BY Vijayendra: ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ: ಬಿ.ವೈ.ವಿಜಯೇಂದ್ರ
BY Vijayendra: ರಾಜ್ಯ ಸರಕಾರ ಪೊಲೀಸರ ಮೇಲೆ ಒತ್ತಡ ಹಾಕಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ. ಕೆಲವರನ್ನು ಓಲೈಕೆ ಮಾಡಲು ರಾಜ್ಯ ಸರಕಾರ ಹೀಗೆ ಮಾಡುತ್ತಿದೆ. ತಪ್ಪಿತಸ್ಥರನ್ನು ಬಂಧಿಸಲು ನಮ್ಮ ಅಭ್ಯಂತರ ಇಲ್ಲ. ಆದರೆ, ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
 
                                -
 Prabhakara R
                            
                                Jun 2, 2025 5:54 PM
                                
                                Prabhakara R
                            
                                Jun 2, 2025 5:54 PM
                            ಕೊಪ್ಪಳ: ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ, ಬಂಧಿಸಲಾಗುತ್ತಿದೆ. ಇದರಿಂದ ಮುಂದೆ ಆಗುವ ಎಲ್ಲ ಅನಾಹುತಗಳಿಗೆ ರಾಜ್ಯ ಸರಕಾರವೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಆರೋಪಿಸಿದರು. ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ರಾಜ್ಯ ಸರಕಾರ ಪೊಲೀಸರ ಮೇಲೆ ಒತ್ತಡ ಹಾಕಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಮಧ್ಯರಾತ್ರಿ ಬಿಜೆಪಿ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಮುಖಂಡರ ಮನೆಗೆ ಮನೆಗೆ ಹೋಗಿ ಬಾಗಿಲು ತಟ್ಟುತ್ತಿದ್ದಾರೆ. ಕೆಲವರನ್ನು ಓಲೈಕೆ ಮಾಡಲು ರಾಜ್ಯ ಸರಕಾರ ಹೀಗೆ ಮಾಡುತ್ತಿದೆ. ತಪ್ಪಿತಸ್ಥರನ್ನು ಬಂಧಿಸಲು ನಮ್ಮ ಅಭ್ಯಂತರ ಇಲ್ಲ. ಆದರೆ, ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಟಾರ್ಗೆಟ್ ಮಾಡಿದರೆ ಅದಕ್ಕೆ ರಾಜ್ಯ ಸರಕಾರವೇ ನೇರ ಹೊಣೆ ಎಂದರು.
ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕೆಟ್ಟು ಹೋಗಿದೆ. ರಾಜ್ಯ ಸರಕಾರಕ್ಕೆ ಪರಿಸ್ಥಿತಿ ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಆದರೆ, ಮೇಲಿಂದ ಮೇಲೆ ಕೊಲೆ ಪ್ರಕರಣ ನಡೆಯುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಸದ್ಯದ ರಾಜ್ಯ ಸರಕಾರದ ನಡವಳಿಕೆಯಿಂದ ಮತ್ತಷ್ಟು ಸಮಸ್ಯೆ ಹೆಚ್ಚಾಗಲಿದೆ ಎಂದು ದೂರಿದರು.
ಆಪರೇಷನ್ ಸಿಂದೂರದಿಂದ ದೇಶಕ್ಕೆ ಆಗಿರುವ ನಷ್ಟದ ಬಗ್ಗೆ ಕೇಂದ್ರ ಸರಕಾರ ಮಾಹಿತಿ ನೀಡಬೇಕು ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಿಯಾಂಕ ಖರ್ಗೆ ತಮ್ಮ ಖಾತೆಯ ಜವಾಬ್ದಾರಿ ನೋಡಿಕೊಳ್ಳಲಿ. ಆಪರೇಷನ್ ಸಿಂದೂರದ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಲೆಕ್ಕ ಕೇಳಲು ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಇದ್ದಾರೆ. ತಿರಂಗಾ ಯಾತ್ರೆಯಲ್ಲಿ ಬಿಜೆಪಿ ಮತ್ತು ಪ್ರಧಾನಿ ಮೋದಿ ಫೋಟೊ ಬಳಕೆ ಮಾಡಿಕೊಂಡಿಲ್ಲ. ಇದು ನಮ್ಮ ಬದ್ಧತೆ ಎಂದು ತಿರುಗೇಟು ನೀಡಿದರು.
ಈ ಸುದ್ದಿಯನ್ನೂ ಓದಿ | N. Ravikumar: ಡಿಸಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಎಂಎಲ್‌ಸಿ ಎನ್.ರವಿಕುಮಾರ್ ವಿಚಾರಣೆಗೆ ಹಾಜರು
ಇನ್ನ ಕಮಲ್ ಹಾಸನ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ತಮಿಳಿನ ಬಗ್ಗೆ ಕಮಲ್ ಹಾಸನ್‌ಗೆ ಅಭಿಮಾನ ಇರಲಿ. ಆದರೆ, ತಪ್ಪು ಮಾಹಿತಿಯಿಂದ ಕನ್ನಡ ಭಾಷೆ ಬಗ್ಗೆ ಮಾತನಾಡುವುದು ಸರಿಯಲ್ಲ. ಕಾಂಗ್ರೆಸ್ ಸರಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಿಂದ ಕೊಡುವುದು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಅನುಷ್ಠಾನ ಸಮಿತಿ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸಾಕುವ ಕೆಲಸ ಮಾಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಜನರು ಪರದಾಡುತ್ತಿದ್ದಾರೆ ಎಂದರು.

ಸಚಿವರ ಕಾರ್ಯವೈಖರಿ ಅರ್ಥ ಮಾಡಿಕೊಳ್ಳಲು ಖಾಸಗಿ ಸಂಸ್ಥೆಯ ಅಗತ್ಯವಿಲ್ಲ. ಸಿಎಂ, ಡಿಸಿಎಂ ಕೇವಲ ಬೆಂಗಳೂರಿಗೆ ಸೀಮಿತ ಆಗದೇ ನಾಡಿನ ಜನರ ಮುಂದೆ ಬಂದು ಸಚಿವರ ಕಾರ್ಯ ವೈಖರಿ ಬಗ್ಗೆ ಮಾಹಿತಿ ಕೇಳಬೇಕು. ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಅವರು ಎಲ್ಲರಿಗೂ ಮಾದರಿ ಆಗಬೇಕು. ಆದರೆ, ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಧಮ್ಕಿ ಹಾಕುವುದು ಸರಿಯಲ್ಲ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
 
            