 ಮಂದಿ ಮೃತಪಟ್ಟಿದ್ದು, ಹಲವಾರು ಮನೆಗಳು ನಾಶವಾಗಿದೆ. ಜಮೈಕಾ ನಂತರ ಇದೀಗ ಕ್ಯೂಬಾ ಚಂಡಮಾರುತ ಎದುರಿಸಲು ಸಜ್ಜಾಗಿದೆ. ಮಂಗಳವಾರ ತಡರಾತ್ರಿ ಮೆಲಿಸ್ಸಾ ಚಂಡಮಾರುತವು ಕ್ಯೂಬಾದ (Cuba) ಎರಡನೇ ಅತಿದೊಡ್ಡ ನಗರವಾದ ಸ್ಯಾಂಟಿಯಾಗೊ ಡಿ ಕ್ಯೂಬಾ ಕಡೆಗೆ ಘರ್ಜಿಸಿದೆ .

ಜಮೈಕಾದ ನೈಋತ್ಯ ಕರಾವಳಿಯಲ್ಲಿ ನ್ಯೂ ಹೋಪ್ ಬಳಿಯ ಭೀಕರ ಚಂಡಮಾರುತವಾಗಿ ಅಪ್ಪಳಿಸಿದ ಚಂಡಮಾರುತವು 185 mph (ಗಂಟೆಗೆ 295 ಕಿ.ಮೀ) ವೇಗದಲ್ಲಿ ಗಾಳಿ ಬೀಸಿದೆ. ಪರಿಣಾಮ ಹಲವಾರು ಮರಗಳು ಧರೆಗುರುಳಿದವು. ಮನೆಗಳ ಛಾವಣಿಗಳು ಹಾರಿ ಹೋಗಿದ್ದು, ವಿಶಾಲವಾದ ಭೂಮಿಯಲ್ಲಿ ಪ್ರವಾಹ ಉಂಟು ಮಾಡಿದೆ.

ಸೇಂಟ್ ಎಲಿಜಬೆತ್ ಪ್ಯಾರಿಷ್ ನೀರಿನಡಿ ಮುಳುಗಿದ್ದು, ಆಸ್ಪತ್ರೆಗಳು ಹಾನಿಗೊಳಗಾದವು. ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ವಿದ್ಯುತ್ ಸಂಪರ್ಕವಿಲ್ಲದೆ ಕಷ್ಟಪಟ್ಟರು. ರಾತ್ರಿಯ ವೇಳೆ, ಮೆಲಿಸ್ಸಾ ಚಂಡಮಾರುತವು ಜಮೈಕಾದ ಪರ್ವತಗಳನ್ನು ದಾಟಿ ಈಶಾನ್ಯಕ್ಕೆ ಚಲಿಸುವಾಗ 145 mph ( ಗಂಟೆಗೆ 233 ಕಿ.ಮೀ) ವೇಗದಲ್ಲಿ ಚಲಿಸಿದೆ. ಹೀಗಾಗಿ ಚಂಡಮಾರುತವು ಮೊದಲಿಗಿಂತ ಸ್ವಲ್ಪ ದುರ್ಬಲಗೊಂಡಿತು. ಆದರೆ, ಭೂಕುಸಿತ ಉಂಟಾಗಿದೆ. ಅಪಾಯಕಾರಿ ಪರಿಸ್ಥಿತಿಗಳಿಂದಾಗಿ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ ಎಂದು ಉಪ ವಿಪತ್ತು ಮಂಡಳಿಯ ಅಧ್ಯಕ್ಷ ಡೆಸ್ಮಂಡ್ ಮೆಕೆಂಜಿ ಹೇಳಿದರು. ಚಂಡಮಾರುತದ ವಿಡಿಯೊ ಇಲ್ಲಿದೆ.

ವಿಡಿಯೊ ವೀಕ್ಷಿಸಿ:



ವರದಿಗಳ ಪ್ರಕಾರ, ಮೂರು ಕುಟುಂಬಗಳು ಪ್ರವಾಹದಲ್ಲಿ ಸಿಲುಕಿದ್ದು, ಸಿಬ್ಬಂದಿ ಇನ್ನೂ ಅವರನ್ನು ತಲುಪಲು ಸಾಧ್ಯವಾಗಲಿಲ್ಲ. ಮಾಧ್ಯಮಗಳ ವರದಿ ಪ್ರಕಾರ, ಚಂಡಮಾರುತದಕ್ಕೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಜಮೈಕಾದಲ್ಲಿ ಮೂರು, ಹೈಟಿಯಲ್ಲಿ ಮೂರು ಮತ್ತು ಡೊಮಿನಿಕನ್ ಗಣರಾಜ್ಯದಲ್ಲಿ ಒಂದು ಸಾವು ವರದಿಯಾಗಿದೆ. ಮಂಗಳವಾರ ತಡರಾತ್ರಿಯ ವೇಳೆಗೆ ಸುಮಾರು 15,000 ಜನರು ತಾತ್ಕಾಲಿಕ ಆಶ್ರಯದಲ್ಲಿದ್ದರು. ಆದರೂ ಆ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಜನರನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ.

ಇದನ್ನೂ ಓದಿ: Cyclone Montha: ಕರ್ನಾಟಕಕ್ಕೂ ಮೋಂತಾ ಚಂಡಮಾರುತ ಎಫೆಕ್ಟ್: ಎಲ್ಲಿ ಎಷ್ಟು ದಿನ ಮಳೆ?

ಶತಮಾನದ ಬಿರುಗಾಳಿ

ಸರ್ಕಾರವು 33 ಮಿಲಿಯನ್ ಯುಎಸ್ ಡಾಲರ್ ತುರ್ತು ಬಜೆಟ್ ಅನ್ನು ಮೀಸಲಿಟ್ಟಿದೆ ಮತ್ತು ಹಾನಿಗೆ ವಿಮೆ ಮತ್ತು ಸಾಲ ನಿಬಂಧನೆಗಳನ್ನು ಸಕ್ರಿಯಗೊಳಿಸಿದೆ ಎಂದು ಜಮೈಕಾದ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಹೇಳಿದರು. ನೈಸರ್ಗಿಕ ವಿಕೋಪವನ್ನು ನಿಭಾಯಿಸುವುದಕ್ಕಾಗಿ ದ್ವೀಪ ರಾಷ್ಟ್ರವು ಅಂತಾರಾಷ್ಟ್ರೀಯ ಸಹಾಯಕ್ಕಾಗಿ ಮನವಿ ಮಾಡಿದೆ.

ವಿಶ್ವ ಹವಾಮಾನ ಸಂಸ್ಥೆಯು ಮೆಲ್ಲಿಸ್ಸಾವನ್ನು ಜಮೈಕಾಗೆ ಶತಮಾನದ ಚಂಡಮಾರುತ ಎಂದು ಕರೆದಿದೆ. 2005 ರಲ್ಲಿ ವಿಲ್ಮಾ ಮತ್ತು 1988 ರಲ್ಲಿ ಗಿಲ್ಬರ್ಟ್ ನಂತರ, ಮೆಲಿಸ್ಸಾ ಕೆರಿಬಿಯನ್‌ನಲ್ಲಿ ದಾಖಲಾದ ಮೂರನೇ ಅತ್ಯಂತ ತೀವ್ರವಾದ ಚಂಡಮಾರುತವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ

ಚಂಡಮಾರುತವು ಮುಂದಕ್ಕೆ ಸಾಗುತ್ತಿದ್ದಂತೆ ಭಯಾನಕ ದೃಶ್ಯಗಳನ್ನು ಉಂಟುಮಾಡಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ವಿವರಿಸಿದರು. ಚಂಡಮಾರುತವು ಘರ್ಜಿಸುವ ಸಿಂಹದಂತಿತ್ತು ಎಂದು ಹೇಳಿದ್ದಾರೆ. ದ್ವೀಪ ರಾಷ್ಟ್ರವು ಕತ್ತಲೆಯಾಗುವ ಮೊದಲು ದೊಡ್ಡ ಸ್ಫೋಟ ಕೇಳಿಸಿದೆ. ಜನರು ಭೀತಿಗೊಂಡಿದ್ದಾರೆ ಎಂದು ಕಿಂಗ್‌ಸ್ಟನ್ ಬಳಿಯ ಪೋರ್ಟ್‌ಮೋರ್‌ನಲ್ಲಿ, ಮರ್ಸಿ ಕಾರ್ಪ್ಸ್ ಸಲಹೆಗಾರ ಕಾಲಿನ್ ಬೊಗ್ಲೆ ಹೇಳಿದರು.