Cylinder Blast: ಸಿಲಿಂಡರ್ ಸ್ಫೋಟ; ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
Cylinder Blast in Bengaluru: ಸಿಲಿಂಡರ್ ಸ್ಫೋಟದ ಸ್ಥಳದಲ್ಲಿ ಶುಕ್ರವಾರ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ಸ್ಫೋಟದಿಂದಾಗಿ ಬಾಲಕ ಮುಬಾರಕ್ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದಾರೆ.
-
Prabhakara R
Aug 15, 2025 4:29 PM
ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು. ಘಟನಾ ಸ್ಥಳಕ್ಕೆ ಸಿಎಂ ಆಗಮಿಸುತ್ತಿದ್ದಂತೆ ಸಿಲಿಂಡರ್ ಸ್ಫೋಟದಿಂದ (Cylinder Blast) ಮನೆ ಕಳೆದುಕೊಂಡ ನಿವಾಸಿಗಳು ಕಣ್ಣೀರಿಟ್ಟರು.
ಮೇಲ್ನೋಟಕ್ಕೆ ಇದು ಸಿಲಿಂಡರ್ ಬ್ಲಾಸ್ಟ್ ಆಗಿದೆ ಎನ್ನಲಾಗುತ್ತಿದೆ. ಈ ಭಾಗದ ಮನೆಗಳೆಲ್ಲಾ ಬಿದ್ದಿವೆ. ಮನೆಗಳ ರಿಪೇರಿಗೆ ಸೂಚನೆ ನೀಡಲಾಗಿದೆ. ಕಸ್ತೂರಮ್ಮ ಎಂಬುವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ ಎನ್ನಲಾಗುತ್ತಿದೆ. ಆಕೆಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನರಸಮ್ಮ ಎಂಬುವವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಿಎಂ ತಿಳಿಸಿದ್ದಾರೆ.

ಸಿಲಿಂಡರ್ ಸ್ಫೋಟದ ಸ್ಥಳದಲ್ಲಿ ಶುಕ್ರವಾರ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈ ಸ್ಫೋಟದಿಂದಾಗಿ ಬಾಲಕ ಮುಬಾರಕ್ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದಾರೆ.
ವಿಲ್ಸನ್ ಗಾರ್ಡ್‌ನ ಚಿನ್ನಯ್ಯನ ಪಾಳ್ಯದಲ್ಲಿ ನಡೆದ ಅವಘಡದಲ್ಲಿ 6 ಮನೆಗಳಿಗೆ ಹಾನಿಯಾಗಿದ್ದು 8 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಸುಮಾರು 12 ಕ್ಕೂ ಅಧಿಕ ಜನರಿಗೆ ಗಾಯವಾಗಿದ್ದು, 7 ಜನರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿದೆ. ಕಸ್ತೂರಮ್ಮ(35), ಸರಸಮ್ಮ(50), ಶಬೀರನಾ ಬಾನು(35), ಸುಬ್ರಮಣಿ(62), ಶೇಖ್ ನಜೀದ್ ಉಲ್ಲಾ(37), 8 ವರ್ಷದ ಬಾಲಕಿ ಫಾತಿಮಾ ಸೇರಿ ಹಲವರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿರುವ ಆಡುಗೋಡಿ ಠಾಣೆ ಪೊಲೀಸರು ಮೇಲ್ನೋಟಕ್ಕೆ ಸಿಲಿಂಡರ್ ಸ್ಟೋಟ ಸಂಭವಿಸಿರಬಹುದು ಎಂದು ಹೇಳಿದ್ದರು. ಆದರೆ ಸ್ಫೋಟದ ತೀವ್ರತೆ ನೋಡಿದರೆ ಕಾರಣ ಬೇರೆ ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.