Constitution: ಸಂವಿಧಾನದ ಜಾಗೃತಿ: ಪ್ರಜಾಪ್ರಭುತ್ವದ ಜೀವಾಳ
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಮರೆತಂತೆ ಕಾಣುವ ಘಟನೆಗಳು ಹೆಚ್ಚಾ ಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ; ಧರ್ಮನಿರಪೇಕ್ಷತೆ ಎಂಬ ತತ್ವವನ್ನು ವಕ್ರವಾಗಿ ಬಳಸಲಾಗುತ್ತಿದೆ; ಸಮಾನತೆಯ ಬದಲು ಮೇಲುಗೈ ಮನೋಭಾವ ಬೆಳೆದು ಬರುತ್ತಿದೆ.
-
ಶಿವಯೋಗಿ ಎಂ.ವಿ., ರಾಂಪುರ
ಭಾರತೀಯ ಸಂವಿಧಾನವು ಕೇವಲ ಕಾನೂನುಗಳ ಸಂಕಲನವೇ ಅಲ್ಲ; ಅದು ನಮ್ಮ ರಾಷ್ಟ್ರದ ಆತ್ಮ, ಮೌಲ್ಯ ಮತ್ತು ದಿಕ್ಕನ್ನು ನಿರ್ಧರಿಸುವ ಮಹತ್ತಾದ ದಸ್ತಾವೇಜು. ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಯೊಂದಿಗೆ 1950ರ ಜನವರಿ 26ರಂದು ಜಾರಿಗೆ ಬಂದ ಈ ಸಂವಿಧಾನ, ಭಾರತೀಯ ಪ್ರಜಾಪ್ರಭುತ್ವದ ಭದ್ರ ಅಡಿಪಾಯವಾಗಿದೆ. ಆದರೆ ಇಂದು ಪ್ರಶ್ನೆ ಏನೆಂದರೆ- ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಬಗೆಗಿನ ಜಾಗೃತಿ ಎಷ್ಟು?
ಭರವಸೆದಾಯಕ: ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ಧರ್ಮ ನಿರಪೇಕ್ಷತೆ ಮತ್ತು ನ್ಯಾಯದ ಭರವಸೆಯನ್ನು ನೀಡುತ್ತದೆ. ಜಾತಿ, ಧರ್ಮ, ಲಿಂಗ, ಭಾಷೆ, ವರ್ಗ ಎಂಬ ಭೇದವಿಲ್ಲದೆ ಎಲ್ಲರೂ ಸಮಾನರೆಂದು ಘೋಷಿಸುವ ಈ ಗ್ರಂಥವು, ಶೋಷಿತರ ಧ್ವನಿಯಾಗಿ, ದುರ್ಬಲರ ರಕ್ಷಣೆಯಾಗಿ ನಿಂತಿದೆ.
ಆದರೂ ಸಂವಿಧಾನವನ್ನು ತಿಳಿಯದೆ, ಅದರಲ್ಲಿ ಉಲ್ಲೇಖಿಸಲಾಗಿರುವ ನಾಗರಿಕರ ಹಕ್ಕು ಮತ್ತು ಕರ್ತವ್ಯಗಳನ್ನು ಅರಿಯದೆ ದಿನವನ್ನು ದೂಡುತ್ತಿರುವವರ ಸಂಖ್ಯೆ ಕಡಿಮೆಯೇ ನಿಲ್ಲ. ಈ ಅಜ್ಞಾನವೇ ಅನೇಕ ಸಾಮಾಜಿಕ ಅಸಮಾನತೆಗಳಿಗೆ, ಅನ್ಯಾಯಗಳಿಗೆ ಮೂಲವಾಗುತ್ತಿದೆ.
ಇದನ್ನೂ ಓದಿ: R T Vittalmurthy Column: ಸಿದ್ದುಗೆ ಅನುದಾನ ಹೊಂದಿಸುವ ತಲೆನೋವು ಶುರುವಾಗಿದೆ
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಮರೆತಂತೆ ಕಾಣುವ ಘಟನೆಗಳು ಹೆಚ್ಚಾಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ; ಧರ್ಮನಿರಪೇಕ್ಷತೆ ಎಂಬ ತತ್ವವನ್ನು ವಕ್ರವಾಗಿ ಬಳಸಲಾಗುತ್ತಿದೆ; ಸಮಾನತೆಯ ಬದಲು ಮೇಲುಗೈ ಮನೋಭಾವ ಬೆಳೆದು ಬರುತ್ತಿದೆ. ಇವೆಲ್ಲವೂ ಸಂವಿಧಾನದ ಬಗೆಗಿನ ಸಮಗ್ರ ಜಾಗೃತಿ ಇಲ್ಲದಿರುವುದರ ಫಲವೇ ಎನ್ನಬೇಕಾಗುತ್ತದೆ.
ಹಕ್ಕು ಮತ್ತು ಕರ್ತವ್ಯಗಳ ಸಂಪುಟ: ಸಂವಿಧಾನದ ಜಾಗೃತಿ ಎಂದರೆ ಕೇವಲ ಮೂಲಭೂತ ಹಕ್ಕುಗಳನ್ನು ಪಠಿಸುವುದಲ್ಲ. ಅದರೊಂದಿಗೆ ಬರುವ ಮೂಲಭೂತ ಕರ್ತವ್ಯಗಳ ಅರಿವು ಕೂಡ ಅಷ್ಟೇ ಅಗತ್ಯ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೂ ಗೌರವ ನೀಡುವುದು, ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು, ಸಹಿಷ್ಣುತೆ ಯನ್ನು ಪಾಲಿಸುವುದು- ಇವೆಲ್ಲವೂ ಸಂವಿಧಾನ ನಮಗೆ ವಿಧಿಸಿರುವ ಕರ್ತವ್ಯಗಳೇ.
ಹಕ್ಕುಗಳಿಗಾಗಿ ಧ್ವನಿ ಎತ್ತುವ ನಾವು, ಕರ್ತವ್ಯಗಳನ್ನು ಮರೆತರೆ ಪ್ರಜಾಪ್ರಭುತ್ವ ಬಲಹೀನ ವಾಗುತ್ತದೆ. ಸಂವಿಧಾನ ಜಾಗೃತಿಯಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಪ್ರಮುಖ. ಪಠ್ಯಪುಸ್ತಕಗಳಲ್ಲಿ ಇರುವ ಪಾಠಗಳ ಮಟ್ಟಕ್ಕೆ ಸಂವಿಧಾನ ಸೀಮಿತವಾಗಬಾರದು. ಶಾಲೆ-ಕಾಲೇಜುಗಳಲ್ಲಿ ಸಂವಿಧಾನ ದಿನಾಚರಣೆ, ಚರ್ಚೆಗಳು, ನಾಟಕಗಳು, ಸಂವಾದಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸಬೇಕು. ಯುವಜನರು ಸಂವಿಧಾನವನ್ನು ‘ಇದು ಕೇವಲ ಪರೀಕ್ಷೆಗೆ ಓದುವ ವಿಷಯವಲ್ಲ, ಜತೆಗೆ ಬದುಕಿನ ಮಾರ್ಗಸೂಚಿ’ ಎಂದು ಅರ್ಥಮಾಡಿಕೊಳ್ಳುವಂತೆ ಮಾಡಬೇಕು.
ಮಾಧ್ಯಮಗಳ ಜವಾಬ್ದಾರಿ: ಮಾಧ್ಯಮಗಳಿಗೂ ಇಲ್ಲಿ ದೊಡ್ಡ ಜವಾಬ್ದಾರಿ ಇದೆ. ಸಂವಿಧಾನ ಸಂಬಂಧಿತ ವಿಚಾರಗಳನ್ನು ಸರಳ ಭಾಷೆಯಲ್ಲಿ ಜನರಿಗೆ ತಲುಪಿಸುವುದು, ತಪ್ಪು ಮಾಹಿತಿ ಮತ್ತು ವದಂತಿಗಳನ್ನು ತಡೆಯುವುದು, ಸಂವಿಧಾನಾತ್ಮಕ ಸಂಸ್ಥೆಗಳ ಮಹತ್ವವನ್ನು ಎತ್ತಿಹಿಡಿಯುವುದು ಮಾಧ್ಯಮಗಳ ಕರ್ತವ್ಯ. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಅರ್ಧಸತ್ಯಗಳು ವೇಗವಾಗಿ ಹರಡುತ್ತಿರುವಾಗ, ಸಂವಿಧಾನದ ಜಾಗೃತಿಯು ಇನ್ನಷ್ಟು ಅಗತ್ಯವಾಗುತ್ತದೆ.
ಪ್ರಜಾಪ್ರಭುತ್ವವು ಕೇವಲ ಮತದಾನದ ದಿನಕ್ಕೆ ಸೀಮಿತವಲ್ಲ. ಅದು ಪ್ರತಿದಿನದ ನಡೆನುಡಿ, ಪ್ರಶ್ನಿಸುವ ಮನೋಭಾವ ಮತ್ತು ನ್ಯಾಯಕ್ಕಾಗಿ ನಿಲ್ಲುವ ಧೈರ್ಯ. ಈ ಎಲ್ಲಕ್ಕೆ ಶಕ್ತಿ ನೀಡು ವುದು ಸಂವಿಧಾನದ ಜಾಗೃತಿಯೇ. ಸಂವಿಧಾನವನ್ನು ತಿಳಿದ ನಾಗರಿಕನನ್ನು ಸುಲಭವಾಗಿ ಮರುಳುಗೊಳಿಸಲು ಸಾಧ್ಯವಿಲ್ಲ; ಅವನು ತನ್ನ ಹಕ್ಕುಗಳಿಗೂ, ಸಮಾಜದ ಹಿತಕ್ಕೂ ಬದ್ಧನಾಗಿರುತ್ತಾನೆ.
ದುರುಪಯೋಗ ಸಲ್ಲ: ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಸಂದರ್ಭದಲ್ಲಿ ಎಚ್ಚರಿಸಿ ದಂತೆ, ಸಂವಿಧಾನವು ಎಷ್ಟೇ ಉತ್ತಮವಾಗಿದ್ದರೂ, ಅದನ್ನು ಅನುಷ್ಠಾನ ಗೊಳಿಸುವವರು ದುರುಪಯೋಗಪಡಿಸಿಕೊಂಡರೆ ಅದು ವಿಫಲವಾಗುತ್ತದೆ. ಆದ್ದರಿಂದ ಸಂವಿಧಾನವನ್ನು ಕಾಪಾಡುವುದು ಸರಕಾರಗಳ ಹೊಣೆ ಮಾತ್ರವಲ್ಲ; ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು.
ಇಂದಿನ ಕಾಲಘಟ್ಟದಲ್ಲಿ ಸಂವಿಧಾನದ ಜಾಗೃತಿ ಒಂದು ಆಯ್ಕೆಯಲ್ಲ, ಅಗತ್ಯ. ಪ್ರಜಾ ಪ್ರಭುತ್ವವನ್ನು ಬಲಪಡಿಸಲು, ಸಾಮಾಜಿಕ ಸೌಹಾರ್ದವನ್ನು ಉಳಿಸಲು ಮತ್ತು ಭವಿಷ್ಯದ ಭಾರತವನ್ನು ನ್ಯಾಯಯುತವಾಗಿಸಲು ಸಂವಿಧಾನದ ಅರಿವು ಅತ್ಯವಶ್ಯಕ. ಸಂವಿಧಾನ ನಮ್ಮ ಕೈಯಲ್ಲಿರುವ ಗ್ರಂಥವಲ್ಲ; ಅದು ನಮ್ಮ ಮನಸ್ಸಿನಲ್ಲಿ, ನಮ್ಮ ನಡೆಗಳಲ್ಲಿ ಜೀವಂತ ವಾಗಬೇಕು. ಆಗ ಮಾತ್ರ ನಿಜವಾದ ಅರ್ಥದಲ್ಲಿ ‘ನಾವು ಭಾರತ ಜನರು’ ಎಂಬ ಘೋಷಣೆಗೆ ಗೌರವ ಸಿಗುತ್ತದೆ.